ಕಾಶ್ಮೀರದ ಶಾಲೆಗಳಿಗೆ ಬೆಂಕಿ ಹಚ್ಚುತ್ತಿರುವ ಹುರಿಯತ್ ಗಿಲಾನಿಯಿಂದ ತನ್ನ ಮೊಮ್ಮಗಳ ಶಾಲೆಗೆ ಶ್ರೀರಕ್ಷೆ, ಕಂಡವರ ಮಕ್ಕಳ ಕೈಗಷ್ಟೇ ಕಲ್ಲು ಕೊಡುವ ಪ್ರತ್ಯೇಕತಾವಾದದ ನಿಜಮುಖವಿದು!

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರ ಶಾಂತಿ ಕಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಈ ಹಿಂಸಾಚಾರದ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವ ಹುರಿಯತ್ ಕಾನ್ಫೆರೆನ್ಸ್ ಮುಖಂಡರು ಶಾಲೆಗಳನ್ನು ಪುನರಾರಂಭ ಮಾಡಲು ಅವಕಾಶ ನೀಡುತ್ತಿಲ್ಲ. ಈ ಕಾರಣದಿಂದ ಚಿಣ್ಣರ ಪೀಳಿಗೆಯೇ ಶಿಕ್ಷಣ ವಂಚಿತವಾಗುತ್ತಿದ್ದರೆ, ಇದಕ್ಕೆ ಕಾರಣವಾಗಿರುವ ಪ್ರತ್ಯೇಕತಾವಾದಿ ಪಾಳೆಯದ ಹುರಿಯತ್ ಮುಖಂಡ ಸಯ್ಯದ್ ಶಾ ಅಲಿ ಗಿಲಾನಿಯ ಮೊಮ್ಮಗಳ ಶಾಲೆಯಲ್ಲಿ ಮಾತ್ರವೇ ಪರೀಕ್ಷೆಗಳೆಲ್ಲ ಸರಾಗವಾಗಿ ನೆರವೇರಿವೆ.

ಅರ್ಥವಿಷ್ಟೆ. ಕಾಶ್ಮೀರಿ ಯುವಕರು ಮತ್ತು ಮಕ್ಕಳ ಕೈಯಲ್ಲಿ ಕಲ್ಲು ಕೊಟ್ಟಿರುವ ಗಿಲಾನಿಯಂಥವರು ತಮ್ಮ ಮಕ್ಕಳನ್ನು ಮಾತ್ರ ಹಿಂಸಾಗ್ರಸ್ತ ಬೀದಿಗೆ ಬಿಟ್ಟಿಲ್ಲ ಹಾಗೂ ತಮ್ಮ ಸಂತಾನಕ್ಕೆ ಶಿಕ್ಷಣ ವಂಚನೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ! ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ತಾವು ಐಷಾರಾಮಿಯಾಗಿರುವ ನಿರ್ಲಜ್ಜ ಮಾರ್ಗವಿದು!

ವಾನಿ ಹತ್ಯೆಯ ನಂತರ ಉದ್ಭವಿಸಿರುವ ಹಿಂಸಾಚಾರವನ್ನೇ ಬಳಸಿಕೊಂಡು ಹುರಿಯತ್ ಕಾನ್ಫೆರೆನ್ಸ್ ನಡೆಸುತ್ತಿರುವ ದಾಂದಲೆಗೆ ಅಲ್ಲಿನ ಹಲವು ಶಾಲೆಗಳು ಮುಚ್ಚಿವೆ. ಇತ್ತೀಚೆಗೆ ಅ.21ರಂದು ದಕ್ಷಿಣ ಕಾಶ್ಮೀರದ ಚತ್ವಾಂತನ್ ಪ್ರದೇಶದ ಸರ್ಕಾರಿ ಪ್ರೌಢ ಶಾಲೆಯೊಂದು ಪುನರಾರಂಭ ಮಾಡಲು ಸಿಬ್ಬಂದಿ ಹಾಗೂ ಪೋಷಕರ ಸಭೆ ಕರೆದಿತ್ತಾದರೂ ಅದು ಯಶಸ್ವಿಯಾಗಲಿಲ್ಲ. ಮಾರನೇ ದಿನ ನೋಡಿದರೆ ಈ ಶಾಲೆ ಬೆಂಕಿಗೆ ಆಹುತಿಯಾಗಿತ್ತು. ಕಳೆದ ಮೂರು ತಿಂಗಳಿನಿಂದಲೂ ಇಲ್ಲಿನ ಬಹುತೇಕ ಶಾಲೆಗಳು ಮತ್ತೆ ಪ್ರಾರಂಭವೇ ಆಗಿಲ್ಲ. ಕನಿಷ್ಠ 23 ಶಾಲೆಗಳನ್ನು ಈವರೆಗೂ ಗುರಿಯಾಗಿಸಿದ್ದು, ಹಲವು ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಈವರೆಗೂ ದಾಳಿಗೆ ಗುರಿಯಾಗಿರುವ 23 ಶಾಲೆಗಳ ಪೈಕಿ 20 ಸರ್ಕಾರಿ ನಿಯಂತ್ರಿತ ಶಾಲೆಗಳು, ಎರಡು ಖಾಸಗಿ ಹಾಗೂ ಒಂದು ಜವಹಾರ್ ನವೋದಯ ವಿದ್ಯಾಲಯ ಸೇರಿವೆ. ಅದರಲ್ಲಿ 7 ಶಾಲೆಗಳು ಸಂಪೂರ್ಣವಾಗಿ ಭಸ್ಮವಾಗಿದೆ.

ಹೀಗೆ ಶಾಲೆಗಳು ಪುನರಾರಂಭ ಸಾಧ್ಯವಾಗದ ಹಿನ್ನೆಲೆಯಲ್ಲಿ ಪರೀಕ್ಷೆಗಳ ದಿನಾಂಕ ಹಾಗೂ ಸಮಯವನ್ನು ನಿಗದಿ ಮಾಡಲು ಸಾಧ್ಯವಾಗುತ್ತಲೇ ಇಲ್ಲ. ಈ ಪ್ರಕರಣಗಳ ಕುರಿತಂತೆ ತನಿಖೆಗಳು ನಡೆಸುತ್ತಿರು ಪೊಲೀಸರು, ಇಂತಹ ಹಲವು ಪ್ರಕರಣಗಳಾಗಿವೆ. ಇದೊಂದು ದೊಡ್ಡ ಮಟ್ಟದ ಪಿತೂರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ…

ಜಮ್ಮು ಕಾಶ್ಮೀರದ ಒಂದು ಶಾಲೆಗೆ ಮಾತ್ರ ಇಂತಹ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಅದೇ ಶ್ರೀನಗರದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್. ಇತರೆ ಶಾಲೆಗಳು ಪುನರಾರಂಭಗೊಂಡು ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲು ಪರದಾಡುತ್ತಿರುವಾಗ ಈ ಒಂದು ಶಾಲೆಯಲ್ಲಿ ಪರೀಕ್ಷೆ ನಿಗದಿಯಾಗಿ ಮುಕ್ತಾಯವನ್ನು ಕಂಡಿದೆ.

ಅರೆ, ಈ ಶಾಲೆಗೆ ಮಾತ್ರ ಹೇಗೆ ಹುರಿಯತ್ ನಾಯಕರು ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಅಶ್ಚರ್ಯದಿಂದ ನೋಡುತ್ತಿರುವಾಗಲೇ ಬೆಳಕಿಗೆ ಬಂದ ಸತ್ಯಾಂಶ ಏನೆಂದರೆ, ಈ ಶಾಲೆಯಲ್ಲಿ ಹುರಿಯತ್ ಸಂಘಟನೆಯ ಮುಖ್ಯಸ್ಥ ಸೈಯದ್ ಅಲಿ ಶಾ ಗಿಲಾನಿಯ ಮೊಮ್ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂಬುದು. ಅಕ್ಟೋಬರ್ 1-5ರವರೆಗೂ ಈ ಶಾಲೆಯಲ್ಲಿ ಪರೀಕ್ಷೆ ನಡೆದಿದೆ. ಆದರೆ ಕಣಿವೆ ರಾಜ್ಯದ ಇತರೆ ಭಾಗಗಳ ಶಾಲೆಗಳು ಮಾತ್ರ ಪುನರಾರಂಭವಾಗಲು ಇನ್ನು ಪರದಾಟ ನಡೆಸುತ್ತಿವೆ.

ವಾನಿ ಹತ್ಯೆಯ ನಂತರ ಹಿಂಸಾಚಾರ ಪರಿಸ್ಥಿತಿ ಹಾಗೂ ಸರ್ಕಾರದ ನಿಷೇಧಾಜ್ಞೆ ಪರಿಣಾಮ ಎಲ್ಲ ಶಾಲೆಗಳು ಸುಮಾರು 100ಕ್ಕೂ ಹೆಚ್ಚು ದಿನ ಮುಚ್ಚಿದ್ದವು. ಆದರೆ, ಸರ್ಕಾರ ಶಾಲೆಗಳ ಪುನರಾರಂಭ ಸೇರಿದಂತೆ ಇತರೆ ವಿಷಯವಾಗಿ ತನ್ನ ನಿಷೇಧಾಜ್ಞೆ ವಾಪಸ್ ಪಡೆದ ಮೇಲೆ ಶಾಲೆಗಳು ಪ್ರಾರಂಭವಾಗಬೇಕಿತ್ತು. ಆದರೆ ಕಳೆದ ಮೂರು ವಾರಗಳಿಂದ ಡೆಲ್ಲಿ ಪಬ್ಲಿಕ್ ಶಾಲೆಗೆ ಪುನರಾರಂಭವಾದ ರೀತಿಯಲ್ಲಿ ಇತರೆ 23 ಶಾಲೆಗಳು ತೆರೆಯಲು ಸಾಧ್ಯವಾಗುತ್ತಲೇ ಇಲ್ಲ.

ಗಿಲಾನಿಯ ಪುತ್ರರಿಬ್ಬರೂ ಉನ್ನತ ಶಿಕ್ಷಣ ಪಡೆದು ವೈಭವೋಪೇತ ಜೀವನ ನಡೆಸುತ್ತಿದ್ದಾರೆ. ಅವರಲ್ಲೊಬ್ಬರಾದ ನಯೀಮ್ ಮಗಳು ಅರ್ಥಾತ್ ಗಿಲಾನಿ ಮೊಮ್ಮಗಳು ಶ್ರೀನಗರದ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ. ಈಕೆಯ ಓದಿನ ಬಗ್ಗೆ ಖಂಡಿತ ಖುಷಿಪಡಬೇಕಾದದ್ದೇ. ಆದರೆ ಬೇರೆ ಶಾಲೆಗಳಿಗೆಲ್ಲ ಬೆಂಕಿ ಹಚ್ಚುತ್ತ, ಉಳಿದ ಮಕ್ಕಳಿಗೆಲ್ಲ ಕಲ್ಲು ತೂರುವುದನ್ನು ಬಿಟ್ಟರೆ ಮತ್ಯಾವ ಅವಕಾಶವನ್ನೂ ಪಡೆಯದಂತೆ ಮಾಡಿ, ತಾನು-ತನ್ನ ಪರಿವಾರ ಮಾತ್ರ ಬೆಚ್ಚಗಿರುವ ಈ ಪ್ರತ್ಯೇಕತಾವಾದಿ ನಾಯಕರನ್ನು, ಗಿಲಾನಿಯಂಥ ಕಟುಕರನ್ನು ಅದ್ಯಾವ ಧರ್ಮ ಕ್ಷಮಿಸೀತು?

Leave a Reply