‘ಉಗ್ರರ ವಿರುದ್ಧ ನೀವು ಹೋರಾಡದಿದ್ರೆ, ಆ ಕೆಲಸ ನಾವು ಮಾಡ್ತೇವೆ’ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಅಮೆರಿಕ

ಡಿಜಿಟಲ್ ಕನ್ನಡ ಟೀಮ್:

‘ಪಾಕಿಸ್ತಾನದ ಪ್ರಮುಖ ಗುಪ್ತಚರ ಇಲಾಖೆ ಐಎಸ್ಐ ತನ್ನ ನೆಲದಲ್ಲಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿಲ್ಲ. ಪಾಕಿಸ್ತಾನ ಉಗ್ರರ ವಿರುದ್ಧ ಸರಿಯಾಗಿ ಹೋರಾಟ ನಡೆಸದಿದ್ರೆ, ಆ ಕೆಲಸವನ್ನು ನಾವೇ ಏಕಾಂಗಿಯಾಗಿ ಮಾಡಲು ಹಿಂಜರಿಯುವುದಿಲ್ಲ’ ಎಂಬ ಖಡಕ್ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ಕೊಟ್ಟಿರೋದು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ.

ತನ್ನ ನೆಲದಲ್ಲಿದ್ದುಕೊಂಡೆ ಇತರ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳನ್ನು ನಿರ್ಮೂಲನೆ ಮಾಡುವ ವಿಚಾರದಲ್ಲಿ ಪಾಕಿಸ್ತಾನದ ನಸಗುನ್ನಿ ಆಟವನ್ನು ನೋಡುತ್ತಲೇ ಬಂದಿರುವ ಅಮೆರಿಕ ತನ್ನ ತಾಳ್ಮೆ ಕಳೆದುಕೊಂಡಿರುವುದರ ಪರಿಣಾಮವಾಗಿ ಇಂತಹ ಎಚ್ಚರಿಕೆ ಬಂದಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನ ಮತ್ತು ಅದರ ಗುಪ್ತಚರ ಇಲಾಖೆ ಐಎಸ್ಐ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರೋ ಉಗ್ರವಾದದ ಪ್ರಾಯೋಜಕತೆ ನಿರ್ಮೂಲನೆಯ ಕಾರ್ಯದರ್ಶಿ ಅದಮ್ ಜುಬಿನ್ ಕೊಟ್ಟಿರುವ ಎಚ್ಚರಿಕೆ ಹೀಗಿದೆ…

‘ಪಾಕಿಸ್ತಾನದಲ್ಲಿ ಉಗ್ರರ ವಿರುದ್ಧ ಹೋರಾಡಲು ಅಗತ್ಯ ಸೇನಾ ಬಲವಿದೆ. ಅದರಲ್ಲೂ ಪಾಕಿಸ್ತಾನದ ಆಂತರಿಕ ಗುಪ್ತಚರ ಇಲಾಖೆ ಅಥವಾ ಐಎಸ್ಐ ಸಹ ಉಗ್ರರನ್ನು ನಿರ್ಮೂಲನೆ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ಪಾಕಿಸ್ತಾನದಲ್ಲಿ ನೆಲೆಯೂರಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಐಎಸ್ಐ ಹಿಂಜರಿಯುತ್ತಿದೆ. ಕೆಲವು ಸಂಘಟನೆಗಳಿಗೆ ರಕ್ಷಣೆ ನೀಡುತ್ತಾ ಪ್ರೋತ್ಸಾಹಿಸುತ್ತಿರುವುದು ಸದ್ಯದ ದೊಡ್ಡ ಸಮಸ್ಯೆ.

ಉಗ್ರವಾದವನ್ನು ಹತ್ತಿಕ್ಕುವ ಅಮೆರಿಕದ ಪ್ರಯತ್ನಕ್ಕೆ ಪಾಕಿಸ್ತಾನದ ಸಹಕಾರ ಒಂದು ಪ್ರಮುಖ ಅಂಶ. ಹೀಗಾಗಿ ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಪಾಕ್ ಹೋರಾಟ ನಡೆಸಲು ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದ್ದೇವೆ. ನಮ್ಮ ನೆರವಿನ ಹೊರತಾಗಿಯೂ ಪಾಕಿಸ್ತಾನದಿಂದ ಯಾವುದೇ ರೀತಿಯ ಕಾರ್ಯವಾಗದಿದ್ದರೆ, ಅಗತ್ಯ ಸಂದರ್ಭದಲ್ಲಿ ಅಮೆರಿಕವೇ ಏಕಾಂಗಿಯಾಗಿ ಪಾಕಿಸ್ತಾನದಲ್ಲಿರುವ ಉಗ್ರರನ್ನು ಹತ್ತಿಕ್ಕುವ ಕಾರ್ಯ ನಡೆಸಲು ಹಿಂಜರಿಯುವುದಿಲ್ಲ.

ವಾಸ್ತವದಲ್ಲಿ ಪಾಕಿಸ್ತಾನವೇ ಈ ಉಗ್ರರ ಕೃತ್ಯಕ್ಕೆ ಸಾಕಷ್ಟು ಬಾರಿ ಬಲಿಯಾಗಿದೆ. ಪಾಕಿಸ್ತಾನದ ಶಾಲೆ, ಮಾರುಕಟ್ಟೆ ಮತ್ತು ಮಸೀದಿಗಳ ಮೇಲೆ ಉಗ್ರರ ದಾಳಿಯಾಗುತ್ತಲೇ ಇದೆ. ಉಗ್ರರ ದಾಳಿಯ ಪಟ್ಟಿ ಇನ್ನು ಬೆಳೆಯುತ್ತಲೇ ಇರುವುದು ದುರಾದೃಷ್ಟಕರ. ಇಷ್ಟೆಲ್ಲಾ ತೊಂದರೆಗಳನ್ನು ಎದುರಿಸುತ್ತಿದ್ದರೂ ಐಎಸ್ಐ ಕೆಲ ಉಗ್ರ ಸಂಘಟನೆಗಳಿಗೆ ಬೆಂಬಲ ಸೂಚಿಸುತ್ತಿರುವುದು ಉಗ್ರವಾದದ ನಿರ್ಮೂಲನೆಗೆ ದೊಡ್ಡ ಸಮಸ್ಯೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ನಾವು ಪಾಕಿಸ್ತಾನದ ಜತೆ ನಿಲ್ಲಲು ಸಾಧ್ಯವೇ ಇಲ್ಲ.’

ಇತ್ತೀಚೆಗೆಷ್ಟೇ ಭಾರತದ ಜತೆಗಿನ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ಅದಕ್ಕಾಗಿ ಅಮೆರಿಕವು ಭಾರತವನ್ನು ಮಾತುಕತೆಗೆ ಕರೆತರಬೇಕು ಎಂಬ ಬೇಡಿಕೆ ಪಾಕಿಸ್ತಾನದಿಂದ ಅಮೆರಿಕಕ್ಕೆ ರವಾನೆಯಾಗಿತ್ತು. ಇದರ ಬೆನ್ನಲ್ಲೇ ಅದಮ್ ಜುಬಿನ್ ಅವರ ಈ ಎಚ್ಚರಿಕೆ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಒತ್ತಡಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮುಂದೆ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply