ನಾಲ್ಕು ಪಾಕ್ ಸೇನಾ ತುಕಡಿಗಳನ್ನು ಉಡಾಯಿಸಿ ದೀಪಾವಳಿ ಆಚರಿಸಿದ ಭಾರತೀಯ ಸೇನೆ, ಹುತಾತ್ಮ ಯೋಧ ಮಂದೀಪ್ ಸಿಂಗ್ ಗೆ ಅಂತಿಮ ನಮನ

ಪಾಕಿಸ್ತಾನದ ನುಸುಳುಕೋರರ ದಾಳಿಯಲ್ಲಿ ಹುತಾತ್ಮರಾದ ಸಿಪಾಯಿ ಮಂದೀಪ್ ಸಿಂಗ್ ಅವರಿಗೆ ಅಂತಿಮ ಗೌರವ ಸಲ್ಲಿಸಿದ ಸೇನಾ ಅಧಿಕಾರಿಗಳು… (ಟ್ವಿಟರ್ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ದೇಶದೆಲ್ಲೆಡೆ ಜನರು ದೀಪಗಳನ್ನು ಹಚ್ಚಿ ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಆತ್ತ ಭಾರತದ ಗಡಿಯಲ್ಲಿ ನಮ್ಮ ಯೋಧರು ಪಾಕ್ ಸೇನಾ ತುಕಡಿಗಳನ್ನು ಸಿಡಿಸಿ ಪ್ರತಿಕಾರದ ಮೂಲಕ ಆಕ್ರೋಶದಿಂದ ದೀಪಾವಳಿ ಆಚರಿಸಿದ್ದಾರೆ.

ಶುಕ್ರವಾರ ಭಾರತದ ಗಡಿಯೊಳಗೆ ನುಗ್ಗಿದ ನುಸುಳುಕೋರರು ಭಾರತೀಯ ಸೇನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಸಿಪಾಯಿ ಮಂದೀಪ್ ಸಿಂಗ್ ಹುತಾತ್ಮರಾಗಿದ್ದರು. ನಮ್ಮ ಯೋಧನೊಬ್ಬನನ್ನು ಕೊಂದ ನುಸುಳುಕೋರರು ಪಾಕಿಸ್ತಾನ ಸೆನೆಯ ಗುಂಡಿನ ದಾಳಿಯ ರಕ್ಷಣೆಯಲ್ಲಿ ತಪ್ಪಿಸಿಕೊಂಡಿದ್ದರು. ಇದರಿಂದ ಪೆಟ್ಟು ತಿಂದ ಹುಲಿಯಂತಾಗಿದ್ದ ಭಾರತೀಯ ಸೇನೆ ಶನಿವಾರ ಪಾಕಿಸ್ತಾನದಲ್ಲಿನ ನಾಲ್ಕು ಸೇನಾ ತುಕಡಿಗಳನ್ನು ಚಿಂದಿ ಉಡಾಯಿಸಿದ್ದಾರೆ. ಆ ಮೂಲಕ ನಮ್ಮ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. ಮೂಲಗಳ ಪ್ರಕಾರ ಭಾರತೀಯ ಸೇನೆಯ ಕೊಟ್ಟಿರುವ ಏಟಿಗೆ ಪಾಕಿಸ್ತಾನದ ಹಲವು ಸೈನಿಕರು ಸತ್ತಿದ್ದಾರೆ.

‘ಜಮ್ಮುವಿನ ಕೀರನ್ ಪ್ರದೇಶ ಮತ್ತು ಕಾಶ್ಮೀರದ ಕುಪ್ವಾರ ಪ್ರದೇಶಗಳಲ್ಲಿ ಭಾರತೀಯ ಸೇನೆ ಪ್ರಬಲ ಗುಂಡಿನ ದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದ ಹಾನಿಯಾಗಿದೆ’ ಎಂದು ಉತ್ತರ ಭಾಗದ ಸೇನಾ ಕಮಾಂಡರ್ ಮಾಹಿತಿ ನೀಡಿದ್ದಾರೆ.

ಇತ್ತ ಹುತಾತ್ಮ ಯೋಧ ಮಂದೀಪ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಅವರ ತವರೂರು ಹರ್ಯಾಣ ರಾಜ್ಯದ ಕುರುಕ್ಷೇತ್ರದ ಅಂತಹೆಡಿಗೆ ಭಾನುವಾರ ತರಲಾಯಿತು. ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಮಂದಿ ಆಗಮಿಸಿದ್ದರಲ್ಲದೇ, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಈ ಕ್ರಮವನ್ನು ಖಂಡಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಇನ್ನು ಕಳೆದ ಒಂದು ತಿಂಗಳಿನಿಂದ ಗಡಿಯಲ್ಲಿ ನಿರಂತರವಾಗಿ ಪಾಕಿಸ್ತಾನ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬವನ್ನು ಪಾಕ್ ಸೈನಿಕರೊಂದಿಗೆ ಆಚರಿಸದಿರಲು ಭಾರತೀಯ ಸೇನೆ ನಿರ್ಧರಿಸಿದೆ. ಪ್ರತಿ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಪಾಕಿಸ್ತಾನ ಯೋಧರಿಗೆ ಸಿಹಿ ಹಂಚಿ ಹಬ್ಬ ಆಚರಿಸುತ್ತಿದ್ದರು. ಆದರೆ, ಈ ಬಾರಿ ಭಾರತೀಯ ಸೇನೆ ಪಾಕ್ ಯೋಧರಿಗೆ ಸಿಹಿ ಹಂಚದಿರಲು ನಿರ್ಧರಿಸಿದ್ದಾರೆ.

Leave a Reply