ಶೀತಲ ಸಮರದ ನಂತರ ಜಾಗತಿಕ ಮಟ್ಟದಲ್ಲಾಗುತ್ತಿದೆ ದೊಡ್ಡ ಮಿಲಿಟರಿ ಬೆಳವಣಿಗೆ, 3ನೇ ಮಹಾಯುದ್ಧಕ್ಕೆ ನ್ಯಾಟೊ ರಾಷ್ಟ್ರಗಳ ಸಕಲ ಸಿದ್ಧತೆ, ನಾನೇನು ಕಮ್ಮಿ ಇಲ್ಲವೆಂಬಂತಿದೆ ರಷ್ಯಾ ನಡೆ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆ ವಿಷಯದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕಾರಣ, ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ರಷ್ಯಾ ಬಣಗಳ ನಡುವಣ ತಿಕ್ಕಾಟ ದಿನೇ ದಿನೇ ಹೆಚ್ಚುತ್ತಿದ್ದು, ಯೂರೋಪ್ ಹಾಗೂ ರಷ್ಯಾ ಗಡಿಗಳಲ್ಲಿ ಮಿಲಿಟರಿ ಪಡೆ ನಿಯೋಜನೆವರೆಗೂ ಬಂದು ನಿಂತಿದೆ. ಇದಕ್ಕೆ ಪೂರಕವಾಗಿ ಬ್ರಿಟನ್ ಮುಂದಿನ ವರ್ಷ ತನ್ನ ಯುದ್ಧ ವಿಮಾನಗಳನ್ನು ರೊಮೇನಿಯಾಗೆ ಕಳುಹಿಸುವುದಾಗಿ ಹಾಗೂ ಅಮೆರಿಕ ತನ್ನ ಸೇನಾ ಪಡೆ, ಯುದ್ಧ ಟ್ಯಾಂಕರ್ ಹಾಗೂ ಶಸ್ತ್ರಾಸ್ತ್ರಗಳನ್ನು ಪೊಲೆಂಡಿನಲ್ಲಿ ನಿಯೋಜಿಸುವುದಾಗಿ ಘೋಷಿಸಿವೆ.

ಇದರೊಂದಿಗೆ ನ್ಯಾಟೊ ಸದಸ್ಯ ರಾಷ್ಟ್ರಗಳು ತಮ್ಮ ಸೇನೆಗಳನ್ನು ಯೂರೋಪಿನ ಪೂರ್ವ ಭಾಗದ ರಾಷ್ಟ್ರಗಳಲ್ಲಿ ನಿಯೋಜಿಸಲು ಸಜ್ಜಾಗಿವೆ. ಅಮೆರಿಕ ಮತ್ತು ಬ್ರಿಟನ್ ರಾಷ್ಟ್ರಗಳ ಈ ನಡೆಗೆ ಸಡ್ಡು ಹೊಡೆಯುವಂತೆ ರಷ್ಯಾ ಸಹ ತನ್ನ ಗಡಿ ಪ್ರದೇಶಗಳಲ್ಲಿ ಸೇನಾ ತುಕಡಿಗಳು, ಯುದ್ಧ ಹಡಗುಗಳನ್ನು ನಿಯೋಜಿಸಿಕೊಂಡು ಎಂತಹುದೇ ಪರಿಸ್ಥಿತಿಗೂ ತಾನು ಸಿದ್ಧ ಎಂಬ ಸಂದೇಶ ರವಾನಿಸಿದೆ.

ಕೇವಲ ಅಮೆರಿಕ ಮತ್ತು ಬ್ರಿಟನ್ ಮಾತ್ರವಲ್ಲದೇ ಕೆನಡಾ, ಜರ್ಮನಿಯೂ ಸಹ ತಮ್ಮ ಸೇನೆ ನಿಯೋಜನೆಗೆ ಮಾತು ಕೊಟ್ಟಿವೆ. ಇದರೊಂದಿಗೆ ಶೀತಲ ಸಮರದ ನಂತರ ನಡೆಯುತ್ತಿರುವ ಅತಿ ದೊಡ್ಡ ಮಿಲಿಟರಿ ಬೆಳವಣಿಗೆ ಇದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬ ಕಳವಳ ಶುರುವಾಗಿದೆ.

‘ರಷ್ಯಾ ಈಗಾಗಲೇ ತನ್ನ ಪಶ್ಚಿಮ ಭಾಗದ ಗಡಿ ಪ್ರದೇಶಗಳಲ್ಲಿ ಸುಮಾರು 3.30 ಲಕ್ಷ ಸಾಮರ್ಥ್ಯದ ಸೇನೆಯನ್ನು ನಿಯೋಜಿಸಿದೆ. ಈ ತಿಂಗಳಲ್ಲೇ ರಷ್ಯಾ ತನ್ನ ಅಣ್ವಸ್ತ್ರ ಸಾಮರ್ಥ್ಯದ ಐಸ್ಕೆಂಡರ್ ಕ್ಷಿಪಣಿಗಳನ್ನು ನಿಯೋಜಿಸಿಕೊಂಡಿದೆ. ಜತೆಗೆ ಈ ಹಿಂದೆಯೇ ಅಮೆರಿಕ ಜತೆಗಿನ ಪ್ಲುಟೊನಿಯಂ ಬಳಕೆ ತಡೆ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ’ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್ಟೆನ್ಬರ್ಗ್ ರಷ್ಯಾ ನಡೆಯ ಬಗ್ಗೆ ನ್ಯಾಟೊ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ರಕ್ಷಣಾ ಕಾರ್ಯದರ್ಶಿ ಆ್ಯಶ್ ಕಾರ್ಟರ್, ಯುದ್ಧಕ್ಕೆ ಸಿದ್ಧವಾಗಿರುವ ಮಿಲಿಟರಿ ಪಡೆಯ 900 ಯೋಧರನ್ನು ಸದ್ಯದಲ್ಲೇ ಪೊಲೆಂಡಿಗೆ ಕಳುಹಿಸುತ್ತಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ ಪ್ರತ್ಯೇಕವಾದ ಸುಸಜ್ಜಿತ ಟ್ಯಾಂಕರ್ ಹಾಗೂ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರವನ್ನು ಯೂರೋಪ್ ಪೂರ್ವ ಗಡಿ ಭಾಗದಲ್ಲಿ ನಿಯೋಜಿಸಲಾಗುವುದು ಎಂದಿದ್ದಾರೆ.

ಅಮೆರಿಕ ಜತೆಗೆ ನ್ಯಾಟೊ ಒಕ್ಕೂಟದ ಇತರೆ ಸದಸ್ಯ ರಾಷ್ಟ್ರಗಳಾದ ಬ್ರಿಟನ್ 800 ಶಕ್ತಿಶಾಲಿ ಸೇನಾ ಪಡೆಯನ್ನು ಎಸ್ಟೋನಿಯಾಗೆ ಕಳುಹಿಸಲಿದ್ದು, ಇವರಿಗೆ ಫ್ರಾನ್ಸ್ ಮತ್ತು ಡಚ್ ಸೇನೆಗಳು ಬೆಂಬಲ ನೀಡಲಿವೆ. ಜತೆಗೆ ಬ್ರಿಟನ್ ತನ್ನ ತೈಫೂನ್ ಯುದ್ಧ ವಿಮಾನವನ್ನು ಕಳುಹಿಸಿಕೊಡಲು ಸಿದ್ಧವಾಗಿದೆ. ಬ್ರಿಟನ್ ತನ್ನ ಸೇನೆಯನ್ನು ಮುಂದಿನ ಮೇ ತಿಂಗಳ ವೇಳೆಗೆ ಕಳುಹಿಸಲು ನಿರ್ಧರಿಸಿದೆ. ಇನ್ನು ಅಮೆರಿಕ ಜೂನ್ ವೇಳೆಗೆ ತಮ್ಮ ಸೇನೆ ಹಾಗೂ ಶಸ್ತ್ರಾಸ್ತ್ರಗಳು ಈ ಭಾಗದಲ್ಲಿ ನಿಯಂತ್ರಣವನ್ನು ಪಡೆಯಲು ಉದ್ದೇಶಿಸಿದೆ. ಕೆನಡಾ ತನ್ನ 450 ಸೈನಿಕರ ಪಡೆಯನ್ನು ಲಾಟ್ವಿಯಾಗೆ, ಜರ್ಮನಿಯಿಂದ 400ರಿಂದ 600 ಸೈನಿಕರ ಪಡೆಯನ್ನು ಲಿತುಯಾನಿಯಾಗೆ ಕಳುಹಿಸಲು ತಯಾರಿ ನಡೆಸಿವೆ.

russia nato

ಈ ರೀತಿಯಾದ ಬೆಳವಣಿಗೆಗೆ ಕಾರಣವೇನು ಎಂದು ನೋಡುವುದಾದರೆ ನಮಗೆ ಸಿಗುವ ಇತ್ತೀಚಿನ ಪ್ರಮುಖ ವಿದ್ಯಮಾನಗಳು ಹೀಗಿವೆ… ಸಿರಿಯಾದಲ್ಲಿ ಅಕ್ಟೋಬರ್ 3ರಂದು ರಷ್ಯಾ ಕದನ ವಿರಾಮ ಉಲ್ಲಂಘಿಸಿತೆಂಬ ಆರೋಪದೊಂದಿಗೆ ಎಲ್ಲವೂ ಶುರುವಾಯಿತು. ತಾನು ಇಸ್ಲಾಮಿಕ್ ಉಗ್ರರನ್ನು ಬಲಿ ಹಾಕುತ್ತಿದ್ದೇನೆ ಅಂತ ರಷ್ಯ ತನ್ನ ನಿಲುವಿಗೆ ಆತುಕೊಂಡರೆ, ಈ ನೆಪದಲ್ಲಿ ಅಸಾದ್ ವಿರೋಧಿ ಬಣವನ್ನು ರಷ್ಯಾ ನಾಮಾವಶೇಷ ಮಾಡುತ್ತಿದೆ ಎಂಬುದು ಅಮೆರಿಕದ ತಕರಾರು. ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತೊಂದರೆ ಮಾಡಲು ರಷ್ಯಾ ಸೈಬರ್ ದಾಳಿ ಮಾಡಿದೆ ಎಂಬ ಆರೋಪ ಪುಟಿನ್ ಆಡಳಿತವನ್ನು ಕೆಂಡಾಮಂಡಲವಾಗುವಂತೆ ಮಾಡಿದೆ.

ನ್ಯಾಟೊ ರಾಷ್ಟ್ರಗಳು ಹೀಗೆ ತಮ್ಮ ಸೇನೆಗಳನ್ನು ಯುರೋಪ್ ಗಡಿ ರಾಷ್ಟ್ರಗಳಿಗೆ ರವಾನಿಸುವ ತೀರ್ಮಾನ ಕೈಗೊಳ್ಳುತ್ತಿರುವ ಹಂತದಲ್ಲೇ ರಷ್ಯಾ ತಾನು ಎಲ್ಲದಕ್ಕೂ ಸಿದ್ಧ ಎಂಬ ಸಂದೇಶ ಕೊಟ್ಟಿದೆ. ರಷ್ಯಾ ತನ್ನ ಯುದ್ಧ ಹಡಗುಗಳು ಮತ್ತು ಕ್ಷಿಪಣಿಗಳನ್ನು ಸ್ವೀಡನ್ ಮತ್ತು ಡೆನ್ಮಾರ್ಕ್ ನಡುವಣ ಬಾಲ್ಟಿಕ್ ಸಮುದ್ರಕ್ಕೆ ಇಳಿಸಿದೆ. ರಷ್ಯಾದ ಅಣ್ವಸ್ತ್ರ ಕ್ಷಿಪಣಿಗಳು ಸಿಡಿದರೆ ಪೊಲೆಂಡ್ ಹಾಗೂ ಸುತ್ತಮುತ್ತಲ ಬಾಲ್ಟಿಕ್ಸ್ ಪ್ರದೇಶ ಗುರಿಯಾಗಲಿವೆ. ಅಲ್ಲದೆ ತನ್ನ ಗಡಿಯಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

ಇದೇ ವೇಳೆ ತನ್ನ ಯುದ್ಧ ಹಡಗುಗಳಿಗೆ ಇಂಧನ ಪೂರೈಕೆಗಾಗಿ ರಷ್ಯಾದ ಮಾಡಿಕೊಂಡಿದ್ದ ಮನವಿಯನ್ನು ಸ್ಪೇನ್ ನಿರಾಕರಿಸಿದೆ. ರಷ್ಯಾದ ಯುದ್ಧ ಹಡಗಿಗೆ ಇಂಧನ ಪೂರೈಕೆ ಮಾಡಬಾರದು ಎಂದು ನ್ಯಾಟೊ ರಾಷ್ಟ್ರಗಳು ಒತ್ತಡ ಹೇರಿರುವ ಪರಿಣಾಮ ಸ್ಪೇನ್, ರಷ್ಯಾದ ಮನವಿಯನ್ನು ತಿರಸ್ಕರಿಸಿದೆ.

ಈ ಎಲ್ಲ ಬೆಳವಣಿಗೆಗಳಿಂದ ಪಾಶ್ಚಿಮಾತ್ಯ ಹಾಗೂ ಪೂರ್ವ ರಾಷ್ಟ್ರಗಳ ನಡುವಣ ಮುಸುಕಿನ ಗುದ್ದಾಟ ತೀವ್ರತೆ ಪಡೆದುಕೊಂಡಿರುವುದು ಸ್ಪಷ್ಟವಾಗಿದೆ. ಶಿಥಲ ಸಮರದ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಮಿಲಿಟರಿ ಬೆಳವಣಿಗೆಗಳು ನಡೆಯುತ್ತಿದ್ದು, 3ನೇ ಮಹಾ ಯುದ್ಧದತ್ತ ನಾವು ಸಾಗುತ್ತಿದ್ದೇವೆಯೇ ಎಂಬ ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Leave a Reply