ಪರಮೇಶ್ವರ್ ಹೆಗಲ ಮೇಲೆ ಬಂದೂಕಿಟ್ಟು ಡಿಕೆಶಿಗೆ ಗುರಿ ಇಟ್ಟಿರೋ ಸಿದ್ರಾಮಯ್ಯ ದಲಿತ ವಿರೋಧಿ ಪಟ್ಟ ಕಳೆದುಕೊಳ್ಳಲು ಸಾಧ್ಯವೇ..?!

author-thyagarajಅವಕಾಶವಾದ ರಾಜಕಾರಣ, ಇಬ್ಬರ ನಡುವೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಕೈ ಹಿಡಿದವರ ಕಾಲು ಮುರಿಯುವುದರಲ್ಲಿ ತಾವು ರಾಜಕೀಯ ಮಾಂತ್ರಿಕ ದೇವೇಗೌಡರ ಗರಡಿಯ ಪೈಲ್ವಾನನೇ ಸರಿ ಎಂಬುವುದನ್ನು ಈಗಾಗಲೇ ಸಾಬೀತು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಹೊಸ ಆಟ ಶುರುವಿಟ್ಟುಕೊಂಡಿದ್ದಾರೆ. ಬೇಡ ಬೇಡ ಎಂದರೂ ಬೆಂಬಿಡದ ಬೇತಾಳನಂತೆ ತಮಗೆ ಅಂಟಿಕೊಂಡಿರುವ ದಲಿತ ವಿರೋಧಿ ಪಟ್ಟ ಕಳಚಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೇ ಗಾಳ ಮಾಡಿಕೊಂಡಿದ್ದಾರೆ. ಈ ಗಾಳವನ್ನೇ ದಾಳವಾಗಿ ಉರುಳಿಸಿ ಹಾಲಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಹಾಗೂ ಪದವಿ ಆಕಾಂಕ್ಷಿ ಸಚಿವ ಡಿ.ಕೆ. ಶಿವಕುಮಾರ್ ನಡುವೆ ಸಂಘರ್ಷ ಸ್ಫೋಟದ ಸಂಚು ರೂಪಿಸಿದ್ದಾರೆ.

ತಮ್ಮನ್ನು ಮುಖ್ಯಮಂತ್ರಿ ಪದವಿವರೆಗೂ ಎಳೆತಂದ ‘ಅಹಿಂದ’ ವರ್ಗದ ನಾಯಕರನ್ನು ಒಬ್ಬೊಬ್ಬರನ್ನಾಗಿ ಕೋಳಿ ಪುಕ್ಕದಂತೆ ತರಿದು ಹಾಕಿರುವ ಸಿದ್ದರಾಮಯ್ಯನವರು ತನ್ನಿಮಿತ್ತ ಬಂದ ಕಳಂಕಗಳನ್ನು ತೊಳೆದುಕೊಳ್ಳಲು ಇನ್ನಿಲ್ಲದಂತೆ ತಿಣುಕಾಡುತ್ತಿದ್ದಾರೆ. ಹಾಗೆ ಮಸಿ ತೊಳೆದುಕೊಳ್ಳುವಾಗ ಮತ್ತಷ್ಟು ಬಗ್ಗಡ ಮೈಮೇಲೆ ಸುರುವಿಕೊಳ್ಳುತ್ತಿದ್ದರೂ ತಮ್ಮನ್ನು ಸ್ಫಟಿಕವೆಂದು ಬಿಂಬಿಸಿಕೊಳ್ಳಲು ಹವಣಿಸುತ್ತಿದ್ದಾರೆ.

ಸಿದ್ದರಾಮಯ್ಯನವರು ಬಹಿರಂಗವಾಗಿ ಏನೇ ಹೇಳಿಕೊಂಡರೂ ಅಂತರಂಗದಲ್ಲಿ ಶ್ರೀನಿವಾಸ ಪ್ರಸಾದ್ ದುಃಸ್ವಪ್ನವಾಗಿ ಕಾಡುತ್ತಿರುವುದು ಸುಳ್ಳಲ್ಲ. ಇಲ್ಲದಿದ್ದರೆ ಅಷ್ಟೊಂದು ತರಾತುರಿಯಲ್ಲಿ ನಂಜನಗೂಡಿನಲ್ಲಿ ಸಮಾವೇಶ ನಡೆಸುತ್ತಿರಲಿಲ್ಲ. ಅದು ಕಾಂಗ್ರೆಸ್ ತೊರೆದ ಶ್ರೀನಿವಾಸ ಪ್ರಸಾದ್ ಅವರ ಕಣ್ಣೀರು ಆರುವ ಮೊದಲೇ. ಇದು ಅವರಲ್ಲಿ ಮಿಳಿತವಾಗಿರುವ ದಲಿತ ವಿರೋಧಿ ಅಳುಕಿಗೆ ಸಾಕ್ಷಿ. ಅಲ್ಲಿನ್ನೂ ಚುನಾವಣೆ ಘೋಷಣೆ ಆಗಿಲ್ಲ. ದಿನಾಂಕ ನಿಗದಿ ಆಗಿಲ್ಲ. ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎಂಬುದು ಪಕ್ಕಕ್ಕಿರಲಿ, ಅವರದೇ ಪಕ್ಷದ ಉಮೇದುವಾರ ಕೂಡ ಅಂತಿಮವಾಗಿಲ್ಲ. ಅಷ್ಟರಲ್ಲಾಗಲೇ ಸಮಾವೇಶ ನಡೆಸಿ, ಪ್ರಸಾದ್ ಮೇಲೆ ನಡೆಸಿರುವ ವಾಗ್ದಾಳಿಯಲ್ಲಿ ಅವರ ಆತಂಕ ಅನುರಣಿಸಿದೆ.

ಸಿದ್ದರಾಮಯ್ಯ ಸಮಾವೇಶಕ್ಕೆ ಪ್ರತಿಯಾಗಿ ಪ್ರಸಾದ್ ಕೂಡ ಕೃತಜ್ಞತಾ ಸಮಾವೇಶ ನಡೆಸಲು ಯೋಜಿಸಿದ್ದಾರೆ. ಮರುಚುನಾವಣೆ ಮುಗಿಯುವವರೆಗೆ ಈ ರೀತಿ ಸಮಾವೇಶಗಳ ಸಮರ ಇದ್ದದ್ದೇ. ಆದರೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಆಗಬಹುದಾದ ಈ ಮರುಚುನಾವಣೆಯನ್ನು ಪ್ರತಿಷ್ಠೆ ವಿಚಾರವಾಗಿ ಪರಿಗಣಿಸಿರುವ ಸಿದ್ದರಾಮಯ್ಯನವರು ಗೆಲ್ಲಲು ಇರುವ ಎಲ್ಲ ಸಾಧ್ಯತೆಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಹಿಂದೆ ತಮ್ಮನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಇದೇ ಸಿದ್ದರಾಮಯ್ಯನವರು ಗೌಡರ ವಿರುದ್ಧ ಸೆಡ್ಡು ಹೊಡೆದು ಜೆಡಿಎಸ್ ತೊರೆದು ಬಂದಿದ್ದರು. ಇದೀಗ ಅವರ ವಿರುದ್ಧ ಪ್ರಸಾದ್ ಸೆಡ್ಡು ಹೊಡೆದು ನಿಂತಿದ್ದಾರೆ. ಪ್ರಸಾದ್ ಪ್ರತಿನಿಧಿಸುವ ಪರಿಶಿಷ್ಟ ಸಮುದಾಯದವರೇ ನಿರ್ಣಾಯಕರಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಒಂದೆಡೆ ಅನುಕಂಪದ ಅಲೆ ಮತ್ತೊಂದೆಡೆ ದಲಿತ ವಿರೋಧಿ ಎಂಬ ಕಪ್ಪುಕಲೆ ವಿರುದ್ಧ ಈಜುವುದು ಅದೆಷ್ಟು ಕಷ್ಟ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ದಲಿತ ವಿರೋಧಿ ಆರೋಪ ಕಳಚಿಕೊಳ್ಳಲು ಡಿ.ಕೆ. ಶಿವಕುಮಾರ್ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಪರಿಶಿಷ್ಟ ಸಮುದಾಯದವರೇ ಆದ ಡಾ. ಜಿ. ಪರಮೇಶ್ವರ್ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ತಂತ್ರ ಅವರದಾಗಿದೆ.

ಹೌದು, ಪರಮೇಶ್ವರ ಅವರನ್ನು ಕಂಡರೆ ಸಿದ್ದರಾಮಯ್ಯನವರಿಗೆ ಮೊದಲಿಂದಲೂ ಅಷ್ಟಕ್ಕಷ್ಟೇ. ಸಿಎಂ ಗಾದಿಗೆ ಪೈಪೋಟಿ ಆಗಿದ್ದ ಪರಮೇಶ್ವರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುವಲ್ಲಿ ಸಿದ್ದರಾಮಯ್ಯನವರ ‘ಶಬ್ದವೇಧಿ ಅಸ್ತ್ರ’ದ ಕಾಣಿಕೆ ಕಡಿಮೆಯೇನಿಲ್ಲ.  ಸೋತು ಸುಣ್ಣವಾಗಿ ಕೈಕೈ ಹಿಸುಕಿಕೊಂಡ ಪರಮೇಶ್ವರ ಡಿಸಿಎಂ ಪದವಿಗೆ ಹಪಹಪಿಸಿ ಕೊನೆಗೆ ಸಚಿವ ಹುದ್ದೆಗೆ ತೃಪ್ತಿ ಪಟ್ಟುಕೊಳ್ಳುವಷ್ಟರಲ್ಲಿ ಅನುಭವಿಸಿದ ಅಪಮಾನ ಅಷ್ಟಿಷ್ಟಲ್ಲ. ಅವರು ಸಚಿವರಾಗುತ್ತಿದ್ದಂತೆ ಒಬ್ಬರಿಗೆ ಒಂದೇ ಹುದ್ದೆ ನಿಯಮದನ್ವಯ ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ ಕೆಳಗಳಿಸಲು ನಡೆಸಿದ ಯತ್ನಗಳೂ ಸಾಕಷ್ಟಿವೆ. ಇತ್ತೀಚೆಗೆ ಆರು ವರ್ಷ ಅವಧಿ ಪೂರೈಸಿದ ಪರಮೇಶ್ವರ ಜಾಗಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ರಾಜ್ಯ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಮುಂದಿನ ಚುನಾವಣೆ ಚುಕ್ಕಾಣಿ ತಮ್ಮ ಕೈ ತಪ್ಪುವ ಸಂಭವವಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದು. ಹಿಂದೆಲ್ಲ, ಅದು ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಅವರನ್ನು ಗೆಲ್ಲಿಸಿಕೊಂಡಿದ್ದಿರಲಿ, ಜೆಡಿಎಸ್ ನ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಅಭ್ಯರ್ಥಿಗಳಿಗೆ ಹೊಗೆ ಹಾಕಿದ್ದಿರಲಿ ತಾವು ವಹಿಸಿಕೊಂಡ ಚುನಾವಣೆ ಜವಾಬ್ದಾರಿಯನ್ನು ನಿಸ್ಸೀಮನಂತೆ ನಿರ್ವಹಿಸಿರುವ ಶಿವಕುಮಾರ್ ಬಗ್ಗೆ ಅವರಿಗೆ ಒಂದು ರೀತಿ ಒಳಭಯ. ಮೊದಲೇ ಮೂಲ ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ಎಂದರೆ ಕಣ್ಣೆಲ್ಲ ಕೆಂಪು-ಕೆಂಪು. ಅಂಥ ಸಿದ್ದರಾಮಯ್ಯ ಇದೀಗ ಕಷ್ಟ ಕಾಲದಲ್ಲಿ ತಮ್ಮ ಕೈ ಹಿಡಿದಿದ್ದ  ಬಿ.ಕೆ. ಹರಿಪ್ರಸಾದ್, ಎಚ್. ವಿಶ್ವನಾಥ್, ಎಚ್.ಎಂ. ರೇವಣ್ಣ, ಶ್ರೀನಿವಾಸ ಪ್ರಸಾದ್, ಸಿ.ಎಂ. ಇಬ್ರಾಹಿಂ ಅವರಂಥ ಆತ್ಮಬಂಧುಗಳನ್ನೂ ಕಳೆದುಕೊಂಡು ಏಕಾಂಗಿಯಾಗುವತ್ತ ನಡೆದಿದ್ದಾರೆ. ಇಂಥ ಸಂದರ್ಭದಲ್ಲಿ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಕೋಲು ಕೊಟ್ಟು ಹೊಡೆಸಿಕೊಂಡಂತೆ ಎಂಬುದು ಮನದಟ್ಟಾಗಿದೆ. ಮೊದಲಿಗೆ ಈ ಜಾಗಕ್ಕೆ ತಮ್ಮ ನಿಕಟವರ್ತಿ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರನ್ನು ತರಲು ಒಂದು ವರ್ಷದಿಂದಲೂ ನಡೆಸಿದ್ದ ಯತ್ನ ಹೈಕಮಾಂಡ್ ಮಟ್ಟದಲ್ಲಿ ಶಿವಕುಮಾರ್ ಹೊಂದಿರುವ ಪ್ರಭಾವದ ಮುಂದೆ ಹಣ್ಣಾಗಿರಲಿಲ್ಲ. ಆಗೆಲ್ಲ ಶಿವಕುಮಾರ್ ಅವರನ್ನು ಹಿಮ್ಮೆಟ್ಟಿಸಲು ಸಿದ್ದರಾಮಯ್ಯ ಪಾಳೆಯದಿಂದ ಸಾಕಷ್ಟು ಒಳತಂತ್ರಗಳೂ ನಡೆದವು. ಶಿವಕುಮಾರ್ ಮತ್ತು ಪರಮೇಶ್ವರ್ ಕಿತ್ತಾಡಿಕೊಂಡಿದ್ದಾರೆ, ಪರಮೇಶ್ವರ್ ಅವರಿಗೆ ಶಿವಕುಮಾರ್ ದಮಕಿ ಹಾಕಿದ್ದಾರೆ, ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜತೆ ನಿಕಟ ಸಂಪರ್ಕವಿದೆ ಎಂದೆಲ್ಲ ಗಾಳಿಸುದ್ದಿಗಳನ್ನು ಹಬ್ಬಿಸಲಾಗಿತ್ತು. ಆದರೆ ಅದ್ಯಾವವೂ ಕೆಲಸ ಮಾಡಿರಲಿಲ್ಲ.

ಕೊನೆಗೆ ಇದೀಗ ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಶಿವಕುಮಾರ್ ಅವರಷ್ಟೇ ಪ್ರಭಾವ ಹೊಂದಿರುವ ಪರಮೇಶ್ವರ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ಮೂಲಕ ಒಂದೆಡೆ ಶ್ರೀನಿವಾಸ ಪ್ರಸಾದ್ ನಿರ್ಗಮನದಿಂದ ತಮಗೆ ಬಂದಿರುವ ದಲಿತ ವಿರೋಧಿ ಹಣೆಪಟ್ಟಿ ಕಳಚಿಕೊಳ್ಳುವುದು, ಇನ್ನೊಂದೆಡೆ ಶಿವಕುಮಾರ್ ಗೆ ಟಾಂಗ್ ಕೊಡುವುದು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಪರಮೇಶ್ವರ್ ಬಗ್ಗೆ ತಮಗೆ ಅದಮ್ಯ ಪ್ರೀತಿ ಎಂದು ಉಕ್ಕಿ ಹರಿಯುತ್ತಿದೆ ಎಂದು ತೋರಿಸಿಕೊಳ್ಳುವುದು ಸಿದ್ದರಾಮಯ್ಯನವರ ಯೋಜನೆ. ಅಂದರೆ ಒಂದೇ ಕಲ್ಲಲ್ಲಿ ಮೂರು ಹಕ್ಕಿಗಳನ್ನು ಹೊಡೆದುರುಳಿಸುವುದು. ಅದಕ್ಕೆ ಹೇಳಿದ್ದು ಅವರು ದೇವೇಗೌಡರ ಗರಡಿ ಪೈಲ್ವಾನ್ ಎಂದು.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಸಿದ್ದರಾಮಯ್ಯನವರು ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಗೆ ಒಪ್ಪಿಗೆ ಪಡೆಯಲು ದಿಲ್ಲಿಗೆ ಹೋಗಿದ್ದಾಗ ಶ್ರೀನಿವಾಸ ಪ್ರಸಾದ್ ವಿಷಯ ಪ್ರಸ್ತಾಪವಾಗಿದೆ. ಈ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣೆ ಹೊಸ್ತಿಲಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆಯೂ ಕಿವಿಮಾತು ಹೇಳಿದೆ. ಹೈಕಮಾಂಡ್ ಈ ರೀತಿ ಹೇಳಲು ಮೂಲಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ಇಟ್ಟಿದ್ದ ಫಿಟ್ಟಿಂಗ್ ಕಾರಣ ಎಂಬುದು ಬೇರೆ ಮಾತು. ಆದರೆ ಪ್ರಸಾದ್ ತೆರವು ಮಾಡಿರುವ ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸಿಕೊಳ್ಳುವುದಾಗಿ ಭರವಸೆ ಕೊಟ್ಟು ಬಂದಿರುವ ಸಿದ್ದರಾಮಯ್ಯ ಅನ್ವೇಷಿಸಿರುವ ಅನೇಕ ಮಾರ್ಗಗಳ ಪೈಕಿ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಪರಮೇಶ್ವರ್ ಮುಂದುವರಿಕೆ ಪ್ರಮುಖವಾದದ್ದು. ಸರಕಾರಕ್ಕೆ ಅದರಲ್ಲೂ ವಿಶೇಷವಾಗಿ ತಮಗೆ ದಲಿತರ ಬಗ್ಗೆ ಅಪಾರ ಕಾಳಜಿ ಇದೆ, ಹೀಗಾಗಿ ಪ್ರದೇಶ ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತರೊಬ್ಬರನ್ನು ಎರಡನೇ ಬಾರಿ ಅಧ್ಯಕ್ಷರಾಗಿ ಮುಂದುವರಿಸಿರುವುದನ್ನು ಮರುಚುನಾವಣೆ ಪ್ರಚಾರದ ಅದ್ಯತೆ ವಿಚಾರ ಮಾಡುವುದು ಸಿದ್ದರಾಮಯ್ಯನವರ ತಂತ್ರ. ಅಲ್ಲದೇ ಪರಿಶಿಷ್ಟ ಸಮುದಾಯಕ್ಕೆ ಸೇರಿದವರನ್ನೇ ಅಭ್ಯರ್ಥಿಯನ್ನಾಗಿ (ಸಚಿವ ಎಚ್.ಸಿ. ಮಹದೇವಪ್ಪ ಪುತ್ರ ಸುನಿಲ್ ಬೋಸ್ ಹೆಸರು ಈಗಾಗಲೇ ಚಾಲ್ತಿಯಲ್ಲಿದೆ) ಮಾಡಲು ಯೋಜಿಸಿದ್ದಾರೆ. ಅಂದರೆ ದಲಿತ ಮುಖ್ಯಮಂತ್ರಿ ಬೇಡಿಕೆ, ಶ್ರೀನಿವಾಸ ಪ್ರಸಾದ್ ರಾಜೀನಾಮೆ ಹಿನ್ನೆಲೆಯಲ್ಲಿ ತಮಗೆ ಅಂಟಿರುವ ಅಪವಾದದಿಂದ ಪಾರಾಗಲು ಸಚಿವ ಡಿ,ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಗಾದಿ ಆಕಾಂಕ್ಷೆಯನ್ನು ಪಣಕ್ಕಿಟ್ಟಿದ್ದಾರೆ. ಆ ಮೂಲಕ ಪರಮೇಶ್ವರ್ ಮತ್ತು ಶಿವಕುಮಾರ್ ನಡುವೆ ಭವಿಷ್ಯದಲ್ಲಿ ಹೊತ್ತಿ ಉರಿಯಬಹುದಾದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಇರಾದೆ ಅವರದು.

ಆದರೆ ಇಲ್ಲೊಂದು ವಿಚಾರ. ಆಡಳಿತರೂಢ ಕಾಂಗ್ರೆಸ್ ಈಗಾಗಲೇ ನಡೆಸಿರುವ ಆಂತರಿಕ ಸಮೀಕ್ಷೆಗಳ ಪ್ರಕಾರ ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಅಲಭ್ಯ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರೂ ಪ್ರಮುಖ ಪಕ್ಷಗಳು ಒಂದೈನೈದು ಇಪ್ಪತ್ತು ಸೀಟುಗಳ ಅಂತರದಲ್ಲಿ ಗಿರಕಿ ಹೊಡೆಯಲಿವೆ. ಅನಿರೀಕ್ಷಿತ ಕಾರಣಗಳಿಂದ ಯಾವುದೇ ಪವಾಡ ನಡೆಯದೇ ಹೋದರೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ಬಹುತೇಕ ಖಚಿತ. ಇಂಥ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರಾಜಕೀಯ ಅದ್ಯಾವ ರೀತಿ ಅವರ ‘ಮರುಅಧಿಕಾರ ಅಭೀಪ್ಸೆ’ಯ ಕೈ ಹಿಡಿಯುತ್ತದೆ ಎಂಬುದನ್ನು ನೋಡಬೇಕು.

ಲಗೋರಿ : ಅಂಧಕಾರ ಮತ್ತು ಮೌಢ್ಯದ ಒಟ್ಟು ಪ್ರಯಾಣದಲ್ಲಿ ಬೆಳಕು ನಿರುದ್ಯೋಗಿ ಆಗುತ್ತದೆ.

1 COMMENT

  1. Diddy only brand of ahinda no body can beat him so ahinda vote for Congress.about Srinivas Prasad he can damage in is own constueny but not all over Karnataka because present he is not a state leader. In matter of g parmesh only 50/ D (dalita ) power mean with out ahim. Another who ever have 50/ D power they don’t support him he can’t maintain that. for Congress one more was is dkc if they will announce his name 50/ ahinda will not support him but from upper casts some percent will come. So if dkc will become cm it will be Ravana(devil)rajya. In assembly if any opposition leader will ask question he can use singular words badly against them we have already seen that. So that leaders have to think save their image himself like hdk& hd Revanna. Allige udayavayitu Namma chaluva Kannada nadu…

Leave a Reply