ಚೀನಾ ಬೆದರಿಕೆಗೆ ಬಗ್ಗದೇ ದಲೈ ಲಾಮಾ ಅರುಣಾಚಲ ಪ್ರದೇಶ ಭೇಟಿ ಸಂಪನ್ನಗೊಳಿಸುತ್ತಿರುವ ಭಾರತ, ಹಕ್ಕು ಪ್ರತಿಪಾದನೆ ಜತೆಗಿದೆ ‘ಬೌದ್ಧ ಡಿಪ್ಲೊಮಸಿ’ ತತ್ತ್ವ!

ಡಿಜಿಟಲ್ ಕನ್ನಡ ಟೀಮ್:

ಟಿಬೆಟಿಯನ್ ಧರ್ಮಗುರು ದಲೈ ಲಾಮ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಯಾವುದೇ ಅಡ್ಡಿ ಇಲ್ಲ ಎಂದಿದ್ದಾರೆ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್. ಇದರೊಂದಿಗೆ ಈಶಾನ್ಯ ಪ್ರದೇಶಕ್ಕೆ ದಲೈ ಲಾಮ ಅವರ ಪ್ರವಾಸ ಮಾಡಬಾರದು ಎಂಬ ಚೀನಾ ಆಕ್ಷೇಪಕ್ಕೆ ಭಾರತ ಗೋಲಿ ಹೊಡೆದಿದೆ.

ಇದೇನೂ ಈ ಸರ್ಕಾರ ಮಾತ್ರವೇ ಅನುಸರಿಸುತ್ತಿರುವ ನೀತಿಯಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಲೇ, ಈ ಮೂಲಕ ಭಾರತ ಸಾಧಿಸುವ ಎರಡು ಅಂಶಗಳು ಹೀಗಿವೆ.

  • ಅರುಣಾಚಲ ವಿವಾದಿತ ಪ್ರದೇಶವಲ್ಲ, ಭಾರತಕ್ಕೆ ಸೇರಿದ್ದೆಂಬುದರ ಪ್ರಬಲ ಪ್ರತಿಪಾದನೆ
  • ದಲೈ ಲಾಮಾ ಆಶಯಕ್ಕೆ ನೀರೆರೆಯುವ ಮೂಲಕ, ಲುಕ್ ಈಸ್ಟ್ ರಾಜತಾಂತ್ರಿಕತೆಯನ್ನು ಬೌದ್ಧ ರಾಜತಾಂತ್ರಿಕೆಯೊಂದಿಗೆ ಗಟ್ಟಿಗೊಳಿಸುವುದು

ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಮುಖ್ಯಮಂತ್ರಿ ಪೆಮಾ ಖಂಡು ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಒಪ್ಪಿದ ದಲೈ ಲಾಮಾ ತವಾಂಗ್ ಗೆ ತೆರಳುವುದಾಗಿ ತಿಳಿಸಿದ್ದರು.

ಅರುಣಾಚಲ ಪ್ರದೇಶ ಭಾರತ ಮತ್ತು ಚೀನಾ ನಡುವಣ ವಿವಾದಿತ ಪ್ರದೇಶ ಎಂದು ಪರಿಗಣಿಸಿರುವ ಚೀನಾ, ಇಲ್ಲಿಗೆ ಯಾರು ಭೇಟಿ ನೀಡುತ್ತಾರೆ ಹಾಗೂ ಇಲ್ಲಿನ ಬೆಳವಣಿಗೆಗಳ ಮೇಲೆ ಸದಾ ನಿಗಾವಹಿಸಿದೆ. ಇತ್ತೀಚೆಗಷ್ಟೇ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾ ಭಾರತ ಪ್ರವಾಸ ಕೈಗೊಂಡಾಗ ಈ ಈಶಾನ್ಯ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು. ಇದನ್ನು ಚೀನಾ ವಿರೋಧಿಸಿತ್ತಲ್ಲದೇ ನಮ್ಮ ವಿವಾದಿತ ಪ್ರದೇಶದಲ್ಲಿ ಅಮೆರಿಕ ತಲೆ ಹಾಕಬಾರದು ಎಂಬ ಎಚ್ಚರಿಕೆಯನ್ನು ರವಾನಿಸಿತ್ತು.

ತವಾಂಗ್ ಪ್ರದೇಶವು ಬೌದ್ಧಧರ್ಮ ಹಾಗೂ ಟಿಬೆಟಿಯನ್ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಹೊಂದಿದೆ. 1959 ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿದಾಗ ಸೇನೆಯ ಬಂಧನದಿಂದ ತಪ್ಪಿಸಿಕೊಳ್ಳಲು ದಲೈ ಲಾಮಾ ಬಂದಿಳಿದಿದ್ದು ಇದೇ ತವಾಂಗ್ ಪ್ರದೇಶಕ್ಕೆ. ಅಲ್ಲದೆ 1970ರಿಂದ ತವಾಂಗ್ ನಲ್ಲಿರುವ ಧರ್ಮ ಪ್ರಚಾರಕರ ಸಂಸ್ಥೆ ದಲೈ ಲಾಮಾ ಅವರ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತಿದೆ. ಟಿಬೆಟಿಯನ್ ಚಳುವಳಿಗಾರರು ಸಹ ದಲೈ ಲಾಮಾ ತವಾಂಗ್ ಭೇಟಿ ಮಾಡುವುದಕ್ಕೆ ಬೆಂಬಲ ಸೂಚಿಸಿದ್ದಾರೆ.

ಹೀಗೆಲ್ಲ ಚೀನಾಕ್ಕೆ ಸಡ್ಡು ಹೊಡೆಯುತ್ತಿರುವುದಕ್ಕೆ ಭಾರತದ ಬಳಿ ಬಲವೊಂದಿದೆ. ಅದು ಯಾವುದೇ ಕ್ಷಿಪಣಿ ಬಲವಲ್ಲ. ಬೌದ್ಧಮಾರ್ಗವೆಂಬ ಸಾಫ್ಟ್ ಪವರ್!

ಚೀನಾವೂ ಸೇರಿದಂತೆ ದಕ್ಷಿಣ ಏಷ್ಯದ ಬೌದ್ಧ ರಾಷ್ಟ್ರಗಳೆಲ್ಲ ಭಾರತವೇ ಬುದ್ಧನ ನಾಡು ಎಂಬುದನ್ನು ಒಪ್ಪಿಕೊಳ್ಳುತ್ತವೆ. ಚೀನಾದಲ್ಲಿ ಧರ್ಮಾಚರಣೆ ಇಲ್ಲ ಎಂದು ಹೇಳಲಾಗುತ್ತದೆಯಾದರೂ ವರ್ಷದಿಂದ ವರ್ಷಕ್ಕೆ ಬೌದ್ಧಧರ್ಮದತ್ತ ಅಲ್ಲಿನ ಜನ ಅಪಾರವಾಗಿ ಆಕರ್ಷಿತರಾಗುತ್ತಿದ್ದಾರೆ. ಈ ಹಿಂದಿನ ಸರ್ಕಾರವೂ ಈ ಬೌದ್ಧಮಾರ್ಗ ಮರ್ಮವನ್ನು ಅರಿತಿತ್ತಾದರೂ, ಪ್ರಧಾನಿ ನರೇಂದ್ರ ಮೋದಿಯವರ ‘ಪೂರ್ವದತ್ತ ನೋಡು’ ಎಂಬ ರಾಜತಾಂತ್ರಿಕ ನೀತಿ ಬುದ್ಧ ಡಿಪ್ಲೊಮಸಿಯ ಸುತ್ತಲೇ ಕೇಂದ್ರಿತವಾಗಿದೆ. ತಿಂಗಳ ಹಿಂದಷ್ಟೇ ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮಾವೇಶವನ್ನೂ ನಡೆಸಿತ್ತು ಭಾರತ. ಪ್ರಧಾನಿ ಮೋದಿಯ ರಾಜತಾಂತ್ರಿಕ ಮಾತುಗಳಲ್ಲಿ ಬುದ್ಧನ ಪ್ರಸ್ತಾಪ ಆಗುತ್ತಲೇ ಇರುತ್ತದೆ.

ಹಣ ಮತ್ತು ಮಿಲಿಟರಿ ಬಲದಲ್ಲಿ ಸದ್ಯಕ್ಕೆ ಚೀನಾವನ್ನು ಎದುರಿಸಿ ಅದರ ಸುತ್ತಲಿನ ರಾಷ್ಟ್ರಗಳನ್ನು ತೆಕ್ಕೆಯಲ್ಲಿಟ್ಟುಕೊಳ್ಳುವುದು ಭಾರತಕ್ಕೆ ಕಷ್ಟಸಾಧ್ಯ. ಪರ್ಯಾಯವಾಗಿ ಬೌದ್ಧಮಾರ್ಗದ ಸಾಫ್ಟ್ ಪವರ್ ಉಪಯೋಗವಾಗುತ್ತಿದೆ. ಇದರ ದೀರ್ಘಾವಧಿ ಪರಿಣಾಮ ಬಹಳ ಗುರುತರದ್ದಾಗಿರುತ್ತದೆ. ಅದಕ್ಕೆ ಪೂರಕವಾಗಿ ಭಾರತದಲ್ಲಿ ಬುದ್ಧನೊಂದಿಗೆ ಬೆಸೆದುಕೊಂಡಿರುವ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಳಪು ತರುವ ಕಾರ್ಯಗಳೆಲ್ಲ ಭಾರತದಿಂದ ಆಗಬೇಕಿದೆ.

ಈ ನಿಟ್ಟಿನಲ್ಲಿ, ಚೀನಾಕ್ಕೆ ಬೆದರದೇ ಬೌದ್ಧಗುರು ದಲೈ ಲಾಮಾರ ತವಾಂಗ್ ಭೇಟಿಯನ್ನು ಸಂಪನ್ನಗೊಳಿಸುವುದಿದೆಯಲ್ಲ… ಇದು ಗುರುತರ ರಾಜತಾಂತ್ರಿಕ ಪ್ರಹಾರವೇ ಆಗಿದೆ. ಬೌದ್ಧಮಾರ್ಗವನ್ನು ನಿಚ್ಚಳವಾಗಿಸುವತ್ತ ಇದೂ ಒಂದು ನಡೆ. ಬೌದ್ಧ ಧರ್ಮಗುರು ಹಾಗೂ ಅವರ ಅನುಯಾಯಿಗಳ ಆಶಯಕ್ಕೆ ನೀರೆರೆಯುವಲ್ಲಿ ಭಾರತ ಬದ್ಧ ಎಂಬ ಆಪ್ತಭಾವ, ದಕ್ಷಿಣ ಏಷ್ಯದ ಬೌದ್ಧ ಬಹುಸಂಖ್ಯಾತ ದೇಶಗಳಿಗೆ ರವಾನೆಯಾಗುತ್ತದೆ.

ದಲೈ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದು ಖಚಿತವಾಗುತ್ತಿದ್ದಂತೆ ಚೀನಾ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ದಲೈ ಲಾಮಾ ಅವರು ಈ ರಾಜ್ಯಕ್ಕೆ ಭೇಟಿ ನೀಡಲು ಭಾರತ ಒಪ್ಪಿಗೆ ನೀಡಬಾರದು ಎಂದು ಸಂದೇಶ ನೀಡಿತ್ತು. ಆದರೆ ಭಾರತ ಚೀನಾ ಮಾತನ್ನು ಲೆಕ್ಕಕ್ಕೆ ಪರಿಗಣಿಸದೇ ದಲೈ ಲಾಮಾ ಪ್ರಮಾಸಕ್ಕೆ ತನ್ನ ಬೆಂಬಲ ಸೂಚಿಸಿದೆ. ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ಹೇಳಿದಿಷ್ಟು…

‘ಬೌದ್ಧ ಧರ್ಮಗುರು ದಲೈ ಲಾಮಾ ನಮ್ಮ ದೇಶದ ಅತಿಥಿ. ಅವರು ದೇಶದ ಯಾವ ಮೂಲೆಗೂ ಬೇಕಾದರೂ ತೆರಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಅವರು ಧಾರ್ಮಿಕ ಗುರು. ಅರುಣಾಚಲ ಪ್ರದೇಶದಲ್ಲಿ ದಲೈ ಲಾಮಾ ಅವರು ತಮ್ಮದೇ ಆದ ಬೌದ್ಧ ಅನುಯಾಯಿಗಳನ್ನು ಹೊಂದಿದ್ದಾರೆ. ಅವರೆಲ್ಲರೂ ದಲೈ ಲಾಮಾ ಅವರಿಂದ ಆಶಿರ್ವಾದ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಈ ಹಿಂದೆಯೂ ಅರುಣಾಚಲ ಪ್ರದೇಶಕ್ಕೆ ದಲೈ ಲಾಮಾ ಅವರು ಸಾಕಷ್ಟು ಬಾರಿ ಭೇಟಿ ನೀಡಿದ್ದಾರೆ. ಈ ಬಾರಿಯ ಭೇಟಿ ಅದೇರೀತಿ ಇರುತ್ತದೆ. ಇದರಲ್ಲಿ ಮತ್ತೇನು ವಿಶೇಷ ಇಲ್ಲ.’

Leave a Reply