ಪಾಕಿಸ್ತಾನವೂ ಉಗ್ರವಾದ ಸಂತ್ರಸ್ತವೆಂದು ಬಿಂಬಿಸುವುದಕ್ಕೆ ಬಲೊಚಿಗಳನ್ನೇಕೆ ಕೊಲ್ಲುತ್ತೀರಿ?: ಕ್ವೆಟ್ಟಾದಲ್ಲಿ 60 ಬಲಿ ಪಡೆದ ಉಗ್ರದಾಳಿಗೆ ಬಲೊಚ್ ಹೋರಾಟಗಾರ್ತಿ ಪ್ರತಿಕ್ರಿಯೆ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪೊಲೀಸ್ ತರಬೇತು ಕೇಂದ್ರದ ಮೇಲೆ ದಾಳಿ ಮಾಡಿರುವ ಉಗ್ರರು 60 ಮಂದಿಯನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದಾರೆ. ಸೋಮವಾರ ತಡರಾತ್ರಿ ತರಬೇತಿನ ಹುಡುಗರು ಮಲಗಿದ್ದ ವೇಳೆಯಲ್ಲಿ ನಡೆದ ದಾಳಿ ಇದು. ಸುಮಾರು 700 ಕೆಡೆಟ್ ಗಳನ್ನು ಒಳಗೊಂಡಿದ್ದ ಆ ತರಬೇತು ಕೇಂದ್ರ ರಕ್ತಸಿಕ್ತವಾಗಿದೆ.

ಈ ದಾಳಿ ಹೊಣೆ ತನ್ನದೆಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿದೆ. ಲಷ್ಕರ್ ಇ ಜಾಂಗ್ವಿ ಎಂಬ ಇನ್ನೊಂದು ಉಗ್ರ ಸಂಘಟನೆ ಇದನ್ನು ಮಾಡಿರಬಹುದೆಂದು ಅಲ್ಲಿನ ಅಧಿಕಾರಿಗಳ ಶಂಕೆಯಿದೆ. ಇನ್ನೊಂದೆರಡು ಪುಡಿ ಉಗ್ರ ಸಂಘಟನೆಗಳು ದಾಳಿ ಮಾಡಿದ್ದು ತಾವೇ ಎಂದು ಕೊಚ್ಚಿಕೊಂಡಿವೆ.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಸೇನಾ ಮುಖ್ಯಸ್ಥ ಎಲ್ಲರೂ ತಮ್ಮ ಕಾರ್ಯ ಬದಿಗಿರಿಸಿ ಕ್ವೆಟ್ಟಾಕ್ಕೆ ತೆರಳಿದ್ದಾರೆ. ಇಂಥ ಘಟನೆಗಳನ್ನು ನೋಡುತ್ತ ಜಗತ್ತೇನೋ, ಉಗ್ರವಾದ ಪಸರಿಸಿದವರು ಅದರಿಂದಲೇ ತೊಂದರೆ ಅನುಭವಿಸುತ್ತಾರೆಂಬುದಕ್ಕೆ ಇದುವೇ ಉದಾಹರಣೆ ಎನ್ನುತ್ತಿದೆ. ಆದರೆ ಪಾಕಿಸ್ತಾನ ಮಾತ್ರ, ‘ಉಗ್ರವಾದದಿಂದ ನಾವು ಸಂತ್ರಸ್ತರಾಗಿದ್ದೇವೆ ನೋಡಿ’ ಎಂಬ ವಾದಕ್ಕೆ ಇದನ್ನು ಬಳಸಿಕೊಳ್ಳುತ್ತಿದೆಯಲ್ಲದೇ, ಅಲ್ಲಿನ ಕೆಲ ರಾಜಕಾರಣಿಗಳು ಕ್ವೆಟ್ಟಾ ದಾಳಿಗಳು ಭಾರತದಿಂದ ಆಗಿರಬಾರದೇಕೆ ಎಂದೆಲ್ಲ ಮಾತನಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಲೊಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ್ತಿ ನಯೆಲಾ ಕ್ವಾದ್ರಿ ಬಲೊಚ್ ಅವರು ಈ ದಾಳಿಗೆ ಪ್ರತಿಕ್ರಿಯಿಸಿ ಬರೆದಿರುವ ಬ್ಲಾಗ್ ಮುಖ್ಯವಾಗುತ್ತದೆ. ಅಂದಹಾಗೆ, ಕ್ವೆಟ್ಟಾ ಇರುವುದು ಬಲೊಚಿಸ್ತಾನದಲ್ಲಿ. ತಮ್ಮ ಬ್ಲಾಗಿನಲ್ಲಿ ನಯೆಲಾ ಬರೆದಿರುವ ಸ್ಪಷ್ಟ ಮಾತುಗಳೆಂದರೆ- ಪಾಕಿಸ್ತಾನಿಯರೇ, ನೀವು ಉಗ್ರವಾದದ ಸಂತ್ರಸ್ತರೆಂದು ತೋರಿಸಿಕೊಳ್ಳುವುದಕ್ಕೆ ಬಲೊಚಿಗಳನ್ನು ಕೊಲ್ಲಬೇಡಿ.

naela quadri balochಅವರ ಬರಹ ಹೀಗಿದೆ- ‘ಕ್ವೆಟ್ಟಾದ ಪೊಲೀಸ್ ಅಕಾಡೆಮಿ ಮೇಲಾದ ದಾಳಿಯನ್ನು ಬಲೊಚಿನ ಜನ ಉಗ್ರವಾಗಿ ಖಂಡಿಸುತ್ತೇವೆ. ಇದರಲ್ಲಿ ಕೊಲೆಯಾದ ಹೆಚ್ಚಿನವರೆಲ್ಲ ಬಲೊಚಿಗಳೇ ಆಗಿದ್ದಾರೆ. ಅವರ ಕುಟುಂಬಗಳಿಗೆ ನಮ್ಮ ಸಂತಾಪವಿದೆ. ಪಾಕಿಸ್ತಾನಿ ತಾಲಿಬಾನಿನಿಂದ ಸಿಡಿದು ರಚನೆಯಾಗಿರುವ ಲಷ್ಕರ್ ಇ ಜಾಂಗ್ವಿ ನಡೆಸಿರುವ ಎಲ್ಲ ದಾಳಿಗಳಲ್ಲಿ ನಮೂನೆಯೊಂದಿದೆ.

ಇದು ಪಾಕಿಸ್ತಾನಕ್ಕೆ ಹೊರೆತಾದ ಏಜೆನ್ಸಿಗಳು ಪಾಕ್ ಮೇಲೆ ನಡೆಸಿದ ದಾಳಿ ಎಂದೇ ಅಧಿಕಾರಸ್ಥರು ಬಿಂಬಿಸುತ್ತಾರಾದರೂ ಈ ಎಲ್ಲ ದಾಳಿಗಳಿಗೆ ಮುಖ್ಯ ಗುರಿಯಾದವರು ಮುಗ್ಧ ಬಲೊಚಿಗಳು ಎಂಬ ಸತ್ಯವನ್ನು ಯಾರೂ ತಳ್ಳಿಹಾಕುವಂತಿಲ್ಲ. ಆಗಸ್ಟ್ 9ರ ದಾಳಿಯಲ್ಲಿ ಬಲೊಚಿಸ್ತಾನದ ಒಂದು ತಲೆಮಾರಿನ ಯುವ ವಕೀಲರೇ ಇಲ್ಲವಾಗಿಹೋದರು.

ಅದು ಲಷ್ಕರ್ ಇ ಜಾಂಗ್ವಿ ಇರಬಹುದು, ಲಷ್ಕರೆ ತೊಯ್ಬಾ ಇರಬಹುದು ಅದನ್ನು ಬೆಳೆಸಿರುವುದು ಪಾಕಿಸ್ತಾನವೇ. ಬಲೊಚಿಗಳನ್ನು ಪಾಕಿಸ್ತಾನಿ ಹಿತಾಸಕ್ತಿಗೆ ದುಡಿಸಿಕೊಂಡು ನಿಜ ಮುಸ್ಲಿಮರನ್ನಾಗಿಸುವುದಕ್ಕೆ ತಯಾರಾದ ಉಗ್ರ ಸಂಘಟನೆಗಳು ಇವೆಲ್ಲ. ಇದೀಗ ಪಾಕಿಸ್ತಾನ ಮೊಸಳೆ ಕಣ್ಣೀರು ಸುರಿಸುತ್ತಿದೆ. ತಾವೂ ಉಗ್ರವಾದದ ಸಂತ್ರಸ್ತರು ಎಂದು ಹೇಳುತ್ತ ಜಗತ್ತಿನ ಸಹಾನುಭೂತಿ ಗಿಟ್ಟಿಸಿಕೊಳ್ಳುವುದಕ್ಕೆ ಪಾಕಿಸ್ತಾನವು ಈ ಘಟನೆಯನ್ನು ಬಳಸಿಕೊಳ್ಳುತ್ತಿದೆ. ನಾವು ಬಲೊಚಿಗಳು ಪಾಕಿಸ್ತಾನದ ಇಂಥ ಆಟಗಳನ್ನೆಲ್ಲ ನೋಡಿಕೊಂಡೇ ಬಂದಿದ್ದೇವೆ. ಉಗ್ರವಾದದ ವಿರುದ್ಧ ತಾನು ಸೆಣೆಸುತ್ತಿರುವುದಾಗಿ ಪಾಕಿಸ್ತಾನ ಸುಳ್ಳು ಹೇಳುತ್ತಿದೆ.

ಪಾಕಿಸ್ತಾನಿ ಸೇನೆಯು ತನಗೆ ಸಮಾನಾಂತರವಾಗಿ ಅರೆಸೇನೆಯೊಂದನ್ನು ಸೃಷ್ಟಿಸಿ ಅದನ್ನು ಬಲೊಚಿಗಳ ವಿರುದ್ಧ ಬಳಸುತ್ತಿದೆ, ತನ್ನ ಹಲವು ಪ್ರಾಂತ್ಯಗಳ ದಮನಕ್ಕೆ ಬಳಸುತ್ತಿದೆ ಎಂಬ ಸತ್ಯ ಪಾಕಿಸ್ತಾನದಲ್ಲಿರುವವರಿಗೆಲ್ಲ ಗೊತ್ತು. ಜಗತ್ತು ಈ ವಾಸ್ತವಕ್ಕೆ ಎಚ್ಚೆತ್ತುಕೊಂಡು ಉಗ್ರವಾದವನ್ನು ಆಂತರಿಕ ಮತ್ತು ವಿದೇಶಿ ನೀತಿಗಳ ಸಾಧನವಾಗಿಸುತ್ತಿರುವ ಪಾಕಿಸ್ತಾನವನ್ನು ಬೆತ್ತಲಾಗಿಸಬೇಕು.’

Leave a Reply