ಜೂನಿಯರ್ ಶಾಸಕರ ಅಧೀನದಲ್ಲಿ ನಾವು ಕೆಲಸ ಮಾಡುವುದೆಂತು, ನಿಗಮ-ಮಂಡಳಿಗಳಿಗೆ ನೇಮಕದ ಬೆನ್ನಲ್ಲೇ ಕಾಂಗ್ರೆಸಿನಲ್ಲಿ ಅತೃಪ್ತಿ ಶುರುವಾಯಿತು

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರ ಮನವೊಲೈಕೆಗಾಗಿ ಮಾಡಲಾದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡಿಲ್ಲ. ಇದರಿಂದ ಪಕ್ಷದ ಶಾಸಕರಲ್ಲಿನ ಅಸಮಾಧಾನವನ್ನು ಶಮನಗೊಳಿಸುವ ಬದಲಿಗೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

ಒಟ್ಟು 91 ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಆಯ್ಕೆ ಮಾಡಲಾಗಿದ್ದು, ಆ ಪೈಕಿ 21 ಶಾಸಕರಿಗೆ ಈ ಸ್ಥಾನ ನೀಡಲಾಗಿತ್ತು. ಆ ಪೈಕಿ ನಾಲ್ವರು ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮಗೆ ಈ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದು ನೇರವಾಗಿ ತಿರಸ್ಕರಿಸಿದ್ದಾರೆ.

ಈ ಅತೃಪ್ತ ಶಾಸಕರ ಪೈಕಿ ವಸಂತ ಬಂಗೇರ, ಗೋಪಾಲ ಪೂಜಾರಿ, ಶಿವಾನಂದ ಪಾಟೀಲ್, ಎನ್.ವೈ ಗೋಪಾಲಕೃಷ್ಣ, ಆರ್.ವಿ ದೇವರಾಜ್, ನಸೀರ್ ಅಹಮದ್, ಫಿರೋಜ್ ಸೇಠ್ ಮತ್ತು ಬಿ.ಆರ್ ಯಾವಗಲ್ ಪ್ರಮುಖರಾಗಿದ್ದಾರೆ.

ಈ ನಿಗಮ ಮಂಡಳಿ ನೇಮಕದಿಂದ ಹಿರಿಯ ಶಾಸಕರು ರಾಜಕೀಯದಲ್ಲಿ ತಮಗಿಂತ ಕಿರಿಯರಾದ ಸಚಿವರ ಕೈಕೆಳಗೆ ಕೆಲಸ ಮಾಡಬೇಕಲ್ಲ ಎಂಬುದು ಹಾಗೂ ತಾವು ನಿರೀಕ್ಷಿಸಿದ್ದ ನಿಗಮ ಮಂಡಳಿ ಸಿಗದೇ ಬೇರೆ ನಿಗಮ ಮಂಡಳಿ ಸಿಕ್ಕಿರುವುದು ಅಸಮಾಧಾನಕ್ಕೆ ಪ್ರಮುಖ ಕಾರಣಗಳಾಗಿವೆ. ಹೀಗಾಗಿ ವಸಂತ ಬಂಗೇರ, ಗೋಪಾಲ ಪೂಜಾರಿ, ಶಿವಾನಂದ ಪಾಟೀಲ್, ಎನ್.ವೈ ಗೋಪಾಲಕೃಷ್ಣ ಅವರು ತಮಗೆ ಈ ಸ್ಥಾನ ಬೇಡ ಎಂದು ಮುಖ್ಯಮಂತ್ರಿಗಳು ಬಳ್ಳಾರಿ ಪ್ರವಾಸ ಕೈಗೊಳ್ಳುವ ಮುನ್ನ ಭೇಟಿ ಮಾಡಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಈ ನಿಗಮ ಮಂಡಳಿ ಆಯ್ಕೆಯಿಂದಾಗಿ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ನಿನ್ನೆ ಮೊನ್ನೆ ಬಂದ ಒಂದು ಅಥವಾ ಎರಡು ಬಾರಿ ಆಯ್ಕೆಯಾಗಿ ಮಂತ್ರಿ ಸ್ಥಾನದಲ್ಲಿ ಕುಳಿತಿರುವವರ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹಿರಿಯ ಶಾಸಕ ಬಿ.ಆರ್. ಯಾವಗಲ್ ಅವರಿಗೆ ಸಚಿವ ವಿನಯ್ ಕುಲಕರ್ಣಿ ಅವರ ಖಾತೆ ವ್ಯಾಪ್ತಿಗೆ ಬರುವ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಐದು ಬಾರಿ ಶಾಸಕರಾಗಿರುವ ಯಾವಗಲ್ ಅವರು ಎಚ್.ಕೆ ಪಾಟೀಲ್ ಅವರ ಜತೆಯಲ್ಲಿ ರಾಜಕಾರಣ ಮಾಡಿದ ನಾಯಕರು. ಈಗ ತಮಗಿಂತ ಕಿರಿಯ ವಿನಯ್ ಕುಲಕರ್ಣಿ ಅವರ ನಿಯಂತ್ರಣದಲ್ಲಿರುವ ಖಾತೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಇತ್ತ ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಸ್ಥಾನ ಪಡೆದಿರುವ ಬೆಳಗಾವಿಯ ಹಿರಿಯ ಶಾಸಕ ಫಿರೋಜ್ ಸೇಠ್, ಮೊದಲ ಬಾರಿ ಶಾಸಕರಾಗಿ ಪ್ರವಾಸೋದ್ಯಮ ಮಂತ್ರಿಯಾಗಿರುವ ಪ್ರಿಯಾಂಕ್ ಖರ್ಗೆ ಅವರ ಖಾತೆಯಲ್ಲಿ ಕೆಲಸ ಮಾಡಬೇಕಿದೆ.

ಇನ್ನು ದೆಹಲಿ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ನಸೀರ್ ಅಹಮದ್ ಅವರು ಬಂಗಾರಪ್ಪನವರ ಕಾಲದಲ್ಲಿಯೇ ಸಚಿವರಾಗಿ ಹಾಗೂ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿರುವ ಅನುಭವ ಹೊಂದಿರುವ ಹಿರಿಯ ನಾಯಕ. ಇವರಿಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಇದರಿಂದ ಅಲ್ಪಸಂಖ್ಯಾತ ಸಚಿವ ತನ್ವೀರ್ ಸೇಠ್ ಅವರ ಕೈಕೆಳಗೆ ಕೆಲಸ ಮಾಡಬೇಕಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಏನಂದ್ರೆ, ನಸೀರ್ ಅಹಮದ್ ಅವರು ತನ್ವೀರ್ ಸೇಠ್ ಅವರ ತಂದೆ ಅಜೀಜ್ ಸೇಠ್ ಜತೆ ರಾಜಕಾರಣ ಮಾಡಿದವರು. ಅಷ್ಟೇ ಅಲ್ಲದೆ ರಾಜಕೀಯದಲ್ಲಿ ತನ್ವೀರ್ ಸೇಠ್ ಗೆ ಮಾರ್ಗದರ್ಶಕರೂ ಕೂಡ. ಹೀಗಿರುವಾಗ ನಸೀರ್ ಅವರೇ ತನ್ವೀರ್ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಸ್ಥಾನದ ಆಕಾಕ್ಷಿಯಾಗಿದ್ದ ಆರ್.ವಿ ದೇವರಾಜ್ ಅವರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಸಿಕ್ಕಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ವಿರೋಧ ವ್ಯಕ್ತವಾಗಿದ್ದರಿಂದ ಆರ್.ವಿ.ದೇವರಾಜ್ ಅವರಿಗೆ ಕೆ.ಎಸ್.ಆರ್.ಟಿ.ಸಿ ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅಷ್ಟು ಸಾಲದು ಎಂಬಂತೆ ಆರ್.ವಿ ದೇವರಾಜ್ ಅವರಿಗೆ ಚಾಮರಾಜಪೇಟೆ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ರಾಜಕೀಯ ಪ್ರತಿಸ್ಫರ್ಧಿಯಾಗಿರುವ ಮಾಜಿ ಮೇಯರ್ ಪಿ.ಆರ್ ರಮೇಶ್ ಅವರು ಈ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ರಮೇಶ್ ಬಿಟ್ಟು ಹೋದ ಸ್ಥಾನವನ್ನು ತಾನು ತುಂಬಬೇಕಿದೆಯಲ್ಲ ಎಂಬ ಬೇಸರ ಆರ್.ವಿ ದೇವರಾಜ್ ಅವರದು.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನಕ್ಕೆಂದು ಮಾಡಲಾದ ನಿಗಮ ಮಂಡಳಿ ಅಧ್ಯಕ್ಷರ ನೇಮಕ, ಪಕ್ಷಕ್ಕೆ ಪರಿಹಾರ ನೀಡದೇ ಶಾಸಕರ ಅತೃಪ್ತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಈ ಅತೃಪ್ತರನ್ನು ಹೇಗೆ ಓಲೈಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Leave a Reply