ವಿಧಾನಸೌಧದಲ್ಲಿ ಸಿಕ್ಕ ಹಣದ ಬಗ್ಗೆ ಯಡಿಯೂರಪ್ಪನವರಲ್ಲಿ ಮಾಹಿತಿ ಇದೆ- ಹೆಚ್ಡಿಕೆ, ತಲಾಕ್ ನಿಂದ ಮುಸ್ಲಿಂ ಸಹೋದರಿಯರ ಬದುಕೇಕೆ ಕೆಡಬೇಕು- ಮೋದಿ ಪ್ರಶ್ನೆ, ಮಿಸ್ತ್ರಿ ಹೊರಗಟ್ಟಿ ಮತ್ತೆ ಉದ್ಯಮ ಚುಕ್ಕಾಣಿ ಹಿಡಿದ ರತನ್ ಟಾಟಾ, ಗಡಿಯಲ್ಲಿ ಯೋಧ ಹುತಾತ್ಮ, ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕೆ ಅಸ್ತು, ಗುಂಡಿನ ದಾಳಿಯಿಂದ ಮಣಿಪುರ ಸಿಎಂ ಬಚಾವ್

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ, ಡಾ. ಎಂ. ಎಚ್. ಮರಿಗೌಡ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ನಿರ್ಮಲಾನಂದಶ್ರೀಗಳು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಬಿಜೆಪಿ ಶಾಸಕ ಸಿಟಿ ರವಿ

ಡಿಜಿಟಲ್ ಕನ್ನಡ ಟೀಮ್:

ಕುತೂಹಲ ಮೂಡಿಸಿದ ಕುಮಾರಸ್ವಾಮಿ ಹೇಳಿಕೆ

ವಿಧಾನಸೌಧದಲ್ಲಿ ಕೋಟ್ಯಾಂತರ ಹಣವನ್ನು ಪೊಲೀಸರು ಜಪ್ತಿ ಮಾಡಿದ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಈ ಪ್ರಕರಣಕ್ಕೆ ನಿಗೂಢದ ಸ್ಪರ್ಶ ಸಿಕ್ಕಿದೆ. ಈ ನಿಗೂಢ ಸ್ಪರ್ಶ ಕೊಟ್ಟವರು ಬೇರಾರು ಅಲ್ಲ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ. ‘ವಿಧಾನಸೌಧದಲ್ಲಿ ಸಿಕ್ಕ ಹಣದ ಬಗ್ಗೆ ಯಡಿಯೂರಪ್ಪನವರಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ನನಗೆ ಗೊತ್ತು. ಈ ಹಣ ಯಾರಿಂದ ಯಾರಿಗೆ ಹೋಗುತ್ತಿತ್ತು ಎಂಬ ಎಲ್ಲ ಮಾಹಿತಿಗಳು ಯಡಿಯೂರಪ್ಪನವರನ್ನು ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಿಲ್ಲ. ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರೆ ಎಲ್ಲವೂ ಬಹಿರಂಗವಾಗುತ್ತದೆ’ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ತಲಾಕ್ ಬಗ್ಗೆ ಮೋದಿ ಮಾತು

ಮಹಿಳಾ ಹಕ್ಕು ರಕ್ಷಣೆ ಮಾಡುವುದು ಅಭಿವೃದ್ಧಿ ಕಾರ್ಯ, ಹೀಗಾಗಿ ಮೂರು ಬಾರಿ ತಲಾಕ್ ಹೇಳುವ ಪದ್ಧತಿ ನಿಷೇಧ ಮಾಡುವ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಕರೆ ನೀಡಿದ್ದಾರೆ ಪ್ರಧಾನಿ ನರೇಂದ್ರ ಮೊದಿ. ಈ ಪದ್ಧತಿ ನಿಷೇಧದ ಕುರಿತಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಈ ವಿಚಾರವಾಗಿ ಹೇಳಿದಿಷ್ಟು… ‘ದೇಶದಲ್ಲಿನ ಕೆಲವು ರಾಜಕೀಯ ಪಕ್ಷಗಳು ಮಹಿಳೆಯರ ಸ್ವಾಭಾವಿಕ ಹಕ್ಕನ್ನು ಕಿತ್ತುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿವೆ. ಇನ್ನು ಟಿವಿ ವಾಹಿನಿಗಳಲ್ಲಿ ಈ ವಿಷಯವಾಗಿ ಚರ್ಚೆಗೆ ಹಾಜರಾಗುವ ಮಂದಿ, ಮಹಿಳೆಯರ ಹಕ್ಕಿನ ವಿಚಾರವನ್ನು ಹಿಂದು- ಮುಸ್ಲಿಂ ನಡುವಣ ವಿಷಯವನ್ನಾಗಿ ಪರಿವರ್ತಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ತಾಯಿ, ಸಹೋದರಿ ಮತ್ತು ಮಗಳನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಮಹಿಳೆಯರ ಹಕ್ಕು ದೊರಕಿಸುವುದು ಅಭಿವೃದ್ಧಿ ಕಾರ್ಯ. ಭ್ರೂಣಹತ್ಯೆ ಒಂದು ಪಾಪದ ಕೆಲಸ ಹಾಗೂ ಅಪರಾಧ. ಅಲ್ಲಿ ಹೆಣ್ಣು ಮಗು ಭ್ರೂಣದಲ್ಲೇ ಸಾಯುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿ ಮಹಿಳೆಗೆ ಮೂರು ಬಾರಿ ತಲಾಕ್ ಹೇಳಿ ವಿಚ್ಛೇದನ ನೀಡಿದರೆ ಆಕೆಯ ಬದುಕು ದುಸ್ಥರವಾಗುತ್ತದೆ. ಹಿಂದು ಭ್ರೂಣಹತ್ಯೆ ಮಾಡಿದರೆ ಹೇಗೆ ಆತನಿಗೆ ಶಿಕ್ಷೆಯಾಗುತ್ತದೆಯೋ ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ತಲಾಕ್ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯೋಣ.’

ಪಾಕ್ ಗುಂಡಿಗೆ ಯೋಧ ಹುತಾತ್ಮ

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಭಾರತದ ಬಿಎಸ್ಎಫ್ ಯೋಧ ಹುತಾತ್ಮನಾಗಿದ್ದಾನೆ. ಎರಡು ದೇಶಗಳ ಸೇನೆ ನಡುವೆ ನಡೆದ ಶೆಲ್ ದಾಳಿಯ ವೇಳೆ ಮೃತಪಟ್ಟ ಯೋಧ ಕಾನ್ಸ್ ಟೇಬಲ್ ಸುಶೀಲ್ ಕುಮಾರ್ ಎಂದು ಹೇಳಲಾಗಿದೆ. ಇನ್ನು ಆರ್.ಎಸ್ ಪುರದ ಸಮೀಪದಲ್ಲಿನ ಗುಂಡಿನ ಚಕಮಕಿಯ ವೇಳೆ ಮಹಿಳೆಯೊಬ್ಬಳಿಗೆ ಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಸುಮಾರು 25ಕ್ಕೂ ಹೆಚ್ಚಿನ ಪೊಲೀಸ್ ಠಾಣೆ ಹಾಗೂ ಅಲ್ಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೈನಿಕರು ಶೆಲ್ ಬಾಂಬ್ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಭಾರತದ ಗಡಿ ಭದ್ರತಾ ಸಿಬ್ಬಂದಿ ತಕ್ಕ ರೀತಿಯಲ್ಲೇ ಉತ್ತರ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶ

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶ ಈಗ ಇತ್ಯರ್ಥವಾಗುವ ಹಂತಕ್ಕೆ ಬಂದು ನಿಂತಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮಹಿಳೆಯರಿಗೆ ದರ್ಗಾ ಪ್ರವೇಶಿಸಲು ಮುಂದಿನ ಒಂದು ತಿಂಗಳಲ್ಲಿ ಅವಕಾಶ ನೀಡುವುದಾಗಿ ದರ್ಗಾ ಟ್ರಸ್ಟ್ ಮಾಹಿತಿ ನೀಡಿದೆ. ದರ್ಗಾ ಟ್ರಸ್ಟ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದು, ಅದು ಹೀಗಿದೆ… ‘ಹಾಜಿ ಅಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡುತ್ತೇವೆ. ಆದರೆ ದರ್ಗಾದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಬದಲಾವಣೆ ಮಾಡಬೇಕಿದ್ದು ಅದಕ್ಕಾಗಿ ಒಂದು ತಿಂಗಳ ಅವಕಾಶ ಬೇಕಿದೆ. ಇದು ಪೂರ್ಣಗೊಂಡ ನಂತರ ಮಹಿಳೆಯರು ದರ್ಗಾ ಪ್ರವೇಶಿಸಬಹುದು.’

ಗುಂಡಿನ ದಾಳಿಯಿಂದ ಮಣಿಪುರ ಸಿಎಂ ಪಾರು

ಮಣಿಪುರ ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್ ನಿಂದ ಇಳಿಯುವ ಸಂದರ್ಭದಲ್ಲಿ ಅವರ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಸಿಎಂ ಒಕರಾಮ್ ಇಬೊಬಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಖ್ರುಲ್ ಹೆಲಿಪ್ಯಾಡ್ ಗೆ ಬಂದಿಳಿಯುವ ಸಂದರ್ಭದಲ್ಲಿ ಈ ದಾಳಿ ಸಂಭವಿಸಿದ್ದು, ಇಬೊಬಿ ತಕ್ಷಣೆವೇ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿ ಪಾರಾಗಿದ್ದಾರೆ. ನಂತರ ರಾಜಧಾನಿ ಇಂಪಾಲ್ ಗೆ ಮರಳಿ ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಸಭೆ ನಡೆಸಿದ್ದಾರೆ.

ಟಾಟಾ ಸನ್ಸ್ ನಿಂದ ಮಿಸ್ತ್ರಿ ಔಟ್, ರತನ್ ಟಾಟಾ ಮರುಪ್ರವೇಶ

ಜಗತ್ತಿನ ದೈತ್ಯ ಕಂಪನಿಗಳಲ್ಲೊಂದಾದ ಟಾಟಾ ಸನ್ಸ್ ಅಧ್ಯಕ್ಷಗಿರಿಯಿಂದ ಸೈರಸ್ ಮಿಸ್ತ್ರಿ ಅವರನ್ನು ಕೆಳಗಿಳಿಸಲಾಗಿದೆ. ನಾಲ್ಕು ತಿಂಗಳ ಅವಧಿಗೆ ರತನ್ ಟಾಟಾ ಅವರೇ ಅಗ್ರ ನಾಯಕತ್ವ ನಿಭಾಯಿಸಲಿದ್ದಾರೆ. ಈ ಅವಧಿಯಲ್ಲಿ ಮುಂದಿನ ಮುಖ್ಯಸ್ಥನನ್ನು ಹುಡುಕಲಾಗುತ್ತದೆ. ಇದಕ್ಕೆ ಸಮಿತಿಯೊಂದು ನೇಮಕವಾಗಿದ್ದು ಅದರಲ್ಲಿ ರತನ್ ಟಾಟಾ, ರೊನೆನ್ ಸೆನ್, ವೇಣು ಶ್ರೀನಿವಾಸನ್, ಅಮಿತ್ ಚಂದ್ರ ಇದ್ದಾರೆ.

2014-15ರಲ್ಲಿ $ 108 ಬಿಲಿಯನ್ ಇದ್ದ ಟಾಟಾ ಸನ್ಸ್ ಆದಾಯ 2015-16ರಲ್ಲಿ $ 103 ಬಿಲಿಯನ್ ಗೆ ಕುಸಿದಿದ್ದೇ, ನಾಲ್ಕು ವರ್ಷಗಳ ಹಿಂದೆ ಚೇರ್ಮನ್ ಆಗಿ ನೇಮಕಗೊಂಡಿದ್ದ ಮಿಸ್ತ್ರಿ ಬದಲಾವಣೆಗೆ ಕಾರಣ ಎನ್ನಲಾಗುತ್ತಿದೆ.

Farmers Rally-min

ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಒದಗಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Leave a Reply