ಜಗತ್ತೇ ಬಡಬಡಿಸುತ್ತಿರುವ ಜಿಡಿಪಿ ಎಂಬ ಆರ್ಥಿಕ ಪದಗುಚ್ಛದ ಅಂತರಾಳವೇನು?

hana class

authors-rangaswamyನಿತ್ಯ ನ್ಯೂಸ್ ಪೇಪರ್ ಓದುವಾಗಲೂ ಅಥವಾ ಟಿವಿಯಲ್ಲಿ ನ್ಯೂಸ್ ನೋಡುವಾಗಲೂ ಹೇಗೋ ನಾವೆಲ್ಲಾ ಒಂದಲ್ಲ ಒಂದು ಬಾರಿ ಈ ಪದಗಳನ್ನು ಕೇಳಿರುತ್ತೇವೆ. ಅವೆಂದರೆ ಎಕನಾಮಿ, ಜಿಡಿಪಿ, ಗ್ರೋಥ್ ರೇಟ್, ಫಿಸ್ಕಲ್ ಪಾಲಿಸಿ… ಎಕಾನಮಿ ಎನ್ನುವ ಪದವಂತೂ ಕೇಳದೆ ಇರುವರಿಲ್ಲ. ನಿತ್ಯ ಜೀವನದ ಆಡು ಭಾಷೆಯಲ್ಲೂ ‘ಯಾಕೋ ಸ್ವಲ್ಪ ಎಕಾನಮಿ ಡೌನ್ ಇದ್ದಹಾಗೆ ಕಾಣುತ್ತೆ’ ಅಂತಲೋ ‘ ಈ ವರ್ಷ ಜಿ ಡಿ ಪಿ ಗ್ರೋಥ್ ರೇಟ್ ಚನ್ನಾಗಿದೆ  ಯಾಕೆಂದರೆ ಸರಕಾರದ ಫಿಸ್ಕಲ್ ಪಾಲಿಸಿ ಉತ್ತಮವಾಗಿದೆ’ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಯಾರಾದರೂ ಅಚಾನಕ್ಕಾಗಿ ಎಕಾನಮಿ ಎಂದರೇನು, ಫಿಸ್ಕಲ್ ಪಾಲಿಸಿ ಎಂದರೇನು ಎಂದು ಕೇಳಿದಾಗ ತಬ್ಬಿಬ್ಬಾಗುತ್ತೇವೆ. ಸಲೀಸಾಗಿ ಆ ಪದಗಳನ್ನ ಬಳಸಿ ಮಾತನಾಡುವ ನಮಗೆ ಅದೇನು ಎಂದಾಗ ಮಾತ್ರ ಉತ್ತರಿಸಲು ಆಗದು. ಹಾಗಾಗುವುದು ಬೇಡ ಅಲ್ಲವೇ?

ಎಕಾನಮಿ ಎಂದರೇನು?
ಒಂದು ದೇಶದ ಒಟ್ಟು ಸರಕು ಉತ್ಪಾದನೆ, ಬಳಕೆ ಮತ್ತು ಮತ್ತು ಸಮಾಜದಲ್ಲಿ ಹಣದ ಹರಿಯುವಿಕೆಯನ್ನು ಒಗ್ಗೂಡಿಸಿ ಎಕಾನಮಿ ಎನ್ನುತ್ತಾರೆ. ಸರಳವಾಗಿ ಒಂದು ದೇಶದ ಹಣಕಾಸು ಆರೋಗ್ಯ ಹೇಳುವ ರಿಪೋರ್ಟ್ ಕಾರ್ಡ್ ಇದ್ದಹಾಗೆ. ಹೀಗೆ ದೇಶದ ಒಟ್ಟು ಆರ್ಥಿಕತೆಯನ್ನು ಅಧ್ಯಯನ ಮಾಡುವ ವಿಧಾನಕ್ಕೆ ಎಕನಾಮಿಕ್ಸ್ ಎನ್ನುತ್ತಾರೆ.
ಗ್ರಾಹಕರ ನಡವಳಿಕೆ, ವಸ್ತುವಿನ ಬೆಲೆ ನಿಗದಿ, ಲಾಭ, ನಷ್ಟ ಇವುಗಳ ಅಧ್ಯಯನ ಮಾಡುವುದಕ್ಕೆ ಮೈಕ್ರೋ ಎಕಾನಮಿ ಎನ್ನುತ್ತಾರೆ. ಜಿಡಿಪಿ, ಇಂಟರೆಸ್ಟ್ ರೇಟ್, ಬಿಸಿನೆಸ್ ಸೈಕಲ್ ಇಡೀ ದೇಶಕ್ಕೆ ಸಂಬಂಧಪಟ್ಟ ವಿಷಯಗಳ ಅಧ್ಯಯನಕ್ಕೆ ಮ್ಯಾಕ್ರೋ ಎಕಾನಮಿ ಎನ್ನುತ್ತಾರೆ. ಮೈಕ್ರೋ ಒಂದು ಸಮುದಾಯ, ಸಂಸ್ಥೆಗೆ ಪರಿಣಾಮ ಬೀರಬಲ್ಲ ವಸ್ತು -ವಿಷಯಗಳ ಅಧ್ಯಯನವಾದರೆ, ಮ್ಯಾಕ್ರೋ ದೇಶದ ಮೇಲೆ ಪ್ರಭಾವ ಬೀರುವ ವಸ್ತು ವಿಷಯಗಳ ಕುರಿತು ಅಧ್ಯಯನ ಮಾಡುತ್ತದೆ.

ಜಿ ಡಿ ಪಿ  ಎಂದರೇನು?
ಗ್ರೋಸ್ ಡೊಮೆಸ್ಟಿಕ್ ಪ್ರಾಡಕ್ಟ್ ಎನ್ನುವುದು ಎಕಾನಾಮಿಯ ಗಾತ್ರ ಅಳೆಯಲು ಅಥವಾ ಜಗತ್ತಿಗೆ ನಾವಿಷ್ಟು ದೊಡ್ಡ ಸಮಾಜ, ದೇಶ ಎಂದು ಹೇಳಲು ಬಳಸುವ ಮಾನದಂಡ. ಒಂದು ದೇಶದ ಜನರ ಒಟ್ಟು ಆದಾಯ ಮತ್ತು ಆ ದೇಶದ ಒಟ್ಟು ಸರಕು -ಸೇವೆಯ  ಮಾರುಕಟ್ಟೆ ಮೌಲ್ಯವನ್ನ ಜಿ ಡಿ ಪಿ ಎನ್ನುತ್ತಾರೆ. ಉದಾಹರಣೆಗೆ 120 ಕೋಟಿ ಭಾರತೀಯರ ಆದಾಯ 100 ಕೋಟಿ  ಎಂದುಕೊಳ್ಳಿ. ಸರಕು -ಸೇವೆಯ ಮೌಲ್ಯ ಇನ್ನೊಂದು 100 ಕೋಟಿ ಎಂದುಕೊಳ್ಳಿ. ಆಗ ನಾವು ಜಗತ್ತಿನ ಮುಂದೆ ನಾವು 200 ಕೋಟಿ ಎಕಾನಮಿ ಎಂದು ಹೇಳಿಕೊಳ್ಳಬಹುದು. ಜಗತ್ತಿನ ಒಟ್ಟು ಜಿಡಿಪಿಯ ಇಪ್ಪತೈದು ಭಾಗ ಹೊಂದಿರುವ ಅಮೆರಿಕದ  ಮೊದಲ ಸ್ಥಾನದಲ್ಲಿ ಅಭಾದಿತವಾಗಿದೆ. ಅಮೆರಿಕಕ್ಕೆ ಸೆಡ್ಡು ಹೊಡೆದು ನಿಂತಿರುವ ಚೀನಾ ಜಗತ್ತಿನ 15 ಭಾಗ ತನ್ನದಾಗಿಸಿಕೊಂಡು ಎರಡನೇ ಸ್ಥಾನದಲ್ಲಿದೆ. ಜಗತ್ತಿನ ಜಿಡಿಪಿಯಲ್ಲಿ ಭಾರತದ ಭಾಗ ಕೇವಲ ಮೂರು. ಜಗತ್ತಿನ ಮೊದಲ ಹತ್ತು ದೇಶಗಳು ಜಗತ್ತಿನ 65 ಭಾಗ ಸಂಪತ್ತಿನ ಮೇಲೆ ಒಡೆತನ ಹೊಂದಿವೆ. ಉಳಿದ 186 ದೇಶಗಳಲ್ಲಿ ಮಿಕ್ಕ 35 ಭಾಗ ಜಿಡಿಪಿ ಹಂಚಿಕೆಯಾಗಿದೆ.

ಗ್ರೋಥ್ ರೇಟ್ ಎಂದರೇನು?
ಗ್ರೋಥ್ ರೇಟ್  ಜಿಡಿಪಿ ಯೊಂದಿಗೆ ಬೆಸೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಈ ವರ್ಷ ಹೆಚ್ಚಾಯಿತೇ? ಹೌದಾದರೆ ಎಷ್ಟು ಎನ್ನುವುದನ್ನು ಸೂಚಿಸಲು ಗ್ರೋಥ್ ರೇಟ್ ಎನ್ನುತ್ತಾರೆ.  ಒಟ್ಟು ರಾಷ್ಟೀಯ ಆದಾಯವನ್ನ ಜಿಡಿಪಿ ಎನ್ನುತ್ತೇವೆ.  ಅದು 2015 ರಲ್ಲಿ 100 ರೂಪಾಯಿ ಇತ್ತು ಎಂದು ಕೊಳ್ಳಿ. 2016 ರಲ್ಲಿ 108 ರೂಪಾಯಿ ಎಂದುಕೊಳ್ಳಿ. ಇವೆರಡರ ನಡುವಿನ ಅಂತರ 8 ರೂಪಾಯಿ. 2015 ಕ್ಕೆ ಹೋಲಿಕೆ ಮಾಡಿ ನೋಡಿದರೆ ನಮ್ಮ ಜಿಡಿಪಿ 8 ಪ್ರತಿಶತ ವೃದ್ಧಿ ಹೊಂದಿದೆ ಎನ್ನಬಹುದು. ಅಂದರೆ ಗ್ರೋಥ್ ರೇಟ್ 8.

108-100 = 8.    (8/100)100  =  8% .

ಫಿಸ್ಕಲ್ ಪಾಲಿಸಿ ಎಂದರೇನು?
ಸರಕಾರ ತನ್ನ ಎಕಾನಮಿ ಮೇಲೆ ಹಿಡಿತ ಹೊಂದಲು ತಾನು ಸಮಾಜಕ್ಕೆ ಮಾಡುವ  ಖರ್ಚು ವೆಚ್ಚದ ನೀಲಿನಕ್ಷೆ ತಯಾರಿಸುತ್ತದೆ. ಇಂತಹ ಇದು ಮಾಡಬೇಕು, ಇದು ಮಾಡಬಾರದು ಎನ್ನುವ ರೂಪುರೇಷೆಗೆ ಫಿಸ್ಕಲ್ ಪಾಲಿಸಿ ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ದೇಶ ಹೈ ಗ್ರೋಥ್ ನಲ್ಲಿದ್ದಾಗ ಸರಕಾರ ತಾನು ಮಾಡುವ ಖರ್ಚನ್ನು ತುಂಬಾ ಕಡಿಮೆ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ  ಒಂದು ದೇಶ ಸಂಕಷ್ಟದಲ್ಲಿದ್ದಾಗ ಸರಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಲೊ ಗ್ರೋಥ್ ಇರುವಾಗ ಹೆಚ್ಚು ಖರ್ಚು ಮಾಡುವ ಮೂಲಕ ಹೊಸ ಕೆಲಸ ಇತ್ಯಾದಿಗಳ  ಸೃಷ್ಟಿ ಮಾಡಿ ಆತಂಕದಲ್ಲಿ ಇರುವ ಸಮಾಜವನ್ನ ಪುನಶ್ಚೇತನ ಮಾಡುವುದು ಉದ್ದೇಶ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

1 COMMENT

Leave a Reply