ಕಡ್ಡಾಯ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಸಂವಿಧಾನ ತಿದ್ದುಪಡಿಯೇ ದಾರಿ ಅಂದ್ರು ಸಿಎಂ, ಹಿರೇಮಠ್ ಆರೋಪ- ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆ- ಒಕ್ಕಲಿಗರ ಸಂಘದ ಬಿಕ್ಕಟ್ಟಿನ ಬಗ್ಗೆ ಗೌಡ್ರು ಏನಂದ್ರು?

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಂಡ ಸಂಭ್ರಮ

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಸಿಎಂ ಮಾತು

ಪ್ರಾಥಮಿಕ ಶಿಕ್ಷಣವನ್ನು ಆಯಾ ರಾಜ್ಯಗಳ ಮಾತೃಭಾಷೆಯಲ್ಲಿ ನೀಡುವುದನ್ನು ಜಾರಿಗೆ ತರಲು ಸಂವಿಧಾನದ ತಿದ್ದುಪಡಿಯೇ ಉಳಿದಿರುವ ದಾರಿ… ಎಂದು ಅಭಿಪ್ರಾಯ ಪಟ್ಟಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. 61ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಈ ಬಗ್ಗೆ ಹೇಳಿದಿಷ್ಟು…

‘ರಾಜ್ಯದಲ್ಲಿ ಶಿಕ್ಷಣ ಮಾಧ್ಯಮ ನೀತಿ ಘೋಷಣೆ ಮಾಡಲಾಗಿದೆ. ಆದರೆ ನ್ಯಾಯಾಲಯದಲ್ಲಿ ನಮಗೆ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟಿನ ತೀರ್ಪು ಅಂತಿಮವಾಗಿದ್ದು, ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಹೀಗಾಗಿ ಕನ್ನಡ ಮಾಧ್ಯಮ ಜಾರಿಗೆ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ಪಟ್ಟಿದ್ದು, ಇದನ್ನು ಜಾರಿಗೊಳಿಸಲು ಸಂವಿಧಾನ ತಿದ್ದುಪಡಿಯೊಂದೇ ನಮ್ಮ ಮುಂದಿರುವ ಏಕೈಕ ದಾರಿ. ಈ ಕುರಿತಂತೆ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆಯೂ ಮತ್ತೆ ಮನವಿ ಮಾಡುತ್ತೇನೆ.’

‘ನವೆಂಬರ್ ತಿಂಗಳಿನಿಲ್ಲಿ ಮಾತ್ರ ಕನ್ನಡ ಅಭಿಮಾನ ತೋರಿದರೆ ಸಾಲದು. ಕನ್ನಡದ ಮೇಲಿನ ಅಭಿಮಾನ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ ನಿರಂತರವಾಗಿರಬೇಕು.’

ಹಿರೇಮಠ್ ಆರೋಪಕ್ಕೆ ದೇವೇಗೌಡ್ರ ವ್ಯಂಗ್ಯ

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರು 200 ಎಕರೆ ಜಮೀನು ಕಬಳಿಕೆ ಮಾಡಿದ್ದಾರೆ ಎಂಬ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಅವರ ಆರೋಪಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ವ್ಯಂಗ್ಯವಾಡಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷ ತೊರೆದ ನಂತರ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಶ್ರೀನಿವಾಸ ಪ್ರಸಾದ್ ಅವರಿಗೂ ಕಿವಿಮಾತು ಹೇಳಿದ್ದಾರೆ.

ಈ ಕುರಿತಂತೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ್ರು, ‘ಇದು ಶಾನುಭೋಗರು ಹಳೆಯ ಕಡತ ಹುಡುಕಿದ ಕತೆಯಂತಾಗಿದೆ. ಕುಮಾರಸ್ವಾಮಿ ಅವರ ಬಳಿ ಎಪ್ಪತ್ತೋ, ಎಂಬತ್ತೋ ಎಕರೆ ಜಮೀನಿರಬಹುದು. ಆದರೆ ಕೇತಗಾನಹಳ್ಳಿಯ ಆ ಜಮೀನು 1982ರಲ್ಲೇ ಖರೀದಿಸಲಾಗಿದೆ. ಈ ವಿಚಾರವಾಗಿ ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಯಡಿಯೂರಪ್ಪ ಹಾಗೂ ಒಬ್ಬ ಹಿರಿಯ ಪತ್ರಕರ್ತರೂ ತನಿಖೆ ಮಾಡಿದ್ದರು. ಇವರೆಲ್ಲ ತನಿಖೆ ಮಾಡಿದ ನಂತರವೂ ಏನು ಆಗಲಿಲ್ಲ’ ಎಂದರು.

ಇದೆ ಸಂದರ್ಭದಲ್ಲಿ ದೇವೇಗೌಡರು ಮಾತನಾಡಿದ ಇತರೆ ವಿಷಯಗಳು ಹೀಗಿವೆ…

  • ಕಾಂಗ್ರೆಸ್ ಪಕ್ಷದಿಂದ ಹೊರ ಬಂದಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ‘ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಮೆರವಣಿಗೆ ಮಾಡಿ ಕರೆದುಕೊಂಡು ಹೋಗ್ತಾರೆ. ಆನಂತರ ಏಕಾಏಕಿ ಕೈ ಎತ್ತಿ ನಾಪತ್ತೆಯಾಗಿ ಬಿಡ್ತಾರೆ. ಬಿಜೆಪಿಗೆ ಮೆರವಣಿಗೆ ಮೂಲಕ ಸೇರ್ಪಡೆಯಾದ ಬಂಗಾರಪ್ಪ, ರಾಜಶೇಖರ ಮೂರ್ತಿ ಅವರ ಕತೆ ಏನಾಯ್ತು ಎಂದು ಗೊತ್ತಿರಲಿ. ರಾಜಕೀಯ ಲಾಭಕ್ಕಾಗಿ ಸೇರಿಸಿಕೊಂಡು ಆನಂತರ ಕೈ ಬಿಡುವುದು ಬಿಜೆಪಿಯ ಕಸುಬು’ ಎಂದು ಕಿವಿಮಾತು ಹೇಳಿದರು.
  • ಒಕ್ಕಲಿಗರ ಸಂಘದ ಬಿಕ್ಕಟ್ಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಗೌಡ್ರು ಗರಂ ಆದರು. ಇದಕ್ಕೆ ಅವರ ಉತ್ತರ ಹೀಗಿತ್ತು… ‘ನನಗೂ ಒಕ್ಕಲಿಗರ ಸಂಘಕ್ಕೂ ಏನು ಸಂಬಂಧ? ಅದರಲ್ಲಿನ ಬಿಕ್ಕಟ್ಟಿಗೆ ನಾನೇನು ಮಾಡಲು ಸಾಧ್ಯ? ಸಚಿವ ಡಿ.ಕೆ ಶಿವಕುಮಾರ್ ಅವರು ಈಗಾಗಲೇ ಒಕ್ಕಲಿಗರ ಸಂಘದ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದಾರೆ. ಅವರೇ ಪರಿಹರಿಸಲಿ. ಅವರಿರುವಾಗ ಇನ್ನೊಬ್ಬರ ಅಗತ್ಯವೇನಿದೆ? ಯಾರೋ ಬಂದು ಸಮಸ್ಯೆ ಬಗೆಹರಿಸುತ್ತೇನೆ ಎಂದಾಗ ಬಗೆಹರಿಸಲು ಬಿಡಬೇಕು. ರಾಜಕೀಯ ನನ್ನ ಕೆಲಸವೇ ಹೊರತು, ಒಕ್ಕಲಿಗರ ಸಂಘದ ಬಿಕ್ಕಟ್ಟು ಬಗೆಹರಿಸುವುದಲ್ಲ.’

Leave a Reply