ಜಿಎಸ್ಟಿ ದರ ನಿಗದಿ ಮೂಲಕ ಮೋದಿ ಸರ್ಕಾರ ಅರ್ಧ ಯುದ್ಧ ಗೆದ್ದಿತೆ?

ಡಿಜಿಟಲ್ ಕನ್ನಡ ವಿಶೇಷ:

ಬಹು ನಿರೀಕ್ಷಿತ ಸರುಕು ಮತ್ತು ಸೇವೆ ಕಂದಾಯ (ಜಿಎಸ್ಟಿ) ಎಷ್ಟಿರಬೇಕು ಎನ್ನುವುದು ನಿನ್ನೆ ಹೊರಬಿದ್ದಿದೆ . ಜಿಎಸ್ಟಿ ಲಾಗೂ ಆದರೆ ಹಣದುಬ್ಬರ ಹೆಚ್ಚುತ್ತದೆ. ಅದನ್ನು ನಿಯಂತ್ರಣಕ್ಕೆ ತರಲು ಕನಿಷ್ಟ ಎರಡು ವರ್ಷ ಬೇಕಾಗುತ್ತದೆ ಎಂದು ವೃತ್ತಿಪರ ಹಣಕಾಸು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮುಕ್ಕಾಲು ಪಾಲು ಇದೆ ಅಭಿಪ್ರಾಯ ಡಿಜಿಟಲ್ ಕನ್ನಡ ಕೂಡ ಪ್ರಕಟಿಸಿತ್ತು ಮತ್ತು ಒಂದೆಜ್ಜೆ ಮುಂದೆ ಹೋಗಿ ಮೋದಿ ಸರಕಾರ 20 ಎಸೆತದಲ್ಲಿ 60 ರನ್ ಬಾರಿಸುವ ಚಾಲೆಂಜ್ ತೆಗೆದುಕೊಂಡಿದೆ. ಮೋದಿ 2019 ರ ಚುನಾವಣೆಯಲ್ಲಿ ಗೆಲ್ಲುವುದು ಸುಲಭದ ಮಾತಲ್ಲ ಎನ್ನುವ ನಿಲುವು ಕೂಡ ವ್ಯಕ್ತಪಡಿಸಿತ್ತು. ನಿನ್ನೆ ಜಿಎಸ್ಟಿ ಕೌನ್ಸಿಲ್ ಟ್ಯಾಕ್ಸ್ ರೇಟ್ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದು ಮೋದಿ ಸರಕಾರ ಅರ್ಧ ಯುದ್ಧ ಗೆದ್ದಂತೆ. ನಿನ್ನೆಯ ರೇಟ್ ನಿರ್ಧಾರದಿಂದ ಏನೆಲ್ಲಾ ಬದಲಾವಣೆಗಳು ಆಗಬಹದು? ಜನಸಾಮಾನ್ಯ ಹಗುರಾಗಬಹುದಾ? ಅವಲೋಕಿಸೋಣ.

  • ಜಿಎಸ್ಟಿ  ಕೌನ್ಸಿಲ್ ನಲ್ಲಿ ಜೇಟ್ಲಿ ಸೇರಿದಂತೆ ವಿವಿಧ ರಾಜ್ಯದ ರಾಯಭಾರಿಗಳನ್ನು ಒಳಗೊಂಡಂತೆ ತೆರಿಗೆ ರೇಟ್ ನಿರ್ಧರಿಸಲು ಒಂದು ಸಮಿತಿ ಹುಟ್ಟಿತು. ಈ ಹಿಂದೆ ಎರಡು ಬಾರಿ ಒಮ್ಮತ ಮೂಡಲಾಗದೆ ಮುಂದೂಡಿದ್ದ ಸಮಿತಿ ಸಭೆ, ನಿನ್ನೆ ಒಮ್ಮತದ ನಿರ್ಧಾರಕ್ಕೆ ಬಂದಿದೆ. ಅದರಂತೆ ತೆರಿಗೆ ದರವನ್ನು ನಾಲ್ಕು ಹಂತದಲ್ಲಿ ವಿಧಿಸಲು ನಿರ್ಧರಿಸಲಾಗಿದೆ.
  • 5, 12, 18, ಮತ್ತು 28%  ಒಪ್ಪಿತ ತೆರಿಗೆ ದರಗಳು. ಹಣದುಬ್ಬರ ತಡೆಯಲು ನಿತ್ಯ ಬಳಕೆಯ ಅರ್ಧಕ್ಕೂ ಹೆಚ್ಚು ವಸ್ತುಗಳ ಮೇಲೆ ಯಾವುದೇ ತೆರಿಗೆ ವಿಧಿಸದಿರಲು ನಿರ್ಧರಿಸಲಾಗಿದೆ. ಇದರಿಂದ ಆಹಾರದ ಬೆಲೆ ಕಡಿಮೆಯಾಗುವ ಸಂಭವವಿದೆ. ಉಳಿದಂತೆ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ನಂತ ವಸ್ತುಗಳನ್ನೂ ಇಂದಿನ ದಿನದಲ್ಲಿ ಸಾಮಾನ್ಯನ ಮನೆಯಲ್ಲಿ ಇರಬೇಕಾದ ವಸ್ತು ಎಂದೇ ಪರಿಗಣಿಸಲಾಗಿದೆ ಅಂತೆಯೇ ಅವು ಕಡಿಮೆ ದರ ಅಂದರೆ 5% ತೆರಿಗೆ ದರದ ಅಡಿಯಲ್ಲಿ ಬರಲಿದೆ. ಆಮ್ ಆದ್ಮಿಯ ಕನಸಿನ ಅಚ್ಚೆ ದಿನ್ ಹತ್ತಿರದಲ್ಲಿದೆ.
  • 12 ಮತ್ತು 18 ಅನ್ನು ಸ್ಟ್ಯಾಂಡರ್ಡ್ ಟ್ಯಾಕ್ಸ್ ರೇಟ್ ಎಂದು ಪರಿಗಣಿಸಲಾಗಿದೆ.
  • ಅತಿ ಹೆಚ್ಚಿನ ತೆರಿಗೆ ದರ 28% ಎಲ್ಲರ ಎಣಿಕೆಯಂತೆ ಐಷಾರಾಮಿ ಕಾರು, ತಂಬಾಕು, ಆಲ್ಕೋಹಾಲ್ ಮತ್ತು ಇತರ ವಸ್ತುಗಳಿಗೆ ಬೀಳಲಿದೆ. ಇಷ್ಟೇ ಅಲ್ಲದೆ ಹೆಚ್ಚಿನ ಸೆಸ್ಸ್ ಕೂಡ ವಿಧಿಸಬಹುದು.
  • ಜಿಎಸ್ಟಿ ದೇಶ ಪೂರ್ತಿ ಏಕ ತೆರಿಗೆ ತರುವ ವಿಶಿಷ್ಟ ಯೋಜನೆ ಎನ್ನುವುದು ತಿಳಿದಿರುವ  ವಿಷಯವೇ. ಇದರಿಂದ ರಾಜ್ಯಗಳ ತೆರಿಗೆ ಸಂಗ್ರಹದಲ್ಲಿ ಇದ್ದ ಹಿಡಿತ ತಪ್ಪಿ ಎಲ್ಲಕ್ಕೂ ಕೇಂದ್ರ ಸರಕಾರವನ್ನೇ ಆಶ್ರಯಿಸುವ ಸಂದರ್ಭ ಬರುತ್ತದೆ. ಅಲ್ಲದೆ ರಾಜ್ಯಗಳ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತದೆ ಎನ್ನುವುದು ಕೂಡ ಈ ಹಿಂದೆ ಡಿಜಿಟಲ್ ಕನ್ನಡಲ್ಲಿ ಬರೆದಿದ್ದೆವು. ಈ ಆತಂಕವನ್ನೂ ಮೋದಿ ಸರಕಾರ ದೂರವಾಗಿಸಿದೆ. ತೆರಿಗೆ ಮೇಲಿನ ಹೆಚ್ಚಿನ ಸೆಸ್ಸ್ ವಿಧಿಸುವಿಕೆಯಿಂದ ಬರುವ ಹೆಚ್ಚಿನ ಹಣವನ್ನು ರಾಜ್ಯಗಳ ನಷ್ಟ ಭರಿಸಲು ಕೊಡಲಾಗುತ್ತದೆ. ಮುಂದಿನ ಐದು ವರ್ಷಗಳ ಕಾಲ ರಾಜ್ಯಗಳ ನಷ್ಟವನ್ನು ಕೇಂದ್ರವೇ ಭರಿಸುವ ಅಭಯವನ್ನೂ ನೀಡಿದೆ.
  • ಸೇವಾ ತೆರಿಗೆ 15 ರಿಂದ 18ಕ್ಕೆ ಹೆಚ್ಚಳ ಕಾಣಲಿದೆ.
  • ಚಿನ್ನದ ಮೇಲಿನ ತೆರಿಗೆ ದರ ಇಂದು ನಿರ್ಧಾರವಾಗಲಿದೆ.
  • ನಿನ್ನೆ ನಿರ್ಧಾರವಾಗಿರುವ ಈ ತೆರಿಗೆ ದರವನ್ನ ಪಾರ್ಲಿಮೆಂಟಿನಲ್ಲಿ ಒಪ್ಪಿಗೆ ಪಡೆಯಬೇಕಿದೆ. ಇದೆ ನವೆಂಬರ್ 16ರಿಂದ ಶುರುವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಒಪ್ಪಿಗೆ ಪಡೆದಲ್ಲಿ ಈ ದರ ಏಪ್ರಿಲ್ 1, 2017 ರಿಂದ ಇಡೀ ದೇಶಕ್ಕೆ ಅನ್ವಯವಾಗಲಿದೆ.
  • ಸಂಸತ್ತಿನಲ್ಲಿ ಒಪ್ಪಿಗೆ ದೊರೆತ ನಂತರ ಪಂಡಿತರು ಯಾವ ವಸ್ತುಗಳು ಯಾವ ತೆರಿಗೆ ದರದ ಅಡಿಯಲ್ಲಿ ಬರುತ್ತವೆ ಎನ್ನುವ ವಿಸ್ತಾರ ವರ್ಗಿಕರಣ ಮಾಡುತ್ತಾರೆ.

ಇದರೊಂದಿಗೆ ಮೋದಿ ಸರಕಾರ ಜಿಎಸ್ಟಿ ಲಾಗೂ ಆಗುವುದಕ್ಕೆ ಮುಂಚೆಯೇ ಬಹತೇಕ ಎಲ್ಲಾ ಅಡ್ಡಿ ಆತಂಕಗಳ ಗೆದ್ದಿದೆ ಎಂದು ವಿಶ್ವಾಸದಿಂದ ಹೇಳಬಹುದು.

Leave a Reply