ತಲಾಕ್ -ಶರಿಯಾ ಹೆಸರಲ್ಲಿ ಪತ್ನಿಯನ್ನು ಸ್ನೇಹಿತನ ಜತೆ ಬಲವಂತವಾಗಿ ಮಲಗಿಸಿದ ಮುಸ್ಲಿಂ ಪತಿ, ಮುಸ್ಲಿಂ ಸಹೋದರಿಯರ ಬದುಕು ಹಾಳಾಗದಿರಲಿ ಎಂಬ ಮೋದಿ ಕಾಳಜಿ ಅರ್ಥವಾಗದಿದ್ದರೇನು ಗತಿ?

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಮುಸ್ಲಿಂ ವೈಯಕ್ತಿಕ ಕಾನೂನುಗಳು ಅದೇ ಸಮುದಾಯದ ಮಹಿಳೆಯ ಮೇಲೆ ಏನೆಲ್ಲ ದೌರ್ಜನ್ಯ ಎಸಗುತ್ತಿವೆ ಎಂಬುದಕ್ಕೆ ರಾಜಸ್ಥಾನದ ಜೈಪುರದಿಂದ ವರದಿಯಾಗಿರುವ ಈ ಘಟನೆಯೇ ಸಾಕ್ಷಿ.

ನಿಖಾ ಹಲಾಲಾ ಎಂಬ ಶರಿಯಾ ಕಾಯ್ದೆಯ ವ್ಯಾಖ್ಯಾನ ಉಪಯೋಗಿಸಿ ಭೂಪನೊಬ್ಬ ತನ್ನ ಹೆಂಡತಿಯನ್ನು ಸ್ನೇಹಿತನ ಜತೆ ಮಲಗಿಸಿದ್ದಾನೆ. ಆ ಮೂಲಕ ತಾನು ಜೂಜಿನಲ್ಲಿ ಸೋತಿದ್ದಕ್ಕೆ ಪರಿಹಾರ ತೆತ್ತಿದ್ದಾನೆ. ಈಗ ಆ ಮಹಿಳೆಯೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಂಡ ಮತ್ತು ಆತನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿರುವುದರಿಂದ ಈ ಕರಾಳ ವಿದ್ಯಮಾನ ಬೆಳಕಿಗೆ ಬಂದಿದೆ.

‘ನನ್ನ ಪತಿಯೇ ಆತನ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ. ಈ ಮಾನಸಿಕ ಆಘಾತದಿಂದ ನನಗೆ ಹೊರಬರುವುದಕ್ಕೇ ಆಗುತ್ತಿಲ್ಲ’ ಎಂದಾಕೆ ದೂರಿನಲ್ಲಿ ಗೋಳು ತೋಡಿಕೊಂಡಿದ್ದಾರೆ.

ನಿಖಾ ಹಲಾಲಾದ ಪರಿಕಲ್ಪನೆ ಏನೆಂದರೆ, ಮಹಿಳೆಯೊಬ್ಬಳು ಗಂಡನಿಂದ ವಿಚ್ಛೇದನ ಪಡೆದ ಮೇಲೆ ಮತ್ತೆ ಮರಳಿಬರುವುದಾದರೆ ಅದಕ್ಕೂ ಮೊದಲು ಬೇರೊಬ್ಬನನ್ನು ಮದುವೆಯಾಗಿ ದಾಂಪತ್ಯ ಅನುಭವಿಸಬೇಕು. ನಂತರ ಆತ ತಲಾಕ್ ನೀಡಿದರೆ ಇಲ್ಲವೇ ಮೃತನಾದರೆ ಈಕೆ ಮತ್ತೆ ಮೊದಲನೇ ಗಂಡನನ್ನು ವರಿಸಬಹುದು.

ಇದಕ್ಕನುಗುಣವಾಗಿ ಜೈಪುರದ ಪ್ರಕರಣ ಹೀಗೆ ತೆರೆದುಕೊಂಡಿದೆ. ಸಣ್ಣ ಪ್ರಮಾಣದ ಆಸ್ತಿ ವ್ಯವಹಾರ ನೋಡಿಕೊಂಡಿರುವ ಸಂತ್ರಸ್ತೆಯ ಪತಿ, ಆಕೆಯನ್ನು ತನ್ನ ಸ್ನೇಹಿತನೊಂದಿಗೆ ಮಲಗಲು ಒತ್ತಾಯಿಸುತ್ತಾನೆ. ಇದಕ್ಕೆ ಈಕೆ ಒಪ್ಪದಿದ್ದಾಗ ಸಿಟ್ಟಿನಿಂದ ತಲಾಕ್ ಹೇಳುತ್ತಾನೆ. ತಲಾಕ್ ಹೇಳಿದ ನಂತರವೂ ಮನೆಯಿಂದೇನೂ ಹೊರಹಾಕುವುದಿಲ್ಲ. ಎಂದಿನ ದಾಂಪತ್ಯವೂ ಮುಂದುವರಿಯುತ್ತದೆ. ಅರ್ಥಾತ್, ಆತ ತಲಾಕ್ ಹೇಳಿದ್ದೇ ತನ್ನ ಉದ್ದೇಶ ಈಡೇರಿಕೆಯ ‘ತಾಂತ್ರಿಕ’ ಕಾರಣಕ್ಕಾಗಿ! ಆಗಸ್ಟ್ ತಿಂಗಳಿನಲ್ಲಿ ಅದೊಂದು ದಿನ ಈಕೆಯ ಆರೋಗ್ಯ ಅಷ್ಟೇನೂ ಸರಿಯಿಲ್ಲದಿರುವಾಗಲೇ ಸುತ್ತಾಟಕ್ಕೆ ಕರೆದೊಯ್ಯುತ್ತಾನೆ. ಆರೋಗ್ಯ ಸುಧಾರಣೆಗೆ ಅಂತ ಮಾತ್ರೆಯನ್ನೂ ಕೊಡುತ್ತಾನೆ. ‘ಸ್ನೇಹಿತನ ಮನೆಗೆ ಕರೆದುಕೊಂಡುಹೋದ ನಂತರ ಇನ್ನಷ್ಟು ಮಾತ್ರೆಗಳನ್ನು ಕೊಟ್ಟ. ಪ್ರಜ್ಞೆ ಬಂದಾಗ ನಾನು ಆತನ ಸ್ನೇಹಿತನ ಜತೆ ನಗ್ನವಾಗಿ ಬಿದ್ದುಕೊಂಡಿದ್ದೆ. ಸಹಾಯಕ್ಕೆ ಕೂಗಿಕೊಂಡಾಗ ಒಳನುಗ್ಗಿ ಬಂದ ಗಂಡ ಸುಮ್ಮನಿರುವಂತೆ ಬೆದರಿಸಿದ’ ಎಂಬುದು ಸಂತ್ರಸ್ತೆಯ ನೋವಿನ ಮಾತು.

ಮುಂದುವರಿದು, ಆತ ತನ್ನ ಹೆಂಡತಿಗೂ ಸ್ನೇಹಿತನಿಗೂ ಮದುವೆ ಆಗಿರುವುದಾಗಿ ಖೊಟ್ಟಿ ಪ್ರಮಾಣಪತ್ರವೊಂದನ್ನೂ ಮಾಡಿಸಿದ. ಹೇಗೆಂದರೂ ತಾನು ಮೊದಲೇ ತಲಾಕ್ ಕೊಟ್ಟು ಆಗಿತ್ತಲ್ಲ? ಸ್ನೇಹಿತನೊಂದಿಗೆ ಮದುವೆಯಾಗಿ ಸಂಬಂಧ ಬೆಳೆಸಿದ್ದಾಳೆ ಹಾಗೂ ತನ್ನನ್ನು ಮತ್ತೆ ಸೇರುವ ಉದ್ದೇಶದಿಂದ ಹೀಗೆ ಮಾಡಿದ್ದಾಳೆಂದು ಅವಳ ಮೇಲೆಯೇ ದೋಷಗಳನ್ನು ಹೊರೆಸುವುದು ಹಾಗೂ ಸ್ನೇಹಿತನಿಂದ ತಲಾಕ್ ಕೊಡಿಸಿ ಮತ್ತೆ ಹೆಂಡತಿಯನ್ನು ತನ್ನ ಬಳಿ ಕರೆ ತರುವುದು ಇವೆಲ್ಲ ಯೋಜನೆಯ ಭಾಗಗಳಾಗಿದ್ದವು.

ಈ ಅನ್ಯಾಯ, ಅತ್ಯಾಚಾರವನ್ನು ಸಹಿಸದ ಸಂತ್ರಸ್ತೆ, ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ನಾಗರಿಕ ವೇದಿಕೆಯ ಸಹಾಯ ಪಡೆದು, ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸುವುದಕ್ಕೆ ಹೋಗುವಾಗಲೂ ಅಡ್ಡಗಟ್ಟಿದ ಪತಿರಾಯ, ಸ್ನೇಹಿತನೊಂದಿಗಿನ ವಿಡಿಯೋ ದೃಶ್ಯಗಳನ್ನು ತೋರಿಸಿ ಬೆದರಿಸಿದ್ದಾನೆ. ಈಕೆ ಗಟ್ಟಿಗಿತ್ತಿಯಾಗಿರುವ ಹೊತ್ತಿಗೆ ಅವ್ಯಾವುದಕ್ಕೂ ಬೆದರದೇ ಗಂಡ ಮತ್ತು ಆತನ ಸ್ನೇಹಿತನ ವಿರುದ್ಧ ಅತ್ಯಾಚಾರ, ವಂಚನೆಗಳ ದೂರು ಕೊಟ್ಟಿದ್ದಾಳೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಜಾಕಿಯಾ ಸೋಮನ್ ಸಂತ್ರಸ್ತೆಯ ಪರ ನ್ಯಾಯ ದೊರಕಿಸಿಕೊಡಲು ನಿಂತಿದ್ದಾರೆ.

ಅಂದಹಾಗೆ, ಇವರದ್ದು 25 ವರ್ಷಗಳ ದಾಂಪತ್ಯವಾಗಿದ್ದು ಇಬ್ಬರು ಮಕ್ಕಳೂ ಇದ್ದಾರೆ. ಆಯಾ ಮೌಲ್ವಿಗಳು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಶರಿಯಾ ಕಾಯ್ದೆಗಳಿಂದ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಯಾವ ಮಟ್ಟದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ ಈ ಪ್ರಕರಣ. ಇದು ಇಷ್ಟಕ್ಕೇನೂ ನಿಲ್ಲುವುದಿಲ್ಲ ಬಿಡಿ. ಮುಸ್ಲಿಂ ಕಟ್ಟರ್ ವಾದಿಗಳು ಈ ಪ್ರಕರಣ ಮುಚ್ಚಿಸುವುದಕ್ಕೆ, ಸಂತ್ರಸ್ತೆಯ ಮೇಲೆ ಒತ್ತಡ ಹೇರುವುದಕ್ಕೆ ಎಲ್ಲ ಯತ್ನಗಳೂ ಆಗುತ್ತವೆ.

ಸಮಾಧಾನದ ಸಂಗತಿ ಎಂದರೆ ಮುಸ್ಲಿಂ ಸಮುದಾಯದ ಮಹಿಳೆಯರೇ ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಮಾತನಾಡುತ್ತಿದ್ದಾರೆ. ಬಹುದೊಡ್ಡ ಸಂಖ್ಯೆಯಲ್ಲಿ ತಲಾಕ್ ಪದ್ಧತಿ ವಿರೋಧಿಸುತ್ತಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಬಹುಸಂಖ್ಯೆಯ ಪುರುಷರಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗೆಂದೇ ಧಾರ್ಮಿಕ ಸ್ವಾತಂತ್ರ್ಯ, ಮಹಿಳೆಯರ ಸುರಕ್ಷೆ (?) ಎಂಬ ಹೆಸರುಗಳಲ್ಲಿ ಬೀದಿಗಿಳಿಯುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಅಂಥದೊಂದು ‘ಮುಸ್ಲಿಂ ಮಹಿಳಾ ಜಾಥಾ’ದ, ಸಮಾನ ನಾಗರಿಕ ಸಂಹಿತೆ ವಿರುದ್ಧದ ‘ಪೌರುಷ’ ಪ್ರದರ್ಶನದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಡುಕಿದರೂ ಇಲ್ಲೊಂದು ಮಹಿಳೆ ಇಲ್ಲ!

muslim men hipocracy

ಅಂದಹಾಗೆ, ಕೇಂದ್ರ ಸರ್ಕಾರ ತಲಾಕ್ ಪದ್ಧತಿ ವಿರುದ್ಧ ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟಿಗೆ ನೀಡಿದೆ. ಕಾಂಗ್ರೆಸ್ ಸೇರಿದಂತೆ ತಥಾಕಥಿತ ಸೆಕ್ಯುಲರ್ ಪಕ್ಷಗಳು ಇದಕ್ಕೆ ಅಪಸ್ವರ ತೆಗೆದಿವೆ. ‘ದೂರವಾಣಿಯಲ್ಲಿ ತಲಾಕ್ ಹೇಳಿಸಿಕೊಂಡು ನನ್ನ ಮುಸ್ಲಿಂ ಸೋದರಿಯರ ಬದುಕೇಕೆ ಹಾಳಾಗಬೇಕು? ಇದರಲ್ಲಿ ರಾಜಕೀಯ ಬೇಡ, ಮಹಿಳಾ ಬಲವರ್ಧನೆ ವಿಷಯ’ ಎಂದಿದ್ದರು ಪ್ರಧಾನಿ ಮೋದಿ.

ಆದರೆ ಮತಬ್ಯಾಂಕ್ ರಾಜಕಾರಣವು ಈ ಮೇಲಿನ ಕ್ರೌರ್ಯ, ಕಣ್ಣೀರ ಕತೆಗಳ ಮೇಲೆಯೇ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹೊರಟಿದೆಯಲ್ಲ…

Leave a Reply