10 ವರ್ಷದ ಯುಪಿಎ ಆಡಳಿತದಲ್ಲಿ ಸೈನಿಕ ಕಲ್ಯಾಣದತ್ತ ಕಣ್ಣೆತ್ತಿ ನೋಡದ ರಾಹುಲ್ ಗಾಂಧಿಯ ಪ್ರತಿಭಟನಾ ಪ್ರದರ್ಶನ!

ಡಿಜಿಟಲ್ ಕನ್ನಡ ವಿಶೇಷ:

ಮಾಜಿ ಯೋಧ ರಾಮ ಕಿಶನ್ ಗ್ರೆವಾಲ್ ಆತ್ಮಹತ್ಯೆ ಪ್ರಕರಣವನ್ನಿಟ್ಟುಕೊಂಡು ಬುಧವಾರವಿಡೀ ದೆಹಲಿಯಲ್ಲಿ ರಾಜಕೀಯ ರಣಾಂಗಣ ತೆರೆದುಕೊಂಡಿತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖ್ಯ ಭೂಮಿಕೆಯಲ್ಲಿ ನಿಂತು ಕೇಂದ್ರದ ವಿರುದ್ಧ ಕಿಡಿಕಾರಿದರು.

ದೆಹಲಿಯ ಜಂತರ್ ಮಂತರ್ ನಲ್ಲಿ 70 ವರ್ಷದ ಮಾಜಿ ಸೈನಿಕ ಮಂಗಳವಾರ ರಾತ್ರಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡರು. ರಾಮ್ ಕಿಶನ್ ಅವರು ಆತ್ಮ ಹತ್ಯೆಗೂ ಮುನ್ನ ಒಆರ್ ಒಪಿ ಯೋಜನೆ ಜಾರಿ ವಿಳಂಬವಾಗುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು ಎಂದು ಅವರ ಪುತ್ರ ಮಾಹಿತಿ ನೀಡಿದ್ದಾರೆ. ಇನ್ನು ಈ ಪ್ರಕರಣದ ಕುರಿತಂತೆ ಸಂಪೂರ್ಣ ಮಾಹಿತಿ ನೀಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಘಟನೆ ಬುಧವಾರ ಸಂಪೂರ್ಣವಾಗಿ ರಾಜಕೀಯ ಸ್ವರೂಪವನ್ನೇ ಪಡೆದುಕೊಂಡಿತು. ರಾಮ್ ಕಿಶನ್ ಅವರ ಮೃತದೇಹವನ್ನು ನೋಡಲು ಹಾಗೂ ಅವರ ಕುಟುಂಬದವರನ್ನು ನೋಡಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರ್ ಎಂ ಎಲ್ ಆಸ್ಪತ್ರೆಗೆ ತೆರಳಿದರು. ದೆಹಲಿ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಪೊಲೀಸರ ಈ ನಿರ್ಧಾರವನ್ನು ವ್ಯಾಪಕವಾಗಿ ಖಂಡಿಸಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು.

ಆದರೆ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 10 ವರ್ಷಗಳ ಕಾಲ, ಏಕಶ್ರೇಣಿ-ಏಕ ಪಿಂಚಣಿ ವಿಷಯದಲ್ಲಿ ಯಾವೊಂದು ನಿರ್ಧಾರಕ್ಕೂ ಪ್ರೇರಕ ಕ್ರಮ ಕೈಗೊಳ್ಳದ ರಾಹುಲ್ ಗಾಂಧಿ, ಸೂತಕದ ವಾತಾವರಣದಲ್ಲಿ ಸೈನಿಕ ಪ್ರೇಮವನ್ನು ಮೈಮೇಲೆ ಆವಾಹಿಸಿಕೊಂಡು ಭಾಷಣ ಹೊಡೆದಿದ್ದು ಮಾತ್ರ ಕೌತುಕದ್ದಾಗಿತ್ತು.  ‘ದೇಶದ ಯೋಧರು ತಮಗೆ ಬೇಕಿಗುವ ಭತ್ಯೆಯನ್ನು ಪಡೆಯಲು ಪರದಾಟ ನಡೆಸಬಾರದು. ಅದಕ್ಕಾಗಿ ಒಆರ್ ಒಪಿ ಯೋಜನೆಯನ್ನು ಶೀಘ್ರವಾಗಿಯೇ ಅರ್ಥಪೂರ್ಣ ರೀತಿಯಲ್ಲಿ ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸುತ್ತೇನೆ. ರಾಮ್ ಕಿಶನ್ ಅವರ ಸಾವಿನಿಂದ ಮನಸ್ಸಿಗೆ ಬೇಸರವಾಗಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ.’ ಎಂದ ಅವರು, ಭಾಷಣ ಮಾಡುವುದಕ್ಕೆ ಆಸ್ಪತ್ರೆ ಆವರಣ ಜಾಗವಲ್ಲ ಎಂದು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಕ್ಕೆ ಹೀಗೆ ಪ್ರತಿಕ್ರಿಯಿಸಿದರು- ‘ಮೋದಿ ಸರ್ಕಾರ ಯಾವ ರೀತಿಯ ಭಾರತ ನಿರ್ಮಿಸುತ್ತಿದೆ. ಇದೇ ಮೊದಲ ಬಾರಿಗೆ ದೇಶದ ಸೈನಿಕನನ್ನು ನೋಡಲು ಹಾಗೂ ಆತನ ಕುಟುಂಬದವರನ್ನು ಭೇಟಿ ಮಾಡಲು ಬಿಡುತ್ತಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಅವರು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಗೊತ್ತಾಗುತ್ತದೆ.’

ಇದಕ್ಕೂ ಮುನ್ನ ಪೊಲೀಸರು ಎಎಪಿ ನಾಯಕ ಮನೀಷ್ ಸಿಸೋಡಿಯಾ ಅವರನ್ನು ಆಸ್ಪತ್ರೆಗೆ ಭೇಟಿ ನೀಡದಂತೆ ತಡೆ ಹಿಡಿಯಲಾಗಿತ್ತು. ಪೊಲೀಸರ ಈ ವರ್ತನೆ ವಿರುದ್ಧ ಟೀಕೆಗಳು ಬಂದ ನಂತರ ದೆಹಲಿ ಪೊಲೀಸ್ ಅಧಿಕಾರಿ ಎಂ.ಕೆ ಮೀನಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ‘ಮೊದಲು ಎಎಪಿ ನಾಯಕರು ಬಂದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾಕಷ್ಟು ಅಡಚಣೆಗಳಿದ್ದ ಪರಿಣಾಮ ಅವರನ್ನು ಒಳಗೆ ಬಿಡಲಾಗಲಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಮಾಹಿತಿ ನೀಡಿದ್ದೆವು. ನಮ್ಮ ಮಾಹಿತಿ ಸಿಕ್ಕ ನಂತರವೂ ರಾಹುಲ್ ಗಾಂಧಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಹೀಗಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಇತರೆ ನಾಯಕರನ್ನು ತಡೆಯಲಾಯಿತು. ಆಸ್ಪತ್ರೆಯಲ್ಲಿ ಪರಿಸ್ಥಿತಿಯನ್ನು ಹದಗೆಡಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಪ್ರಜಾಪ್ರಭುತ್ವ ಇದೆ ಎಂಬ ಮಾತ್ರಕ್ಕೆ ಆಸ್ಪತ್ರೆಯಲ್ಲಿನ ವಾತಾವರಣ ಹಾಳು ಮಾಡುವುದು ಸರಿಯಲ್ಲ’ ಎಂದರು.

ಇನ್ನು ಇದೇ ಅವಕಾಶವನ್ನು ಬಳಸಿಕೊಂಡ ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಮುಮಂ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿದರು. ‘ಒಆರ್ ಒಪಿ ಯೋಜನೆ ಜಾರಿಗೊಳಿಸದೇ ಕೇಂದ್ರ ಸರ್ಕಾರ ದೇಶದ ಯೋಧರ ಜೀವದ ಜತೆ ಆಟವಾಡುತ್ತಿದೆ. ಈ ಯೋಜನೆ ಜಾರಿಯಾಗದ ಕಾರಣಕ್ಕೆ ಮಾಜಿ ಯೋಧ ರಾಮ್ ಕಿಶನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಭಾರತದಲ್ಲಿ ಮೋದಿ ರಾಜ್ ವ್ಯವಸ್ಥೆ ಇದ್ದು, ಇಲ್ಲಿ ರೈತರು ಮತ್ತು ಯೋಧರು ಸಾವಿಗೆ ಶರಣಾಗುತ್ತಿದ್ದಾರೆ. ಒಆರ್ ಒಪಿ ಜಾರಿಗೆ ತಂದಿದ್ದರೆ ರಾಮ್ ಕಿಶನ್ ಆತ್ಮಹತ್ಯೆಗೆ ಮುಂದಾಗುತ್ತಲೇ ಇರಲಿಲ್ಲ’ ಎಂದು ಹರಿಹಾಯ್ದರು.

ಕೇಜ್ರಿವಾಲರ ನಡೆಯಲ್ಲೂ ವಿರೋಧಾಭಾಸದ ವ್ಯಂಗ್ಯ ಢಾಳಾಗಿತ್ತು. ಆಪ್ ನಲ್ಲಿ ತನಗೆ ಲೈಂಗಿಕ ಕಿರುಕುಳವಾಗುತ್ತಿದೆ ಎಂದು ಮಹಿಳೆಯೊಬ್ಬಳು ಇವರಲ್ಲಿ ದೂರು ಕೊಟ್ಟಾಗ ಕ್ರಮ ಕೈಗೊಳ್ಳದೇ ಸುಮ್ಮನಿದ್ದುದ್ದರಿಂದ ಆಕೆ ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡರು. ದೂರು ಕೊಟ್ಟಾಗ ಕೇಜ್ರಿವಾಲ್ ಸರಿಯಾಗಿ ಸ್ಪಂದಿಸದೇ ಅನುಸರಿಸಿಕೊಂಡು ಹೋಗುವಂತೆ ಹೇಳಿದ್ದೇ ತಮ್ಮ ಮಗಳು ಈ ಆಘಾತಕಾರಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಅವರ ಮನೆಯವರು ಆಪಾದಿಸಿದ್ದರು. ಹೀಗೆ ತಮಗೆ ನೇರವಾಗಿ ಸಂಬಂಧಿಸಿರುವ ಪ್ರಕರಣದ ಬಗ್ಗೆ ಏನೊಂದು ಉತ್ತರದಾಯಿತ್ವ ತೋರದ ಅರವಿಂದ ಕೇಜ್ರಿವಾಲ್, ಮಾಜಿ ಯೋಧನ ಆತ್ಮಹತ್ಯೆ ಆಗುತ್ತಲೇ ಮೋದಿ ನಿಂದನೆಗೆ ನಿಂತರು.

ಅಂದಹಾಗೆ, ಸಾವಿನ ಲಾಭಕ್ಕೆ ತಥಾಕಥಿತ ಸೆಕ್ಯುಲರ್ ಗಣಗಳೆಲ್ಲ ಒಂದುಗೂಡಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿ, ರಾಹುಲ್ ಗಾಂಧಿ ಹಾಗೂ ಮನೀಷ್ ಸಿಸೋಡಿಯಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಹಾಗಾದರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲೇಬಾರದೇ?

ಹಾಗೇನಿಲ್ಲ. ಆದರೆ ಅದಕ್ಕೊಂದು ನೈತಿಕತೆ ಮತ್ತು ಜವಾಬ್ದಾರಿ ಬೇಕಲ್ಲವೇ? ಏಕಶ್ರೇಣಿ-ಏಕ ಪಿಂಚಣಿ ಎಂಬುದು ನಿನ್ನೆ ಹುಟ್ಟಿದ ಬೇಡಿಕೆ ಅಲ್ಲ. 40 ವರ್ಷಗಳದ್ದು. ಇದನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನಿರಾಕರಿಸುತ್ತಲೇ ಬಂತು. ಅಧಿಕಾರಕ್ಕೆ ಬಂದ ಒಂದೂವರೆ ವರ್ಷಗಳಲ್ಲಿ ಮೋದಿ ಸರ್ಕಾರ ಇದನ್ನು ಜಾರಿಗೊಳಿಸಿತು. ಆದರೆ ಇದೊಂದು ಸಂಕೀರ್ಣ ರಚನೆಯಾದ್ದರಿಂದ ಇನ್ನೂ ಕೆಲ ಅಂಶಗಳಲ್ಲಿ ಹಲವರಿಗೆ ಆಕ್ಷೇಪ ಉಳಿದುಕೊಂಡಿದೆ. ನಿವೃತ್ತ ಸೇನಾ ಯೋಧರ ದೊಡ್ಡ ಸಮೂಹ ಒ ಆರ್ ಒ ಪಿ ಜಾರಿಯಾಗುತ್ತಲೇ ಪ್ರತಿಭಟನೆ ಹಿಂತೆಗೆದುಕೊಂಡಿತು. ಇನ್ನು ಉಳಿದಿರುವ ಕೆಲ ಅಸಮಾಧಾನಗಳನ್ನು ಸರಿಪಡಿಸುವ ಪ್ರಯತ್ನ ಜಾರಿಯಲ್ಲಿದೆ ಎಂದು ರಕ್ಷಣಾ ಸಚಿವ ಮನೋಹರ ಪಾರಿಕರ್ ಹೇಳಿದ್ದಾರೆ.

ಹೀಗಿರುವಾಗ ಒ ಆರ್ ಒ ಪಿ ವಿಷಯದಲ್ಲಿ ತನ್ನ ಪಕ್ಷದ ಆಡಳಿತವಿದ್ದಷ್ಟು ಕಾಲವೂ ಗಡದ್ದು ನಿದ್ದೆ ಹೊಡೆದ ರಾಹುಲ್ ಗಾಂಧಿಗೆ ಈಗ ಮಾತನಾಡುವ ಯಾವ ನೈತಿಕತೆ ಇದೆ? ಈ ವಿಷಯದಲ್ಲಿ ಕಾಂಗ್ರೆಸ್ಸಿಗೆ ಬದ್ಧತೆ ಇದೆ ಎಂದು ಯಾವ ಜೋಕರ್ ನಂಬಲು ಸಾಧ್ಯ?

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದೇಶ ಸಚಿವಾಲಯದ ರಾಜ್ಯ ಸಚಿವ ಹಾಗೂ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ. ಸಿಂಗ್ ‘ಈ ಒಆರ್ ಒಪಿ ಯೋಜನೆಯನ್ನು ನಮ್ಮ ಸರ್ಕಾರವೇ ಜಾರಿಗೆ ತಂದಿದೆ. ಕೆಲವರ ಅಸಮಾಧಾನಗಳು ಇನ್ನೂ ಇವೆ ಎಂಬುದು ನಿಜ. ಅವನ್ನು ಪರಿಶೀಲಿಸಲು ಸಮಿತಿಯನ್ನೂ ರಚಿಸಲಾಗಿದೆ. ಹೀಗಾಗಿ ರಾಜಕೀಯ ಲಾಭಕ್ಕೆ ಈ ವಿಷಯವನ್ನು ಬಳಸಬಾರದು. ಆದರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ. ಮಾಜಿ ಯೋಧ ರಾಮ್ ಕಿಶನ್ ಸಾವಿಗೆ ಒಆರ್ ಒಪಿ ಕಾರಣ ಎಂದು ತಕ್ಷಣಕ್ಕೆ ಹೇಳಲಾಗುತ್ತಿದೆಯಾದರೂ, ಅವರ ಮಾನಸಿಕ ಸ್ಥಿತಿ ಹೇಗಿತ್ತು, ಸಾವಿಗೆ ದೂಡಿದ ಅಂಶಗಳೇನು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಬೇಕಿದೆ. ’ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply