
ಡಿಜಿಟಲ್ ಕನ್ನಡ ಟೀಮ್:
ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉದ್ದೇಶಿತ ಉಕ್ಕಿನ ಮೇಲ್ಸೇತುವೆ (ಸ್ಟೀಲ್ ಬ್ರಿಡ್ಜ್) ನಿರ್ಮಾಣ ಸಂಬಂಧ ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಕರೆದಿದ್ದ ಜನಪ್ರತಿನಿಧಿಗಳ ಸಭೆ ಗೊಂದಲದ ಗೂಡಾಗಿತ್ತು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಜನಪ್ರತಿನಿಧಿಗಳು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಸದಸ್ಯರು ಯೋಜನೆಗೆ ಬೆಂಬಲ ಘೋಷಿಸಿದರೆ, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸಭೆಯನ್ನು ಬಹಿಷ್ಕರಿಸಿ ಅರ್ಧದಲ್ಲೇ ಹೊರಬಂದು ಧಿಕ್ಕಾರದ ಘೋಷಣೆ ಕೂಗಿದರು.
ಸಭೆಯಲ್ಲಿ ಅಭಿಪ್ರಾಯ ಮಂಡಣೆಗೆ ಸರಿಯಾದ ಅವಕಾಶವನ್ನೇ ಕೊಡದೇ ಸಚಿವ ಜಾರ್ಜ್ ಅವರು ಧ್ವನಿ ಏರಿಸುತ್ತ ಅಡ್ಡಿಪಡಿಸುತ್ತಲೇ ಹೋದರು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಸಭೆಯಲ್ಲಿ ಸಲಹೆ ನೀಡಲು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂದಾದಾಗ ‘ನೀವು ನ್ಯಾಯಾಲಯಕ್ಕೆ ಹೋಗಿದ್ದೀರಿ, ಈ ಪ್ರಕರಣವನ್ನು ಅಲ್ಲೇ ಇತ್ಯರ್ಥಪಡಿಸಿಕೊಳ್ಳಿ’ ಎಂದು ಆಡಳಿತ ಪಕ್ಷದ ಸದಸ್ಯರು ಛೇಡಿಸಿದ್ದಾರೆ. ಪರಿಸರದ ಮೇಲಾಗುವ ಪರಿಣಾಮದ ವಿವರ ವರದಿ ಬೇಕೆಂಬ ನಾಗರಿಕರ ಅಭಿಪ್ರಾಯವನ್ನೇ ತಾವು ಸಭೆಯಲ್ಲಿ ಪುನರುಚ್ಛರಿಸಿದ್ದಾಗಿ ರಾಜೀವ್ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರೆಡ್ಡಿ ಮಗಳ ಮದುವೆ ಅಶ್ಲೀಲ ಪ್ರದರ್ಶನ- ರಮೇಶ್ ಕುಮಾರ್
ಮಾಜಿ ಸಚಿವ ಗಣಿ-ಧಣಿ ಜನಾರ್ಧನ ರೆಡ್ಡಿ ತಮ್ಮ ಪುತ್ರಿಯ ಮದುವೆಯನ್ನು ನಗರದ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿರುವುದನ್ನು ಅಶ್ಲೀಲ ಪ್ರದರ್ಶನ. ನಾಗರಿಕ ಸಮಾಜಕ್ಕೆ ಮಾಡುವ ಅಪಮಾನ ಇದಾಗಿದೆ. ಸ್ವಾಭಿಮಾನ ಇರುವವರು ಆ ಮದುವೆಯ ಅಂಗಳಕ್ಕೆ ಕಾಲಿಡಬಾರದು ಎಂದು ಕಿಡಿಕಾರಿದ್ದಾರೆ ಸಚಿವ ರಮೇಶ್ಕುಮಾರ್.
ಅವರ ವಿಚಾರಧಾರೆ ಹೀಗಿತ್ತು- ‘ಸಂಪತ್ತು ಇದೆ ಎಂದು ಅದನ್ನು ಪ್ರದರ್ಶನಕ್ಕಿಡುವುದಲ್ಲ. ಇರುವ ಸಂಪತ್ತನ್ನು ನಾಲ್ಕು ಗೋಡೆಯೊಳಗೆ ಅನುಭವಿಸಬೇಕು. ತಾವು ಮಾಡಿದ ಆಸ್ತಿಯನ್ನು ಮಕ್ಕಳಿಗೆ ಬಿಟ್ಟು ಹೋಗಬೇಕು. ಅಪ್ಪ ಅಮ್ಮನ ಬಳಿ ಇಲ್ಲದ ಆಸ್ತಿ ಇವರಲ್ಲಿ ದೊಡ್ಡ ಪ್ರಮಾಣದಲ್ಲಿ ಹೇಗೆ ಕ್ರೋಢೀಕರಣವಾಯಿತು ಎಂಬುದು ಜನಜನಿತವಾಗಿದೆ. ಇದು ಪ್ರಜಾಪ್ರಭುತ್ವ ನಾವು ಏನೂ ಮಾಡಲಾಗದು. ನಾನು ಸ್ವಾಭಿಮಾನಿ ಮನುಷ್ಯ. ಯಾರದೇ ಮದುವೆಯಾದರೂ ಇಂತಹ ವೈಭವದಿಂದ ಕೂಡಿದ್ದರೆ, ಅದು ಸಹೋದ್ಯೋಗಿಗಳದ್ದಾಗಿರಲಿ, ನೆಂಟರಿಸ್ಟರದ್ದಾಗಲಿ ನಾನು ಹೋಗುವುದಿಲ್ಲ. ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸರಳವಾಗಿ ಮದುವೆಯಾದೆ.
ನನಗೆ ಎಲ್ಲಾ ಸಂಪತ್ತು ಇದ್ದರೂ, ಅದನ್ನು ಸಾರ್ವಜನಿಕವಾಗಿ ತೋರಿಸುವ ಕೆಲಸ ಮಾಡಲಿಲ್ಲ. ವೈಭವೋಪೇತ ಮದುವೆಗಳಿಗೆ ಕಡಿವಾಣ ಹಾಕಬೇಕೆಂದು ಮೊದಲ ಭಾರಿಗೆ ವಿಧಾನ ಸಭೆಯಲ್ಲಿ ಖಾಸಗಿ ವಿಧೇಯಕ ಮಂಡಿಸಿದೆ. ಅದು ಚರ್ಚೆಗೆ ಬರಲಿಲ್ಲ’
ಉಳಿದಂತೆ ಆಡಳಿತದ ಬಗ್ಗೆ ಮಾತನಾಡುತ್ತ, ‘ಕ್ಯಾನ್ಸರ್, ಮೂತ್ರಪಿಂಡ, ಹೃದಯ ಸಂಬಂಧಿಸಿದ ಮಾರಣಾಂತಿಕ ಕಾಯಿಲೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಔಷಧಿಗಳನ್ನು ಮಾರಾಟ ಮಾಡುವ ಜನಸಂಜೀವಿನಿ ಮಳಿಗೆಗಳನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗುವುದು. ಕೇಂದ್ರ ಸರ್ಕಾರ ಇತ್ತೀಚಗಷ್ಟೇ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜನ ಔಷಧಿ ಮಳಿಗೆ ಆರಂಭಿಸಿ, ಭಾರೀ ರಿಯಾಯಿತಿ ದರದಲ್ಲಿ ಔಷಧಿಗಳನ್ನು ವಿತರಿಸುತ್ತಿದೆ. ಇದೇ ಮಾದರಿಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ 200 ಕೇಂದ್ರಗಳಲ್ಲಿ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತೇವೆ.’
ದರ್ಶನ್ ಮನೆ ತೆರವು ವಿರುದ್ಧ ತಡೆಯಾಜ್ಞೆ
ಚಿತ್ರನಟ ದರ್ಶನ್ ಅವರ ಮನೆಯನ್ನು ಕೆಡವದಂತೆ ರಾಜ್ಯ ಹೈ ಕೋರ್ಟ್ ಇಂದಿಲ್ಲಿ ತಡೆಯಾಜ್ಞೆ ನೀಡಿ, ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿ, ದರ್ಶನ್ ಮನೆ ಕಟ್ಟಿದ್ದಾರೆ ಎಂದು ಆರೋಪಿಸಿ, ಅವರ ಮನೆಯನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ, ದರ್ಶನ್ ನ್ಯಾಯಾಲಯದ ಮೋರೆ ಹೊಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ಮನೆ ತೆರವಿಗೆ ತಡೆಯಾಜ್ಞೆ ನೀಡಿದ್ದಲ್ಲದೆ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು. ನಗರದ ರಾಜರಾಜೇಶ್ವರಿನಗರದಲ್ಲಿ ಐಡಿಯಲ್ ಹೋಮ್ಸ್ ನಿರ್ಮಿಸಿರುವ ಬಡಾವಣೆಯಲ್ಲಿ ದರ್ಶನ್ ಸೇರಿದಂತೆ 240ಕ್ಕೂ ಹೆಚ್ಚು ಮಂದಿ ನಿವೇಶನಗಳನ್ನು ಪಡೆದು, ಮನೆಗಳನ್ನು ನಿರ್ಮಿಸಿದ್ದರು. ಇದೇ ವ್ಯಾಪ್ತಿಯಲ್ಲಿದ್ದ ಶಾಮನೂರು ಶಿವಶಂಕರಪ್ಪ ಒಡೆತನದ ಆಸ್ಪತ್ರೆ ವಶದ ವಿರುದ್ಧವೂ ಈ ಹಿಂದೆಯೇ ತಡೆ ತಂದಿದ್ದರು. ದರ್ಶನ್ ಇದೇ ಮಾರ್ಗ ಅನುಸರಿಸಿದ್ದಾರೆ.
ಹಿಂದುತ್ವದ ಮರುವ್ಯಾಖ್ಯಾನವಿಲ್ಲ- ಸುಪ್ರೀಂಕೋರ್ಟ್
ಹಿಂದುತ್ವವೆಂದರೆ ಬದುಕಿನ ವಿಧಾನವಾದ್ದರಿಂದ ಆ ಹೆಸರಿನಲ್ಲಿ ಮತ ಕೇಳಿದರೆ ಭ್ರಷ್ಟ ಪದ್ಧತಿ ಆಗುವುದಿಲ್ಲ ಎಂದು 1995ರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.
ರಾಜಕಾರಣವನ್ನು ಮತ್ತು ಧರ್ಮವನ್ನು ಬೇರ್ಪಡಿಸಬೇಕು, ಈ ನಿಟ್ಟಿನಲ್ಲಿ ಚುನಾವಣಾ ಕಾಯ್ದೆಗಳು ಸ್ಪಷ್ಟತೆ ಹೊಂದಿಲ್ಲ ಎಂಬ ತೀಸ್ತಾ ಸೆತಲ್ವಾಡ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದು ಇತ್ಯರ್ಥವಾಗಬೇಕಾದರೆ ಹಿಂದುತ್ವದ ವ್ಯಾಖ್ಯಾನವೂ ಆಗಬೇಕೆಂಬ ಒತ್ತಾಯ ಅರ್ಜಿದಾರರ ಪರ ವಕೀಲರದ್ದಾಗಿತ್ತು. ಈ ಸಂದರ್ಭದಲ್ಲಿ ಮೇಲಿನ ವಿಷಯ ಸ್ಪಷ್ಟಪಡಿಸಿದ 7 ನ್ಯಾಯಮೂರ್ತಿಗಳ ನ್ಯಾಯಪೀಠವು, ‘ಈ ಹಂತದಲ್ಲಿ ಹಿಂದುತ್ವ ಎಂದರೇನು ಎಂದು ವ್ಯಾಖ್ಯಾನಿಸುವ ಗೋಜಿಗೆ ನಾವು ಹೋಗುವುದಿಲ್ಲ. 1995ರ ತೀರ್ಪನ್ನು ಮರುಪರಿಶೀಲಿಸುವ ಪ್ರಸ್ತಾವ ನಮ್ಮ ಮುಂದಿಲ್ಲ. ಈಗಿರುವ ಚುನಾವಣಾ ಕಾಯ್ದೆಗಳ ಪ್ರಕಾರ ಧರ್ಮದ ಆಧಾರದಲ್ಲಿ ಮತ ಕೇಳುವುದು ಭ್ರಷ್ಟಾಚಾರವಾಗುತ್ತದೆಯೇ ಎಂದು ಪರಿಶೀಲಿಸುವುದಷ್ಟೇ ಪೀಠದ ಮುಂದಿರುವ ಕೆಲಸವಾಗಿದೆ’ ಎಂದು ಹೇಳುವ ಮುಖಾಂತರ ಹಿಂದುತ್ವದ ಚರ್ಚೆಯನ್ನು ಕೈಬಿಟ್ಟಿದೆ.