ಯೋಧ ರಾಮ್ ಕಿಶನ್ ಸಾವು ಹುಟ್ಟು ಹಾಕಿರುವ ಪ್ರಶ್ನೆ- ಹಾಗಾದರೆ ಒಆರ್ ಒಪಿ ಅನುಷ್ಠಾನವಾಗಿಲ್ಲವೆ?

ಡಿಜಿಟಲ್ ಕನ್ನಡ ಟೀಮ್:

ರಾಮ್ ಕಿಶನ್ ಗ್ರೆವಾಲ್ ಅವರ ಸಾವಿನ ಪ್ರಕರಣವನ್ನು ರಾಜಕೀಯ ಮಾಡಬೇಡಿ ಎಂದು ಮಾಜಿ ಯೋಧನ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ಒಆರ್ ಒಪಿ ಯೋಜನೆ ಜಾರಿ ತಡವಾಗಿದೆ ಎಂಬ ಕಾರಣಕ್ಕೆ 70 ವರ್ಷದ ಮಾಜಿ ಸೈನಿಕ ರಾಮ್ ಕಿಶನ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಹೋರಾಟಕ್ಕೆ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ.

ಆ ಎಲ್ಲ ಬೆಳವಣಿಗೆಗಳ ನಡುವೆ ರಾಮ್ ಕಿಶನ್ ಅವರ ಹಿನ್ನೆಲೆ ನೋಡುವುದಾದ್ರೆ, ಅವರು 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಆರಂಭಿಕ ಆರು ವರ್ಷಗಳ ಕಾಲ ಪ್ರಾದೇಶಿಕ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ 24 ವರ್ಷಗಳ ಕಾಲ ಡಿಫೆನ್ಸ್ ಕಾರ್ಪ್ ಆಗಿ ಕೆಲಸ ಮಾಡಿದ್ದರು. ರಾಮ್ ಕಿಶನ್ ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಐವರು ಗಂಡು ಮಕ್ಕಳಿದ್ದಾರೆ. ದೊಡ್ಡ ಮಗ ದಿಲಾವರ್ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ನಾಲ್ಕು ಗಂಡು ಮಕ್ಕಳು ನಿರುದ್ಯೋಗಿಗಳು. ಆ ಪೈಕಿ ಮೂವರು ಎಂ.ಎ ಪದವಿಧರರು.

ತಮ್ಮ ತಂದೆಯ ಸಾವಿನ ಬಗ್ಗೆ ಬುಧವಾರ ತಮ್ಮ ನೋವು ವ್ಯಕ್ತಪಡಿಸಿದ ಕೊನೆಯ ಮಗ ಕುಲ್ವಂತ್, ‘ನಮ್ಮ ತಂದೆಯ ದೇಹ ಯಾವಾಗ ಮನೆಗೆ ಬರುತ್ತದೊ ಎಂದು ತಿಳಿದಿಲ್ಲ. ಆದರೆ, ನಮ್ಮ ತಂದೆ ಸಾವಿನ ವಿಷಯ ರಾಜಕೀಯವಾಗಬಾರದು. ಸರ್ಕಾರ ಇಂತಹ ಸಂದರ್ಭದಲ್ಲಿ ನಮಗೆ ನೆರವು ನೀಡಬೇಕು’ ಎಂದರು.

ತಮ್ಮ ಪತಿಯ ಸಾವಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ಪತ್ನಿ ಕಿತಾಬೊ ದೇವಿ, ತನ್ನ ಪತಿ ಧೈರ್ಯಶಾಲಿ, ಮಾನಸಿಕವಾಗಿ ಸದೃಢರಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ಏಕ ಶ್ರೇಣಿ ಏಕ ಪಿಂಚಣಿ ಬಗ್ಗೆ ಸಾಕಷ್ಟು ಆಸಕ್ತಿ ವಹಿಸಿದ್ದ ರಾಮ್ ಕಿಶನ್, ಈ ಯೋಜನೆಗಾಗಿ ಯಾವ ರೀತಿ ಪ್ರಯತ್ನ ಪಟ್ಟಿದ್ದರು ಎಂಬುದನ್ನು ಪತ್ನಿ ದೇವಿ ಅವರು ವಿವರಿಸಿರೋದು ಹೀಗೆ…

‘ಒಆರ್ ಒಪಿ ಯೋಜನೆ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಈ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕ ಸಭೆಯಾಗಿರಲಿ, ದೊಡ್ಡ ಸಭೆಯಾಗಿರಲಿ, ಸಣ್ಣ ಅಥವಾ ಬೃಹತ್ ಪ್ರತಿಭಟನೆಗಳು ಸೇರಿದಂತೆ ಪ್ರತಿಯೊಂದರಲ್ಲೂ ಭಾಗವಹಿಸುತ್ತಿದ್ದರು. ಹೀಗಾಗಿ ಈ ಬಾರಿ ದೆಹಲಿಗೆ ತೆರಳಿದ್ದು ನಮಗೆ ಯಾವುದೇ ಆಶ್ಚರ್ಯವಿರಲಿಲ್ಲ. ಮಾರನೇ ದಿನ ಮನೆಗೆ ಮರಳುವುದಾಗಿ ತಿಳಿಸಿದ್ದರು. ಆದರೆ ನನ್ನ ಮಗಳು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕರೆ ಮಾಡಿದಾಗ ಆಘಾತವಾಯಿತು.’

ಬುಧವಾರ ಸಂಜೆ ರಾಮ್ ಕಿಶನ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ, ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸಲಾಯ್ತು. ಗುರುವಾರ ರಾಮ್ ಕಿಶನ್ ಅವರ ದೇಹವನ್ನು ತವರಿಗೆ ತರಲಾಯಿತು.

ಈ ಮಧ್ಯೆ ಪ್ರಕರಣ ರಾಜಕೀಯ ಪಕ್ಷಗಳಿಗೆ ಸರ್ಕಾರದ ವಿರುದ್ಧ ದಾಳಿ ಮಾಡಲು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದ್ದು, ‘ಕೇಂದ್ರ ಸರ್ಕಾರ ಒಆರ್ ಒಪಿ ಯೋಜನೆಯನ್ನು ಜಾರಿಗೆ ತಂದಿಲ್ಲ. ಇದು ಯೋಧರಿಗೆ ಮಾಡುತ್ತಿರುವ ದ್ರೋಹ’ ಎಂದು ವಾಗ್ದಾಳಿ ಮಾಡಲಾಗುತ್ತಿದೆ.

ಆದರೆ…

ಮೂಲಗಳ ಮಾಹಿತಿ ಪ್ರಕಾರ, ರಾಮ್ ಕಿಶನ್ ಈ ಯೋಜನೆ ಪ್ರಕಾರವೇ ತಮ್ಮ ಪಿಂಚಣಿಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದ್ದು, ಬ್ಯಾಂಕುಗಳ ತಾಂತ್ರಿಕ ತೊಂದರೆಯಿಂದಾಗಿ ಅವರಿಗೆ ಹಣ ತಲುಪುವುದು ತಡವಾಗಿದೆ. ರಾಮ್ ಕಿಶನ್ ಅವರು ನೇರವಾಗಿ ಸರ್ಕಾರವನ್ನೇ ಸಂಪರ್ಕಿಸಿದ್ದರೆ ಈ ಸಮಸ್ಯೆ ಬೇಗನೆ ಬಗೆಹರಿಯುವ ಸಾಧ್ಯತೆ ಇತ್ತು. ಇನ್ನು ರಾಮ್ ಕಿಶನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ, ಅವರು ವಿಷ ಸೇವಿಸುವ ಸಂದರ್ಭದಲ್ಲಿ ಅಥವಾ ಅದಕ್ಕೂ ಮುನ್ನ ಅವರೊಂದಿಗೆ ಯಾರಿದ್ದರು, ಅವರಿಗೆ ವಿಷ ತಂದುಕೊಟ್ಟವರಾರು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಹೀಗಾಗಿ ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಯೋಜನೆ ಜಾರಿ ಬಗ್ಗೆ ಪರಿಕರ್ ಮಾಹಿತಿ…

ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರೆ ಪಕ್ಷದ ನಾಯಕರು ಒಆರ್ ಒಪಿ ಯೋಜನೆ ಜಾರಿಯೇ ಆಗಿಲ್ಲ ಎಂದು ಟೀಕೆ ಮಾಡುತ್ತಿರುವಾಗ, ಕೇಂದ್ರ ರಕ್ಷಣಾ ಮಂತ್ರಿ ಮನೋಹರ್ ಪರಿಕರ್ ಯೋಜನೆ ಜಾರಿಯಾಗಿರುವ ಬಗ್ಗೆ ನೀಡಿದ ಮಾಹಿತಿ ಹೀಗಿದೆ…

‘ರಾಮ್ ಕಿಶನ್ ಅವರ ಸಾವಿನಿಂದ ಬಹಳ ಬೇಸರವಾಗಿದೆ. ಅವರಿಗೆ ಸಂತಾಪ ಸೂಚಿಸುತ್ತೇನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಒಆರ್ ಒಪಿ ಯೋಜನೆಯಿಂದ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಈ ಯೋಜನೆಯಡಿ ಈಗಾಗಲೇ ₹ 5,507.47 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. 2014ರ ಜುಲೈ ವೇಳೆಗೆ ಈ ಯೋಜನೆಯ ಫಲಾನುಭವಿಗಳ ಸಂಖ್ಯೆ 20,63,763 ಇದ್ದು, ಆ ಪೈಕಿ 19,12,520 ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ಹಣ ನೀಡಲಾಗಿದೆ. ಉಳಿದ 1,50,313 ಮಂದಿಗೆ ಬಾಕಿ ಉಳಿದಿದ್ದು, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಯುತ್ತಿದೆ.’

Leave a Reply