ಡಿಜಿಟಲ್ ಕನ್ನಡ ಟೀಮ್:
ದಿನೇ ದಿನೇ ಗಡಿಯಲ್ಲಿ ಪಾಕಿಸ್ತಾನದ ಉಪಟಳ ಹೆಚ್ಚುತ್ತಲೇ ಇದೆ. ಮಂಗಳವಾರವೂ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿದ್ದು ಪಾಕ್ ಸೇನೆ ಭಾರತದ ನಾಗರೀಕ ಪ್ರದೇಶಗಳ ಮೇಲೆ ಗಡಿಯಾಚೆಯಿಂದ ಶಸ್ಥ್ರ ಪ್ರಯೋಗಗಳ ಮೂಲಕ ದಾಳಿ ಮಾಡಿದೆ. ಪರಿಣಾಮ 6 ಮಂದಿ ನಾಗರೀಕರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಇದರೊಂದಿಗೆ ಭಾರತ ಪಾಕ್ ಗಡಿ ಪ್ರದೇಶದಲ್ಲಿ ರಕ್ತಪಾತ ಹೆಚ್ಚುತ್ತಿದೆ.
ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಉಗ್ರರನ್ನು ಭಾರತದ ಗಡಿ ದಾಟಿಸಲು ಹರಸಾಹಸ ಪಡುತ್ತಿದೆ. ಕಾರಣ ಚಳಿಗಾಲ ಬಂದ ಮೇಲೆ ಇಲ್ಲಿನ ಗುಡ್ಡ ಪ್ರದೇಶಗಳು ಹಿಮಾವೃತಗೊಳ್ಳಲಿದ್ದು, ಆನಂತರ ಭಾರತವನ್ನು ಪ್ರವೇಶಿಸುವುದು ದೊಡ್ಡ ಸವಾಲಾಗಲಿದೆ. ಅದಕ್ಕೂ ಮೊದಲು ಭಾರತ ಪ್ರವೇಶಿಸಿಗುರಿ ನಿರ್ದಿಷ್ಟ ದಾಳಿಗೆ ಪ್ರತಿಯಾಗಿ ತಾವೂ ಪರಾಕ್ರಮ ಮೆರೆದೆವೆಂದು ತೋರಿಸಿಕೊಳ್ಳುವ ಅವಸರದಲ್ಲಿದೆ ಪಾಕಿಸ್ತಾನ. ಅಕ್ಟೋಬರ್ 29ರಿಂದ ಪಾಕಿಸ್ತಾನದ ನುಸುಳುಕೋರರು ರಾಜೌರಿ ಜಿಲ್ಲೆಯ ಮಂಜಕೊಟೆ ಮತ್ತು ಘಂಬಿರ್ ಪ್ರದೇಶಗಳಲ್ಲಿ ಹಾಗೂ ಪೂಂಚ್ ಜಿಲ್ಲೆಗಳ ದರಣ, ಬಾಸೂನಿ ಮತ್ತು ಗೊಲಾಡ್ ಪ್ರದೇಶಗಳಲ್ಲಿ ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನವನ್ನು ಭಾರತೀಯ ಸೇನೆ ವಿಫಲವಾಗಿಸಿತ್ತು.
ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಸೇನೆ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡುತ್ತಲೇ ಇದೆ. ಸೋಮವಾರ ಪಾಕ್ ನಡೆಸಿದ್ದ ದಾಳಿಯಲ್ಲಿ ಭಾರತದ ಓರ್ವ ಯೋಧ ಹಾಗೂ ಮಹಿಳೆ ಮೃತಪ್ಪಟಿದ್ದು, ಐವರು ಗಾಯಗೊಂಡಿದ್ದರು.
ಮಂಗಳವಾರವೂ ಪಾಕ್ ಸೇನೆಯಿಂದ ದಾಳಿ ಮುಂದುವರಿದಿದ್ದು, ಬೆಳಗಿನ ಜಾವ 5.30ಕ್ಕೆ ಸಾಂಬಾ ಜಿಲ್ಲೆಯ ರಾಮಘರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 18 ವರ್ಷದ ಯುವತಿ ರಾಜಿಂದರ್ ಕೌರ್ ಮೃತಪಟ್ಟಿದ್ದು, ಜೆರ್ಡಾ ಹಳ್ಳಿಯ ಮತ್ತಿಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ ಸಾಂಬಾ ಮತ್ತು ಪೂಂಚ್ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ನಡೆದ ದಾಳಿಯಲ್ಲಿ ಐವರು ಹತರಾಗಿದ್ದಾರೆ. ಅರ್ನಿಯಾ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದು, ಅವರನ್ನು ಹರ್ಶ್ನಾ ದೇವಿ, ಚಂಚ್ಲೊ ದೇವಿ ಮತ್ತು ಬೋಧ್ ರಾಜ್ ಎಂದು ಗುರುತಿಸಲಾಗಿದ್ದು, ಇವರು 40-50 ವಯೋಮಾನದವರು ಎಂದು ಗುರುತಿಸಲಾಗಿದೆ. ಪಾಕಿಸ್ತಾನ 82 ಎಂ.ಎಂನಿಂದ 120 ಎಂ.ಎಂ ಸಣ್ಣ ಫಿರಂಗಿಗಳಿಂದ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ಈ ದಾಳಿಗೆ ಗಡಿ ಭದ್ರತಾ ಪಡೆ ದಿಟ್ಟ ಉತ್ತರ ನೀಡುತ್ತಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.