ಭೋಪಾಲ ಜೈಲಿಂದ ಪರಾರಿಯಾದ 8 ಸಿಮಿ ಉಗ್ರರನ್ನು ಕೆಲವೇ ತಾಸುಗಳಲ್ಲಿ ಹುಡುಕಿ ಹೊಡೆಯಿತು ವಿಶೇಷ ಭಯೋತ್ಪಾದನಾ ನಿಗ್ರಹ ಪಡೆ

ಡಿಜಿಟಲ್ ಕನ್ನಡ ಟೀಮ್:

ಭೋಪಾಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ ನಿಷೇಧಿತ ಸಿಮಿ ಸಂಘಟನೆಯ 8 ಉಗ್ರರನ್ನು ವಿಶೇಷ ಭಯೋತ್ಪಾದನಾ ನಿಗ್ರಹ ದಳ ಎನ್ ಕೌಂಟರ್ ಮಾಡುವ ಮೂಲಕ ಹೊಡೆದುಹಾಕಿದೆ. ಈ ಮೂಲಕ, ನಮ್ಮಿಂದ ತಪ್ಪಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗಲಾರಿರಿ ಎಂಬ ಸಂದೇಶವನ್ನು ದುಷ್ಟಕೂಟಕ್ಕೆ ರವಾನಿಸಿದಂತಾಗಿದೆ.

ಭಾನುವಾರ ರಾತ್ರಿ ಭೋಪಾಲ ಜೈಲಿನ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಈ ಉಗ್ರರು ತಪ್ಪಿಸಿಕೊಳ್ಳುತ್ತಿದ್ದಂತೆ ದೇಶದಾದ್ಯಂತ ಎಚ್ಚರ ವಹಿಸಲಾಗಿತ್ತು. ಬೆಳಗಿನ ಜಾವ 2 ರಿಂದ 3 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿನ್ನು ಹತ್ಯೆ ಮಾಡಿದ ಉಗ್ರರು, ಹಾಸಿಗೆ ಹೊದಿಕೆಯನ್ನು ಬಳಸಿಕೊಂಡು ಜೈಲಿನ ಎತ್ತರದ ಗೋಡೆಯನ್ನು ಹಾರಿ ಪರಾರಿಯಾಗಿದ್ದರು. ಹೀಗೆ ಉಗ್ರರು ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನ ಭದ್ರತಾ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸಿಮಿ ಸಂಘಟನೆಯ ಉಗ್ರರು ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಇದೇ ಮೊದಲಲ್ಲ. 2013ರಲ್ಲೂ ಇದೇ ರೀತಿ ಸಿಮಿ ಸಂಘಟನೆಯ 7 ಉಗ್ರರು ಮಧ್ಯಪ್ರದೇಶದ ಖಂದ್ವಾ ಜೈಲಿನಿಂದ ಪರಾರಿಯಾಗಿದ್ದರು. ಈ ಬಾರಿ ಅಂಜದ್, ಜಾಕಿರ್ ಹುಸೇನ್ ಸಾದಿಕ್, ಮೊಹಮದ್ ಸಾಲಿಕ್, ಮುಜೀಬ್ ಶೇಖ್, ಮೊಹಬೂದ್ ಗುಡ್ಡು, ಮೊಹಮದ್ ಖಲೀದ್ ಅಹ್ಮದ್, ಅಕ್ವೀಲ್ ಮತ್ತು ಮಾಜಿದ್ ಜೈಲಿನಿಂದ ಪರಾರಿಯಾದ ಉಗ್ರರು. ಇವರನ್ನು ವಿಚಾರಣೆ ಹಂತದಲ್ಲಿದ್ದ ಉಗ್ರರು ಎಂದು ಹೇಳಲಾಗಿದೆ. ಇವರು ತಪ್ಪಿಸಿಕೊಳ್ಳುತ್ತಿದ್ದಂತೆ ಮಧ್ಯ ಪ್ರದೇಶ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸುವ ಜತೆಗೆ ಗೃಹ ಸಚಿವ ಭೂಪೇಂದ್ರ ಸಿಂಗ್ ಈ ಎಂಟು ಉಗ್ರರನ್ನು ಹಿಡಿದುಕೊಟ್ಟವರಿಗೆ ತಲಾ ₹ 5 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು.

ಪರಾರಿಯಾದ ಉಗ್ರರ ಶೋಧ ಕಾರ್ಯ ಆರಂಭಿಸಿದ ವಿಶೇಷ ಭಯೋತ್ಪಾದಕ ನಿಗ್ರಹ ಪಡೆ ಭೋಪಾಲದ ಹೊರ ವಲಯದಲ್ಲಿರುವ ಎಂತಖೆಡಿ ಗ್ರಾಮದಲ್ಲಿ ಇವರನ್ನು ಯಶಸ್ವಿಯಾಗಿ ಬೇಟೆಯಾಡಿದ್ದಾರೆ. ಈ ಉಗ್ರರನ್ನು ಹತ್ಯೆ ಮಾಡಲಾಗಿದ್ದರೂ ಮಧ್ಯಪ್ರದೇಶದ ಗಡಿ ಹಾಗೂ ನೆರೆ ರಾಜ್ಯಗಳಲ್ಲಿ ಎಚ್ಚರಿಕೆ ಮುಂದುವರಿಸಬೇಕು ಎಂದು ಸೂಚನೆ ರವಾನಿಸಲಾಗಿದೆ. ಇನ್ನು ಕೇಂದ್ರ ಭದ್ರತಾ ಅಧಿಕಾರಿಗಳು ರಾಜ್ಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ.

Leave a Reply