ಚೀನಾ ಪಟಾಕಿ ವಿರುದ್ಧವಷ್ಟೇ ಭಾರತೀಯರ ಗುಟುರು, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುರಿಯಲಾಗದು ಚೀನಾ ಪೊಗರು!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪಾರುಪತ್ಯ ಹೆಚ್ಚುತ್ತಿದೆ. ಆಪಲ್, ಸ್ಯಾಮ್ ಸಂಗ್ ನಂತಹ ಖ್ಯಾತ ಬ್ರ್ಯಾಂಡ್ ಗಳನ್ನು ಮಂಕಾಗಿಸಿವೆ ಚೀನಾದ ವಿವೊ, ಒಪ್ಪೊ ಮತ್ತು ಹ್ಯುವೈ ಸ್ಮಾರ್ಟ್ ಫೋನ್ ಕಂಪನಿಗಳು. ಈ ಮೂರು ಕಂಪನಿಗಳು ಜುಲೈನಿಂದ ಸೆಪ್ಟೆಂಬರ್ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇಕಡಾವಾರು ಸರಬರಾಜಿನಲ್ಲಿ ಭರ್ಜರಿ ಯಶಸ್ಸು ಕಂಡಿವೆ. ಚೀನಾ ಸ್ಮಾರ್ಟ್ ಫೋನ್ ಕಂಪನಿಗಳ ಈ ಯಶಸ್ಸನಲ್ಲಿ ಭಾರತೀಯ ಮಾರುಕಟ್ಟೆ ಪ್ರಮುಖ ವೇದಿಕೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸಂಗತಿ.

ಸದ್ಯ ದೇಶದಲ್ಲಿ ಚೀನಾ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಆ ಮೂಲಕ ಭಾರತದ ವಿರುದ್ಧ ಪ್ರತಿ ವಿಷಯದಲ್ಲೂ ತಕರಾರು ತೆಗೆಯುತ್ತಿರುವ ಚೀನಾಕ್ಕೆ ಪಾಠ ಕಲಿಸಬೇಕು ಎಂಬೆಲ್ಲಾ ವಾದಗಳು ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ. ಅದಕ್ಕೆ ಪೂರಕವಾಗಿ ಚೀನಾ ಮೂಲದ ದೀಪಗಳು, ವಿದ್ಯುತ್ ಉಪಕರಣಗಳು, ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡಿದ್ದರೂ ಚೀನಾ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಹಾಟ್ ಫೇವರಿಟ್ ಎನ್ನುವುದು ಮತ್ತೆ ಸಾಬೀತಾಗಿದೆ. ಹ್ಯುವೈ, ಒಪ್ಪೊ ಮತ್ತು ವಿವೊ ಕಂಪನಿಗಳು ಕಳೆದ ತ್ರೈಮಾಸಿಕದಲ್ಲಿ ಕ್ರಮವಾಗಿ ಶೇ.91, 73 ಮತ್ತು 90 ರಷ್ಟು ಆದಾಯವನ್ನು ಹೆಚ್ಚಿಸಿಕೊಂಡಿದೆ. ಈ ಕಂಪನಿಗಳಿಗೆ ಚೀನಾ ಮತ್ತು ಭಾರತದ ಮಾರುಕಟ್ಟೆಯಿಂದಲೇ ಶೇ.90 ರಷ್ಟು ಆದಾಯ ಬಂದಿರುವುದು ಗಮನಿಸಬೇಕಾದ ಅಂಶ.

ಈ ಮೂರು ಕಂಪನಿಗಳು ಕೇವಲ ವಿಶ್ವದ ಇತರೆ ಬ್ರ್ಯಾಂಡ್ ಗಳನ್ನು ಮಾತ್ರವಲ್ಲದೇ ಚೀನಾದ ಖ್ಯಾತ ಬ್ರ್ಯಾಂಡ್ ಕ್ಷಿಯೋಮಿಯನ್ನು ಹಿಂದಿಕ್ಕಿವೆ. ತನ್ನ ಸರಕು ಮಾರಾಟದ ಶೇಕಡಾವಾರು ಪ್ರಗತಿಯಲ್ಲಿ ವಿವೊ ಭರ್ಜರಿ ಯಶಸ್ಸು ಕಂಡಿದೆ. ಪ್ರಸಕ್ತ ಸಾಲಿನ ಮೂರನೇ ತ್ರೈ ಮಾಸಿಕ ಅವಧಿಯಲ್ಲಿ ವಿವೊ ಶೇ.116 ರಷ್ಟು ಹೆಚ್ಚಳ ಕಂಡಿದ್ದರೆ, ಒಪ್ಪೊ ಶೇ.100, ಹ್ಯೂವೈ ಶೇ.22.6 ರಷ್ಟು ಹೆಚ್ಚಳ ಕಂಡಿವೆ. ಇನ್ನು ಪ್ರಮುಖ ಬ್ರ್ಯಾಂಡ್ ಗಳಾದ ಆಪಲ್ ಶೇ.5.2, ಸ್ಯಾಮ್ ಸಂಗ್ ಶೇ.9.5 ರಷ್ಟು ಕುಸಿತ ಕಂಡಿದೆ. ಇನ್ನು ಕ್ಷಿಯೋಮಿ ಶೇ.12.1 ರಷ್ಟು ಕುಸಿತ ಕಂಡಿದೆ.

ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳು ನಿಯಂತ್ರಣ ಹೊಂದುತ್ತಿರುವುದು ಸಾಬೀತಾಗಿದ್ದು, ಭಾರತದಲ್ಲೂ ಚೀನಾ ಸ್ಮಾರ್ಟ್ ಫೋನ್ ಗಳ ಪ್ರಭಾವ ಹೆಚ್ಚಿದೆ. ಭಾರತದಲ್ಲಿ ಚೀನಾದ ಇತರೆ ಉತ್ಪನ್ನಗಳ ಮೇಲಿನ ಅವಲಂಬನೆಯಿಂದ ಹೊರ ಬರುವ ಪ್ರಯತ್ನ ನಡೆಯುತ್ತಿದ್ದರೂ ಚೀನಾ ಸ್ಮಾರ್ಟ್ ಫೋನ್ ಗಳಿಗೆ ಈ ಬಿಸಿ ಯಾವುದೇ ರೀತಿ ತಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ.

Leave a Reply