ಸ್ಟೀಲ್ ಸೇತುವೆ ಬೇಡ ಎಂಬ ಪ್ರತಿಭಟನೆಗೆ ಕಿರುಚಿತ್ರದ ಸ್ಪರ್ಶ ಕೊಟ್ಟ ನಿರ್ದೇಶಕ ಪವನ್ ಕುಮಾರ್

ಡಿಜಿಟಲ್ ಕನ್ನಡ ಟೀಮ್:

ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ಉಕ್ಕಿನ ಸೇತುವೆ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬೆಂಗಳೂರಿನ ಬಹುತೇಕ ಜನರು ಬೇಸತ್ತಿದ್ದಾರೆ. ಮಾನವ ಸರಪಳಿ, ಮರಗಳನ್ನು ಅಪ್ಪಿಕೊಂಡು ಯೋಜನೆಗೆ ವಿರೋಧ, ಸಾಮಾಜಿಕ ಜಾಲ ತಾಣದಲ್ಲಿ ‘ಸ್ಟೀಲ್ ಫ್ಲೈ ಓವರ್ ಬೇಡ’ ಎಂಬ ಅಭಿಯಾನ… ಹೀಗೆ ಸರ್ಕಾರದ ಯೋಜನೆ ವಿರೋಧಿಸಿ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲೇ ಚಿತ್ರನಿರ್ದೇಶಕ ಪವನ್ ಕುಮಾರ್ ಈ ಪ್ರತಿಭಟನೆಗೆ ಕಿರುಚಿತ್ರದ ಸ್ಪರ್ಶ ನೀಡಿದ್ದಾರೆ.

ತಮ್ಮ ಚಿತ್ರ ಮಾಧ್ಯಮದ ಮೂಲಕವೇ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ಮುಂದುವರಿಸಿರೋ ಪವನ್ ಕುಮಾರ್ ಕೇವಲ ಒಂದೇ ಒಂದು ನಿಮಿಷದ ಕಿರುಚಿತ್ರದಲ್ಲಿ ಸ್ಟೀಲ್ ಫ್ಲೈ ಓವರ್ ಯೋಜನೆ ಏಕೆ ಬೇಡ ಎನ್ನಲಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಈ ಯೋಜನೆ 800ಕ್ಕೂ ಹೆಚ್ಚು ಮರಗಳನ್ನು ಬಲಿ ಪಡೆಯುತ್ತಿರುವುದರಿಂದ ಪರಿಸರದ ಮೇಲಿನ ಹಾನಿ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಎದುರಿಸುವಂತಹ ಪರಿಸ್ಥಿತಿಯನ್ನು ಪವನ್ ವಿವರಿಸಿದ್ದಾರೆ.

ಹೀಗೆ ವಿಭಿನ್ನ ರೀತಿಯ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಸ್ಟೀಲ್ ಸೇತುವೆ ನಿರ್ಮಾಣದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಡೆಗೆ ಬೆಂಗಳೂರಿನ ಜನ ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸೇತುವೆ ಯೋಜನೆಯನ್ನು ವಿರೋಧಿಸುತ್ತಿರುವ ‘ಬೇಡ’ ಬ್ರಿಗೆಡ್ ಸರ್ಕಾರದ ನಿರ್ಧಾರವನ್ನು ಖಂಡಿಸಿದೆ. ಸಿಟಿಜೆನ್ಸ್ ಆಫ್ ಬೆಂಗಳೂರು ಸಂಸ್ಥೆಯ ಸದಸ್ಯರೊಂದಿಗೆ ಸಭೆ ನಡೆಸಿದ ನಂತರವೂ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಪಟ್ಟು ಹಿಡಿದಿರುವುದರಿಂದ ಈ ಸಂಘಟನೆಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿವೆ.

ಅಷ್ಟೇ ಅಲ್ಲದೆ ನವೆಂಬರ್ 6ರಂದು ಒಂದು ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಇದರೊಂದಿಗೆ ದಿನೇ ದಿನೇ ಸರ್ಕಾರ ಮತ್ತು ಈ ಯೋಜನೆ ವಿರುದ್ಧ ಪ್ರತಿಭಟನಾಕಾರರ ನಡುವಣ ಹಗ್ಗಜಗ್ಗಾಟ ಮುಂದುವರಿದಿದೆ.

ಪವನ್ ಕುಮಾರ್ ತಮ್ಮದೇ ಆದ ಶೈಲಿಯಲ್ಲಿ ಸರ್ಕಾರಕ್ಕೆ ಸಂದೇಶ ರವಾನಿಸಿರುವುದಲ್ಲದೆ, ಈ ಸ್ಟೀಲ್ ಸೇತುವೆ ಕುರಿತಂತೆ ಇತರರು ಸಹ ಒಂದು ನಿಮಿಷದ ಕಿರುಚಿತ್ರವನ್ನು ನಿರ್ಮಿಸಿ bit.ly/steelflyovershortfilm ಇಲ್ಲಿಗೆ ಕಳುಹಿಸುವಂತೆ ಕರೆ ನೀಡಿದ್ದಾರೆ. ಅತ್ಯುತ್ತಮ ಕಿರುಚಿತ್ರ ಮಾಡಿದ ಮೂವರನ್ನು ತಮ್ಮ ಮುಂದಿನ ಚಿತ್ರಕ್ಕೆ ಸೇರಿಸಿಕೊಳ್ಳುವುದಾಗಿ ಪವನ್ ತಮ್ಮ ಫೇಸ್ ಬುಕ್ ಪೇಜಿನಲ್ಲಿ ತಿಳಿಸಿದ್ದಾರೆ. ಸ್ಟೀಲ್ ಫ್ಲೈಓವರ್ ವಿರೋಧಿಸಿ ಪವನ್ ಕುಮಾರ್ ಮಾಡಿರುವ ಕಿರುಚಿತ್ರ ಇಲ್ಲಿದೆ ನೋಡಿ…

Leave a Reply