₹ 85,000 ಕೋಟಿ ಸಾಲಬಾಕಿ, ಈ 57 ಸುಸ್ತಿದಾರರ ಹೆಸರು ಬಹಿರಂಗವೇಕಿಲ್ಲ ಅಂತ ಪ್ರಶ್ನಿಸಿದ ಸುಪ್ರೀಂಕೋರ್ಟ್ ಕೇಳಿದ್ದು- ರೈತರಷ್ಟೇ ಸಾಲಕ್ಕೆ ಉತ್ತರದಾಯಿಯೇ?

ಡಿಜಿಟಲ್ ಕನ್ನಡ ಟೀಮ್:

57 ದೊಡ್ಡ ಸಾಲಗಾರರು ಸೇರಿ ಬ್ಯಾಂಕುಗಳಿಗೆ ಉಳಿಸಿಕೊಂಡಿರುವ ಸಾಲ ಮರುಪಾವತಿ 85,000 ಕೋಟಿ ರುಪಾಯಿಗಳು. ಹಾಗಂತ ಸೋಮವಾರ ಸುಪ್ರೀಂಕೋರ್ಟಿಗೆ ಆರ್ಬಿಐ ವಿವರ ಕೊಡುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಶ್ನೆಯೊಂದನ್ನು ಕೇಳಿದೆ. ನೀವೇಕೆ ಈ ಸಾಲಗಾರರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ?

ನ್ಯಾಯಪೀಠ ಕೇಳಿತು- ‘ಸಾಲ ಪಡೆದು ಹಿಂತಿರುಗಿಸದೇ ಇರುವ ಈ ಮಹಾನುಭಾವರು ಯಾರು? ಯಾರೆಲ್ಲ ಎಷ್ಟು ಹಣ ಸಾಲ ಪಡೆದಿದ್ದಾರೆ ಹಾಗೂ ಅದರಲ್ಲಿ ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗಬೇಕು. ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಮಾಹಿತಿಗಳನ್ನು ಸಾರ್ವಜನಿಕರು ಬಯಸಿದ್ದೇ ಆದರೆ ಸಿಗುವಂತಾಗಬೇಕು.’

ಆಗ ಆರ್ಬಿಐ ಪರ ವಕೀಲರು ಹೇಳಿದರು- ‘ಇಲ್ಲಿ ಸಾಲ ಪಾವತಿ ಬಾಕಿ ಉಳಿಸಿಕೊಂಡವರೆಲ್ಲ ಉದ್ದೇಶಿತ ಸುಸ್ತಿದಾರರಲ್ಲ. ಆದ್ದರಿಂದ ಸಾಲ ಪಾವತಿಸದವರ ಹೆಸರನ್ನೆಲ್ಲ ಪ್ರಕಟಿಸಿವುದು ಬ್ಯಾಂಕುಗಳ ಹಿತಾಸಕ್ತಿಗೆ ಪೂರಕವಲ್ಲ.’

ನೀವು ದೇಶದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಬೇಕೆ ವಿನಃ ಬ್ಯಾಂಕುಗಳ ಹಿತಾಸಕ್ತಿಗಲ್ಲ ಎಂದು ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಸುಸ್ತಿದಾರರ ಹೆಸರನ್ನು ಬಹಿರಂಗಪಡಿಸಬೇಕೇ ಬೇಡವೇ ಎಂಬ ಬಗ್ಗೆ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಸ್ವಯಂಸೇವಾ ಸಂಸ್ಥೆಯೊಂದರ ಪರವಾಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಕಿದ್ದ ಅರ್ಜಿ ಇದಾಗಿತ್ತು. ನ್ಯಾಯಪೀಠ ಹೇಳಿದಂತೆ, ಇದೀಗ ಆರ್ಬಿಐ ಒದಗಿಸಿರುವ ಪಟ್ಟಿಯು ₹500 ಕೋಟಿಗೂ ಹೆಚ್ಚು ಉಳಿಸಿಕೊಂಡವರದ್ದಂತೆ. ಈ ಮಟ್ಟವನ್ನು ಕೆಳಗಿಳಿಸಿದ್ದೇ ಆದಲ್ಲಿ ಸಾಲ ಬಾಕಿ ಪ್ರಮಾಣ ಗಣನೀಯವಾಗಿ ಏರಲಿದೆ.

ಕೊನೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯವು ಬಹುಶಃ ಈ ದೇಶದ ಜನರ ಧ್ವನಿಯೂ ಆಗಿದೆ. ‘ಸಾವಿರಾರು ಕೋಟಿ ರುಪಾಯಿಗಳ ಸಾಲ ಪಡೆದವರು ತಮ್ಮ ಕಂಪನಿ ದಿವಾಳಿಯೆಂದು ಘೋಷಿಸಿ ಓಡಿಹೋಗುತ್ತಿದ್ದಾರೆ. 15-20 ಸಾವಿರ ಸಾಲ ಪಡೆದ ರೈತರು ಮತ್ತು ಬಡಜನ ಮಾತ್ರ ತತ್ತರಿಸುತ್ತಿದ್ದಾರೆ.’

Leave a Reply