ರಾಜ್ಯದಿಂದ ಕೇಂದ್ರಕ್ಕೆ ₹3760 ಕೋಟಿ ಪರಿಹಾರದ ಮನವಿ, ನ್ಯೂಜಿಲೆಂಡ್ ಜತೆ ಮೋದಿ ಚರ್ಚೆಯ ಮುಖ್ಯಾಂಶವೇನು?, ಟಾಟಾ ವಿರುದ್ಧ ಮಿಸ್ತ್ರಿ ಬೇಸರ

ಸಜ್ಜನ ಸಹವಾಸ… ಇಸ್ರೊ ಮಾಜಿ ಮುಖ್ಯಸ್ಥ, ವಿಜ್ಞಾನಿ ಯು. ಆರ್. ರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಸಮಾಲೋಚಿಸಿದ ಕ್ಷಣ...

ಡಿಜಿಟಲ್ ಕನ್ನಡ ಟೀಮ್:

ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ₹13 ಸಾವಿರ ಕೋಟಿಗೂ ಹೆಚ್ಚಿನ ಬೆಳೆ ಹಾನಿಯಾಗಿದ್ದು, ಹೀಗಾಗಿ ತಕ್ಷಣವೇ ಕೇಂದ್ರ ಸರ್ಕಾರ 3760 ಕೋಟಿ ಪರಿಹಾರ ಬಿಡುಗಡೆ ಮಾಡಬೇಕೆಂದು ಮನವಿ ಮಾಡಲು ರಾಜ್ಯ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ.

ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಹೇಳಿದಿಷ್ಟು… ‘ಅನಾವೃಷ್ಟಿಯಿಂದ ₹ 12,145 ಕೋಟಿ ಹಾಗೂ ಅತಿವೃಷ್ಟಿಯಿಂದ ₹1285 ಕೋಟಿ ನಷ್ಟ ಸಂಭವಿಸಿದೆ. ಹೀಗಾಗಿ ಕೇಂದ್ರದ ಮಾರ್ಗಸೂಚಿ ಅನ್ವಯ ₹3373 ಕೋಟಿ ರಾಜ್ಯಕ್ಕೆ ಪರಿಹಾರ ಬರಬೇಕು. ಇನ್ನು ಪ್ರವಾಹದ ಲೆಕ್ಕದಲ್ಲಿ ₹386.44 ಕೋಟಿ ಬರಬೇಕು. ಈ ಪರಿಹಾರ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ₹201 ಕೋಟಿ ಬಿಡುಗಡೆ ನಿರ್ಧರಿಸಲಾಗಿದ್ದು, ಬರ ಪರಿಹಾರಕ್ಕೆ ಎಲ್ಲ ಕ್ರಮ ಕೈಗೊಳಅಳಲಾಗಿದೆ. ಅಗತ್ಯವಿರುವ ಕಡೆ ಗೋಶಾಲೆ, ಮೇವು ಬ್ಯಾಂಕುಗಳನ್ನು ಸ್ಥಾಪಿಸಬೇಕು ಎಂದು ತೀರ್ಮಾನಿಸಲಾಯಿತು. ಇನ್ನು ರಾಜ್ಯದಲ್ಲಿ ಈರುಳ್ಳಿ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಧಾರ ಏನು ಎಂಬುದನ್ನು ನೋಡಿ ನಂತರ ಮಾರುಕಟ್ಟೆಗೆ ಸರ್ಕಾರ ಪ್ರವೇಶಿಸಲಿದೆ.’

ಪರಮೇಶ್ವರ್ ಅವರಿಗೆ ಅಭಿನಂದನಾ ಕಾರ್ಯಕ್ರಮ

ಆರು ವರ್ಷಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮತಿ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವ ಡಾ.ಜಿ ಪರಮೇಶ್ವರ್ ಅವರಿಗೆ ನಾಳೆ ಅರಮನೆ ಮೈದಾನದಲ್ಲಿ ಅಭಿನಂದನಾ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ‘ಸುರಾಜ್ಯ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್, ಸಂಪುಟ ಸದಸ್ಯರು ಭಾಗವಹಿಸಿದ್ದಾರೆ.

 ಎನ್ ಎಸ್ಜಿ -ವಿಶ್ವಸಂಸ್ಥೆ ಭದ್ರತಾ ಸಮಿತಿ ಪೂರ್ಣ ಸದಸ್ಯತ್ವಕ್ಕೆ ಭಾರತವನ್ನು ಬೆಂಬಲಿಸಿದ ನ್ಯೂಜಿಲೆಂಡ್ , ಮೋದಿ ಧನ್ಯವಾದ

ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೀ ಬುಧವಾರ ನವದೆಹಲಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ್ದು, ಭಾರತದ ಜತೆಗೆ ಹಲವು ವಿಷಯಗಳಲ್ಲಿನ ಸಹಕಾರದ ಬಗ್ಗೆ ಚರ್ಚೆ ನಡೆಸಲಾಯಿತು. ಭಾರತವು ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿಗೆ ಸೇರುವಲ್ಲಿ ತಾವು ರಚನಾತ್ಮಕ ಸಹಕಾರ ನೀಡುತ್ತೇವೆ ಎಂದು ನ್ಯೂಜಿಲೆಂಡ್ ಹೇಳಿರುವುದು ಮುಖ್ಯ ಬೆಳವಣಿಗೆ.

ಈ ಸಭೆಯ ನಂತರ ಉಭಯ ದೇಶಗಳ ನಾಯಕರು ಮಾತನಾಡಿದ್ದು, ಅವರು ಹೇಳಿದಿಷ್ಟು…

‘ಜಾಗತಿಕ ಶಾಂತಿಗೆ ಭಯೋತ್ಪಾದನೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿ ಪ್ರಧಾನಿ ಜಾನ್ ಕೀ ಮತ್ತು ನಾನು ಉಗ್ರರ ವಿರುದ್ಧ ಉಭಯ ದೇಶಗಳ ನಡುವಣ ಭದ್ರತೆ ಮತ್ತು ಗುಪ್ತಚರ ಸಹಕಾರ ಹಾಗೂ ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಾಯ ನೀಡಲು ನಿರ್ಧರಿಸಿದ್ದೇವೆ. ಭಾರತ ವಿಶ್ವ ಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯಲು ನ್ಯೂಜಿಲೆಂಡ್ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದಗಳು. ಉಭಯ ರಾಷ್ಟ್ರಗಳು ಪ್ರಮುಖ ಒಪ್ಪಂದಗಳಿಂದ ಹಿಡಿದು ಕ್ರಿಕೆಟ್ ವರೆಗೂ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಂಬಂಧ ಹೊಂದಿವೆ. ಎರಡೂ ದೇಶಗಳು ಪರಿಸರಕ್ಕೆ ಸಂಬಂಧಿಸಿದಂತೆ ಹಲವು ಕ್ರಮಕೈಗೊಳ್ಳಬೇಕಿರುವ ಅಗತ್ಯತೆಯನ್ನು ಅರಿತಿವೆ. ಅಲ್ಲದೆ ಜಾಗತಿಕ ಮಟ್ಟದಲ್ಲಿನ ಆರ್ಥಿಕ ಕುಸಿತವನ್ನು ನಾವು ಪರಿಣಾಮಕಾರಿಯಾಗಿ ಎದುರಿಸಬೇಕು. ಇಂದಿನ ಸಭೆಯಲ್ಲಿ ನಾವಿಬ್ಬರೂ ಆಹಾರ, ಹಾಲು ಉತ್ಪನ್ನ, ಕೃಷಿ ಹಾಗೂ ಇತರೆ ಕ್ಷೇತ್ರಗಳಲ್ಲಿನ ಸಹಕಾರದ ಅಗತ್ಯತೆಗಳ ಕುರಿತಂತೆ ಚರ್ಚೆ ನಡೆಸಿದ್ದೇವೆ’ ಎಂದರು ಮೋದಿ.

‘ಭಾರತದ ಯಶಸ್ಸಿನಲ್ಲಿ ನಾವು ಸಾಕಷ್ಟು ಆಸಕ್ತಿ ಹೊಂದಿದ್ದೇವೆ. ಅದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅಂತಾರಾಷ್ಟ್ರೀಯ ಉಗ್ರವಾದ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಹಕಾರದ ಮುಂದುವರಿಸಲು ಪರಸ್ಪರ ಒಪ್ಪಿದ್ದೇವೆ. ಈ ಸಭೆಯಲ್ಲಿ ಮೋದಿ ಅವರು ಎನ್ಎಸ್ ಜಿಗೆ ಭಾರತದ ಸದಸ್ಯತ್ವದ ಬಗ್ಗೆಯೂ ಮಾತುಕತೆ ನಡೆಸಿದರು. ಭಾರತದ ಎನ್ಎಸ್ ಜಿ ಸದಸ್ಯತ್ವ ಮಹತ್ವವಾಗಿದ್ದು ನಮ್ಮ ‘ರಚನಾತ್ಮಕ’ ಬೆಂಬಲವಿದೆ’ ಎಂದರು ಜಾನ್ ಕೀ.

ಟಾಟಾ ಸಮೂಹದಿಂದ ಹೊರಬಿದ್ದ ಮಿಸ್ತ್ರಿ ಅಸಮಾಧಾನ

ಟಾಟಾ ಸಮೂಹದ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ವಜಾ ಮಾಡಿದ ಬಗ್ಗೆ ಸೈರಸ್ ಮಿಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಮಂಡಳಿ ಸದಸ್ಯರಿಗೆ ಇ ಮೇಲ್ ಮಾಡುವ ಮೂಲಕ ಮಿಸ್ತ್ರಿ ತಮ್ಮ ಬೇಸರ ವ್ಯಕ್ತಪಡಿಸಿದ್ದು, ‘ನನ್ನನ್ನು ಈ ಸ್ಥಾನದಿಂದ ವಜಾಗೊಳಿಸುವಾಗ ಯಾವುದೇ ರೀತಿಯ ಸ್ಪಷ್ಟನೆ ಅಥವಾ ವಿವರಣೆಯನ್ನು ಕೇಳಲೇ ಇಲ್ಲ’ ಎಂದು ವಿವರಿಸಿದ್ದಾರೆ. 5 ಪುಟಗಳ ಈ ಇಮೇಲ್ ನಲ್ಲಿ ರತನ್ ಟಾಟಾ ಅವರು ತಮ್ಮ ಕಾರ್ಯದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಇತರೆ ಸುದ್ದಿ ಸಾಲುಗಳು…

  • ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಸಮಾನ ನಾಗರೀಕ ಸಂಹಿತೆಯನ್ನು ಎಲ್ಲರ ಒಪ್ಪಿಗೆ ಇಲ್ಲದೆ ಜಾರಿಗೆ ತರುವುದಿಲ್ಲ ಎಂದಿದ್ದಾರೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು. ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಎತ್ತಿಲ್ಲ. ಚುನಾವಣೆಯಲ್ಲಿ ಸಮಾನ ನಾಗರೀಕ ಸಂಹಿತೆ, ರಾಮ ದೇವಾಲಯ, ಮೂರು ಬಾರಿ ತಲಾಕ್ ಪದ್ಧತಿ ವಿಷಯಗಳ ಬದಲಾಗಿ ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಸ್ಪರ್ಧಿಸುತ್ತೇವೆ ಎಂದರು.
  • ವಾರಣಾಸಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಐವರು ಸಾವನ್ನಪ್ಪಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ದೀಪಾವಳಿಗೆ ಹಬ್ಬಕ್ಕೆ ಶೇಖರಿಸಿದ್ದ ಪಟಾಕಿಗಳು ಸಿಡಿದು ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Leave a Reply