ಉಕ್ಕಿನ ಸೇತುವೆಗೆ ತಾತ್ಕಾಲಿಕ ತಡೆ, ಕಾವೇರಿ ಕೊಳ್ಳದ ರೈತರ ಪರಿಹಾರಕ್ಕಾಗಿ ಕೇಂದ್ರಕ್ಕೆ ರಾಜ್ಯದ ಮನವಿ, ನ್ಯಾಯಾಧೀಶರ ನೇಮಕ ವಿಳಂಬ: ಕೇಂದ್ರಕ್ಕೆ ಸುಪ್ರೀಂ ತರಾಟೆ, ಭಾರತ-ಪಾಕ್ ನಡುವಣ ಪ್ರಮುಖ ವಿದ್ಯಮಾನಗಳೇನು?

ಡಿಜಿಟಲ್ ಕನ್ನಡ ಟೀಮ್:

ಉಕ್ಕಿನ ಸೇತುವೆಗೆ ನಾಲ್ಕು ವಾರಗಳ ತಡೆಯಾಜ್ಞೆ

ಜನರ ತೀವ್ರ ವಿರೋಧದ ನಡುವೆಯೂ ಉಕ್ಕಿನ ಸೇತುವೆ ನಿರ್ಮಿಸಿಯೇ ಸಿದ್ಧ ಎಂಬ ತೀರ್ಮಾನಕ್ಕೆ ಬಂದಿದ್ದ ರಾಜ್ಯ ಸರ್ಕಾರಕ್ಕೆ ಈಗ ತಾತ್ಕಾಲಿಕ ಹಿನ್ನಡೆಯಾಗಿದೆ. ಕಾರಣ ಚೆನ್ನೈನಲ್ಲಿರುವ ಹಸಿರು ನ್ಯಾಯಾಧಿಕರಣ ಸರ್ಕಾರದ ಈ ಯೋಜನೆಗೆ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿದೆ. ತನ್ನ ಕನಸಿನ ಯೋಜನೆಗೆ ನವೆಂಬರ್ 1 ರಂದು ಶಂಕುಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಸೇತುವೆ ನಿರ್ಮಾಣ ದುಬಾರಿ ವೆಚ್ಚ ಹಾಗೂ ಸುಮಾರು 800 ಮರಗಳ ನಾಶಕ್ಕೆ ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ಪರಿಸರ ಸಂಘಟನೆ ಹಾಗೂ ಇತರೆ ಸಂಘಟನೆಗಳು ಈ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ದೂರಿನಲ್ಲೂ ಇದೇ ಅಂಶವನ್ನು ಪ್ರಸ್ತಾಪಿಸಲಾಗಿದೆ.

ಕಾವೇರಿ ಕೊಳ್ಳದ ರೈತರಿಗೆ ₹120 ಕೋಟಿ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ

ಮಳೆಯ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಾವೇರಿ ಕೊಳ್ಳದ ರೈತರಿಗೆ ಪರಿಹಾರ ನೀಡಲು ತಕ್ಷಣವೇ ₹ 120 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರದ ಮುಂದೆ ಮನವಿ ಇಟ್ಟಿದೆ. ಮುಂಗಾರು ವೈಫಲ್ಯದಿಂದ ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಹೀಗಾಗಿ ರೈತರ ಬೆಳೆಗೆ ಸೂಕ್ತ ಸಮಯದಲ್ಲಿ ನೀರು ಹರಿಸಲು ಸಾಧ್ಯವಾಗಿಲ್ಲ. ಪರಿಣಾಮ 88,984 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿಲ್ಲ. ಹೀಗಾಗಿ ರೈತರಿಗೆ ತಕ್ಷಣವೇ ಪ್ರತಿ ಹೆಕ್ಟೇರಿಗೆ ₹ 13,500 ಪರಿಹಾರ ಬಿಡುಗಡೆ ಮಾಡಬೇಕಿದೆ ಎಂದು ರಾಜ್ಯ ಸರ್ಕಾರ ಮನವಿಯಲ್ಲಿ ವಿವರಿಸಿದೆ.

ಇದೇ ವೇಳೆ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ಅಧ್ಯಯನ ಮಾಡಲು ಕೇಂದ್ರದ ತಜ್ಞರ ಸಮಿತಿಯು ನವೆಂಬರ್ 2ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ. ರಾಜ್ಯದ ಬರ ಪೀಡಿತ ತಾಲೂಕು ಹಾಗೂ ಅಲ್ಲಿನ ರೈತರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಬಂದು ಅಧ್ಯಯನ ನಡೆಸಲಿದೆ. ಈಗಾಗಲೇ 110 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 35 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಕೊಟ್ಟರು.

ಕೇಂದ್ರಕ್ಕೆ ಸುಪ್ರೀಂ ತರಾಟೆ

ನ್ಯಾಯಾಧೀಶರ ನೇಮಕ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ನ್ಯಾಯಾಧೀಶರ ನೇಮಕ ಸಂಬಂಧ ಸುಪ್ರೀಂ ಕೋರ್ಟ್ ಸಮಿತಿಯು ತನ್ನ ಶಿಫಾರಸ್ಸು ಮಾಡಿದ್ದರೂ ಕೇಂದ್ರ ಸರ್ಕಾರ ಅವರನ್ನು ನೇಮಕ ಮಾಡಿಲ್ಲ ಎಂದು ಅಸಮಾಧಾನಗೊಂಡಿದೆ. ಈ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್, ‘ಈಗಾಗಲೇ ನ್ಯಾಯಾಧೀಶರಿಲ್ಲದೇ ಕೋರ್ಟಿನ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಮುಂದೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಬೀಗ ಹಾಕಬೇಕೇಂದು ನಿರ್ಧರಿಸಿದ್ದೀರಾ? ನ್ಯಾಯಾಂಗ ವ್ಯವಸ್ಥೆಯನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದರು.

ಇದಕ್ಕೆ ಉತ್ತರ ನೀಡಿದ ಅಟಾರ್ನಿ ಜೆನರಲ್ ಮುಕುಲ್ ರೊಹ್ಟಗಿ, ‘ಅಲಹಾಬಾದ್ ಹೈಕೋರ್ಟಿನ 18 ನ್ಯಾಯಾಧೀಶರ ನೇಮಕಾತಿ ಶಿಫಾರಸ್ಸಿಗೆ ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಉಳಿದ ನ್ಯಾಯಾಲಯಗಳ ಜಡ್ಜ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

ಭಾರತ ಮತ್ತು ಪಾಕ್ ನಡುವಣ ಪ್ರಮುಖ ಬೆಳವಣಿಗೆಗಳು…

ಭಾರತ ಮತ್ತು ಪಾಕಿಸ್ತಾನ ನಡುವಣ ಗುದ್ದಾಟ ಮುಂದುವರೆದಿದ್ದು, ಈ ಕುರಿತು ಶುಕ್ರವಾರ ನಡೆದ ಪ್ರಮುಖ ಬೆಳವಣಿಗೆಗಳು ಹೀಗಿವೆ…

  • ನಿನ್ನೆಯಷ್ಟೇ ಭಾರತದಲ್ಲಿ ಪಾಕಿಸ್ತಾನ ಹೈ ಕಮಿಷನರ್ ಕಚೇರಿ ಸಿಬ್ಬಂದಿಯನ್ನು ಗೂಢಚರ್ಯದ ಮೇಲೆ ವಿಚಾರಣೆ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಲ್ಲಿನ ಭಾರತೀಯ ರಾಯಭಾರಿ ಸಿಬ್ಬಂದಿಯನ್ನು ವಜಾಗೊಳಿಸಿದೆ. ಪಾಕಿಸ್ತಾನದ ಈ ನಡೆಗೆ ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕ್ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ಆಗ್ರಹಿಸಿದೆ.
  • ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಶುಕ್ರವಾರ ಸಹ ನಡೆದ ಈ ಚಕಮಕಿಯಲ್ಲಿ ಭಾರತದ ಮೂವರು ನಾಗರೀಕರಿಗೆ ಗಾಯವಾಗಿದೆ.
  • ಇನ್ನು ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಡಿ ಭದ್ರತಾ ಪಡೆ ಅಧಿಕಾರಿ, ‘ಈ ಅವಧಿಯಲ್ಲಿ ನಮಗೆ ಸಿಕ್ಕ ಲೆಕ್ಕದ ಪ್ರಕಾರ ಸುಮಾರು 15 ಪಾಕಿಸ್ತಾನಿ ಯೋಧರನ್ನು ಸದೆಬಡಿದಿದ್ದೇವೆ. ಇನ್ನು ನಮ್ಮ 3 ಯೋಧರು ಹುತಾತ್ಮರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ‘ಪಾಕಿಸ್ತಾನ ನಮ್ಮ ಮೇಲೆ ಗುಂಡಿನ ದಾಳಿ ನಡೆಸುವುದರ ಜತೆಗೆ ನಾಗರೀಕರನ್ನು ಗುರಿಯಾಗಿಸುತ್ತಿದೆ. ಆದರೆ ನಾವು ಕೇವಲ ಪಾಕಿಸ್ತಾನದ ದಾಳಿಗೆ ಪ್ರತಿ ದಾಳಿ ಮಾತ್ರ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

Leave a Reply