ಹಗರಣದಲ್ಲಿ ಹೋದ ಮಾನ ವೈಭೋಗದಲ್ಲಿ ಮರಳುತ್ತೆ, ಏಕೆಂದರೆ ಮಾಧ್ಯಮ ಮತ್ತು ಜನ ಪೂಜಿಸುವುದು ನೈತಿಕತೆಯನ್ನಲ್ಲ… ಸಂಪತ್ತನ್ನಷ್ಟೆ!

author-geetha‘ಮದುವೆಯ ಆಹ್ವಾನಪತ್ರಿಕೆ ನೋಡಿದ್ರಾ?’

‘ಅದನ್ನು ಆಹ್ವಾನಪತ್ರಿಕೆ ಅಂತಾರಾ? ಡಬ್ಬಿ ಅಂತೆ… ಒಳಗೆ ಬ್ಯಾಟರಿ ಆಪರೇಟೆಡ್ ಎಲ್.ಸಿ.ಡಿ ಸ್ಕ್ರೀನ್ ಅಂತೆ…’

‘ಹೂಂ… ತೆರೆದ ತಕ್ಷಣ ಹಾಡು ಶುರುವಾಗುತ್ತೆ… ಅವರು, ಅವರ ಹೆಂಡತಿ, ಮಗ… ಎಲ್ಲಾ ಬನ್ನಿ ಮದುವೆಗೆ ಬನ್ನಿ ಅಂತ ಹಾಡಲು ಶುರು ಮಾಡುತ್ತಾರೆ. ಹುಡುಗಿ, ಹುಡುಗ ಎಲ್ಲಾ ಬರುತ್ತಾರೆ…’

‘ಸಂಗೀತ ಕೂಡ ತುಂಬಾ ಕ್ಯಾಚಿಯಾಗಿದೆ. ದೇವರಿಗೆ ಪೂಜೆ ಮಾಡುತ್ತಾರೆ… ಮದುವೆಗೆ ಖಂಡಿತಾ ಬನ್ನಿ… ಎಂದು ನಗುತ್ತಾ ಪ್ರೀತಿಯಿಂದ ಆಹ್ವಾನಿಸುತ್ತಾರೆ.’

‘ಸೀರೆ, ಗೌನು, ಒಡವೆಗಳನ್ನು ನೋಡೋಕ್ಕೆ ಎರಡು ಕಣ್ಣು ಸಾಲದು.’

‘ಅಯ್ಯೋ.. ತೆಲುಗು ಮೂವೀಗಳಿಗೆ ಹಾಕುವ ಸೆಟ್ ಗಿಂಥ ಭರ್ಜರಿಯಾಗಿದೆ ಈ ಆಹ್ವಾನಪತ್ರಿಕೆಯ ಹಾಡಿನ ಸೆಟ್ಟು! ಇನ್ನು ಮದುವೆಗೆ ಎಂಥಹ ಸೆಟ್ ಹಾಕಬಹುದು?’

‘ಮೂರು ವರ್ಷ ಜೈಲಿನಲ್ಲಿ ಇದ್ದು ಬಂದದ್ದು… ಅವರ ಅಕೌಂಟು, ಆಸ್ತಿ ಎಲ್ಲಾ ಸೀಜ್ ಮಾಡಿದ್ದಾರೆ… ಬೆಳ್ಳಿಯ ಕುರ್ಚಿಯಿತ್ತು… ಅಂತೆಲ್ಲಾ ಓದಿದ್ದು. ಆದ್ರೆ ಹೀಗೆ ದುಡ್ಡು ಖರ್ಚು ಮಾಡ್ತಾ ಇದ್ರು ಯಾರು ಏನೂ ಕೇಳಲ್ವಾ?’

‘ದುಡ್ಡಿದೆ. ಖರ್ಚು ಮಾಡ್ತಾರೆ. ನೀವೇನು ಒಳ್ಳೆ… ಸತ್ಯ ಹರಿಶ್ಚಂದ್ರನ ತರಹ ಮಾತಾಡ್ತೀರಿ? ಮಗಳ ಮದುವೆಗೆ ಖರ್ಚು ಮಾಡದೆ ಇರೋಕ್ಕೆ ಆಗುತ್ತಾ? ದುಡ್ಡು ಕಾಸು ಇಲ್ಲದೇ ಇರೋರೇ ಸಾಲ ಸೋಲ ಮಾಡಿ ದೂಂದಾಂ ಅಂತ ಮದುವೆ ಮಾಡ್ತಾರೆ. ಇನ್ನು ಬೇಕಾದ ಹಾಗೆ ಇರೋರು ಮಾಡ್ತಾರೆ. ಬೇಡ ಅಂದ್ರೆ…’

‘ಯೂಟ್ಯೂಬಿನಲ್ಲಿ ಹಾಕಿದ್ದಾರಲ್ಲ. ಲಕ್ಷಲಕ್ಷ ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ. ಹೊಸ ಐಡಿಯಾ.. ಈ ಹಿಂದೆ ಯಾರೂ ಮಾಡಿರಲಿಲ್ಲ ಹೀಗೆ…’

‘ಹೂಂ… ಆ ಆಹ್ವಾನಪತ್ರಿಕೆ ಹಂಚಲು ಅವರು ಎಲ್ಲರ ಮನೆ ಹೋಗ್ತಾ ಇದ್ದಾರೆ. ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು… ಎಲ್ಲರ ಪರಿಚಯ ಇದೆ ಅವರಿಗೆ. ಮೈಸೂರಿನ ಅರಸರ ಮದುವೆ ಆಯಿತಲ್ಲ, ಅದರ ವೈಭೋಗವನ್ನು ಮೀರಿಸುತ್ತದೆ ಈ ಮದುವೆ.’

‘ಅಲ್ಲವೇ ಮತ್ತೆ, ಆಹ್ವಾನಪತ್ರಿಕೆ ಹಾಗೂ ಕರೆಯುವ ರೀತಿಯೇ ಇಷ್ಟೊಂದು ಸ್ಪೆಷಲ್ ಆಗಿ ಇರುವಾಗ, ಇನ್ನು ಮದುವೆ ಕೇಳಬೇಕಾಗೇ ಇಲ್ಲ…’

ನನ್ನ ಸುತ್ತಾ ನಡೆಯುತ್ತಿದ್ದ ಮಾತುಕಥೆಗೆ ನಾನು ಮೌನ ಪ್ರೇಕ್ಷಕಳಾಗಿ ಕುಳಿತಿದ್ದೆ.

ಹೇಳುವುದೇನು? ನಮ್ಮ ನಮ್ಮ ಹಣಕಾಸಿನ ಯೋಗ್ಯತೆಗೆ ತಕ್ಕ ಹಾಗೆ ಮದುವೆ, ಮುಂಜಿ ಮಾಡುತ್ತೇವೆ. ಮನೆ ಕಟ್ಟುತ್ತೇವೆ. ಗೃಹ ಪ್ರವೇಶ ಮಾಡುತ್ತೇವೆ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಪಾವತಿ ಮಾಡಿದ ಮೇಲೆ ನಮ್ಮ ಸಂಪಾದನೆ ನಮ್ಮದಲ್ಲವೇ? ಅದನ್ನು ನಮ್ಮ ಮನಸ್ಸೋ ಇಚ್ಛೆ ಖರ್ಚು ಮಾಡುವ ಸ್ವಾತಂತ್ರ್ಯ ನಮಗಿಲ್ಲವೇ? ನಿಮಗೆ ಹೊಟ್ಟೆ ಉರಿದರೆ ಖರ್ಚು ಮಾಡುವವರದೇನು ತಪ್ಪು? ಯಾರೋ ಗುಡಿಸಿನಲ್ಲಿ ಇದ್ದಾರೆ ಎಂದು ನೀವು ಬಂಗಲೆಯಲ್ಲಿ ವಾಸಿಸುವುದನ್ನು ಬಿಡುತ್ತೀರಾ? ಯಾರೋ ರಿಜಿಸ್ಟರ್ಡ್ ಮದುವೆ ಮಾಡಿಕೊಂಡರು ಎಂದು ನಾವು ಶಾಸ್ತ್ರೋಕ್ತವಾಗಿ ಛತ್ರದಲ್ಲಿ ಮದುವೆಯಾಗುವುದು ತಪ್ಪು ಎನ್ನುತ್ತೀರಾ?

ಪ್ರಶ್ನೆಗಳು ಹಲವು. ಉತ್ತರ ಸುಲಭವಲ್ಲ. ಅವರ ದುಡ್ಡು, ಅವರ ಹುಚ್ಚು. ನಿಮ್ಮ ಬಳಿ ಇಲ್ಲ… ಅದಕ್ಕೆ ಹೊಟ್ಟೆ ಕಿಚ್ಚು! ನೀವು ಖರ್ಚು ಮಾಡುವುದು ಇನ್ನೊಬ್ಬರಿಗೆ ದುಂದು ಅನ್ನಿಸಬಹುದು. ಆ ಇನ್ನೊಬ್ಬರಿಗೆ ಆ ದುಂದು ಅನಿವಾರ್ಯ ಅಥವಾ ಪ್ರತಿಷ್ಠೆಯ ವಿಚಾರವಾಗಬಹುದು.

ಆದರೆ… ಒಂದು ಮದುವೆಗೆ ₹ 200 ಕೋಟಿ ಖರ್ಚು… ಅಂದರೆ… ಅಂದರೆ… ಅಂದರೆ ಏನೂ ಇಲ್ಲ.. ಜನರೆಲ್ಲಾ ಹೋಗಿ ಊಟ ಮಾಡಿ ಬರುತ್ತಾರೆ. ಆ ವೈಭೋಗವನ್ನು ಹೊಗಳುತ್ತಾರೆ… ಮಿಡಿಯಾದವರು ಕ್ಯಾಮೆರಾದವರನ್ನು ಛತ್ರದ ಆಚೆ ನಿಲ್ಲಿಸಿ ಬಂದು ಹೋದವರ ಲೆಕ್ಕ ಇಡುತ್ತಾರೆ. ನಾವು ಟಿ.ವಿಯ ಮುಂದೆ ಕುಳಿತು ನೋಡುತ್ತಾ ಬೆರಗಾಗುತ್ತೇವೆ, ಇಲ್ಲ ಆಡಿಕೊಳ್ಳುತ್ತೇವೆ ಅದೂ ಇಲ್ಲ ಅಂದರೆ ಜೋಕುಗಳನ್ನು ಹುಟ್ಟುಹಾಕುತ್ತೇವೆ.

ಎಕನಾಮಿಕ್ ಅಫೆನ್ಸ್ (ಆರ್ಥಿಕ ಹಗರಣ) ನಮಗೆ ತಪ್ಪಾಗಿ ಕಾಣುವುದೇ ಇಲ್ಲ. ಜೈಲಿಗೆ ಹೋದರೂ ಬೇಲ್ ಮೇಲೆ ಹೋರಬಂದರೆ ಗೆದ್ದಂತೆ ಲೆಕ್ಕ. ನಮ್ಮ ನ್ಯಾಯವ್ಯವಸ್ಥೆ ಎಷ್ಟು ನಿಧಾನವೆಂದರೆ ಹಗರಣ ಮಾಡಿಕೊಂಡ ವ್ಯಕ್ತಿಗೆ ಆ ದುಡ್ಡಿನ ಪೂರಾ ಸುಖ ಅನುಭವಿಸುವಷ್ಟು ಸಮಯ ಅವನಿಗೆ ಸಿಗುತ್ತದೆ. ಅಪರಾಧ ಎಂದು ಎದ್ದು ಕಾಣುತ್ತಿದ್ದರೂ ನ್ಯಾಯಾಲಯ ತೀರ್ಪು ಕೊಡುವವರೆಗೂ ಅವನು ನಿರಪರಾಧಿಯೇ. ಒಂದು ಇಡೀ ಜಿಲ್ಲೆಯ ನೆಲ ಅಗೆದು ಅದನ್ನು ಬರಡು ಮಾಡಿದ್ದು ಕಣ್ಣಿಗೆ ಕಾಣುತ್ತಿದ್ದರೂ ಏನೂ ಮಾಡಲಾಗುವುದಿಲ್ಲ.

ಬೀಡುಬೀಸಾಗಿ ಮುಖ್ಯಮಂತ್ರಿಗಳ ಮನೆ, ವಿರೋಧ ಪಕ್ಷದ ನಾಯಕರ ಮನೆಗಳಿಗೆಲ್ಲಾ ಹೋಗಿ ಆಹ್ವಾನ ಕೊಟ್ಟು, ಫೋಟೋ ಪತ್ರಿಕೆಯಲ್ಲಿ ಬರುವ ಹಾಗೆ ನೋಡಿಕೊಳ್ಳುತ್ತಾರೆ. ನಾವು ಬೆರಗಾಗಿ ನೋಡುತ್ತೇವೆ.

ಫೈನ್ ಕಟ್ಟುವುದರಿಂದ ಖುಲಾಸೆ ಕೂಡ ಆಗುವ ಸಾಧ್ಯತೆ ಇದೆ. ಹಾಗೆಂದರೆ ಫೈನ್ ಕಟ್ಟುವ ಹಣ ಉಳ್ಳವರು, ಯಾವ ಅಪರಾಧವನ್ನು ಬೇಕಾದರೂ ಮಾಡಿ ಜೀರ್ಣಿಸಿಕೊಳ್ಳಬಲ್ಲರು. ಫೈನ್ ಮೊತ್ತಕ್ಕಿಂಥ ಅಧಿಕ ಮೊತ್ತ ಸಂಪಾದಿಸಬೇಕು ಅಷ್ಟೇ.

ರಾಜಕೀಯವಾಗಿ ಅಂತಹವರನ್ನು ಮೂಲೆಗುಂಪು ಮಾಡಬೇಕು. ಮೀಡಿಯಾದವರು ಅವರನ್ನು ನಾಯಕರಂತೆ ಬಿಂಬಿಸುವುದನ್ನು ನಿಲ್ಲಿಸಬೇಕು. ಸಾಮಾಜಿಕವಾಗಿ ಅಪರಾಧಿಗಳಿಗೆ ಬಹಿಷ್ಕಾರ ಹಾಕಬೇಕು. ಸ್ನೇಹಿತರು, ಬಂಧುಗಳು, ಸಾಮಾನ್ಯ ಜನರು ಅವರನ್ನು ಹತ್ತಿರ ಸೇರಿಸಬಾರದು. ಹಾಗೆ ಆದರೆ ಮಾತ್ರ ಮಾಡಿದ ಅಪರಾಧದ ತೀವ್ರತೆಯ ಅರಿವು ಅವರಿಗಾಗುತ್ತದೆ. ಸಾಮಾಜಿಕ ಬಹಿಷ್ಕಾರವಾಗದೆ, ತಪ್ಪಿನ ಅರಿವಾಗದೆ, ಎಷ್ಟೇ ವರ್ಷಗಳು ಜೈಲಿನಲ್ಲಿ (ಮನೆಯ ಊಟ ಮಾಡುತ್ತಾ) ಕಳೆದರೂ ಪ್ರಯೋಜನವಿಲ್ಲ.

ಹಾಗಾಗದಿದ್ದಲ್ಲಿ ಅವರ ಜೀವನ ಮಾದರಿಯಾಗುತ್ತದೆ. ಸ್ವಾರ್ಥ ಹೆಚ್ಚುತ್ತದೆ. ಅಪರಾಧಿಗಳು ನಿರ್ಭೀಡೆಯಿಂದ ಅಪರಾಧ ಮಾಡುತ್ತಾ ಸುಖದಿಂದ ಇರುತ್ತಾರೆ. ನಾವು ಬೆರಗಿನಿಂದ ನೋಡುತ್ತಾ, ಹಾಸ್ಯ ಮಾಡುತ್ತಾ ಇರುತ್ತವೆ. ನ್ಯಾಯಾಂಗ ವ್ಯವಸ್ಥೆ ಚುರುಕುಗೊಳ್ಳದೆ ಇದ್ದರೆ… ಕೆಟ್ಟ ದಿನಗಳು ಮುಂದಿವೆ.

‘ಆರ್ಥಿಕ ಯಶಸ್ಸೊಂದೇ ನಾವು ಸಾಧಿಸಬೇಕಾಗಿರುವುದು’ ಎಂಬ ಸಂದೇಶ ಅವನತಿಗೆ ಹಾದಿ.

Leave a Reply