ಮೃತಯೋಧನ ಕಾಂಗ್ರೆಸ್ ನಂಟಿನ ಬಗ್ಗೆ ಕೇಂದ್ರ ಸಚಿವರ ಗಮನ, ಆತ್ಮಹತ್ಯೆಗೆ ಹುತಾತ್ಮ ಪಟ್ಟ ಸಾಧುವೇ ಎಂಬ ಚರ್ಚೆ

 

ಡಿಜಿಟಲ್ ಕನ್ನಡ ಟೀಮ್:

ನಿವೃತ್ತ ಯೋಧ ರಾಮ ಕಿಶನ್ ಯಾದವ್ ಆತ್ಮಹತ್ಯೆ ಕುರಿತಂತೆ ರಾಜಕೀಯ ಹಲ್ಲಾಹಲ್ಲಿ ಪ್ರತಿಕ್ರಿಯೆಗಳು ಮುಂದುವರಿದಿವೆ. ಸೇನೆಯ ಮಾಜಿ ಮುಖ್ಯಸ್ಥರೂ ಆಗಿರುವ ವಿದೇಶ ಸಚಿವಾಲಯದ ರಾಜ್ಯ ಸಚಿವ ವಿ. ಕೆ. ಸಿಂಗ್ ಮಾತ್ರ ಇದು ಏಕ ಶ್ರೇಣಿ- ಏಕ ಪಿಂಚಣಿಗೆ ಸಂಬಂಧಿಸಿದ ಸಾವೇ ಅಲ್ಲ ಎಂದಿದ್ದಾರೆ.

ಅವರು ಹೇಳಿದ್ದು- ‘ಸತ್ಯ ಅರಿಯುವಾಗ ಎಲ್ಲ ಆಯಾಮಗಳಿಂದ ವಿಚಾರ ಅರಿಯಬೇಕಾಗುತ್ತದೆ. ಒಬ್ಬ ಯೋಧ ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೂ ದುಃಖದಾಯಕ. ಗ್ರೆವಾಲ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸಿಯೇ ಸರಪಂಚ್ ಆಗಿದ್ದರು. ಅವರ ಸಮಸ್ಯೆ ಇದ್ದದ್ದು ಬ್ಯಾಂಕುಗಳ ಜತೆಯೇ ಹೊರತು, ಏಕಶ್ರೇಣಿ- ಏಕ ಪಿಂಚಣಿ ವಿಷಯದಲ್ಲಲ್ಲ. ಆ ಹಣ ಕೇಂದ್ರದಿಂದ ಯಾವತ್ತೋ ಬಿಡುಗಡೆಯಾಗಿದೆ. ಬ್ಯಾಂಕಿನವರು ಕೆಲ ದಾಖಲೆಗಳನ್ನು ಕೇಳಿದ್ದರಿಂದ ವಿಳಂಬವಾಗಿತ್ತು ಹಾಗೂ ಹಣದ ಪ್ರಮಾಣದಲ್ಲಿ ಕಡಿಮೆಯೂ ಆಗಿತ್ತು. ಅದನ್ನು ಬ್ಯಾಂಕು ತ್ವರಿತವಾಗಿ ಸರಿಪಡಿಸಬೇಕಿತ್ತು. ಆದರೆ ಸರ್ಕಾರವನ್ನು ದೂರಿದರೇನು ಬಂತು? ವಿಷಯವನ್ನು ನಮ್ಮ ಬಳಿ ತಂದಿದ್ದರೆ ಖಂಡಿತ ಸರಿಪಡಿಸುತ್ತಿದ್ದೆವು.’ ಎಂದಿದ್ದಾರೆ.

ಅಲ್ಲದೆ, ಗ್ರೆವಾಲ್ ಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೇವಿಸುವುದಕ್ಕೆ ಸಲ್ಫಾ ಮಾತ್ರೆಗಳು ಸಿಕ್ಕಿದ್ದಾದರೂ ಹೇಗೆ? ಅದನ್ನು ಯಾರು ಕೊಟ್ಟರು ಎಂಬ ಬಗ್ಗೆಯೂ ತನಿಖೆಯಾಗಬೇಕಿದೆ ಎಂದಿದ್ದಾರೆ.

ಅತ್ತ ಬಿವಾನಿಯಲ್ಲಿ ನಡೆದ ನಿವೃತ್ತ ಯೋಧನ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದರು. ಯೋಧನ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 1 ಕೋಟಿ ರುಪಾಯಿಗಳ ಪರಿಹಾರ ಘೋಷಿಸಿದ್ದಲ್ಲದೇ, ರಾಮ್ ಕಿಶನ್ ಗ್ರೆವಾಲ್ ರಿಗೆ ಹುತಾತ್ಮ ಪಟ್ಟ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಹರ್ಯಾಣ ಸರ್ಕಾರವೂ 10 ಲಕ್ಷ ರುಪಾಯಿಗಳ ಪರಿಹಾರ ಘೋಷಿಸಿದೆಯಾದರೂ, ‘ಆತ್ಮಹತ್ಯೆ ಮಾಡಿಕೊಂಡವರನ್ನು ಹುತಾತ್ಮ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಹೇಳಿದೆ.

ಈ ನಡುವೆ, ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆಗಿನ ರಕ್ಷಣಾ ಮಂತ್ರಿ  ಎ. ಕೆ. ಆ್ಯಂಟನಿ ಅವರು, ಏಕಶ್ರೇಣಿ-ಏಕ ಪಿಂಚಣಿ ಕಾರ್ಯಸಾಧುವೇ ಅಲ್ಲ ಎಂದು ಉತ್ತರಿಸಿದ್ದ ವಿದ್ಯಮಾನ ಹಾಗೂ ಸರ್ಕಾರದ ನಿರಾಕರಣ ಧೋರಣೆಯ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತವಾಗುತ್ತಿವೆ.

orop

orop1

Leave a Reply