ಟಿಪ್ಪು ಜನ್ಮದಿನ ಆಚರಣೆ ಪ್ರಶ್ನಿಸಿದ ಹೈಕೋರ್ಟ್, ಮೇಕೆದಾಟು ಯೋಜನೆ ಮಾಡಿಯೇ ತೀರುತ್ತೇವೆ ಎಂದ ಸಿದ್ದರಾಮಯ್ಯ, ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ

ಚಿತ್ರದುರ್ಗದಲ್ಲಿ ಸರ್ಕಾರದ ಟಿಪ್ಪು ಜಯಂತಿ ವಿರೋಧಿಸಿ ಒನಕೆ ಹಿಡಿದು ಪ್ರತಿಭಟಿಸಿದ ವನಿತೆಯರು

ಡಿಜಿಟಲ್ ಕನ್ನಡ ಟೀಮ್:

ಟಿಪ್ಪು ಜನ್ಮದಿನ ಆಚರಣೆ ಉದ್ದೇಶವೇನು ಎಂದು ಪ್ರಶ್ನಿಸಿದ ಹೈಕೋರ್ಟ್

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ, ಕೇವಲ ರಾಜ. ಹೀಗಾಗಿ ಟಿಪ್ಪು ಜನ್ಮದಿನ ಆಚರಿಸುವ ಉದ್ದೇಶ ಏನು? ಹೀಗೆ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ ಹೈಕೋರ್ಟ್. ನವೆಂಬರ್ 10ರಂದು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿದ್ದು, ಸರ್ಕಾರದ ಈ ನಿರ್ಧಾರ ತಡೆ ನೀಡುವಂತೆ ಮಂಜುನಾಥ್ ಎಂಬುವವರು ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಕೆ ಮುಖರ್ಜಿ, ‘ಟಿಪ್ಪು, ಆಗಿನ ಸಂಸ್ಥಾನದ ಒಬ್ಬ ಕಾಜನಷ್ಟೇ. ಬ್ರಿಟೀಷರು ನಿಜಾಮರ ಮೇಲೆ ಯುದ್ಧ ಮಾಡಿದ್ದರು ಎಂಬ ಕಾರಣಕ್ಕೆ ಆತ ಯುದ್ಧ ಮಾಡಿದ್ದ. ಹೀಗಾಗಿ ನಿಜಾಮರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಲು ಹೇಗೆ ಸಾಧ್ಯ? ಎಲ್ಲಾ ರಾಜರಂತೆ ಟಿಪ್ಪು ಕೂಡ ಸಂಸ್ಥಾನ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ. ಈ ಎಲ್ಲದರ ನಡುವೆ ಟಿಪ್ಪು ಜಯಂತಿ ಆಚರಿಸುವ ಅಗತ್ಯವಾದರೂ ಏನಿದೆ? ಟಿಪ್ಪು ಜಯಂತಿ ಆಚರಣೆಯಿಂದ ಸರ್ಕಾರಕ್ಕೆ ಹೆಚ್ಚು ತಲೆ ನೋವು’ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ.

ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ… ಸಿಎಂ

‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಅಣಕಟ್ಟು ಯೋಜನೆ ಅನುಷ್ಠಾನ ಮಾಡಿಯೇ ತಿರುತ್ತೇವೆ. ಅಲ್ಲದೆ ಕಾವೇರಿ ಐ ತೀರ್ಪಿನಂತೆ ರಾಜ್ಯದ ಪಾಲಿಗೆ ಹಂಚಿಕೆಯಾಗಿರುವ ನೀರು ಪಡೆಯುತ್ತೇವೆ’ ಎಂದು ಹೇಳಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ‘ಯೋಜನೆಯ ಕರಡು ಸಿದ್ಧವಾಗಿದೆ. ₹5780 ಕೋಟಿ ವೆಚ್ಚದಲ್ಲಿ ಮೇಕೆದಾಟು ಬಳಿ 60 ಟಿಎಂಸಿ ನೀರು ಸಂಗ್ರಹದ ಅಣೆಕಟ್ಟು ಕಟ್ಟುತ್ತೇವೆ. ಇದರಿಂದ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡು ರೈತರಿಗೂ ನೆರವಾಗಲಿದೆ. ಈ ಯೋಜನೆಗೆ ತಜ್ಞರು ಒಪ್ಪಿಗೆ ಸೂಚಿಸಿದ್ದಾರೆ. ಕೇಂದ್ರದಿಂದ ಅನುಮತಿ ಬಂದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಇಲ್ಲಿ ಕೆಆರ್ ಎಸ್ ಗಿಂತ 15 ರಿಂದ 20 ಟಿಎಂಸಿ ನೀರು ಹೆಚ್ಚಾಗಿ ಶೇಖರಣೆಯಾಗಲಿದೆ. ಈ ನೀರನ್ನು ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಬಳಕೆ ಮಾಡಲಾಗುವುದು’ ಎಂದರು.

ತಜ್ಞರ ಸಮಿತಿಗೆ ರಾಜ್ಯದ ಪರಿಸ್ಥಿತಿ ಮನವರಿಕೆ

ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆಂದು ಕೇಂದ್ರ ತಜ್ಞರ ಸಮಿತಿ ಆಗಮಿಸಿದ್ದು, ಬುಧವಾರ ಸಮಿತಿಗೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. ಮುಂಗಾರು ಮಳೆ ವೈಫಲ್ಯದಿಂದಾಗಿ ರಾಜ್ಯದ ಬಹುತೇಕ ಭಾಗಗಳು ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವ ಪರಿಸ್ಥಿತಿಗೆ ಸಿಲುಕಿದೆ. ಪರಿಣಾಮ ನಲವತ್ತು ವರ್ಷಗಳಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಇಷ್ಟು ದೊಡ್ಡ ಮಟ್ಟದ ಅಭಾವ ಎದುರಾಗಿದೆ. ಸತತ 3 ವರ್ಷಗಳಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಕಳೆದ ವರ್ಷ 148 ತಾಲೂಕುಗಳುಬರ ಪರಿಸ್ಥಿತಿಯಲ್ಲಿದ್ದವು. ಈ ವರ್ಷ ಈಗಾಗಲೇ 149 ತಾಲೂಕುಗಳು ಬರದ ಪಟ್ಟಿಗೆ ಸೇರಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತಾಲೂಕುಗಳು ಸೇರಲಿವೆ. ಜತೆಗೆ ಕೃಷಿಗೆ ನೀರು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಜಾನುವಾರುಗಳಿಗೆ ಮೇವಿನ ಕೊರತೆ, ರೈತ ಕಾರ್ಮಿಕರು ಗುಳೆ ಹೋಗುವ ಸಮಸ್ಯೆಯನ್ನು ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ನೀರಜ್ ಅಡಿಡಾಮ್, ಡಾ.ಅಶೋಕ್ ಗುಪ್ತಾ, ಎಸ್.ಸಿ ಮೀನಾ ಅವರನ್ನೊಳಗೊಂಡ ತಜ್ಞರ ಸಮಿತಿಗೆ ವಿವರಿಸಲಾಗಿದೆ. ವಿಧಾನಸೌಧದ ಸಭಾಂಗಣದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೃಷಿ ಸಚಿವ ಕೃಷ್ಣಬೈರೆಗೌಡ, ಕಾನೂನು ಸಚಿವ ಟಿ.ಬಿ ಜಯಚಂದ್ರ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಸಮಿತಿಗೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿದರು.

ನಿಗಮ ಮಂಡಳಿ ಅಧ್ಯಕ್ಷರ ನೇಮಕ

ಬಹುದಿನಗಳಿಂದ ಚರ್ಚೆಯಲ್ಲಿದ್ದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಆಯ್ಕೆ ಬುಧವಾರ ಅಂತಿಮಗೊಂಡಿದೆ. ಒಟ್ಟು 91 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಆ ಪೈಕಿ 21 ಶಾಸಕರು ಹಾಗೂ 70 ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಈ ಸ್ಥಾನವನ್ನು ನೀಡಲಾಗಿದೆ. ಮಾಲಿಕಯ್ಯ ವೆಂಕಯ್ಯ ಗುತ್ತೇದಾರ, ಆರ್.ವಿ.ದೇವರಾಜ್, ಕೆ.ವೆಂಕಟೇಶ್, ಎಂ.ಕೆ ಸೋಮಶೇಖರ್, ಡಿ.ಸುಧಾಕರ್ ಈ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆದ ಪ್ರಮುಖ ಶಾಸಕರಾಗಿದ್ದಾರೆ. ಇದರೊಂದಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅತೃಪ್ತರಾಗಿದ್ದ ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಗುವ ನಿಗಮ ಮಂಡಳಿ ಸ್ಥಾನವನ್ನು ನೀಡಲಾಗಿದೆ.

ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್

ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಮಾರ್ಚ್ ತಿಂಗಳ ಒಳಗಾಗಿ ಲ್ಯಾಪ್ ಟಾಪ್ ನೀಡಲು ಸರ್ಕಾರ ನಿರ್ಧರಿಸಿದೆ. ಬಜೆಟ್ ನಲ್ಲಿ ಘೋಷಿಸಿದ್ದ ಕಾರ್ಯಕ್ರಮದ ಪ್ರಕಾರ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಪದವಿ, ಪಿಎಚ್ಡಿ ಸೇರಿದಂತೆ ಇತರೆ ವೃತ್ತಿಪರ ಕೋರ್ಸು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಸಿಗಲಿದೆ ಎಂದಿದ್ದಾರೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ. ಈ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನಂತರ ಶಿಕ್ಷಣ ಸಂಸ್ಥೆಗಳ ಮೂಲಕ ನೇರವಾಗಿ ಅವರಿಗೆ ಲ್ಯಾಪ್ ಟಾಪ್ ನೀಡಲಾಗುವುದು ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದ ಕರುಣ್, ಗಂಭೀರ್, ಪಾಂಡ್ಯ

ಇದೇ ತಿಂಗಳು 9ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬುಧವಾರ ಭಾರತ ತಂಡವನ್ನು ಪ್ರಕಟಿಸಲಾಯಿತು. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರಂಭಿಕ ಎರಡು ಪಂದ್ಯಗಳಿಗೆ ಮಾತ್ರ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ ಗಾಯದ ಸಮಸ್ಯೆ ಎದುರಿಸುತ್ತಿರುವ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಬದಲಿಗೆ ಗೌತಮ್ ಗಂಭೀರ್ ಅವರನ್ನು ಮುಂದುವರಿಸಿದೆ. ಕರ್ನಾಟಕದ ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ ಸಹ ಸ್ಥಾನ ಪಡೆದಿದ್ದಾರೆ.

ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಕರುಣ್ ನಾಯರ್, ವೃದ್ಧಿಮಾನ್ ಸಾಹ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ಜಯಂತ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಉಮೇಶ್ ಯಾದವ್.

Leave a Reply