ಹಿಂದು ಸೇವಾ ಉತ್ಸವ, ಟಿಪ್ಪೂ ಜಯಂತಿ ವಿರೋಧ, ಇಸ್ಲಾಂ ತೀವ್ರವಾದಕ್ಕೆ ಪ್ರತಿತಂತ್ರ: ಇಲ್ಲೆಲ್ಲ ಕಾಣುತ್ತಿರುವುದು ಕೇಸರಿ ಪಾಳೆಯದ ಪರಿಚಿತ ಮುಖಗಳಷ್ಟೇ ಅಲ್ಲ… ಇದು ಉದ್ಯಮವಲಯದ ‘ಬಲ’ವಿನ್ಯಾಸವೇ?

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಡಿಸೆಂಬರ್ 14ರಿಂದ 18ರವರೆಗೆ ‘ಹಿಂದು ಆಧ್ಯಾತ್ಮಕ ಮತ್ತು ಸೇವಾ ಜಾತ್ರೆ’ ನಡೆಯುತ್ತದೆ. ಸೇವೆ ಮತ್ತು ಆಧ್ಯಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಹಿಂದು ಸಂಘಟನೆಗಳನ್ನು ವೇದಿಕೆಯೊಂದರಲ್ಲಿ ಮೇಳೈಸಿ, ಪ್ರದರ್ಶನ ಮಳಿಗೆಗಳನ್ನು ಇಟ್ಟು, ಸಾಮಾಜಿಕ ಪರಿವರ್ತನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನವಿದು ಎಂದಿದ್ದಾರೆ ಈ ಯೋಜನೆ ಹಾಗೂ ಪ್ರತಿಷ್ಠಾನದ ಸ್ಥಾಪಕರಾದ ಸ್ವದೇಶಿ ವಿಚಾರ ಪ್ರತಿಪಾದನೆಯ ಅರ್ಥಶಾಸ್ತ್ರಜ್ಞ ಎಸ್. ಗುರುಮೂರ್ತಿ.

ಈ ಸಂಬಂಧ ನಡೆಸಲಾದ ಪತ್ರಿಕಾಗೋಷ್ಟಿಯಲ್ಲಿ ವೇದಿಕೆ ಹಂಚಿಕೊಂಡವರು ಉದ್ಯಮಿ, ಪ್ರಮುಖ ಹೂಡಿಕೆದಾರರಾಗಿ ಗುರುತಿಸಿಕೊಂಡಿರುವ ಮೋಹನದಾಸ ಪೈ. ಈ ಜಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವವರು ಇಸ್ರೊ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್ ಎಂಬುದೂ ಗಮನಾರ್ಹ.

ಸ್ವಾಗತ ಸಮಿತಿಯಲ್ಲಿ ಸಾಮಾಜಿಕ ಕ್ಷೇತ್ರದ ನಾನಾ ಗಣ್ಯರ ಹೆಸರುಗಳಿವೆ. ಉದ್ಯಮಿಗಳನ್ನೇ ಗಮನಿಸುವುದಾದರೆ ಪ್ರಮುಖವಾಗಿ ಕಾಣುವವರು ರಾಜೀವ್ ಚಂದ್ರಶೇಖರ್, ಮೋಹನದಾಸ್ ಪೈ ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ಪ್ರಮುಖರಾದ ಡಾ. ದಯಾನಂದ ಪೈ.

ಹೊಸದೊಂದು ಆಡಳಿತ ಶಕೆ ಶುರುವಾದಾಗ ಹಲವು ಮರುವಿನ್ಯಾಸಗಳಾಗುತ್ತವೆ. ಭಿನ್ನ ವಿಚಾರದವರೂ ಶಕ್ತಿವಂತ ಪಾಳೆಯವನ್ನು ಒಪ್ಪಿಕೊಳ್ಳುತ್ತಾರೆ. ಹಲವು ದಶಕಗಳ ಕೇಂದ್ರದ ಕಾಂಗ್ರೆಸ್ ಆಡಳಿತ, ಸಮ್ಮಿಶ್ರ ಪರ್ವಗಳ ನಂತರದ ದಿನಗಳಲ್ಲಿ ಬೌದ್ಧಿಕ, ಸಾಂಸ್ಥಿಕ ರಚನೆಗಳೆಲ್ಲ ತಮ್ಮನ್ನು ಮರುವಿನ್ಯಾಸಗೊಳಿಸಿಕೊಳ್ಳುವುದು ನಿರೀಕ್ಷಿತವೇ. ಅದು ಉದ್ಯಮ ಜಗತ್ತಿನಲ್ಲೂ ಆಗುತ್ತಿರುವುದರ ಸೂಚನೆಗಳಿವು ಎಂದು ಅರ್ಥಮಾಡಿಕೊಳ್ಳಬಹುದೇ?

ಇದರರ್ಥ ಈಗ ಹೆಸರಿಸುತ್ತಿರುವ ಮುಖ್ಯ ವ್ಯಕ್ತಿಗಳೆಲ್ಲ ಈವರೆಗೆ ಸೈದ್ಧಾಂತಿಕ ವಿರೋಧಿ ಪಾಳೆಯದಲ್ಲಿದ್ದರು ಎಂಬರ್ಥವೇನೂ ಅಲ್ಲ. ಇವರ ನಿಲುವುಗಳು ತಥಾಕಥಿತ ಸೆಕ್ಯುಲರ್ ಕಥನಗಳಿಗೆ ವಿರುದ್ಧ ನೆಲೆಯದ್ದೇ ಆಗಿತ್ತಾದರೂ ಈ ಬಗೆಯ ಏಕೀಕೃತ ಮಾದರಿ ಕಂಡಿರಲಿಲ್ಲ.

ಮೋಹನದಾಸ್ ಪೈ ಅವರು ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಗೆ ಪ್ರಖರ ವಿರೋಧ ವ್ಯಕ್ತಪಡಿಸಿರುವುದೂ ಇದಕ್ಕೆ ಪೂರಕ ವಿದ್ಯಮಾನ. ‘ಟಿಪ್ಪು ಜಯಂತಿ ಆಚರಣೆಯು ಮೊಘಲ್ ಸಾಮ್ರಾಜ್ಯದ ನಿರಂಕುಶ ದೊರೆ ಹಾಗೂ ಧಾರ್ಮಿಕ ಮೂಲಭೂತವಾದಿ ಔರಂಗಜೇಬನ ಹುಟ್ಟುಹಬ್ಬ ಆಚರಣೆ ಮಾಡಿದಂತೆ’ ಎಂದವರು ವ್ಯಂಗ್ಯವಾಡಿದ್ದಾರೆ.

‘ಸರ್ಕಾರಕ್ಕೆ ಹುಟ್ಟುಹಬ್ಬ ಆಚರಿಸಬೇಕೆಂದಾದಲ್ಲಿ ರಾಜ್ಯವನ್ನು ಆಳಿದ ಮಹಾನ್ ವ್ಯಕ್ತಿಗಳಾದ ಮಿರ್ಜಾ ಇಸ್ಮಾಯಿಲ್, ಒಡೆಯರ್ ಅವರ ಜನ್ಮದಿನ ಆಚರಿಸಲಿ. ರಾಜ್ಯ ಕಂಡ ಅತ್ಯುನ್ನತ ಎಂಜಿನಿಯರ್ ಎಂಬ ಖ್ಯಾತಿ ಗಳಿಸಿದ ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನ ಆಚರಿಸಲಿ. ಸರ್ಕಾರ ಇಡೀ ರಾಜ್ಯವನ್ನು ಮುನ್ನಡೆಸಲು ಇದೆಯೇ ಹೊರತು, ರಾಜ್ಯದ ಜನರನ್ನು- ಕೊಡಗಿನವರು ಮತ್ತು ಮಂಗಳೂರು ಕ್ರೈಸ್ತರು ಎಂದು ಇಬ್ಭಾಗ ಮಾಡಲು ಅಲ್ಲ. ನಾನು ಮೂಲತಃ ಕೊಂಕಣಿಯವನಾಗಿ ಈ ಎರಡು ಸಮುದಾಯವನ್ನು ಶೋಷಿಸಿದ ವ್ಯಕ್ತಿಯ ಜನ್ಮದಿನಾಚರಣೆಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಟಿಪ್ಪು ಸುಲ್ತಾನ್ ಕೊಡಗು, ಕಾಸರಗೋಡುನಲ್ಲಿ ನೆಲೆಸಿರುವವರ ಮೇಲೆ ದೌರ್ಜನ್ಯ ನಡೆಸಿ ಅಲ್ಲಿನ ದೇವಾಲಯಗಳನ್ನು ನಾಶ ಮಾಡಿದ್ದ. ಹೀಗಾಗಿ ಕೊಡಗಿನವರಿಗೆ ಟಿಪ್ಪುವಿನ ಮೇಲೆ ಈಗಲೂ ದ್ವೇಷವಿದೆ. ಆತ ಇಸ್ಲಾಂ ಧರ್ಮಕ್ಕೆ ಜನರನ್ನು ಮತಾಂತರ ಮಾಡಲು ಹಲವರನ್ನು ಹತ್ಯೆ ಮಾಡಿದ್ದಾನೆ.’ ಎಂದಿದ್ದಾರೆ.

rajeev chandrashekarಹೀಗೆ ಉದ್ಯಮಿಗಳಿಂದ ಬರುತ್ತಿರುವ ಸಮುದಾಯ ಪ್ರಜ್ಞೆ, ಮತಾಂಧತೆ ವಿರೋಧದ ಮಾತುಗಳು ಆರೆಸ್ಸೆಸ್ ವಿಚಾರಧಾರೆಗೆ ಸಾಮಿಪ್ಯ ಹೊಂದಿವೆ. ಲಾಗಾಯ್ತಿನಿಂದ ರಾಜ್ಯಸಭೆ ಸಂಸದ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರು ಎನ್ಡಿಎ ಕೂಟದ ಪರವಾದ ಧ್ವನಿಯಾಗಿಯೇ ಗುರುತಿಸಿಕೊಂಡಿರುವವರೇ. ಆದಾಗ್ಯೂ ಹಿಂದುಪರ ಸಭೆಗಳಲ್ಲಿ ಅವರ ಪ್ರಸ್ತುತಿ ಹೆಚ್ಚುತ್ತಿರುವುದು ಈಗಿನ ವಿದ್ಯಮಾನ. ಕೇರಳದಲ್ಲಿ ಕಮ್ಯುನಿಸ್ಟರಿಂದ ಆರೆಸ್ಸೆಸ್ ಕಾರ್ಯಕರ್ತರ ಮೇಲಾಗುತ್ತಿರುವ ಹಲ್ಲೆ- ಹತ್ಯೆಗಳನ್ನು ಖಂಡಿಸುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಾಜೀವ್, ಈಗ ಇಸ್ಲಾಂ ಭಾಷಣಕಾರ ಜಾಕಿರ್ ನಾಯಕ್ ಗೆ ಅಂಕುಶ ಹಾಕುವ ಕಾರ್ಯದಲ್ಲೂ ಗುರುತಿಸಿಕೊಂಡಿದ್ದಾರೆ. ‘ಇಸ್ಲಾಂ ರಾಷ್ಟ್ರಗಳಿಂದ ದೇಶದ ಎನ್ಜಿಒಗಳಿಗೆ ಬರುವ ದೇಣಿಗೆಯನ್ನು ಕಟ್ಟುನಿಟ್ಟಿನ ಕಾನೂನಿನ ಚಾಕಟ್ಟಿನಿಂದ ನಿಯಂತ್ರಿಸಬೇಕು. ಜಾಕೀರ್ ನಾಯಕ್ ಅವರ ಸಂಸ್ಥೆಗೆ ಬ್ರೇಕ್ ಹಾಕುವ ನಿರ್ಧಾರ ಉತ್ತಮವಾಗಿದೆ.’ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್.

‘ಕಳೆದ ಮೂರು ವರ್ಷಗಳಲ್ಲಿ ಇಲ್ಲಿನ ಎನ್ಜಿಒಗಳಿಗೆ ಇಸ್ಲಾಂ ರಾಷ್ಟ್ರಗಳಿಂದ ಸುಮಾರು ₹ 134 ಕೋಟಿ ಹಣ ಹರಿದು ಬಂದಿದೆ ಎಂದು ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್ (ಎಫ್ ಸಿ ಆರ್ ಎ) ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸರ್ಕಾರೇತ್ತರ ಸಂಸ್ಥೆ (ಎನ್ಜಿಒ)ಗಳಿವೆ. ಕೆಲವು ಸಂಸ್ಥೆಗಳು ಇಸ್ಲಾಂ ರಾಷ್ಟ್ರಗಳ ತೀವ್ರಗಾಮಿ ಗುಂಪುಗಳಿಂದಲೂ ದೇಣಿಗೆಯನ್ನು ಪಡೆಯುತ್ತಿದ್ದು, ಅವುಗಳನ್ನು ವಿಧ್ವಂಸಕ ಕೃತ್ಯಗಳಿಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಸಂಸ್ಥೆಗಳು ಶಾಲೆ, ಕಾಲೇಜು ಮತ್ತು ಅನಾಥಾಶ್ರಮಗಳ ಮೂಲಸೌಕರ್ಯ, ಕಟ್ಟಡ ನಿರ್ಮಾಣದ ಅಭಿವೃದ್ಧಿಯ ಹೆಸರಿನಲ್ಲಿ ಪಡೆಯುತ್ತಿವೆ. ಹೀಗೆ ಪಡೆದ ಹಣವನ್ನು ಸೂಫಿ ಇಸ್ಲಾಂ ವಿರೋಧಕ್ಕೆ ಹಾಗೂ ಸಲಾಫಿಗಳ ನಂಬಿಕೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಜಾಕೀರ್ ನಾಯಕ್ ಅವರ ಈ ಒಂದು ಪ್ರಕರಣ ಸುದೀರ್ಘ ಅವಧಿಯಿಂದ ಎಫ್ ಸಿ ಆರ್ ಎ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರಿಗೆ ಸೂಕ್ತ ಎಚ್ಚರಿಕೆ.’ ಎಂಬುದವರ ಪತ್ರಸಾರ.

ಹೀಗಾಗಿ, ಮತಾಂಧತೆ ವಿರೋಧ, ಹಿಂದುಗಳ ಸಂಘಟನೆ ಇಂಥ ವಿಷಯಗಳು ಪ್ರಸ್ತಾಪಿತವಾಗುತ್ತಿದ್ದರೆ ಆರೆಸ್ಸೆಸ್ಸಿನ ಬಹುಕಾಲದ ಸದಸ್ಯರೇ ಮಾತಾಡುತ್ತಿದ್ದಾರೆ ಅಂದುಕೊಳ್ಳಬೇಕಿಲ್ಲ. ಬೇರೆ ಗಣ್ಯರ ಹೊಸದನಿಯೂ ಆಗಿದ್ದಿರಬಹುದಿದು.

Leave a Reply