ಮತ್ತೆ ಬರ್ಮುಡಾ ಟ್ರೈಯಾಂಗಲ್ – ದುರಂತಗಳಿಗೆ ಮೋಡಗಳನ್ನು ದೂರಬೇಕೆ? ನಿಗೂಢ ಅಂತೂ ಬಯಲಾಯಿತೆ?

author-ananthramuಬರ್ಮುಡಾ ಟ್ರೈಯಾಂಗಲ್, ಎಷ್ಟು ಬಾರಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ ಎಂದು ನೀವು ಲೆಕ್ಕ ಕೊಡಲು ಹೊರಟರೆ ನಿಮ್ಮ ಆಯುಷ್ಯದ ಅರ್ಧ ಭಾಗವನ್ನೇ ಇದಕ್ಕೆ ಮೀಸಲಿಡಬೇಕು. ಬರ್ಮುಡಾ ಹೆಸರು ಕೇಳಿದರೆ ಸಾಕು ಅದರೊಂದಿಗೆ ತಳಕು ಹಾಕಿಕೊಂಡಿರುವ ನಿಗೂಢಗಳು, ನಾಪತ್ತೆಯಾದ ಹಡಗುಗಳ ಜಾತಕ, ಮತ್ತೆಂದೂ ಕಾಣಿಸಕೊಳ್ಳದ ವಿಮಾನಗಳು ಇಂಥ ದುರಂತದ ಸರಮಾಲೆಗಳೇ ಕಣ್ಣಮುಂದೆ ಬಂದಾವು. ನೀವು ಯಾವ ಮೂಲವನ್ನಾದರೂ ಹುಡುಕಿ ಬರ್ಮುಡಾ ಟ್ರೈಯಾಂಗಲ್‍ಗೆ ಸಂಬಂಧಿಸಿದಂತೆ ಕೊಡುವ ಅಂಕಿ ಸಂಖ್ಯೆಗಳು ನಿಮ್ಮನ್ನೇ ದಿಕ್ಕುತಪ್ಪಿಸಿಯಾವು. `75 ವಿಮಾನಗಳು ನಾಪತ್ತೆ’, `ಕಳೆದ ನೂರು ವರ್ಷಗಳಿಂದ ಸಾವಿರ ಮಂದಿ ಅಲ್ಲಿ ಮುಳುಗಿಹೋಗಿದ್ದಾರೆ’-`ವಿಜ್ಞಾನಿಗಳಿಗೂ ಇಲ್ಲಿ ಏನಾಗುತ್ತದೆ ಎಂದು ತಿಳಿಯದು’. `ಅಂತೂ ಬರ್ಮುಡಾ ಟ್ರೈಯಾಂಗಲ್`ನ ನಿಗೂಢ ಇದೀಗ ಪತ್ತೆಯಾಗಿದೆ’. ಈ ಬಗೆಯ ಶೀರ್ಷಿಕೆಗಳು ರಾರಾಜಿಸುತ್ತವೆ. ವಿಜ್ಞಾನ ನೆಚ್ಚಿದವರು ಕೂಡ ಓದುವ ಕುತೂಹಲ ತಳೆಯುತ್ತಾರೆ.

ಡಿಜಿಟಲ್ ಕನ್ನಡದ ಇದೇ ಅಂಕಣದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಬರ್ಮುಡಾ ಟ್ರೈಯಾಂಗಲ್ ಕುರಿತು ವೈಜ್ಞಾನಿಕ ಹಿನ್ನೆಲೆ ಆಧರಿಸಿದ ಲೇಖನ ಪ್ರಕಟವಾಗಿತ್ತು. ಈಗ ವಿಷಯ ಅದೇ, ಆದರೆ ಸಿದ್ಧಾಂತ ಬೇರೆ. ನೀವು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ. ಬರ್ಮುಡಾ ಟ್ರೈಯಾಂಗಲ್ ಎಂದು ಯಾರು ನೀರಿನ ಮೇಲೆ ಗೆರೆ ಎಳೆದು ಟ್ರೈಯಾಂಗಲ್ ರೂಪಿಸಿಲ್ಲ. ಗೂಗಲ್ ಅರ್ಥ್‍ಗೆ ಹೋಗಿ ತಡಕಾಡಿದರೂ ನಿಮಗೆ ಇದು ಸಿಕ್ಕುವುದಿಲ್ಲ. ಅಟ್ಲಾಂಟಿಕ್ ಸಾಗರದಲ್ಲಿ ಕ್ಯೂಬಾ ಪಕ್ಕದಲ್ಲಿ ಪೋರ್ಟರಿಕೋ-ಫ್ಲಾರಿಡಾ-ಬರ್ಮುಡಾ ಇವು ಮೂರನ್ನೂ ಕೂಡುವಂತೆ ಗೆರೆ ಎಳೆದರೆ ಅದು ತ್ರಿಭುಜವಾಗುತ್ತದೆ.

ಇಲ್ಲಿ ಕಣ್ಮರೆಯಾಗಿದೆ ಎನ್ನಲಾದ ಹಡಗುಗಳು, ವಿಮಾನಗಳು ಮುಂತಾದವುಗಳನ್ನೆಲ್ಲ ಮತ್ತೆ ಇಲ್ಲಿ ಪಟ್ಟಿ ಮಾಡುತ್ತಿಲ್ಲ. ಥಿಯರಿಗಳು? ಅವೂ ಬೇಕಾದಷ್ಟಿವೆ. ಹಾರುವ ಸಾಸರ್ ಬಂದು ರಾದ್ಧಾಂತ ಮಾಡಿರಬಹುದು, ಏಲಿಯನ್ಸ್‍ಗಳ ಕೃತ್ಯ ಇದಾಗಿರಬಹುದು, ಸಾಗರ ತಳದಲ್ಲಿರುವ ದೊಡ್ಡ ಪಿರಮಿಡ್ಡಿನ ಕೆಲಸ ಇದು ಅಥವಾ ವಿಜ್ಞಾನದ ಉತ್ತರ ಬೇಕೆಂದು ಅಪೇಕ್ಷಿಸುವವರಿಗೆ ಈ ಸಾಗರ ತಳದಲ್ಲಿ ಕಾಂತಕ್ಷೇತ್ರದ ಸೆಳೆವು ಹೆಚ್ಚು. – ಈ ಒಂದೊಂದರ ಮೇಲೂ ಭರ್ಜರಿ ಪುಸ್ತಕವನ್ನೇ ಬರೆಯಬಹುದು. ಶತಮಾನಗಳ ಕಾಲ ಇಂಥ ಥಿಯರಿಗಳೇ ಜನಾಕರ್ಷಣೆ ಗಳಿಸಿವೆ. ಇತ್ತೀಚೆಗಷ್ಟೇ ವಿಜ್ಞಾನಿಗಳು ಬೇರೆಡೆ ಸಾಗರ ತಳವನ್ನು ಪರೀಕ್ಷೆ ಮಾಡುವಾಗ, ಬರ್ಮುಡಾ ತಳದಲ್ಲೂ ಮೀಥೇನ್ ಉಗುಳುವ ಕೊಳವೆಗಳು ಇರಲು ಸಾಧ್ಯವೆಂದು ಹೇಳಿದ್ದರು. ಹಡಗುಗಳ ಸಮತೋಲ ತಪ್ಪುವುದು, ವಿಮಾನಗಳ ಎಂಜಿನ್ ಬಂದ್ ಆಗುವುದಕ್ಕೆ ಬಹುಶಃ ಇದೇ ಕಾರಣವಾಗಬಹುದೆಂಬ ಊಹೆಯೂ ಇತ್ತು.

ಈ ತಿಂಗಳ ಕಳೆದ ವಾರದ ಸಂಗತಿ – ಡಿಸ್ಕವರಿ ಕಮ್ಯೂನಿಕೇಷನ್ ನೆಟ್‍ವರ್ಕ್‍ನ `ಸೈನ್ಸ್ ಚಾನೆಲ್’ ಜಗತ್ತು ಮತ್ತೆ ತುದಿಗಾಲಲ್ಲಿ ನಿಲ್ಲುವಂತಹ ಸಂದರ್ಶನವೊಂದನ್ನು ಪ್ರಸಾರ ಮಾಡಿತ್ತು. `ವಾಟ್ ಆನ್ ಅರ್ಥ್’ ಎಂಬುದು ಅದರ ಷೋ. ಇದರಲ್ಲಿ ಉಪಗ್ರಹಗಳು ತೆಗೆದ ಛಾಯಾಚಿತ್ರಗಳಲ್ಲಿ ಕಂಡುಬರುವ ವಿಸ್ಮಯಕಾರಿ ಆಕೃತಿ, ರೂಪಗಳನ್ನು ಆಧರಿಸಿ ಪ್ರತಿ ಷೋನಲ್ಲೂ ನಾಲ್ಕು ವಿಸ್ಮಯಗಳ ಬಗ್ಗೆ ಚರ್ಚೆ ನಡೆಯುತ್ತದೆ- `ಪ್ರತಿಯೊಂದನ್ನೂ ಪ್ರಶ್ನಿಸಿ’ ಎಂಬುದು ಆ ಚಾನೆಲ್‍ನ ಧ್ಯೇಯವಾಕ್ಯ. ನಮ್ಮ ಗೌತಮ ಬುದ್ಧನ ವಾಕ್ಯದಂತೆ ಅಥವಾ ನಮ್ಮ ನೆಚ್ಚಿನ ಮೇಷ್ಟ್ರು ಎಚ್ ನರಸಿಂಹಯ್ಯ ಅವರ `ಪ್ರಶ್ನಾರ್ಥಕ’(?) ಚಿಹ್ನೆಯಂತೆ.

bermuda-triangle-v2

ಕಳೆದ ವಾರ `ಸೈನ್ಸ್ ಚಾನೆಲ್’ ಅಮೆರಿಕದ ಅರೈಜೋನ ವಿಶ್ವವಿದ್ಯಾಲಯದ ಮೀಟಿಯೊರಾಲಜಿ (ಪವನ ವಿಜ್ಞಾನ) ನಿರ್ದೇಶಕ ರ್ಯಾಂಡೆಲ್ ಕೆರ್ವೇನಿಯನ್ನು ಸಂದರ್ಶನಕ್ಕೆ ಕರೆದಾಗ ಮತ್ತೆ ಬರ್ಮುಡಾ ಟ್ರೈಯಾಂಗಲ್ ಕಲ್ಪನೆಗೆ ಹೊಸ ಆಯಾಮ ಬಂತು. ಈತನ ಮಾತಿಗೆ ಬೆಲೆ ಹೆಚ್ಚು. ಜಗತ್ತಿನ ಅತಿರೇಕದ ವಾಯುಗುಣ ಕುರಿತು ವಿಶ್ಲೇಷಣೆ ಮಾಡಲು ವಿಶ್ವಸಂಸ್ಥೆ ಈತನ ನೆರವು ಪಡೆಯುತ್ತದೆ ಅಂದಮೇಲೆ ಆತನ ಮಾತುಗಳಿಗೆ ಕಿಮ್ಮತ್ತು ಉಂಟು. ಕೆರ್ವೇನಿಯನ್ನು ಸಂದರ್ಶನವನ್ನು ಮಾಡಿದ ವ್ಯಕ್ತಿ ಅವರ ಮುಂದೆ ಅಮೆರಿಕದ ಟೆರ್ರಾ ಉಪಗ್ರಹ ತೆಗೆದ ಮೋಡಗಳ ಛಾಯಾಚಿತ್ರ ಕೊಟ್ಟು ಈ ಕುರಿತು ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ. ಇವನು ಪಟಪಟ ಹೇಳಿದ `ಇವೆಲ್ಲವೂ ಮೋಡಗಳು, ಆರು ಮುಖವಿರುವ ಒಂದೊಂದು ಮೋಡಗಳು ಜೇನುಗೂಡಿನಂತೆ ಕೂಡಿಕೊಂಡಿವೆ. ಒಂದೊಂದರ ವ್ಯಾಪ್ತಿಯು 30ರಿಂದ 50 ಕಿಲೋ ಮೀಟರು. ಏನಾದರೂ ಕುಸಿಯುವ ಗಾಳಿಯ ವಲಯಕ್ಕೆ ಇವು ಬಂದರೆ ಈ ಒಂದೊಂದೂ `ಗಾಳಿಯ ಬಾಂಬು’ಗಳಂತೆ 170 ಕಿಲೋ ಮೀಟರ್ ವೇಗದಲ್ಲಿ ದಾಳಿಮಾಡುತ್ತವೆ. ಇವಿರುವ ವಲಯದಲ್ಲಿ ವಿಮಾನ ಹಾರಾಟ ಮಾಡುತ್ತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಡಗುಗಳು ಸಿಕ್ಕುಹಾಕಿಕೊಂಡರೂ ಅವುಗಳ ಕಥೆ ಮುಗಿದಂತೆಯೇ. ಸಾಗರದಲ್ಲಿ 45 ಅಡಿ ಎತ್ತರದ ಅಲೆಗಳನ್ನು (ಹೆಚ್ಚು ಕಡಿಮೆ ಸುನಾಮಿ ಅಲೆಗಳಂತೆ) ದಾಳಿಮಾಡಿದಾಗ ಅಲೆಗಳನ್ನು ಸೃಷ್ಟಿಸುತ್ತವೆ. ತಪ್ಪಿಸಿಕೊಳ್ಳುವ ಮಾತೆಲ್ಲಿ?’ ಎಂದಿದ್ದ. ವಾಸ್ತವವಾಗಿ ಅವನು ವಿಶ್ಲೇಷಿಸುತ್ತಿದ್ದುದು ಬರ್ಮುಡಾ ಟ್ರೈಯಾಂಗಲ್ ಮೇಲೆ ದಟ್ಟವಾಗಿ ಕೂಡಿಕೊಂಡಿದ್ದ ಮೋಡಗಳ ಬಗ್ಗೆ. ಇಂಥವೇ ಮೋಡಗಳು ಬರ್ಮುಡಾದಿಂದ ಆಚೆಗೆ 7,200 ಕಿಲೋ ಮೀಟರ್ ದೂರದಲ್ಲಿ `ನಾರ್ಥ್ ಸೀ’ ನೆತ್ತಿಯಲ್ಲೂ ಇದ್ದವು.

ಸೈನ್ಸ್ ಚಾನೆಲ್ ನೋಡುತ್ತಿದ್ದವರಿಗೆಲ್ಲ ಉದ್ವೇಗ. ಬರ್ಮುಡಾ ಟ್ರೈಯಾಂಗಲ್‍ನ ದುರಂತಗಳಿಗೆ ಮೋಡದ ಬಾಂಬುಗಳು ಎರಗುವುದೇ ಕಾರಣವೆಂಬ ಸುದ್ದಿ ಹೊರಟಿತು. ವಾಷಿಂಗ್‍ಟನ್ ಪೋಸ್ಟ್ ಪತ್ರಿಕೆ ಭರ್ಜರಿ ತಲೆಬರಹ ಕೊಟ್ಟಿತು. ಯುನೈಟೆಡ್ ಕಿಂಗ್‍ಡಂನ ಸನ್ ನ್ಯೂಸ್ ಅದನ್ನೇ ಅನುಸರಿಸಿತು. ಹೊಸ ಪದಗಳು ಜನರ ನಾಲಿಗೆಯ ಮೇಲೆ ನಲಿದಾಡಿದವು. ನ್ಯೂಯಾರ್ಕ್ ಟೈಮ್ಸ್ ಸುಮ್ಮನಿದ್ದೀತೆ? `The mystery of Bermuda triangle may finally be solved’ ಎಂಬ ಶೀರ್ಷಿಕೆ ಕೊಟ್ಟು ಈ ತಿಂಗಳ 21ರಂದು ಸಂಚಲನ ಹುಟ್ಟಿಸಿತು. ಡೈಲಿ ಮೇಲ್, ಪಾಪ್ಯುಲರ್ ಮೆಕಾನಿಕ್ಸ್, ಇಂಡಿಯಾ ಟೈಮ್ಸ್, ಟುಡೇ ಷೋ, ಎಲ್ಲದಕ್ಕೂ ಬರ್ಮುಡಾ ಟ್ರೈಯಾಂಗಲ್ ಸುದ್ದಿಯ ತಿನಿಸು ಕೊಟ್ಟಿತು. ಶಾಕ್ ಆಗಿದ್ದು ಮಾತ್ರ ಕೆರ್ವೇನಿಗೆ. ಬೆಳಗ್ಗೆ ಪತ್ರಿಕೆಗಳಲ್ಲಿ ಓದಿದಾಗ ಇವನ ಸಂದರ್ಶನಕ್ಕೆ ಹೆಚ್ಚು ಒತ್ತುಕೊಡಲಾಗಿತ್ತು. `ನಾನು ಹೇಳಿದ ಮಾತುಗಳು ಈ ಬಗೆಯ ಸುದ್ದಿಯಾಗುತ್ತವೆಂದು ನಾನು ಊಹಿಸಿಯೇ ಇರಲಿಲ್ಲ. ಪ್ರಸಾರ ಮಾಡುವುದಕ್ಕೆ ಮೊದಲು ನನಗೆ ತೋರಿಸಬೇಕಾಗಿತ್ತು’ ಎಂದು ಗೊಣಗಿದ. ಜೊತೆಗೆ `ವಾಸ್ತವವಾಗಿ ನನಗೆ ಈ ದೃಷ್ಟಿಯಿಂದ ಬರ್ಮುಡಾ ಟ್ರೈಯಾಂಗಲ್‍ನ ಅಧ್ಯಯನ ಮಾಡುವುದು ಆಸಕ್ತಿಯೂ ಇಲ್ಲ’ ಎಂದು ಹೇಳಿಯೂ ಬಿಟ್ಟ.

ಬರ್ಮುಡಾ ಟ್ರೈಯಾಂಗಲ್ ಬಗ್ಗೆ ಈ ಬಿಸಿಬಿಸಿ ಸುದ್ದಿ ಓದಿದ `ಬರ್ಮುಡಾ ವೆದರ್ ಸರ್ವಿಸ್ ಸಂಸ್ಥೆ’ಯ ನಿರ್ದೆಶಕ ಇದನ್ನು ನಾನು ಬಲವಾಗಿ ಅಲ್ಲಗಳೆಯುತ್ತೇನೆ. ನಮ್ಮ ಸಂಸ್ಥೆ ಈ ಕುರಿತು ಶೋಧನೆಯನ್ನೇ ನಡೆಸಿಲ್ಲ. ಜೊತೆಗೆ ಇದು ನಮ್ಮ ಆದ್ಯತೆಯ ವಸ್ತುವೂ ಅಲ್ಲ’ ಎಂದು ಪ್ರತಿಕ್ರಿಯಿಸಿದ.

ಪ್ರತಿಬಾರಿಯೂ ಬರ್ಮುಡಾ ಟ್ರೈಯಾಂಗಲ್ ನಿಗೂಢ ಕುರಿತ ಸುದ್ದಿಗಳು ಬಂದಾಗ `ನಿಗೂಢ ಈಗ ಗೂಢವಾಗಿ ಉಳಿದಿಲ್ಲ, ಕೊನೆಗೂ ಬರ್ಮುಡಾ ಟ್ರೈಯಾಂಗಲ್‍ನ ರಹಸ್ಯ ಬಯಲಾಗಿದೆ’ ಎಂಬಂತಹ ಶೀರ್ಷಿಕೆಗಳನ್ನು ಸುದ್ದಿಮಾಧ್ಯಮಗಳು ಕೊಡುತ್ತಲೇ ಬಂದಿವೆ. ಜಗತ್ತಿಗೆ ಬೇಕಿರುವುದು ರೋಚಕದ ಸಂಗತಿಗಳು, ವಿಸ್ಮಯಗಳು. ಉಳಿದವನ್ನೆಲ್ಲ ಜಗತ್ತು `ನೂಕಾಚೆ ದೂರ’ ಎನ್ನುತ್ತದೆ.

Leave a Reply