ಉತ್ತರ ಪ್ರದೇಶದಲ್ಲಿ ಅಪ್ಪ ಮುಲಾಯಂ ವರ್ಸಸ್ ಮಗ ಅಖಿಲೇಶ್, ಸಮಾಜವಾದದ ಹೆಸರಲ್ಲಿ ಕುಟುಂಬ ರಾಜಕಾರಣಕ್ಕಿಳಿದ ಪಕ್ಷಗಳೆಲ್ಲ ಕಾಣಲಿಕ್ಕಿರುವ ಅಂತ್ಯ ಇದೇ

ಚೈತನ್ಯ ಹೆಗಡೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲಿ, ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಹಾಗೂ ತಂದೆ ಮುಲಾಯಂ ಸಿಂಗ್ ನಡುವೆ ತೆರೆದುಕೊಂಡಿರುವ ಸಮರವನ್ನು ಸ್ವಾಗತಿಸಬೇಕು. ಏಕೆಂದರೆ ರಾಜಕಾರಣದಲ್ಲಿ ಕುಟುಂಬದ ಉದ್ದಿಮೆಗಳು ಕೊನೆಗೊಳ್ಳಬೇಕಾದರೆ ಅವರವರೊಳಗಿನ ಇಂಥ ಹೊಡೆದಾಟಗಳು ಒಂದು ನಿರ್ಣಾಯಕ ಬಿಂದುವಿಗೆ ಹಾಗೂ ರಾಜಕೀಯ ರಚನೆಗಳ ಮಾರ್ಪಾಟಿಗೆ ಪ್ರೇರೇಪಿಸಿದರೆ ಅದು ಒಳ್ಳೆಯದೇ.

ಇದೀಗ ಸಮಸ್ಯೆ ಉದ್ಭವಿಸಿರುವುದೇ, ಅಖಿಲೇಶ್ ಯಾದವ್ ಪಕ್ಷದಲ್ಲಿ ತಂದೆಯ ಸರೀಕರನ್ನು ಪಕ್ಕಕ್ಕೆ ಸರಿಸಲು ಹೊರಟಿರುವುದರಲ್ಲಿ. ಹಾಗೆ ನೋಡಿದರೆ ಈ ಹಿಂದಿನ ವಿಧಾನಸಭೆ ಅವಧಿಯಲ್ಲೇ ಮುಲಾಯಂ ಸಿಂಗ್ ಎಂಬ ಉತ್ತರ ಪ್ರದೇಶದವರ ಪಾಲಿನ ನೇತಾಜಿ ಮುಖ್ಯಮಂತ್ರಿ ಆಗಬೇಕಿತ್ತು. ಆ ಸಂದರ್ಭದಲ್ಲಿ ಮಗ ಅಖಿಲೇಶಗೆ ಹುದ್ದೆ ಬಿಟ್ಟುಕೊಟ್ಟಿದ್ದು ತೀರ ಕ್ರಾಂತಿಕಾರಕ ನಿರ್ಧಾರವೇನೂ ಆಗಿರಲಿಲ್ಲ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ಸಿಗಾಗಲೀ, ಬಿಜೆಪಿಗಾಗಲೀ ದೆಹಲಿಯಲ್ಲಿ ಅಧಿಕಾರ ಹಿಡಿಯುವುದಕ್ಕೆ ತಮ್ಮ ಸಮಾಜವಾದಿ ಪಡೆಯ ಬೆಂಬಲ ಬೇಕೇ ಬೇಕಾಗುತ್ತದೆ ಎಂದೆಣಿಸಿದ್ದರು ಮುಲಾಯಂ. ಹಾಗೆಂದೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವವರ ಜುಟ್ಟು ಹಿಡಿಯುವುದಕ್ಕೆ ತಮ್ಮ ಪಾತ್ರವನ್ನು ಕಾಪಿಟ್ಟು, ಮುಖ್ಯಮಂತ್ರಿ ಗಾದಿಗೆ ಮಗನನ್ನು ಕೂರಿಸಿದರು. ಆದರೆ ಮೋದಿ ಅಲೆಯಲ್ಲಿ ಮುಲಾಯಂ ಮಾತ್ರವಲ್ಲದೇ ತಮ್ಮದೊಂದು ಆಟಕ್ಕೆ ಸಿದ್ಧರಾಗಿದ್ದ ತಥಾಕಥಿತ ಸೆಕ್ಯುಲರ್ ಬಲಗಳೆಲ್ಲ ಅಪ್ರಸ್ತುತವಾಗಿಬಿಟ್ಟವು. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ತಮ್ಮ ಸ್ಥಾನ ಗೆದ್ದುಕೊಂಡರಾದರೂ ಬಿಜೆಪಿ- ಅಪ್ನಾದಳಗಳು ಒಟ್ಟೂಗೂಡಿ 80 ಕ್ಷೇತ್ರಗಳ ಪೈಕಿ 73 ಗೆದ್ದುಬಿಟ್ಟವು. ಅತ್ತ, ಅಖಿಲೇಶ್ ಸಿಂಗ್ ಉತ್ತರ ಪ್ರದೇಶದ ಆಡಳಿತದಲ್ಲಿ ತೀರ ಬದಲಾವಣೆಗಳನ್ನೇನು ತರದಿದ್ದರೂ, ಸಮಾಜವಾದಿ ಪಕ್ಷದ ಹಳೆತಲೆಗಳಿಗಿಂತ, ಉಚಿತ ಲ್ಯಾಪ್ಟಾಪ್, ಬಂಡವಾಳ ಅಂತೆಲ್ಲ ಮಾತನಾಡುವ ಅಖಿಲೇಶೇ ಪರ್ವಾಗಿಲ್ಲ ಎಂಬೊಂದು ಅಭಿಮತ ರೂಪುಗೊಂಡಿತ್ತು.

ಈಗ 2017ಕ್ಕೆ ಮತ್ತೊಂದು ವಿಧಾನಸಭೆ ಚುನಾವಣೆ ಎದುರಿಗಿದೆ. ಕೇಂದ್ರದಲ್ಲಿ ಮೋದಿ ಅಧಿಕಾರದಿಂದ ಕೆಳಗಿಳಿದು ಹೊಸ ರಾಜಕೀಯ ಸಮೀಕರಣ ರೂಪುಗೊಂಡು ಅದರಲ್ಲಿ ತನ್ನಂಥವರಿಗೆ ಜಾಗ ಸಿಕ್ಕುವುದು ಸದ್ಯಕ್ಕೆ ದುಬಾರಿ ಕನಸು ಅಂತ ಮುಲಾಯಂ ಸಿಂಗ್ ಗೆ ಗೊತ್ತಾಗಿದೆ. ಹೀಗಾಗಿಯೇ ತನ್ನ ಹಳೆ ಗಾರ್ಡುಗಳನ್ನೆಲ್ಲ ಜತೆಗಿರಿಸಿಕೊಂಡು ಈ ಬಾರಿ ಉತ್ತರ ಪ್ರದೇಶದ ಅಧಿಕಾರ ಸೂತ್ರವನ್ನಾದರೂ ತಾನೇ ಹಿಡಿಯೋಣ ಎಂಬ ಹವಣಿಕೆ ಮುಲಾಯಂ ಸಿಂಗ್ ಅವರದ್ದು. ಅಖಿಲೇಶರ ಆಳ್ವಿಕೆಯಲ್ಲಿ ಅಪ್ರಸ್ತುತರಾಗುತ್ತಿರುವ ಹಳೆತಲೆಗಳು ಮುಲಾಯಂಗೆ ಈ ನಿಟ್ಟಿನಲ್ಲಿ ತಿದಿ ಒತ್ತುತ್ತಲೇ ಬಂದವು.

ಇದೀಗ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷವೆಂಬ ಕೌಟುಂಬಿಕ ಉದ್ದಿಮೆಯಲ್ಲಿ (ಲೋಹಿಯಾ ಆತ್ಮಕ್ಕೆ ಶಾಂತಿಯಿರಲಿ) ಶಿವಪಾಲ್ ಯಾದವ್ ಎಂಬ ಚಿಕ್ಕಪ್ಪನ ವಿಷಯವಾಗಿ ಅಖಿಲೇಶ್ ವಿರೋಧದ ನೆಲೆಯಲ್ಲಿ, ಮುಲಾಯಂ ಪರವಾದ ನೆಲೆಯಲ್ಲಿ ಹೊಡೆದಾಡುವಂತಾಗಿದೆ.

ಕುಟುಂಬ ಕಲಹವಲ್ಲದಿದ್ದರೂ ಹೀಗೊಂದು ಅಧಿಕಾರ ಹಸ್ತಾಂತರ ಬಿಕ್ಕಟ್ಟು ಬಿಜೆಪಿಯಲ್ಲೂ ಆಗಿತ್ತು. ನಾ ಕೊಡೆ ಎಂದ ಆಡ್ವಾಣಿ, ನಾ ಬಿಡೆ ಎಂದ ಮೋದಿ ಕಸರತ್ತು ಮಾಧ್ಯಮಗಳಿಗೆ ಪರಮಾನ್ನವನ್ನು ಬಡಿಸಿದ್ದೇನೋ ಹೌದು. ಆದರೆ ಸೈದ್ಧಾಂತಿಕ ಹಾಗೂ ಕೇಡರ್ ಬಲದ ಪಕ್ಷಕ್ಕೂ ಹೆಸರಿಗಷ್ಟೇ ಸಮಾಜವಾದಿ ಹಾಗೂ ಸೆಕ್ಯುಲರ್ ಎಂಬ ಬಿರುದಂಟಿಸಿಕೊಂಡು ವಂಶಾಡಳಿತಕ್ಕೆ ಮಣೆ ಹಾಕಿಕೊಂಡಿರುವ ಪಕ್ಷಗಳಿಗೂ ಇಲ್ಲಿ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಅಮಿತ್ ಶಾ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾರು ಎಂಬ ಪ್ರಶ್ನೆಗೆ ಮೋದಿ ಇಲ್ಲವೇ ಅಮಿತ್ ಶಾ ಅವರ ನೆಂಟರ ಪಟ್ಟಿ ನೋಡಬೇಕಾದ ಅಗತ್ಯವಿಲ್ಲ. ಆ ಹಂತದಲ್ಲಿ ಯಾರು ಪ್ರಸ್ತುತರಾಗಿರುತ್ತಾರೆ, ಬಲಾಬಲಗಳೇನು ಎಂಬುದರ ಮೇಲೆ ಅದು ನಿರ್ಣಯವಾಗುತ್ತದೆ.

ಆದರೆ ಈ ಎಸ್ಪಿ, ಆರ್ಜೆಡಿ, ಕಾಂಗ್ರೆಸ್ ಗಳ ಕತೆ ನೋಡಿ. ರಾಹುಲ್ ಗಾಂಧಿ ವೈಫಲ್ಯದ ಮೇರು ಪ್ರತಿಮೆ ಎಂಬುದು ಪಕ್ಷದವರಿಗೆಲ್ಲ ಗೊತ್ತಾಗಿದೆ. ಆದರೆ ಈ ವಂಶಾಡಳಿತವನ್ನು ಬದಲಾಯಿಸಿ ಅರ್ಹರನ್ನು ಉಪಾಧ್ಯಕ್ಷ ಗಾದಿಗೆ ಕೂರಿಸುವುದಕ್ಕೆ ಕಾಂಗ್ರೆಸ್ಸಿಗೆ ತಾಕತ್ತಿಲ್ಲ. ತನಗೆ ಸ್ಪರ್ಧಿಸುವ ಅವಕಾಶ ಇಲ್ಲವಾದ್ದರಿಂದ ಮಕ್ಕಳು ನೋಡಿಕೊಳ್ಳಲಿ ಅಂತ ನಿತೀಶ್ ಆಡಳಿತದ ಆಯಕಟ್ಟಿನ ಹುದ್ದೆಗಳಲ್ಲೇ ತಮ್ಮ ಮಕ್ಕಳನ್ನು ಪ್ರತಿಷ್ಠಾಪಿಸಿದ್ದಾರೆ ಲಾಲು. ಎನ್ಡಿಎ ಪಾಳೆಯದಲ್ಲಿರುವ, ಸಮಾಜವಾದದ ಹೆಸರಿನ ರಾಜಕಾರಣದ ಇನ್ನೊಂದು ಪಕ್ಷ ಲೋಕಜನಶಕ್ತಿಯದ್ದೂ ಇದೇ ಕತೆ. ರಾಮ್ ವಿಲಾಸ್ ಪಾಸ್ವಾನ್ ಬಿಟ್ಟರೆ ಮಗ ಚಿರಾಗ್ ಪಾಸ್ವಾನ್. ಬೇಕೋ ಬೇಡವೋ ಕೇಳುವವರ್ಯಾರು? ಅದುವೇ ಪ್ಯಾಟರ್ನ್. ಇತ್ತ ಹಿಂದುತ್ವ, ಮರಾಠಿ ಅಸ್ಮಿತೆ ಅಂತೆಲ್ಲ ಸಿದ್ಧಾಂತ ಹೇಳುವ ಶಿವಸೇನೆ- ಎಂನ್ಎಸ್ ಗಳದ್ದೂ ಆಂತರ್ಯದಲ್ಲಿ ಕೌಟುಂಬಿಕ ಹಿಡಿತದ ಸಂಘರ್ಷಗಾಥೆಯೇ.

ಹೀಗೆ ಹಲವು ಪಕ್ಷಗಳನ್ನು ಪಟ್ಟಿ ಮಾಡುತ್ತ ಸಾಗಬಹುದು. ಸಿದ್ಧಾಂತ- ಅದು ಸರಿ/ತಪ್ಪುಗಳೆಂಬ ವಾದಗಳು ಇದ್ದದ್ದೇ- ಹೊರತಾಗಿ ಇರುವ ರಾಜಕೀಯ ಪಕ್ಷಗಳಲ್ಲಿ ಇಂದಲ್ಲ, ನಾಳೆ ಸಮಾಜವಾದಿಯಂಥದೇ ಸಂಘರ್ಷ ಹುಟ್ಟಿಕೊಳ್ಳಲಿರುವುದು ಶತಃಸಿದ್ಧ. ಜೆಪಿ- ಲೋಹಿಯಾ ಹೆಸರುಗಳನ್ನು ಹೇಳಿಕೊಂಡು ಸಮಾಜವಾದದ ಹೊದಿಕೆಯಲ್ಲಿ ರಾಜಕಾರಣ ಮಾಡುತ್ತಿರುವ ಪಕ್ಷಗಳನ್ನು ಗಮನಿಸುತ್ತ ಹೋಗಿ. ಬಹುಪಾಲು ಅವೆಲ್ಲ ಕುಟುಂಬ ರಾಜಕಾರಣದ ಅಡ್ಡಾಗಳಾಗಿವೆ.

ಮುಂದಿನ ಮುಖ್ಯಮಂತ್ರಿ ಗಾದಿಗೆ ತಾನಾಗಲೀ, ಶಿವಪಾಲ್ ಯಾದವ್ ಆಗಲೀ ಕೂರಬೇಕೆಂಬುದು ಮುಲಾಯಂ ಉದ್ದೇಶ. ಇಲ್ಲದಿದ್ದರೆ ಹಳೆಯ ತಲೆಮಾರು ಅಪ್ರಸ್ತುತವಾಗಿಬಿಡುವ ಭಯ ಅವರಲ್ಲಿ ಕಾಣುತ್ತಿದೆ. ಹಾಗೆಂದೇ ತನ್ನ ಮಗನ ವಿರುದ್ಧ ರಾಜಕೀಯದ ಹಳೆಯ ದಲ್ಲಾಳಿ ಅಮರ್ ಸಿಂಗ್ ಅಂಥವರನ್ನು ಬೆಂಬಲಿಸುವುದಕ್ಕೂ ಮುಲಾಯಂ ಹಿಂದೆ- ಮುಂದೆ ನೋಡುತ್ತಿಲ್ಲ.

ಸೋಮವಾರ ಸಮಾಜವಾದಿಪಕ್ಷದ ಕಾರ್ಯಕರ್ತರ ಎದುರು ಅಪ್ಪನ ಪಾಳೆಯ ವರ್ಸಸ್ ಮಗನ ಪಾಳೆಯದ ತಿಕ್ಕಾಟ ತಾರಕಕ್ಕೇರಿತ್ತು.

ಮುಲಾಯಂ ಉವಾಚ– ಪಕ್ಷದಲ್ಲಿ ಗೂಂಡಾಗಳು, ಕುಡುಕರು ತುಂಬಿಕೊಳ್ಳುತ್ತಿದ್ದಾರೆ. ಅಧಿಕಾರ ಸಿಗುತ್ತಲೇ ತಲೆಗೆ ಮದವೇರಿಸಿಕೊಂಡರೆ ಹೇಗೆ? ಶಿವಪಾಲ್ ಯಾದವ್ ಒಬ್ಬ ಜನನಾಯಕ. ನನ್ನ ಶಕ್ತಿಯೂ ಏನೂ ಕುಂದಿಲ್ಲ. ಯುವಕರ ನಡುವೆ ನಾನೇನೂ ಜನಪ್ರಿಯತೆ ಕಳೆದುಕೊಂಡಿದ್ದೇನೆ ಅಂದುಕೊಳ್ಳಬೇಡಿ. ಅಮರ್ ಸಿಂಗ್ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ. ಅಮರ್ ಸಿಂಗ್, ಶಿವಪಾಲ ಯಾದವ್ ರನ್ನು ನಾನು ಬಿಡಲಾರೆ. ಅಖಿಲೇಶ್ ಹೀಗೆ ನೇತಾರರನ್ನು ನಿಂದಿಸುವುದನ್ನು ಬಿಟ್ಟು ಬೇರೆ ಕೆಲಸ ಮಾಡಬೇಕು.

ಅಖಿಲೇಶ್ ಉವಾಚ– ನಾನು ಎಲ್ಲಿಗೆ ಹೋಗಲಿ? ಇಷ್ಟು ಎತ್ತರಕ್ಕೆ ಏರಿಸಿದ ಮೇಲೆ ಬೇರೆ ಕೆಲಸ ಮಾಡು ಎನ್ನುತ್ತೀರಾ? ಅದು ಹೇಗೆ ಸಾಧ್ಯ?

ತೃತೀಯ ರಂಗ ಕಟ್ಟಿಕೊಂಡು ದೇಶ ಆಳುವ, ಉತ್ತರ ಪ್ರದೇಶ ನಿಭಾಯಿಸುವ ಉಮೇದಿನ ಪಕ್ಷವೊಂದು ಮನೆಜಗಳವನ್ನೇ ಪರಿಹರಿಸಿಕೊಳ್ಳಲಾಗದ ಸ್ಥಿತಿಗೆ ಬಂದಿರುವುದನ್ನು ಭಾರತವು ಆಸ್ವಾದಿಸಬೇಕು. ಏಕೆಂದರೆ, ಸಮಾಜವಾದಿಗಳು ಕರೆದುಕೊಂಡು ಹೋಗುವುದು ಕೊನೆಗೂ ಅಪ್ಪ-ಮಗ-ಚಿಕ್ಕಪ್ಪಂದಿರ ಜಗಳಕ್ಕೆ ಎಂಬುದು ಜನಕ್ಕೂ ಗೊತ್ತಾಗಬೇಕು ಹಾಗೂ ಈ ಮಾದರಿಯಲ್ಲಿ ಪಕ್ಷ ಸಂಘಟಿಸುವುದಕ್ಕೆ ಹೋಗುವವರಿಗೂ ತಿಳಿಯಬೇಕು.

Leave a Reply