ಪ್ರಾದೇಶಿಕ ಭಾಷೆಗಳಲ್ಲಿ ಡಿಜಿಟಲ್ ಸೇವೆ ನೀಡಬೇಕಾದ ಅಗತ್ಯ, ಇದು ಮುಕೇಶ್ ಅಂಬಾನಿಯೂ ಒಪ್ಪಿಕೊಳ್ಳುತ್ತಿರುವ ವಿಷಯ

 

ಡಿಜಿಟಲ್ ಕನ್ನಡ ಟೀಮ್:

ಎನ್ಡಿಟಿವಿಯಲ್ಲಿ ಪ್ರಸಾರವಾಗುವ ಶೇಖರ್ ಗುಪ್ತ ಅವರ ಮಾತುಕತೆ ಮಾದರಿಯ ಸಂದರ್ಶನ ಸರಣಿಯಲ್ಲಿ ಇತ್ತೀಚೆಗೆ ಅವರು ರಿಲಯನ್ಸ್ ಸಾಮ್ರಾಜ್ಯಪತಿ ಮುಕೇಶ್ ಅಂಬಾನಿ ಜತೆಗೆ ಸಂವಾದಕ್ಕಿಳಿದಿದ್ದರು.

ಈ ಬಗ್ಗೆ ಹಲವು ಟೀಕೆಗಳಿವೆ. ಇಲ್ಲಿ ಯಾವ ಸೀಳುನೋಟದ ಪ್ರಶ್ನೆಗಳೂ ಇರಲಿಲ್ಲ, ಮುಕೇಶ್ ಅಂಬಾನಿಯನ್ನು ಇಚ್ಛೆಗೆ ತಕ್ಕಂತೆ ಮಾತಾಡಲು ಬಿಟ್ಟಂತಿತ್ತು ಎಂಬ ಟೀಕೆಗಳು ಸಾಮಾಜಿಕ ಮಾಧ್ಯಮ, ಜಾಲತಾಣಗಳು ಸೇರಿದಂತೆ ಅಲ್ಲಲ್ಲಿ ಹರಿದಾಡಿವೆ. ಅದೇನೂ ತೀರ ಅನಿರೀಕ್ಷಿತವೇನಲ್ಲ. ಏಕೆಂದರೆ ಮುಕೇಶ್ ಅಂಬಾನಿ ಮಾಧ್ಯಮದೊಂದಿಗೆ ಸರಾಗ ಮಾತುಕತೆಗೆ ಕೂರುವುದೆಂದರೆ ಒಂದಿಷ್ಟು ಪೂರ್ವಷರತ್ತುಗಳಿದ್ದೇ ಇರುತ್ತವೆ. ಅದಿಲ್ಲದೇ ಹಲವರ ಸಂದರ್ಶನ ಪಡೆಯುವುದೇ ಅಸಾಧ್ಯ. ಹೀಗಾಗಿ ಈ ಉಭಯಕುಶಲೋಪರಿ ಮಾದರಿ ಸಂದರ್ಶನದಲ್ಲಿ ಕೆಜಿ ಬೇಸಿನ್ ಹಗರಣಗಳ ಬಗ್ಗೆ ಮುಕೇಶ್ ಅಂಬಾನಿಯವರನ್ನು ಪ್ರಶ್ನಿಸಬೇಕಿತ್ತು ಎಂಬುದು ಸರಿಯಾದ ಆಶಯವೇ ಆದರೂ ಸಾಧ್ಯವಿಲ್ಲದ್ದು.

ಮಾತುಕತೆ ಮುಕೇಶ್ ಅಂಬಾನಿಯ ಜಾಹೀರಾತಿನಂತಿದ್ದದ್ದು, ಈ ಒಟ್ಟಾರೆ ಸಂದರ್ಶನ ಮಾಲಿಕೆಯಲ್ಲಿ ಶೇಖರ್ ಗುಪ್ತ ಪಾಲುಗಾರ್ತಿ ಬರ್ಖಾ ದತ್ ದೂರವೇ ಉಳಿದಿದ್ದು ಎಲ್ಲವೂ ಗಮನ ಸೆಳೆಯುವ ಅಂಶಗಳೇ ಆದರೂ ಇದ್ದಿದ್ದರಲ್ಲಿ ದಕ್ಕಿದ ಕೆಲ ಸಂಗತಿಗಳು ದಾಖಲಾರ್ಹವಾಗಿವೆ.

  •  ‘ನೀವು ಅತಿದೊಡ್ಡ ಸಂಪರ್ಕಜಾಲ ನಿರ್ಮಿಸಿ ಡಾಟಾ ಮೂಲಕ ಸಾಮಾನ್ಯನನ್ನೂ ಬೆಸೆಯುವ ಮಾತನಾಡುತ್ತಿದ್ದೀರಿ. ಅದೇನೋ ಸರಿ. ಆದರೆ ಈ ಸೌಕರ್ಯ ಮಾಧ್ಯಮವು ಕೇವಲ ಇಂಗ್ಲಿಷ್ ಆಗಿದ್ದರೆ, ತಮ್ಮ ನಾಡುನುಡಿಯಲ್ಲಿ ವ್ಯವಹರಿಸುವ ಕೋಟ್ಯಂತರ ಭಾರತೀಯರು ತಪ್ಪಿ ಹೋಗುತ್ತಾರಲ್ಲ? ಈ ಬಗ್ಗೆ ನಿಮ್ಮ ಯೋಚನೆ ಏನು’ ಎಂಬ ಪ್ರಶ್ನೆ ಬಂದಿದ್ದು ಕಾದಂಬರಿಕಾರ ಅಮಿಶ್ ತ್ರಿಪಾಠಿ ಅವರಿಂದ. ‘ಮೊಳೆಯ ಮೇಲೆ ಸರಿಯಾಗಿ ಸುತ್ತಿಗೆ ಕುಟ್ಟಿದ ರೀತಿಯಲ್ಲಿ ಬಹಳ ಸೂಕ್ತ ಪ್ರಶ್ನೆ ಕೇಳಿದ್ದೀರಿ’ ಅಂತ ಮೆಚ್ಚಿಕೊಂಡ ಮುಕೇಶ್ ಅಂಬಾನಿ, ಪ್ರಾದೇಶಿಕ ಭಾಷೆಗಳಲ್ಲಿ ವಿಷಯ ಸೃಷ್ಟಿಸಬೇಕಾದ ಅಗತ್ಯವನ್ನು ಮನಸಾರೆ ಒಪ್ಪಿಕೊಂಡರು. ಹಾಗಲ್ಲದೇ ಭಾರತವನ್ನು ಇಂಗ್ಲಿಷ್ ಮೂಲಕ ಮಾತ್ರವೇ ವ್ಯಾಪಿಸಲು ಸಾಧ್ಯವಾಗುವುದೇ ಇಲ್ಲ ಎಂಬುದವರ ಅಭಿಮತ. ‘ಜಿಯೊ ಸೇವೆ ಪ್ರಾದೇಶಿಕ ಭಾಷೆಗಳಲ್ಲಿನ ಸೇವೆಯನ್ನೂ ಅಗತ್ಯ ಅಂಶವಾಗಿ ಪರಿಗಣಿಸಿದೆ. ಪ್ರಾದೇಶಿಕ ಟಿವಿ ವಾಹಿನಿಗಳಲ್ಲಿ ರಿಲಯನ್ಸ್ ಹೂಡಿಕೆ ಮಾಡುತ್ತಿರುವುದೂ ಇದೇ ಕಾರಣಕ್ಕಾಗಿ. ಹೀಗೆ ಮಾಧ್ಯಮಗಳಲ್ಲಿ ಪ್ರಾದೇಶಿಕ ಭಾಷೆಯ ವಿಷಯಸೃಷ್ಟಿ ನಾಳಿನ ದಿನಗಳಲ್ಲಿ ಡಿಜಿಟಲ್ ಸಹ ಆಗುತ್ತದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕಂಟೆಂಟ್ ನಿರ್ಮಾಣಕ್ಕೆ ನಾವು ಮತ್ತಷ್ಟು ಗಮನ ಹರಿಸಬೇಕಿದೆ’ ಎಂದಿರುವ ಮುಕೇಶ್ ಅಂಬಾನಿ, ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಕುದುರಿಕೊಳ್ಳಬಹುದಾದ ಬೇಡಿಕೆಗಳ ಸೂಚನೆ ಇತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದೇ?
  • 4ಜಿ ಸೇವೆಯೇನೋ ಸರಿ, ಮುಂದಿನ 6ಜಿ, 7ಜಿ ಸೇವೆಗಳನ್ನೆಲ್ಲ ಭಾರತ ಯಾವಾಗ ಕಾಣುತ್ತದೆ ಎಂಬೊಂದು ಪ್ರಶ್ನೆ ತೂರಿ ಬಂತು. ಈ ‘ಜಿ’ ಕಲ್ಪನೆಯನ್ನು ಬಹಳಷ್ಟು ಮಂದಿ ಅರ್ಥಮಾಡಿಕೊಂಡಿಲ್ಲ ಎಂಬ ಅನುಮಾನದೊಂದಿಗೆ ಅಂಬಾನಿ ಉತ್ತರಿಸಿದ್ದು ಹೀಗೆ. ‘ಯಾವುದೇ ಮಾರುಕಟ್ಟೆ ಜನರ ಅಗತ್ಯಗಳಿಗೆ ತಕ್ಕನಾಗಿ ಸ್ಪಂದಿಸುತ್ತದೆ. ಈಗಿನ ತಂತ್ರಜ್ಞಾನ ಸ್ಮಾರ್ಟ್ ಫೋನಿನಲ್ಲಿ ನಮ್ಮ ಎಲ್ಲ ಬಳಕೆಗಳಿಗೆ ಸಾಕು. ಇನ್ನೆರಡು ತಲೆಮಾರಿಗೆ ಅಪ್ಗ್ರೇಡ್ ಮಾಡಿಕೊಳ್ಳುವ ಅವಕಾಶವೂ ಜಿಯೊ ಜಾಲದಲ್ಲಿದೆ. ಆದರೆ ನಾವು ಅರ್ಥಮಾಡಿಕೊಳ್ಳಬೇಕಿರುವುದು ಅವು ಯಾವಾಗ ಬೇಕಾಗುತ್ತವೆ ಎಂಬ ಬಗ್ಗೆ. ಭವಿಷ್ಯದಲ್ಲಿ ಸ್ವಯಂಚಾಲಿತ ಕಾರುಗಳು ಬಂದರೆ ಅವು ತಂತ್ರಜ್ಞಾನವನ್ನೇ ಅವಲಂಬಿಸಿರುತ್ತವೆ ಹಾಗೂ ಅವುಗಳ ನಿಯಂತ್ರಣ ಡಾಟಾ ಮೂಲಕವೇ ಆಗುತ್ತದೆ. ನಿಮ್ಮ ಮನೆಯೆದುರಿನ ಭದ್ರತಾ ಕೆಮರಾವನ್ನು ಸ್ಥಳೀಯ ಪೊಲೀಸ್ ಠಾಣೆ ಜತೆಗೆ ಸಂಪರ್ಕಿಸುವ ಜಾಲದ ಅಭಿವೃದ್ಧಿಯಾಯಿತೆನ್ನಿ. ಆಗ ಹೆಚ್ಚಿನ ಬ್ಯಾಂಡ್ವಿಡ್ತ್ ಬೇಡುತ್ತದೆ. ಅಂಥ ಬೇಡಿಕೆಗಳು ನಮ್ಮ ದೇಶದಲ್ಲಿ ಉದ್ಭವವಾದಾಗ ಮುಂದಿನ ತಲೆಮಾರಿನ ಇಂಟರ್ನೆಟ್ ಬೇಕಾಗುತ್ತದೆ.’
  • ರಿಲಾಯನ್ಸ್ ಜಿಯೊ ಅವಸರದಲ್ಲಿ ಹುಟ್ಟಿದ ಯೋಜನೆ ಅಲ್ಲವೇ ಅಲ್ಲ. ಸುದೀರ್ಘ ಕಾರ್ಯತಂತ್ರ ಸಮಾಲೋಚನೆ, ಎಂಜಿನಿಯರಿಂಗ್ ಕೌಶಲ ಇಟ್ಟುಕೊಂಡು ಜನ್ಮತಾಳಿದ ಯೋಜನೆ. ದೂರಸಂಪರ್ಕದಲ್ಲಿ ಅವಕಾಶ ಎಷ್ಟು ವ್ಯಾಪಕವಾಗಿದೆ ಎಂಬುದಕ್ಕೆ ಕೆಲವು ಹೋಲಿಕೆಗಳನ್ನು ಮಾಡಬೇಕು. ದೂರವಾಣಿ ಸಂಪರ್ಕ ಶುರುವಾದಾಗ ಮೊದಲು ಅದನ್ನು ಮಹಾನಗರಗಳಿಗೆ ಸಂಪರ್ಕಿಸಲಾಯಿತು. ಮುಖ್ಯರಾದವನ್ನೆಲ್ಲ ಸಂಪರ್ಕಿಸಿದ ನಂತರ ನಿಮ್ಮ ಮನೆಗೆ ಫೋನ್ ಬಂತು. ಡಾಟಾ ಹಾಗಲ್ಲ. ಜನಸಾಮಾನ್ಯರ ಮಟ್ಟದಲ್ಲಿ ಅಗಾಧ ವಿತರಣೆಯಾಗುತ್ತದೆ. ಈ ಹಿಂದೆ ಫೋನ್ ಮಾಡಿದರೆ, ಅತ್ತಲಿನವನು ಅದನ್ನು ಸ್ವೀಕರಿಸಿದರೆ ಸೇವಾದಾತನಿಗೆ ವಹಿವಾಟು ಕುದುರುತ್ತಿತ್ತು. ಈಗ ಹಾಗಲ್ಲ. ಮನುಷ್ಯ ಸರ್ವರ್ ಯಂತ್ರಗಳ ಜತೆ ಅನವರತ ಮಾತಾಡುತ್ತಿರುತ್ತಾನೆ. ಒಮ್ಮೆ ಫೇಸ್ಬುಕ್, ಟ್ವಿಟ್ಟರ್ ಇನ್ನೆಲ್ಲೋ ಯಾರೋ ಹಾಕಿದ ಸಂದೇಶವನ್ನು ಯಾವುದೋ ಜಾಗದಲ್ಲಿ ಅವರ ಸಮಯಕ್ಕನುಗುಣವಾಗಿ ಪಡೆದುಕೊಳ್ಳುತ್ತಾರೆ ಹಾಗೂ ಇಲ್ಲೆಲ್ಲ ಡಾಟಾ ವಹಿವಾಟು ನಡೆಯುತ್ತಲೇ ಇರುತ್ತದೆ. (ಈ ಉದಾಹರಣೆ ನೀಡಿದ್ದು ತಮ್ಮ ಮಗ ಅಂತ ಹೇಳಿಕೊಂಡರು ಅಂಬಾನಿ.)

Leave a Reply