ಜಗತ್ತಿನ ಎಲ್ಲಾ ದೇಶಗಳ ಹಣದ ಮೌಲ್ಯ ಬೇರೆ ಬೇರೆ ಏಕೆ? ಒಂದು ಅಮೆರಿಕನ್ ಡಾಲರಿಗೆ ನಾವೇಕೆ ಒಂದೇ ರುಪಾಯಿ ತೆರಬಾರದು?

hana class


authors-rangaswamyಇದು ಅತ್ಯಂತ ಸಾಮಾನ್ಯವಾಗಿ ಉದ್ಭವವಾಗುವ ಪ್ರಶ್ನೆ. ಅಮೆರಿಕದ ಒಂದು ಡಾಲರ್ ಗೆ  ಭಾರತದ 65 ರೂಪಾಯಿ ಸಮ ಏಕೆ? ಅಂತೆಯೇ ಜಗತ್ತಿನ ವಿವಿಧ ದೇಶಗಳ ಹಣದ ವಿರುದ್ಧ ಮೌಲ್ಯದಲ್ಲಿ ಬದಲಾವಣೆ ಏಕೆ ಎನ್ನುವುದು ಎಲ್ಲರನ್ನು ಒಂದಲ್ಲ ಒಂದು ಬಾರಿ ಕಾಡಿರುತ್ತದೆ.

ಇದಕ್ಕೆ ತೀರಾ ಸಾಮಾನ್ಯ ಉತ್ತರವೆಂದರೆ ಜಗತ್ತಿಗೆಲ್ಲಾ ಒಂದೇ ವಿನಿಮಯ ಮಾಧ್ಯಮ ಇರಲು ಸಾಧ್ಯವಿಲ್ಲ ಎನ್ನುವುದು ತಿಳಿದಿದೆ ಅಲ್ಲವೇ? ಹಾಗೆಂದ ಮೇಲೆ ಒಂದಕ್ಕಿಂತ ಇನ್ನೊಂದು ಉತ್ತಮವೂ ಅಧಮವೂ ಆಗಿರಲೇಬೇಕಲ್ಲವೇ? ಹೀಗಾಗಿ ಜಗತ್ತಿನ ಎಲ್ಲ ದೇಶಗಳ ವಿನಿಮಯ ಮೌಲ್ಯ ಒಂದೇ ಆಗಿರಲು ಸಾಧ್ಯವಿಲ್ಲ. ಆಯ್ತು ಚೂರು ವ್ಯತ್ಯಾಸ ಅರ್ಥವಾಗುವ ವಿಷಯ ಆದರೆ ಒಂದು ಡಾಲರ್ 65 ಯಾವ ಲೆಕ್ಕದಲ್ಲಿ ?  ಅನ್ನುವ ಪ್ರಶ್ನೆಗೆ ಉತ್ತರ ಹೀಗಿದೆ..

ಒಂದು ಕರೆನ್ಸಿಯ ಮೌಲ್ಯ ನಿರ್ಧಾರ ಮಾಡುವರು ಅದರ ಖರೀದಿದಾರರು. ಮಾರುವರ ಸಂಖ್ಯೆ ಕಡಿಮೆ ಇದ್ದು ಖರೀದಿಸುವರ ಸಂಖ್ಯೆ ಹೆಚ್ಚಿದ್ದರೆ ಸಹಜವಾಗಿ ಆ ಕರೆನ್ಸಿಯ ಮೌಲ್ಯ ಹೆಚ್ಚಾಗುತ್ತದೆ. ಜೊತೆ ಜೊತೆಗೆ ನಂಬಿಕೆ ಮತ್ತು ನಿಗದಿತ ಕರೆನ್ಸಿ ಮೇಲೆ ಬಳಕೆದಾರರ ಒಟ್ಟು ವಿಶ್ವಾಸ (ಕಲೆಕ್ಟಿವ್ ಟ್ರಸ್ಟ್ ) ಆ ಕರೆನ್ಸಿ ಮೌಲ್ಯ ನಿರ್ಧಾರಮಾಡುತ್ತದೆ. ಅಮೆರಿಕ ಎಂದ ತಕ್ಷಣ ಆರ್ಥಿಕವಾಗಿ ಸಬಲ ಎನ್ನುವ ನಂಬಿಕೆ ಡಾಲರ್ ಅನ್ನು ಇಂದಿನ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅರವತೈದು ಏಕೆ? ನೂರು ಏಕಿಲ್ಲ? ಅಥವಾ ಒಂದು ಡಾಲರ್ ಒಂದು ರೂಪಾಯಿ ಏಕೆ ಆಗಬಾರದು ಎನ್ನುವ ಪ್ರಶ್ನೆಗೆ ನಮ್ಮ ದೈನಂದಿನ ಜೀವನದಲ್ಲಿ ಕಾಣುವ ಒಂದು ಉದಾಹರಣೆ ನೋಡೋಣ.

ಒಂದು ಸಂತೆಯಲ್ಲಿ ಇಪ್ಪತೈದು ವ್ಯಾಪಾರಿಗಳು ಇದ್ದಾರೆ ಎಂದು ಕೊಳ್ಳಿ. ಕ್ರಮವಾಗಿ ಭಾರತ, ಅಮೆರಿಕ, ಚೀನಾ, ಜಪಾನ್… ಅವರ ಹೆಸರು ಎಂದಿಟ್ಟುಕೊಳ್ಳಿ. ಭಾರತ ಹೆಸರಿನ ವ್ಯಾಪಾರಿಗೆ ಹಣದ ಅವಶ್ಯಕತೆ ಹೆಚ್ಚಾಗಿದೆ. ಒಂದು ಡಾಲರ್ ಗೆ ಹತ್ತು ಕಟ್ಟು ಸೊಪ್ಪು ಕೊಡಲು ಅವನು ಸಿದ್ಧ. ಜಪಾನ್ ಗೆ ಹಣದ ಒತ್ತಡವಿಲ್ಲ ಒಂದು ಡಾಲರ್ಗೆ ಐದೇ ಕಟ್ಟು ಬೇಕಾದರೆ ಕೊಳ್ಳಬಹುದು ಇಲ್ಲವೇ ಬಿಡಬಹುದು ಎನ್ನುವುದು ಆತನ ವಾದ. ಈಗ ಹೇಳಿ ನಿಮ್ಮ ಮೌಲ್ಯ ಕುಸಿತಕ್ಕೆ ಕಾರಣ ಯಾರು? ಖರೀದಿಗಾರ ಹತ್ತು ಕಟ್ಟಿನ ಬದಲು ಇಪ್ಪತ್ತು ಕೇಳಬಹುದು. ನೀವು ಕೊಡುವಿರಾ? ಇಲ್ಲ ಅಲ್ಲವೇ .., ಸೇಮ್ ಲಾಜಿಕ್ ಇಲ್ಲಿಯೂ ಲಾಗೂ ಆಗುತ್ತೆ. ಹಾಗಾಗಿ ಒಂದು ಡಾಲರ್ ಇದ್ದಕಿದ್ದ ಹಾಗೆ ನೂರು ರೂಪಾಯಿ ಆಗಲು  ಸಾಧ್ಯವಿಲ್ಲ. ಹಾಗೆಯೇ ಒಂದು ರುಪಾಯಿಗೆ ಸಮವಾಗಲು ಸಾಧ್ಯವಿಲ್ಲ. ಎಲ್ಲಕ್ಕೂ ಸಮಯ ಹಿಡಿಯುತ್ತದೆ. ಇದೊಂದೇ ಕಾರಣ ಆಗಿದ್ದರೆ ಹಾಗೂ ಹೀಗೂ ಹತ್ತು ವರ್ಷದಲ್ಲಿ ಒಂದು ರೂಪಾಯಿ ಒಂದು ಡಾಲರ್ಗೆ ಸಮ ಎನ್ನುವ ಸ್ಥಿತಿ ತರಲು ಹೆಣಗಬಹುದಿತ್ತು. ಇದಕ್ಕೂ ಮೀರಿದ್ದು  ನಂಬಿಕೆ. ಜಗತ್ತಿನ ಜನರ ನಮ್ಮ ಕರೆನ್ಸಿ ಮೇಲೆ ನಂಬಿಕೆ ತರುವುದು ಹೇಗೆ? ಇವತ್ತು ಡಾಲರ್ ಜಗತ್ತಿನ ವಿನಿಮಯ ಮಾಧ್ಯಮವಾಗಿರುವುದಕ್ಕೆ ಮುಖ್ಯ ಕಾರಣ ಜಗತ್ತಿನ ಜನ ಡಾಲರ್ ಮೇಲಿಟ್ಟಿರುವ ನಂಬಿಕೆ.

ಇಲ್ಲಿ ಮುಖ್ಯವಾಗಿ ಒಂದು ವಿಷಯ ಹೇಳಬೇಕು ವಿನಿಮಯ ದರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬೇರೆ ಇದ್ದ ಮಾತ್ರಕ್ಕೆ ಆ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲು ಬರುವುದಿಲ್ಲ. ಉದಾಹರಣೆ ನೋಡಿ ಒಂದು ಡಾಲರ್ 101 ಜಪಾನೀ ಯೇನ್ ಗೆ ಸಮ. ಅದೇ ಒಂದು ಡಾಲರ್ ಭಾರತದ 65 ರುಪಾಯಿಗೆ ಸಮ. ಅಂದರೆ  ಭಾರತ ಜಪಾನ್ ಗಿಂತ ಆರ್ಥಿಕವಾಗಿ ಪ್ರಬಲವೇ? ಅಲ್ಲವೇ ಅಲ್ಲ. ಹಾಗೆಯೇ ಇನ್ನೊಂದು ಉದಾಹರಣೆ ನೋಡಿ ಒಂದು ಬಾಂಗ್ಲಾದೇಶಿ ಟಾಕಾ 1.28 ಜಪಾನೀ ಯೇನ್ ಸಮ. ಅಂದರೆ ಜಪಾನ್ ಮತ್ತು ಬಾಂಗ್ಲಾದೇಶ ಸಮವೇ ?  ಆಂತರಿಕ ಕೊಳ್ಳುವಿಕೆಯ ಶಕ್ತಿ ಇಲ್ಲಿ ಕೆಲಸ ಮಾಡುತ್ತದೆ.

ಇಂದಿನ ದಿನದಲ್ಲಿ ಒಂದು ಡಾಲರ್ 65 ಇದ್ದದ್ದು ಅಚಾನಕ್ಕಾಗಿ 50ಕ್ಕೆ ಬಂದರೆ ಅದು ಭಾರತದ ಉತ್ತಮ ಆರ್ಥಿಕತೆಯ ಸಂಕೇತ ಎಂದು ಕೊಂಡರೆ ಅದು ತಪ್ಪಾಗುತ್ತೆ. ಭಾರತದ ಆರ್ಥಿಕತೆ ಕುಸಿತ ಕಂಡು ದಶಕಗಳು ಕಳೆದರೂ ಮೇಲೇರಲು ಆಗದು. ಇದೊಂದು ಕ್ಲಿಷ್ಟ ವ್ಯವಸ್ಥೆ , ತೆಳುವಾದ ದಾರದ ಮೇಲೆ ನೆಡೆದಂತೆ. ಹೀಗಾಗಿ ಒಮ್ಮೆಲೇ ಏರುಪೇರು ಮಾಡಲುಬಾರದು.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

4 COMMENTS

Leave a Reply