ಟಿಪ್ಪು ಜಯಂತಿ ಸರ್ಕಾರದ ನಿರ್ಧಾರ, ಅದನ್ನು ಪ್ರಶ್ನಿಸಲ್ಲ: ಹೈಕೋರ್ಟ್, ಸ್ಟೀಲ್ ಸೇತುವೆ ಕಾಮಗಾರಿ ಸದ್ಯಕ್ಕೆ ಮುಂದೂಡಿಕೆ- ಕೋರ್ಟಿಗೆ ಬಿಡಿಎ ಹೇಳಿಕೆ, ರುದ್ರೇಶ್ ಹತ್ಯೆಯ ಮುಖ್ಯ ರೂವಾರಿ ಬಂಧನ, ಬಿಜೆಪಿ ಮುಖಂಡರ ವಿರುದ್ಧದ ಕೇಸ್ ರದ್ದು

ತುರ್ತು ಸ್ಥಿತಿಯಲ್ಲಿ ರಕ್ತದ ಕೊರತೆ ನೀಗುವುದಕ್ಕೆ ಐರಿಲೀಫ್ ಕಂಪನಿಯು ಸರ್ಕಾರದೊಂದಿಗೆ ಕೈಜೋಡಿಸಿ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಇದನ್ನು ಗುರುವಾರ ಸಚಿವ ರೋಷನ್ ಬೇಗ್ ಲೋಕಾರ್ಪಣಗೊಳಿಸಿದರು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆ್ಯಪ್ ಲಭ್ಯವಿದೆ.  ನಗರದಲ್ಲಿರುವ ರಕ್ತನಿಧಿ ಕೇಂದ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಐರಿಲೀಫ್, ಆಯಾ ಸಂದರ್ಭದಲ್ಲಿನ ರಕ್ತದ ಸಂಗ್ರಹದ ಬಗ್ಗೆ ನಿಖರ ಮಾಹಿತಿ ಒದಗಿಸುತ್ತದೆ. ಸೂಕ್ತ ರಕ್ತವನ್ನು ಯಾವ ರಕ್ತನಿಧಿಯಿಂದ ಪಡೆಯಬಹುದು ಎಂಬುದಕ್ಕೆ ಐರಿಲೀಫ್ ತನ್ನ ಮೊಬೈಲ್ ಆಪ್ ಮೂಲಕ ಮಾರ್ಗದರ್ಶನ ನೀಡುತ್ತದೆ. ಐರಿಲೀಫ್ ಒದಗಿಸುವ ಮನೆ ಕಾಳಜಿ ಸೇವೆ ಮನೆಯಿಂದಲೇ ಹಲವಾರು ಸೇವೆಗಳನ್ನು ಬುಕ್ ಮಾಡುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಪ್ರಯೋಗಾಲಯ ಪರೀಕ್ಷೆ, ದಾದಿಯರ ಸೇವೆ, ಬಾಡಿಗೆಗೆ ವೈದ್ಯಕೀಯ ಸಲಕರಣೆಗಳಂತಹ ಸೇವೆಗಳಿವೆ ಎಂದು ಪ್ರಕಟಣೆ ತಿಳಿಸಿದೆ.

ಡಿಜಿಟಲ್ ಕನ್ನಡ ಟೀಮ್:

ಟಿಪ್ಪು ಜನ್ಮದಿನಕ್ಕೆ ತಡೆಯಾಜ್ಞೆ ಇಲ್ಲ

ಟಿಪ್ಪು ಜಯಂತಿ ಆಚರಿಸುವ ಉದ್ದೇಶ ಏನಿದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದ ರಾಜ್ಯ ಹೈಕೋರ್ಟ್, ಗುರುವಾರ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಟಿಪ್ಪು ಜನ್ಮದಿನ ಆಚರಣೆ ರಾಜ್ಯ ಸರ್ಕಾರದ ನಿರ್ಧಾರವಾಗಿದ್ದು, ಇದನ್ನು ಕೋರ್ಟ್ ಪ್ರಶ್ನಿಸುವುದಿಲ್ಲ ಎಂದು ತಿಳಿಸಿದೆ.

ವಿಚಾರಣೆ ಆರಂಭವಾದ ನಂತರ ಮೊದಲು ವಾದ ಮಂಡಿಸಿದ ಅರ್ಜಿದಾರರಾದ ಮಂಜುನಾಥ್, ‘ಟಿಪ್ಪು ಮೂಲತಃ ಕೊಡವರ ವಿರೋಧಿ. ಆತ ರಾಷ್ಟ್ರಭಕ್ತನಲ್ಲ. ಕಳೆದ ವರ್ಷ ರಾಜ್ಯ ಸರ್ಕಾರ ಆತನ ಜಯಂತಿ ಆಚರಿಸಿದ ವೇಳೆ ಸಾಕಷ್ಟು ಹಿಂಸಾಚಾರವಾಗಿದೆ. ಆದ್ದರಿಂದ ಇದನ್ನು ಕೊಡಗು ಜಿಲ್ಲೆಯಲ್ಲಿ ಆಚರಿಸದೇತೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದ್ದರು.

ಈ ವಾದ ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ‘ನಾನು ಇತಿಹಾಸ ವಿದ್ಯಾರ್ಥಿಯಾಗಿದ್ದೆ. ನನಗಿರುವ ಮಾಹಿತಿ ಪ್ರಕಾರ, ಟಿಪ್ಪು ಸುಲ್ತಾನ್ ತನ್ನ ಸಂಸ್ಥಾನವನ್ನು ರಕ್ಷಿಸುವ ಸಲುವಾಗಿ ಮಾತ್ರ ಬ್ರಿಟೀಷರ ವಿರುದ್ಧ ಹೋರಾಡಿದ್ದಾನೆ. ಹೀಗಾಗಿ ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ. ಒಂದು ವೇಳೆ ಹೈದರಾಬಾದಿನ ನಿಜಾಮನೇ ದಾಳಿ ಮಾಡಿದ್ದರೂ ಆಗ ಟಿಪ್ಪು ತನ್ನ ರಾಜ್ಯ ಉಳಿಸಿಕೊಳ್ಳಲು ಯುದ್ಧ ಮಾಡುತ್ತಿದ್ದ. ಹೀಗಾಗಿ ಯಾವ ಉದ್ದೇಶದಿಂದ ಇವರ ಜಯಂತಿ ಆಚರಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸರ್ಕಾರಕ್ಕೆ ಆಗುವ ಪ್ರಯೋಜನವೇನು? ಇದರಲ್ಲಿ ಯಾವ ತರ್ಕ ಅಡಗಿದೆ. ಅನಗತ್ಯವಾಗಿ ಸರ್ಕಾರ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಆಗ ಮಧ್ಯ ಪ್ರವೇಶಿಸಿದ ಸಹಾಯಕ ಅಡ್ವೋಕೇಟ್ ಜನರಲ್ ಸಜ್ಜನ್ ಪೂವಯ್ಯ, ‘ಇದು ಸರ್ಕಾರದ ನೀತಿ. ಸಂಪುಟದಲ್ಲಿ ತೀರ್ಮಾನಗೊಂಡಿದೆ. ಹೀಗಾಗಿ ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ’ ಎಂದರು.

ನಂತರ ಈ ಅರ್ಜಿಯ ಮುಂದಿನ ನಡೆಯ ಬಗ್ಗೆ ಅರ್ಜಿದಾರರಾದ ವಕೀಲ ಮಂಜುನಾಥ್ ಅವರಿಗೆ ಮಾರ್ಗದರ್ಶನ ನೀಡಿದ ಹೈಕೋರ್ಟ್, ‘ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಾಳೆ ಸಲ್ಲಿಸಿ. ಈ ಅರ್ಜಿಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗಳು ಪರಿಗಣಿಸಿ, ಈ ಕುರಿತ ಅಂತಿಮ ನಿರ್ಧಾರವನ್ನು ನವೆಂಬರ್ 8ರ ಒಳಗಾಗಿ ಪ್ರಕಟಿಸಬೇಕು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರು ಯಾವ ತೀರ್ಮಾನ ಕೈಗೊಳ್ಳುತ್ತಾರೊ ನೋಡೋಣ, ಆ ನಿರ್ಧಾರ ನಿಮಗೆ ತೃಪ್ತಿಯಾಗದಿದ್ದರೆ ನಂತರ ನಮ್ಮ ಮುಂದೆ ಬನ್ನಿ’ ಎಂದು ಹೈ ಕೋರ್ಟ್ ಮಂಜುನಾಥ್ ಅವರಿಗೆ ಸೂಚಿಸಿದ್ದಾರೆ.

ಈ ಮಧ್ಯೆ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರುದ್ಧ ವ್ಯಕ್ತವಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕ್ರೈಸ್ತ ಸಂಘಟನೆಗಳು ವಿರೋಧಿಸಿವೆ. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಮತ್ತು ಆರೆಸ್ಸೆಸ್ ನವೆಂಬರ್ 8ರಂದು ದೊಡ್ಡ ಪ್ರತಿಭಟನಾ ಮೆರವಣಿಗೆ ಕರೆ ಕೊಟ್ಟಿವೆ.

ಸ್ಟೀಲ್ ಸೇತುವೆ ಕಾಮಗಾರಿ ಸದ್ಯಕ್ಕೆ ಮುಂದೂಡಿಕೆಕೋರ್ಟಿಗೆ ಬಿಡಿಎ ಮಾಹಿತಿ

ವಿವಾದಿತ ಸ್ಟೀಲ್ ಫ್ಲೈ ಓವರ್ ನಿರ್ಮಾಣ ಕಾಮಗಾರಿಯನ್ನು ಸದ್ಯಕ್ಕೆ ಮುಂದುವರಿಸುವುದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ. ರಾಜ್ಯ ಸರ್ಕಾರದ ಈ ಯೋಜನೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಸುಮಾರು 8 ಸಾವಿರ ಜನ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದರು. ಪರಿಣಾಮ ಅಕ್ಟೋಬರ್ 28ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈ ಯೋಜನೆ ಆರಂಭಿಸುವುದಕ್ಕೆ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿತ್ತು. ಈ ಮಧ್ಯೆ ನಮ್ಮ ಬೆಂಗಳೂರು ಫೌಂಡೇಷನ್ ಈ ಯೋಜನೆಯನ್ನು ವಿರೋಧಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಗುರುವಾರ ನಡೆದ ವಿಚಾರಣೆ ವೇಳೆಯಲ್ಲಿ ಬಿಡಿಎ ಸದ್ಯಕ್ಕೆ ಈ ಕಾಮಗಾರಿ ಆರಂಭವನ್ನು ಮುಂದೂಡಲಾಗಿದೆ ಎಂದು ತಿಳಿಸಿದಂ. ನಂತರ ನ್ಯಾಯಾಲಯ ‘ಈ ಯೋಜನೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ಕೊರತೆ ಇದ್ದು, ಈ ಕುರಿತ ಕಾನೂನು ಮತ್ತು ಸಂವಿಧಾನಾತ್ಮಕ ವಿಷಯಗಳನ್ನು ಪರಿಶೀಲಿಸಿದ ನಂತರ ಅಂತಿಮ ತೀರ್ಪು ಪ್ರಕಟಿಸಲಾಗುವುದು’ ಎಂದು ತಿಳಿಸಿದೆ. ಇತ್ತ ಈ ಸ್ಟೀಲ್ ಸೇತುವೆ ವಿರೋಧಿಸಿ ಕೆಲವು ಸಂಘಟನೆಗಳು ಭಾನುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕರೆ ಕೊಟ್ಟಿವೆ.

ರುದ್ರೇಶ್ ಹತ್ಯೆಯ ಮುಖ್ಯ ರೂವಾರಿ  ಬಂಧನ

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ ಪ್ರಮುಖ ಕಿಂಗ್ ಪಿನ್ ಅಸೀಂ ಷರೀಫ್ ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಷರೀಫ್ ಪಾಪುಲರ್ ಫ್ರಂಟ್ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದಾನೆ. ರುದ್ರೇಶ್ ಹತ್ಯೆಯಲ್ಲಿ ಅಸೀಂ ಷರೀಫ್ ಪ್ರಮುಖ ಪಾತ್ರ ಹೊಂದಿದ್ದು, ಇಂದು ಬೆಳಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 5ರನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಅಸೀಂ ಷರೀಫ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಈತನನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿದ್ಯುತ್ ಉತ್ಪಾದನೆ ನೀರು ಮರುಬಳಕೆ

ರಾಜ್ಯದಲ್ಲಿರುವ ಪ್ರಮುಖ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದಿಸಲು ಬಳಕೆ ಮಾಡುವ ನೀರನ್ನು ಸಂಗ್ರಹಿಸಿ ಅವುಗಳನ್ನು ಮರುಬಳಕೆ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ ಇಂಧನ ಸಚಿವ ಡಿ.ಕೆ.ಶಿವಕುಮಾರ್.

ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಬಳಕೆಗಾಗಿ ಉಪಯೋಗವಾಗುತ್ತಿರುವ ನೀರು ನಂತರ ಸಮುದ್ರಕ್ಕೆ ಹರಿದು ಹೋಗುತ್ತಿದೆ. ಹೀಗಾಗಿ ರಬ್ಬರ್ ನಿರ್ಮಿತ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿ ಈ ನೀರು ಸಮುದ್ರ ಸೇರದಂತೆ ತಡೆಯಬಹುದು. ಈ ನೀರನ್ನು ಮತ್ತೆ ಪಂಪ್ ಮಾಡಿ ಜಲಾಶಯಗಳಿಗೆ ತಲುಪಿಸಿ ಮತ್ತೆ ವಿದ್ಯುತ್ ಉತ್ಪಾದನೆಗೆ ಬಳಸಬಹುದು ಎಂದು ಮಾಹಿತಿ ನೀಡಿದರು. ಇನ್ನು ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಇತರೆ ಸ್ಥಾವರಗಳಲ್ಲಿ ಉತ್ಪಾದನೆಯಾಗುತ್ತಿರುವ ಹಾರುಬೂದಿಗಳನ್ನು ಸಂಗ್ರಹಿಸಿ ಸಿಮೆಂಟ್ ಬ್ಲಾಕ್ ಉತ್ಪಾದಿಸಲು ಸಹ ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.

ಕಟ್ಟಾ, ವಿಶ್ವನಾಥ್, ಮುನಿರಾಜು ವಿರುದ್ಧದ ಕೇಸ್ ರದ್ದು

ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಜತೆಗೆ ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಮುನಿರಾಜು ವಿರುದ್ಧದ ಕೇಸ್ ಗಳನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ವಿರುದ್ಧ ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿದ್ದ ಕೇಸ್ ಜತೆಗೆ ಇನ್ನಿಬ್ಬರು ಶಾಸಕರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ಏಕ ಸದಸ್ಯ ಪೀಠ ರದ್ದುಗೊಳಿಸಿದೆ.

ಇತ್ತೀಚೆಗಷ್ಟೇ ಗಣಿಗಾರಿಕೆ ಪರವಾನಿಗೆ ಸಂಬಂಧ ಜಿಂದಾಲ್ ಕಂಪನಿಯಿಂದ ಪ್ರೇರಣಾ ಟ್ರಸ್ಟಿಗೆ ಲಂಚ ನೀಡಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಲೀನ್ ಚಿಟ್ ಪಡೆದಿದ್ದರು. ಈಗ ಬಿಜೆಪಿಯ ಇತರೆ ನಾಯಕರ ವಿರುದ್ಧದ ಕೇಸ್ ರದ್ದುಗೊಂಡಿರುವುದರಿಂದ ರಾಜ್ಯ ಭಾರತೀಯ ಜನತಾ ಪಾರ್ಟಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಎಸ್ಪಿ ನಾಯಕರು

ಮುಂಬರುವ ಉತ್ತರ ಪ್ರದೇಶ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಲ್ಲಿನ ರಾಜಕೀಯ ಸನ್ನಿವೇಶಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ತಿವೆ. ಮೊನ್ನೆ ಮೊನ್ನೆಯಷ್ಟೇ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಹಾಗೂ ಯಾದವ್ ಕುಟುಂಬದ ವೈಮನಸ್ಸಿನಿಂದ ಬೀದಿಯ ರಂಪಾಟ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷ ಗುರುವಾರ ಒಗ್ಗಟ್ಟಿನ ಮಂತ್ರ ಹೇಳುತ್ತಿದೆ. ಚುನಾವಣಾ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ‘ವಿಕಾಸ ರಥ ಯಾತ್ರೆ’ಯನ್ನು ಆರಂಭಿಸಿದ್ದಾರೆ. ಗುರುವಾರ ಲಖ್ನೌನಲ್ಲಿ ವಿಕಾಸ ರಥ ಯಾತ್ರೆ ಉದ್ಘಾಟನೆಯಾಗಿದ್ದು, ಅಖಿಲೇಶ್ ಜತೆಗೆ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮತ್ತು ಶಿವಪಾಲ್ ಯಾದವ್ ಸಹ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಖಿಲೇಶ್ ಯಾದವ್. ‘ರಾಜಕೀಯ ಬದಲಾವಣೆಯ ಹಾದಿಗೆ ಈ ಚುನಾವಣೆ ಸಾಕ್ಷಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು. ಅಕ್ಟೋರ್ 3ರಂದೇ ಆರಂಭವಾಗಬೇಕದ್ದ ವಿಕಾಸ ರಥ ಯಾತ್ರೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿನಿಂದಾಗಿ ಒಂದು ತಿಂಗಳ ಕಾಲ ತಡವಾಗಿ ನಡೆಯುತ್ತಿದೆ. ಇನ್ನು ಲಖ್ನೌನಲ್ಲಿ ಆರಂಭವಾದ ರಥಯಾತ್ರೆ ಒಂದು ಕಿಲೋ ಮೀಟರ್ ದೂರ ಸಾಗುತ್ತಿದ್ದಂತೆ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿದೆ.

ಇನ್ನುಳಿದಂತೆ ಇತರೆ ಸುದ್ದಿ ಸಾಲುಗಳು…

  • ಆತ್ಮಹತ್ಯೆಗೆ ಶರಣಾದ ಮಾಜಿ ಸೈನಿಕ ರಾಮ್ ಕಿಶನ್ ಅವರ ಕುಟುಂಬವನ್ನು ಭೇಟಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳುವುದರ ಜತೆಗೆ, ಅವರಿಗೆ ₹1 ಕೋಟಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ರಾಮ್ ಕಿಶನ್ ಪತ್ನಿ ಕಿತಾಬೊ ದೇವಿ ಜತೆಗೆ ಮಾತನಾಡಿದ ಕೇಜ್ರಿವಾಲ್ ‘ರಾಮ್ ಕಿಶನ್ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರೆ. ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ನೆರವು ನೀಡಲು ಸಿದ್ಧ. ರಾಮ್ ಕಿಶನ್ ಅವರ ಸಾವು ವ್ಯರ್ಥವಾಗಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ಒಆರ್ ಒಪಿ ಯೋಜನೆ ಜಾರಿಗೊಳಿಸುವಂತೆ ಮಾಡುತ್ತೇವೆ’ ಎಂದು ಭರವಸೆ ಕೊಟ್ಟಿದ್ದಾರೆ.
  • ಗುರುವಾರ ಬೆಳಗ್ಗೆ ದಟ್ಟನೆಯ ಮಂಜು ಆವರಿಸಿದ್ದರ ಪರಿಣಾಮ ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 20 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಈ ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
  • ಪಾಕಿಸ್ತಾನದಲ್ಲಿನ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 8 ಭಾರತೀಯ ಅಧಿಕಾರಿಗಳನ್ನು ಪಾಕಿಸ್ತಾನವು ಗೂಢಚಾರಿಗಳು ಎಂದು ಪ್ರಕಟಿಸಿದ್ದು, ಅವರ ಭಾವಚಿತ್ರ ಹಾಗೂ ಮಾಹಿತಿಯನ್ನು ಪಾಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ. ರಾಜೇಶ್ ಕುಮಾರ್ ಅಗ್ನಿಹೊತ್ರಿ, ಬಲ್ಬೀರ್ ಸಿಂಗ್, ಅನುರಾಗ್ ಸಿಂಗ್, ಅಮರ್ ದೀಪ್ ಸಿಂಗ್ ಭಟ್ಟಿ, ಧರ್ಮೇಂದ್ರ, ವಿಜಯ್ ಕುಮಾರ್, ಮಾಧವ್ ನಂದ ಕುಮಾರ್ ಮತ್ತು ಜಯಬಾಲನ್ ಸೆಂತಿಲ್ ಎಂಬುವವರನ್ನು ಗೂಢಚಾರಿ ಎಂದು ಪಾಕ್ ಪ್ರಕಟಿಸಿದೆ. ಇದಕ್ಕೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಆರೋಪಗಳನ್ನು ಅಲ್ಲಗಳೆದಿದೆ. ಪಾಕಿಸ್ತಾನದ ಈ ನಡೆಯಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಟ್ಟಂತಾಗಿದೆ.
  • ಕೇರಳದ ಮಲಪ್ಪುರಂ ನ್ಯಾಯಾಲಯ ಆವರಣದಲ್ಲಿ ನಡೆದ ಲಘು ಬಾಂಬ್ ಸ್ಫೋಟದ ತನಿಖೆ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ಪೊಲೀಸರಿಗೆ ಒಂದು ಪೆನ್ ಡ್ರೈವ್ ಸಿಕ್ಕಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ರಾಜಕೀಯ ಮುಖಂಡರ ಭಾವಚಿತ್ರಗಳಿದ್ದು, ಕೆಂಪುಕೋಟೆ, ಸಂಸತ್ತಿನ ಫೋಟೊಗಳಿವೆ. ಇದರೊಂದಿಗೆ ಉಗ್ರರು ದೇಶದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಪೊಲೀಸರು.

Leave a Reply