
‘ಕರ್ಮಕಾಂಡ’ ಫೋನಿನಲ್ಲೇ ಉಗಿದಳು.
‘ಯಾಕೆ?’ ಮೆಲ್ಲನೆ ಪ್ರಶ್ನಿಸಿದೆ.
‘ನೀವೆಂಥ ಕನ್ನಡ ಲೇಖಕಿ ರೀ? ಕರ್ನಾಟಕ ರಾಜ್ಯೋತ್ಸವ ದಿನ ಕನ್ನಡ ರಾಜ್ಯೋತ್ಸವ ಅಂತ ಇಂಗ್ಲೀಷಿನಲ್ಲಿ ವಿಷ್ ಮಾಡ್ತೀರಲ್ಲಾ?’
‘ಎರಡೂ ಒಂದೇ ಅನ್ನೋ ಭಾವನೆ ಬರೋ ಹಾಗೆ ಎಲ್ಲರೂ ಆಡುತ್ತಾರಲ್ಲಾ? ರಾಜ್ಯದಲ್ಲಿ ಬೇರೆ ವಿಷಯಗಳು ಹಾಳಾಗಲಿ. ಕನ್ನಡ ಭಾಷೆ ಒಂದು ಚೆನ್ನಾಗಿರಬೇಕು. ಅದನ್ನು ಜನ ಬಳಸಬೇಕು. ಆಗ ನಾವು ಉದ್ಧಾರ ಆಗುತ್ತೇವೆ. ಅನ್ನೋ ಹಾಗೆ..’
‘ಆಂಗ್ಲ ಭಾಷೆಯಲ್ಲಿ ಬರೆದಿದ್ದು? ಅದು ತಪ್ಪಲ್ಲವೇ ನಮ್ಮ ಪ್ರಧಾನಿಯವರು ಕೂಡ ಕನ್ನಡದಲ್ಲಿ ಹಾರೈಕೆಗಳನ್ನು ತಿಳಿಸಿದ್ದಾರೆ. ಗೊತ್ತಾ?’
‘ನಾನು ಅಲ್ಲಿ ಬರೆದಿದ್ದೆ. ಈ ಹಾರೈಕೆಗಳನ್ನು ಹಿಂದಿ ಭಾಷಿಕಳಾದ, ಕನ್ನಡ ಮಾತನಾಡಲು ಕಲಿತಿರುವ ನನ್ನ ಸ್ನೇಹಿತೆ ಕಳುಹಿಸಿರುವುದು. ಹಾಗಾಗಿ ನನಗೆ ಇಷ್ಟವಾಯಿತು. ಭಾಷೆಗಿಂತ ಭಾವನೆ ಮುಖ್ಯ.’
‘ನಿಮ್ಮಂತಹವರಿಂದಲೇ ನಮ್ಮ ನಾಡು ಈ ಸ್ಥಿತಿಗೆ ತಲುಪಿರುವುದು. ಬೇರೆಯವರಿಗೆಲ್ಲಾ ಎಷ್ಟೊಂದು ಕಾಳಜಿ ಇದೆ. ಆಟೋ ಚಾಲಕರಿಗಿರುವಷ್ಟು ಅಭಿಮಾನ ನಿಮಗೆ ಇಲ್ಲ. ಅವರೆಲ್ಲಾ ಆಟೋಗಳ ಮೇಲೆ ನಮ್ಮ ಕೆಂಪು ಹಳದಿ ಬಾವುಟ ಏರಿಸಿದ್ದಾರೆ ಗೊತ್ತಾ?’
‘ಹೀಗೇ ಒಂದು ವೇದಿಕೆಯವರು… ಸಾಕಷ್ಟು ಹಣವುಳ್ಳವರು, ಹಲವು ಮೂಲಗಳಿಂದ ಅದನ್ನು ಸಂಪಾದಿಸಿರುವವರು… ಸಾವಿರಾರು ಬಾವುಟಗಳನ್ನು ಮಾಡಿಸಿ ರಿಕ್ಷಾಗಳ ಮೇಲೆ ಏರಿಸಿದರು ಅಂತ ಕೇಳಿದೆ.’
‘ತಪ್ಪೇನು?’
‘ತಪ್ಪಿಲ್ಲ… ನಮ್ಮ ರಾಜ್ಯಕ್ಕೆ ಕನ್ನಡ ಬಲ್ಲ… ನಮ್ಮ ನಾಡು, ನುಡಿ, ಜಲ, ಜೀವ, ಸಂಸ್ಕೃತಿಗಳ ಮೇಲೆ ಅಭಿಮಾನವಿರುವ ಅಥವಾ ಕನಿಷ್ಠ ಅರಿವಿರುವ ವ್ಯಕ್ತಿಯನ್ನು ರಾಜ್ಯಪಾಲರಾಗಿ ನೇಮಕ ಮಾಡಿದರೆ… ಸಾವಿರ ಬಾರಿ ಕನ್ನಡದಲ್ಲಿ ಹಾರೈಸಿದರ ಫಲ ಸಿಗುತ್ತದೆ ಎಂದು ಪ್ರಧಾನಿಯವರಿಗೆ ಹೇಳಿ… ಅವರ ಟ್ವಿಟರ್ ಅಕೌಂಟ್ ಮೂಲಕ..’
‘ನೋಡಿ… ನೀವು ಮಾಡೋದು ಗೊತ್ತಾಗಲ್ಲ ನಿಮಗೆ, ಪ್ರಧಾನಿಯವರನ್ನೇ ಆಡಿಕೊಳ್ತೀರಿ. ಕನ್ನಡ ಭಾಷೆಯ ಉಳಿವಿಗೆ ಎಷ್ಟೊಂದು ಮಂದಿ ಟೊಂಕ ಕಟ್ಟಿ ನಿಂತಿದ್ದಾರೆ… ನೀವು…’
ಫೋನ್ ಡಿಸ್ಕನೆಕ್ಟ್ ಮಾಡಿದೆ. ಬೆಳಗ್ಗೆಯಿಂದ ರಾಜ್ಯೋತ್ಸವದ ಹಾರೈಕೆಗಳ ಮಹಾಪೂರ ಓದಿ ಸಂತಸಕ್ಕಿಂತ ಗಾಬರಿ..
‘ಕನ್ನಡಿಗರೇ ಏಳಿ. ಎದ್ದೇಳಿ. ಕನ್ನಡ ಬಳಸಿ, ಕನ್ನಡ ಕಲಿಸಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ.’
ಈ ಬಗೆಯ ಮಾತುಗಳನ್ನು ಕೇಳಿದರೆ ಗಾಬರಿಯಾಗದೆ ಏನು?
ವರ್ಷವಿಡೀ ಮಲಗಿರುವ ಕನ್ನಡಿಗ, ಕನ್ನಡತಿ… ನವೆಂಬರ್ರಿನಲ್ಲಿ ಎದ್ದರೆ ಸಾಕೇ? ಕನ್ನಡ ಬಳಸಿ, ಸರಿ, ನಿಜ, ಸತ್ಯ. ಆದಷ್ಟು ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಕನ್ನಡ ಸಾಹಿತ್ಯ ಓದಬೇಕು. (ಆ ಸಾಹಿತಿ ಆಂಗ್ಲ ಸಾಹಿತ್ಯದ ಅಭಿಮಾನಿಯಾಗಿದ್ದರೂ!)
ಕನ್ನಡ ಕಲಿಸಿ ಅದೂ ನಿಜ. ಕಲಿಸಲು ಸಿದ್ಧ, ಕಲಿಯುವವರು ಯಾರು? ಕನ್ನಡಿಗರೇ ಕನ್ನಡ ಕಲಿಯುತ್ತಿಲ್ಲ. ಶಾಲೆಯಲ್ಲಿ ಬೇಡ, ಸಾಹಿತ್ಯಿಕವಾಗಿ ಬೇಡ, ದಿನನಿತ್ಯದ ವ್ಯವಹಾರಕ್ಕೆ ಕನ್ನಡ ಭಾಷೆ ಅನಿವಾರ್ಯವಾಗಬೇಕು ಒಂದು ತರಕಾರಿ ಕೊಳ್ಳಲು, ಬಸ್ ನಲ್ಲಿ ಪಯಣಿಸಲು, ಮನೆಯನ್ನು ಬಾಡಿಗೆಗೆ ಪಡೆಯಲು ಕನ್ನಡ ಭಾಷೆ ಅನಿವಾರ್ಯವಾದರೆ ಎಲ್ಲರೂ ಕನ್ನಡ ಕಲಿಯಲು ಮುಂದೆ ಬರುತ್ತಾರೆ. ಆಗ ಕಲಿಸಲು ನಾವು ಸಿದ್ಧರಿರಬೇಕು. ಅದಕ್ಕೆ ತಕ್ಕ ವ್ಯವಸ್ಥೆ ಮಾಡಬೇಕು.
(ಬಿಬಿಎಂಪಿಯ ವಾರ್ಡ್ ಆಫೀಸಿನ ಮುಂದೆ ‘ಇಲ್ಲಿ ಕನ್ನಡ ಕಲಿಸಲಾಗುತ್ತದೆ ಸಂಪರ್ಕಿಸಿ’ ಎಂದು ಬೋರ್ಡಿತ್ತು. ಆ ಬೋರ್ಡ್ ಆಂಗ್ಲ ಭಾಷೆಯಲ್ಲಿ ಹಾಕಿ ಎಂದು ಒಳಗೆ ಹೋಗಿ ಹೇಳಿದರೆ ನನ್ನೇ ಬೈಯ್ದು ಕಳುಹಿಸಿದ್ದರು.)
ಕನ್ನಡ ಬೆಳೆಸಿ,,, ಉಳಿಸಿ ಎಂದು ಹೇಳುವುದು, ಅದನ್ನು ಘೋಷಣೆಯಂತೆ ಬಳಸುವುದು ನಮ್ಮ ಭಾಷೆಗೆ ನಾವು ಮಾಡುತ್ತಿರುವ ಅವಮಾನ.
ನನ್ನ ಸ್ನೇಹಿತೆ ದೀಪಾ ರವಿಶಂಕರ್ ಅವರ ಫೇಸ್ ಬುಕ್ ಗೋಡೆಯ ಮೇಲೆ ಬರೆದಿರುವುದು ನನ್ನ ಮಾತುಗಳೂ ಕೂಡ.
‘ಉಳಿಸಿ ಬೆಳೆಸಿ ಎಂದರೆ ಏನು? ಯಾರು ಉಳಿಸಬೇಕು? ಯಾರು ಬೆಳೆಸಬೇಕು? ಯಾರಿಂದ ಉಳಿಸಬೇಕು? ಯಾರೋ ಬಂದು, ನಮ್ಮ ನಾಡಿನಲ್ಲಿ ನೆಲೆಸಿ ಅವರ ಭಾಷೆಯನ್ನೇ ಮಾತಾಡಿಕೊಂಡು ನಮ್ಮ ಭಾಷೆ ಕಲಿಯದೇ ಹೋದರೆ, ಕನ್ನಡದಂಥ ಪುರಾತನ, ಬಲಿಷ್ಠ, ಶಾಸ್ತ್ರೋಕ್ತ, ಸುಂದರ ಭಾಷೆಯನ್ನು ಮುಗಿಸಿ ಬಿಡುತ್ತಾರೆಯೇ? ಅಷ್ಟು ಸಲೀಸೇ ಅದು? ಇನ್ನೊಬ್ಬರು ಬಂದು ನಮ್ಮ ಭಾಷೆ ಕಲಿತರೆ ಕನ್ನಡ ಉಳಿದು ಬಿಡುತ್ತದೆಯೇ?’ (ದೀಪಾ ರವಿಶಂಕರ್ ಅವರ ಮಾತುಗಳು).
ಸಾವಿರಾರು ವರ್ಷಗಳು ಇತಿಹಾಸ ಇರುವ ಕನ್ನಡ ಭಾಷೆಗೆ ಅಂತಹ ದೈನ್ಯ ಸ್ಥಿತಿ ಬಂದಿಲ್ಲ. ಬರುವುದೂ ಇಲ್ಲ.
ಬಂತು… ಬಂತು… ಬರುತ್ತದೆ ಎಂದು ಹೇಳಿಕೊಂಡು, ಉಳಿಸಿ ಎಂದು ಬೇಡಿಕೊಂಡು ತಿರುಗುವುದು ಅಭಿಮಾನದ ಸಂಕೇತವಲ್ಲ.. ಅದು ದೈನ್ಯತೆಯ ಸಂಕೇತ.
ಭಾಷೆ ನಮ್ಮನ್ನು ಉಳಿಸುತ್ತದೆ., ಬೆಳೆಸುತ್ತದೆ ನಾವು ಬಳಸಬೇಕು ಅಷ್ಟೇ.
ಕರ್ನಾಟಕ ರಾಜ್ಯದ ಭಾಷೆ ಕನ್ನಡ. ಭಾಷೆ ನಮ್ಮ ರಾಜ್ಯದ ದನಿ, ಸಂವಹನಕ್ಕೆ ಬಳಸುವ ಭಾಷೆ ಅದು. ಆದರೆ ಕನ್ನಡ ಒಂದೇ ಕರ್ನಾಟಕವಲ್ಲ.
ಕನ್ನಡ ರಾಜ್ಯೋತ್ಸವವಲ್ಲ. ಕರ್ನಾಟಕ ರಾಜ್ಯೋತ್ಸವ. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕು. ರಾಜ್ಯದ ಅಭಿವೃದ್ಧಿ ಎಂದು ಸಾಂಸ್ಕೃತಿಕ ಅಷ್ಟೇ ಅಲ್ಲ. ಶೈಕ್ಷಣಿಕ, ಆರ್ಥಿಕ, ಉದ್ಯಮಗಳ ಅಭಿವೃದ್ಧಿಯೂ ಆಗಬೇಕು. ಪ್ರವಾಸಿಗರ ತಾಣಗಳ ಅಭಿವೃದ್ಧಿಯೂ ಆಗಬೇಕು. (ವಿಶ್ವ ವಿಖ್ಯಾತ ಜೋಗ ಜಲಪಾತದ ಸ್ಥಿತಿಯ ಬಗ್ಗೆ ಮುಂದೆ ಬರೆಯುತ್ತೇನೆ.)
ಕರ್ನಾಟಕವೆಂದರೆ ಕನ್ನಡ, ಸಾಂಸ್ಕೃತಿಕ ಅಂದರೆ ಚಲನಚಿತ್ರ, ಸಾಧಕರು ಅಂದರೆ, ಸಾಹಿತಿಗಳು ಹಾಗೂ ಸಿನಿಮಾ ನಟನಟಿಯರು ಎಂಬ ಪರಿಕಲ್ಪನೆಯಿಂದ ಹೊರಬರಬೇಕು. ದೇಶವನ್ನು ರಾಜ್ಯಗಳಾಗಿ ವಿಂಗಡಿಸಿದ್ದು, ಅಭಿವೃದ್ಧಿಗೆ ಸಹಾಯಕವಾಗಲಿ, ಆಡಳಿತ ನಡೆಸುವುದು ಸುಗಮವಾಗಲಿ ಎಂದು.
ಉದ್ಯೋಗಾವಕಾಶಗಳನ್ನು ಅರಿಸಿ ಬೇರೆ ರಾಜ್ಯದವರು ನಮ್ಮ ರಾಜ್ಯಕ್ಕೆ ಬರುವಂತಾಗಿದ್ದರೆ ಅದು ನಮ್ಮ ಹೆಗ್ಗಳಿಕೆ, ದೈನ್ಯತೆ, ದುರಾಭಿಮಾನ ಎರಡೂ ಇಲ್ಲದೆ… ಅವರುಗಳು ಇಲ್ಲಿಯ ಸಂಸ್ಕೃತಿ, ಭಾಷೆಯನ್ನು ಗೌರವಿಸುವಂತೆ ಪ್ರೇರೇಪಿಸಬೇಕು. ಅದಕ್ಕಿಂಥ ಮುಖ್ಯವಾಗಿ ಅಧಿಕಾರರೂಢ ಸ್ಥಾನಗಳಲ್ಲಿ ಕನ್ನಡಿಗರಿರಬೇಕು. ಆರ್ಥಿಕ ಮುನ್ನಡೆ, ಸ್ವಾವಲಂಬನೆ, ಭಾಷೆ ನಮ್ಮ ಶಕ್ತಿಯನ್ನು ಹಿಗ್ಗಿಸುತ್ತದೆ.
ಶಿಕ್ಷಣ ಮಾಧ್ಯಮ ಕನ್ನಡವಾದರೆ ನಮಗೆ ಅಭಿಮಾನವಿದೆಯೆಂದಲ್ಲ. ಆಗದಿದ್ದರೂ ಅಭಿಮಾನವಿರಬೇಕು. ಭಾಷೆ ಸಂವಹನ ಕ್ರಿಯೆಯಲ್ಲಿ ಬೆಳೆಯಬೇಕು. ನಾವೂ ಬೆಳೆಯಬೇಕು. ಕನ್ನಡ ಭಾಷೆಗೆ ಒಂದು ದಿನದ ಸಂಭ್ರಮ ಬೇಡ… ಪ್ರಶಸ್ತಿಗಳ ಭರಾಟೆ ಬೇಡ. ಅವರಿವರ ಜಯಂತಿ ಆಚರಿಸುವ ಪ್ರದರ್ಶನವೂ ಬೇಡ. ಕರ್ನಾಟಕದ ಪ್ರಗತಿಯತ್ತ ಗಮನಕೊಟ್ಟರೆ, ಅದಕ್ಕಾಗಿ ಪರಿಶ್ರಮಿಸಿದರೆ, ನಾವು, ನಮ್ಮದು, ನಮ್ಮವರು ಎಂಬ ಅಭಿಮಾನವಿದ್ದರೆ ಬಾವುಟ, ಭಾಷಣದ ಸಹಾಯವಿಲ್ಲದೆಯೇ ಕನ್ನಡದ ಘಮಲು ಪಸರಿಸುತ್ತದೆ.
ಸೋಪಾನ, ಅಡಿಪಾಯ ಅಭಿವೃದ್ಧಿ ಆರ್ಥಿಕ ಸ್ವಾವಲಂಬನೆ ಎಂದಾದರೆ, ಗೋಡೆ ಛಾವಣಿ, ದುಡಿಮೆ ಪರಿಶ್ರಮವೆಂದಾದರೆ ಬಾಗಿಲು ಕಿಟಕಿಗಳಾಗಿ ಭಾಷೆ ಚೆಂದವಾಗಿ ಬಂದೇ ಬರುತ್ತದೆ.
ಜೈ ಕರ್ನಾಟಕ ಮಾತೆ.