10 ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರಿಗೆ ಕೇಂದ್ರದ ಒಪ್ಪಿಗೆ, ಜಾಕೀರ್ ನಾಯಕ್ ಎನ್ಜಿಒದ ವಿದೇಶಿ ದೇಣಿಗೆಗೆ ಅಂಕುಶ, ಪಾಕ್ ಪ್ರಧಾನಿ ಶರೀಫ್ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ, ಟೈಮ್ಸ್ ನೌನಿಂದ ಅರ್ನಾಬ್ ಗೋಸ್ವಾಮಿ ನಿರ್ಗಮನ

ಡಿಜಿಟಲ್ ಕನ್ನಡ ಟೀಮ್:

ಕೊನೆಗೂ ಹೈಕೋರ್ಟ್ 10 ನ್ಯಾಯಾಧೀಶರ ನೇಮಕ

ಹೈಕೋರ್ಟ್ ನ್ಯಾಯಾಧೀಶರ ನೇಮಕ ವಿಳಂಬಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡ ನಂತರ ಇದೀಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಪರಿಣಾಮ 10 ನ್ಯಾಯಾಧೀಶರ ನೇಮಕವಾಗಿದ್ದು, ಈ ನ್ಯಾಯಾಧೀಶರ ಹೆಸರಿಗೆ ಒಪ್ಪಿಗೆ ಸೂಚಿಸಿ ರಾಷ್ಟ್ರಪತಿಯವರ ಒಪ್ಪಿಗೆಗೆ ಕಳುಹಿಸಲಾಗಿದೆ. ಹಲವು ತಿಂಗಳಿನಿಂದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಪದೇ ಪದೇ ಕೇಂದ್ರ ಸರ್ಕಾರವನ್ನು ಈ ವಿಚಾರವಾಗಿ ತರಾಟೆ ತೆಗೆದುಕೊಳ್ಳುತ್ತಲೇ ಬಂದಿದ್ದರು. ಕಳೆದ ಶುಕ್ರವಾರವಷ್ಟೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಜಾಡಿಸಿ, ‘ಇಡೀ ನ್ಯಾಯಾಂಗ ವ್ಯವಸ್ಥೆಗೆ ಬೀಗ ಹಾಕಲು ತಯಾರಿ ನಡೆಸುತ್ತಿದ್ದೀರಾ’ ಎಂದು ಪ್ರಶ್ನಿಸಿತ್ತು. ಕೇಂದ್ರಕ್ಕೆ ಸುಪ್ರೀಂನ ಮಾತಿನ ಬಿಸಿ ಮುಟ್ಟಿದ್ದು, ಸೋಮವಾರ ದೆಹಲಿ ಮತ್ತು ಗುವಾಹಟಿ ಹೈ ಕೋರ್ಟ್ ಗಳಿಗೆ ನ್ಯಾಯಾಧೀಶರ ಹೆಸರನ್ನು ಸೂಚಿಸಿದೆ.

ಜಾಕೀರ್ ನಾಯಕ್ ಎನ್ಜಿಒಗಿಲ್ಲ ವಿದೇಶಿ ದೇಣಿಗೆ

ವಿವಾದಾತ್ಮಕ ಇಸ್ಲಾಂ ಬೋಧಕ ಜಾಕೀರ್ ನಾಯಕ್ ಅವರ ಎನ್ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸಂಸ್ಥೆಗೆ ಇನ್ನು ಮುಂದೆ ವಿದೇಶಿ ದೇಣಿಗೆ ಬಾರದಂತೆ ನಿಷೇಧ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ಎಫ್ ಸಿ ಆರ್ ಎ ನೋಂದಣಿಯನ್ನು ರದ್ದು ಮಾಡಲು ಮುಂದಾಗಿದೆ. ಜತೆಗೆ ಇದೇ ಸಂಸ್ಥೆಯ ಅಂಗವಾಗಿರುವ ಐ ಆರ್ ಎಫ್ ಶೈಕ್ಷಣಿಕ ಟ್ರಸ್ಟಿಗೂ ನಿರ್ಬಂಧ ಹಾಕಲಾಗಿದ್ದು, ಈ ಸಂಸ್ಥೆ ಇನ್ನು ಮುಂದೆ ಕೇಂದ್ರದ ಅನುಮತಿ ಇಲ್ಲದೆ ವಿದೇಶದಿಂದ ದೇಣಿಗೆ ಪಡೆಯಲು ಸಾಧ್ಯವಿಲ್ಲ.

ನವಾಶ್ ಷರೀಫ್ ವಿರುದ್ಧ ತನಿಖೆಗೆ ಆದೇಶಿಸಿದ ಪಾಕಿಸ್ತಾನ ಸುಪ್ರೀಂ ಕೋರ್ಟ್

ಪನಾಮ ಕಡತ ಮಾಹಿತಿ ಸೋರಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್ ಇವರ ವಿರುದ್ಧ ಭ್ರಷ್ಟಾಚಾರ ತನಿಖೆ ನಡೆಸಲು ಆದೇಶ ನೀಡಿದೆ. ಪಾಕಿಸ್ತಾನ ತೆಹರೀಕ್ ಇ ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನಂತರ ಸುಪ್ರೀಂ ಕೋರ್ಟ್ ಈ ತನಿಖೆಗೆ ಆದೇಶ ಕೊಟ್ಟಿದೆ. ಶರೀಫ್ ಅವರ ಕುಟುಂಬ ಸದಸ್ಯರು ವಿದೇಶಗಳಲ್ಲಿ ಅಕ್ರಮವಾಗಿ ಸಂಪತ್ತು ಹೊಂದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಇದರ ವಿಚಾರಣೆ ನಡೆಸಿದ ಐದು ಸದಸ್ಯರ ಪೀಠ ತನಿಖೆಗೆ ಸೂಚಿಸಿದೆ.

ರಾಜಿನಾಮೆ ನೀಡಿದ ಅರ್ನಾಬ್ ಗೋಸ್ವಾಮಿ

ಖ್ಯಾತ ಆಂಗ್ಲ ಸುದ್ದಿ ವಾಹಿನಿ ‘ಟೈಮ್ಸ್ ನೌ’ ಸಂಪಾದಕರಾಗಿದ್ದ ಅರ್ನಾಬ್ ಗೋಸ್ವಾಮಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲವಾದರೂ, ಮೂಲಗಳ ಪ್ರಕಾರ ಮಂಗಳವಾರ ಸಂಜೆ ಸಂಪಾದಕೀಯ ಸಭೆಯಲ್ಲಿ ಅರ್ನಾಬ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಇವರ ರಾಜಿನಾಮೆಯಿಂದ ಇವರು ಡಿಜಿಟಲ್ ಮಾಧ್ಯಮಕ್ಕೆ ಕಾಲಿಡುವರೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಅರ್ನಾಬ್ ವಾಹಿನಿ ಕ್ಷೇತ್ರದಲ್ಲೇ ಮುಂದುವರಿಯಲಿದ್ದು, ತಮ್ಮದೇ ಆದ ಸುದ್ದಿ ವಾಹಿನಿ ಪ್ರಾರಂಭಿಸುವ ಉದ್ದೇಶ ಹೊಂದಿರುವುದಾಗಿ ಹಲವು ಜಾಲತಾಣಗಳು ವರದಿ ಮಾಡಿವೆ.

Leave a Reply