ಗಣಿಗಾರಿಕೆ ಪರವಾನಿಗೆಗಾಗಿ ಜಿಂದಾಲ್ ನಿಂದ ಪ್ರೇರಣಾ ಟ್ರಸ್ಟಿಗೆ ಲಂಚ ಪ್ರಕರಣದಲ್ಲಿ ಯಡಿಯೂರಪ್ಪ ದೋಷಮುಕ್ತ

ಡಿಜಿಟಲ್ ಕನ್ನಡ ಟೀಮ್:

ಗಣಿಗಾರಿಕೆ ಪರವಾನಿಗೆ ನೀಡುವ ಹಿನ್ನೆಲೆಯಲ್ಲಿ ಜಿಂದಾಲ್ ಕಂಪನಿಯಿಂದ ಪ್ರೇರಣಾ ಟ್ರಸ್ಟಿಗೆ ಲಂಚ ಪಡೆದ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ಬುಧವಾರ ನೀಡಿದ ತೀರ್ಪಿನಲ್ಲಿ ಬಿಎಸ್ ವೈ ಸೇರಿದಂತೆ ಎಲ್ಲರೂ ದೋಷಮುಕ್ತ ಎಂದು ಆದೇಶಿಸಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಂದಾಲ್ ಗ್ರೂಪಿನ ಸೌತ್ ವೆಸ್ಟ್ ಮೈನಿಂಗ್ ಕಂಪನಿಗೆ ಗಣಿಗಾರಿಕೆಗಾಗಿ ಪರವಾನಗಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಜಿಂದಾಲ್ ಕಂಪನಿ 2006 ಮಾರ್ಚ್ ನಿಂದ 2011ರವರೆಗೂ ಯಡಿಯೂರಪ್ಪನವರ ಪುತ್ರರ ಕಂಪನಿಗೆ ಮೂರು ಬಾರಿ ಕೋಟ್ಯಾಂತರ ಹಣ ಸಂದಾಯ ಮಾಡಲಾಗಿತ್ತು. ಅಲ್ಲದೆ ಯಡಿಯೂರಪ್ಪನವರು ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಕಚೇರಿ ಹಾಗೂ ದುರ್ಬಳಕೆ ಮಾಡಿಕೊಂಡಿದ್ದರು. ರಾಜ್ಯದ ಬೊಕ್ಕಸಕ್ಕೆ 870 ಕೋಟಿಗೂ ಹೆಚ್ಚು ನಷ್ಟ ಮಾಡಿ ತಮ್ಮ ಮಕ್ಕಳ ಕಂಪನಿಗಳಿಗೆ ಹಣ ಸಂದಾಯವಾಗುವಂತೆ ಮಾಡಿದ್ದರು ಎಂಬುದು ಪ್ರಕರಣದಲ್ಲಿ ಬಿಎಸ್ ವೈ ವಿರುದ್ಧ ಇದ್ದ ಪ್ರಮುಖ ಆರೋಪ. ಆದರೆ, ‘ಪ್ರಕರಣದಲ್ಲಿ ಯಡಿಯೂರಪ್ಪನವರ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಸಾಧ್ಯವಾಗಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟು ಅವರ ಮೇಲಿನ ಆರೋಪವನ್ನು ತೆಗೆದುಹಾಕಿದೆ.

ಒಂದು ವೇಳೆ ಇಂದಿನ ತೀರ್ಪು ವ್ಯತಿರಿಕ್ತವಾಗಿ ಬಂದಿದ್ದೇ ಆಗಿದ್ದರೆ ಬಿಎಸ್ ವೈ ಮತ್ತೆ ಜೈಲು ಸೇರುವ ಸಾಧ್ಯತೆಗಳಿದ್ದವು, ಅಲ್ಲದೆ ಅವರ ರಾಜಕೀಯ ಭವಿಷ್ಯದ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ಇಂದಿನ ತೀರ್ಪು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಈ ಪ್ರಕರಣದಲ್ಲಿ ಯಡಿಯೂರಪ್ಪನವರ ಜತೆ ಆರೋಪಿ ಸ್ಥಾನದಲ್ಲಿ ನಿಂತಿದ್ದ ಪುತ್ರ ಬಿ.ವೈ ರಾಘವೇಂದ್ರ ಸೇರಿದಂತೆ ಇತರೆ 13 ಮಂದಿಗೂ ನ್ಯಾಯಾಲಯ ಕ್ಲೀನ್ ಚಿಟ್ ಕೊಟ್ಟಿದೆ.

ಈ ತೀರ್ಪು ಹೊರಬರುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿರೋ ಬಿಎಸ್ ವೈ ಹೇಳಿದಿಷ್ಟು…

‘ನ್ಯಾಯ ಸಿಕ್ಕಿದೆ. ನಾನು ದೋಷಮುಕ್ತನಾಗಿದ್ದೇನೆ… ನನ್ನ ಹಿತೈಷಿಗಳಿಗೆ ಸ್ನೇಹಿತರಿಗೆ, ಬೆಂಬಲಿಗರಿಗೆ ಹಾಗೂ ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಸತ್ಯಮೇವ ಜಯತೆ…’

Leave a Reply