ಸೈನಿಕರೊಂದಿಗೆ ಮೋದಿ ದೀಪಾವಳಿ, ಆರೆಸ್ಸೆಸ್ ಅನ್ನು ಏನು ಮಾಡ್ಬೇಕು ಅಂತಾ ಕೇಳಿದ್ರು ಸಿಎಂ, ರಣಜಿಯಲ್ಲಿ ರಾಜ್ಯ ತಂಡಕ್ಕೆ ಭರ್ಜರಿ ಜಯ, ಕುಪ್ವಾರದಲ್ಲಿ ಮುಂದುವರಿದ ಭಾರತೀಯ ಸೇನಾ ಕಾರ್ಯಾಚರಣೆ

ಡಿಜಿಟಲ್ ಕನ್ನಡ ಟೀಮ್:

ಭಾರತ- ಚೀನಾ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ ಮೋದಿ

ಹಿಮಾಚಲ ಪ್ರದೇಶದಲ್ಲಿರುವ ಭಾರತ- ಚೀನಾ ಗಡಿಯ ಕಿನ್ನೌರ್ ಮತ್ತು ಲಹೌಲ್ ಸ್ಪಿತಿ ಪ್ರದೇಶದಲ್ಲಿ ದೊಗ್ರಾ ಸ್ಕೌಟ್ಸ್ ಯೋಧರ ಜತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೀಪಾವಳಿ ಹಬ್ಬ ಆಚರಿಸಿದ್ರು. ಈ ವೇಳೆ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಗಡಿಯಲ್ಲಿ ನೀವು ದೇಶ ಕಾಯುತ್ತಿರುವುದರಿಂದಲೇ ಜನರು ರಾತ್ರಿ ವೇಳೆ ನೆಮ್ಮದಿಯಾಗಿ ಮಲಗಿದ್ದಾರೆ. ಗಡಿಯಲ್ಲಿ ನೀವಿಲ್ಲದಿದ್ದರೆ ಜನರು ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.

ಆರೆಸ್ಸೆಸನ್ನು ಏನು ಮಾಡ್ಬೇಕು? ಸಿಎಂ ಪ್ರಶ್ನೆ

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಹಿನ್ನೆಲೆಯಲ್ಲಿ ಪಿಎಫ್ಐ ಸಂಘಟನೆ ನಿಷೇಧ ಮಾಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರೋ ಸಿಎಂ ಸಿದ್ದರಾಮಯ್ಯ, ‘ಆರೆಸ್ಸೆಸ್ ಸಂಘಟನೆಯನ್ನು ಏನು ಮಾಡಬೇಕು?’ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಂದರ್ಭದಲ್ಲಿ ‘ಆರೆಸ್ಸೆಸ್ ಕೂಡ ಇಂತಹುದೇ ಕೆಲಸ ಮಾಡುತ್ತಿದೆ ಹೀಗಾಗಿ ಆ ಸಂಘಟನೆಯನ್ನು ಏನು ಮಾಡಬೇಕು’ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಸಿಎಂ, ‘ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕೇಂದ್ರ ಸಚಿವ ಸದಾನಂದ ಗೌಡರು ಸಹ ಈ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಈ ಕಾಮಗಾರಿಯನ್ನು ಟೆಂಡರ್ ಮೂಲಕ ಗ್ಲೋಬಲ್ ಕಂಪನಿಗೆ ನೀಡಿದ್ದು, ಎಲ್ಲಾ ವಿಚಾರಗಳು ಪಾರದರ್ಶಕವಾಗಿವೆ.’

ಅಲ್ಲದೆ ಕಳೆದ ವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ ಎಂದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷ ತೊರೆದಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಯಾವ ಪಕ್ಷಕ್ಕೆ ಸೇರಿದರೂ ನನಗೆ ಸಂಬಂಧ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ರಣಜಿ ಪಂದ್ಯ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ಕರ್ನಾಟಕ ಕ್ರಿಕೆಟ್ ತಂಡ ರಣಜಿ ಟೂರ್ನಿಯಲ್ಲಿ ತನ್ನ ಗೆಲವಿನ ಓಟ ಮುಂದುವರಿಸಿದೆ. ಬಿ ಗುಂಪಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಸಂಘಟಿತ ದಾಳಿ ನಡೆಸಿದ ಕರ್ನಾಟಕ ತಂಡ 10 ವಿಕೆಟ್ ಗಳ ಅಂತರದಲ್ಲಿ ಜಯ ಸಾಧಿಸಿತು. ಅದರೊಂದಿಗೆ 3 ಪಂದ್ಯಗಳಿಂದ 17 ಅಂಕ ಗಳಿಸಿದ ಕರ್ನಾಟಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಸ್ಸಾಂ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 325 ರನ್ ಗಳಿಗೆ ಆಲೌಟ್ ಮಾಡಿದ್ದ ಕರ್ನಾಟಕ ತನ್ನ ಬ್ಯಾಟಿಂಗ್ ವೇಳೆ 570 ರನ್ ಕಲೆ ಹಾಕಿ 245 ರನ್ ಮುನ್ನಡೆ ಸಾಧಿಸಿತ್ತು. ಅಸ್ಸಾಂ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ 264 ರನ್ ಗಳಿಗೆ ಆಲೌಟ್ ಮಾಡಿದ ರಾಜ್ಯ ತಂಡ 20 ರನ್ ಗಳ ಅಲ್ಪ ಗುರಿ ಪಡೆಯಿತು. ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದ ಕರ್ನಾಟಕ 1 ಬೋನಸ್ ಅಂಕ ಸೇರಿದಂತೆ 7 ಪಾಯಿಂಟ್ ಪಡೆಯಿತು. ನವೆಂಬರ್ 5ರಿಂದ ಆರಂಭವಾಗಲಿರುವ ಮುಂದಿನ ಪಂದ್ಯದಲ್ಲಿ ರಾಜ್ಯ ತಂಡ ವಿದರ್ಭ ವಿರುದ್ಧ ಸೆಣಸಲಿದೆ.

ಕುಪ್ವಾರದಲ್ಲಿ ಮುಂದುವರಿದ ಯೋಧರ ಕಾರ್ಯಾಚರಣೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರ ಬೇಟೆಗೆ ಭಾರತೀಯ ಸೇನೆ ತನ್ನ ಕಾರ್ಯಾಚರಣೆ ಮುಂದುವರಿಸಿದೆ. ಈ ವೇಳೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಮಾಧ್ಯಮಗಳ ವರದಿಯಲ್ಲಿ ತಿಳಿಸಲಾಗಿದೆ.

Leave a Reply