ಮರಿಗೌಡಗೆ ಮತ್ತೆ ಕಾಂಗ್ರೆಸ್ ಮಣೆ, ಟಿಪ್ಪು ಜಯಂತಿ ಆಚರಣೆ ಬೇಡ ಎನ್ನಲು ಕೊಡವರ ನಿಯೋಗ ಕೊಟ್ಟ ಕಾರಣವೇನು?, ಏಕ ಶ್ರೇಣಿ ಏಕ ಪಿಂಚಣಿ ಕುರಿತು ಜೇಟ್ಲಿ ಸ್ಪಷ್ಟನೆ, ಆಟಗಾರರ ಖರ್ಚನ್ನು ನೀವೇ ನೋಡಿಕೊಳ್ಳಿ ಇಸಿಬಿಗೆ ಬಿಸಿಸಿಐ ಪತ್ರ, ಮಲ್ಯ ವಿರುದ್ಧ ವಾರೆಂಟ್

ಬೆಂಗಳೂರಿನ ಹಲಸೂರು ಕೆರೆಯಲ್ಲಿ ನಡೆದ ಚೊಚ್ಚಲ ಅಖಿಲ ಭಾರತ ಆಹ್ವಾನಿತ ಡ್ರಾಗನ್ ಬೋಟ್ ರೇಸ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು…

ಡಿಜಿಟಲ್ ಕನ್ನಡ ಟೀಮ್:

ಮರೀಗೌಡ ಅಮಾನತು ಆದೇಶ ಹಿಂಪಡೆದ ಕಾಂಗ್ರೆಸ್

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರಿಗೆ ಧಮಕಿ ಹಾಕಿ ಜೈಲು ಸೇರಿದ್ದ ಕೆ.ಮರಿಗೌಡಗೆ ಕಾಂಗ್ರೆಸ್ ಮತ್ತೆ ಮಣೆ ಹಾಕಿದೆ. ಈ ಪ್ರಕರಣ ನಡೆದ ನಂತರ ಮರಿಗೌಡ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಇದೀಗ ತನ್ನ ಆದೇಶವನ್ನು ಹಿಂಪಡೆದಿದೆ. ಮರಿಗೌಡ ಅವರು ಯಲವಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಶಿಖಾ ಅವರಿಗೆ ಧಮಕಿ ಹಾಕಿ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿದ ಪ್ರಕರಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈಗ ಗೃಹ ಸಚಿವ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಸೂಚನೆ ಮೇರೆಗೆ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಭೋಸರಾಜ್ ಮರಿಗೌಡ ಅವರ ಅಮಾನತು ಆದೇಶವನ್ನು ಹಿಂಪಡೆದಿದ್ದಾರೆ. ಜತೆಗೆ ಎಂದಿನಂತೆ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಮುಂದುವರೆಯಲು ಸೂಚಿಸಿದ್ದಾರೆ.

ಟಿಪ್ಪು ಜಯಂತಿ ತಡೆಗಾಗಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ

ಹೈಕೋರ್ಟ್ ನಿರ್ದೇಶನದಂತೆ ಟಿಪ್ಪು ಜಯಂತಿ ಆಚರಣೆ ತಡೆಗೆ ಮಂಜು ಚಿಣ್ಣಪ್ಪ ನೇತೃತ್ವ ಕೊಡವರ ನಿಯೋಗ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದೆ. ಟಿಪ್ಪು ಜಯಂತಿ ಆಚಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಕೆ ಮುಖರ್ಜಿಯವರು ಈ ಕುರಿತ ಮನವಿಯನ್ನು ಮೊದಲು ಮುಖ್ಯ ಕಾರ್ಯದರ್ಶಿವರಿಗೆ ನೀಡುವಂತೆ ಸಲಹೆ ನೀಡಿತ್ತು. ಅಲ್ಲದೆ ಈ ಮನವಿಯನ್ನು ಮುಖ್ಯ ಕಾರ್ಯದರ್ಶಿಗಳು ಪರಿಗಣಿಸಿ ನ.8ರ ಒಳಗೆ ಅಂತಿಮ ತೀರ್ಮಾನ ನೀಡುವಂತೆ ಸೂಚಿಸಿತ್ತು.

ಕಾರ್ಯದರ್ಶಿಗಳಿಗೆ ನೀಡಿದ ವರದಿಯಲ್ಲಿ, ಟಿಪ್ಪು ಜಯಂತಿ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜಕೀಯ ಪಕ್ಷದ ಗುಪ್ತ ಅಜೆಂಡಾ ಈಡೇರಿಸಿಕೊಳ್ಳಲು ಈ ಜಯಂತಿ ಆಚರಣೆಯಾಗುತ್ತಿದೆ ಎಂದು ನಿಯೋಗ ತನ್ನ ಮನವಿಯಲ್ಲಿ ವಿವರಿಸಿದೆ. ಜತೆಗೆ ಅರಸೊತ್ತಿಗೆಯ ಪ್ರತೀಕಗಳಂತಿರುವ ವ್ಯಕ್ತಿಗಳ ಜಯಂತಿಯನ್ನು ಜನರ ತೆರಿಗೆ ದುಡ್ಡಿನಲ್ಲಿ ಆಚರಿಸುವುದು ಬೇಡ ಎಂಬ ಸುಪ್ರೀಂ ಕೋರ್ಟಿನ ತೀರ್ಪಿನ ಅಂಶವನ್ನು ಸೇರಿಸಲಾಗಿದೆ. ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ನೀಡಿದ ಬಗ್ಗೆ ಮಾತನಾಡಿದ ಮಂಜು ಅವರು ಹೇಳಿದಿಷ್ಟು…

‘ಇಂತಹ ಜಯಂತಿ ಆಚರಣೆಗಾಗಿ ಜನರ ದುಡ್ಡನ್ನು ಪೋಲು ಮಾಡುವುದು ಸರಿಯಲ್ಲ. ಈ ಆಚರಣೆಗಾಗಿ ಸರ್ಕಾರ ವಿವಿಧ ಹಂತದಲ್ಲಿ ಕೋಟ್ಯಾಂತರ ಹಣ ವೆಚ್ಚ ಮಾಡುತ್ತಿದೆ. ಇನ್ನು ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸುವುದು ಸರಿಯಲ್ಲ. ಟಿಪ್ಪು ಕೊಡಗನ್ನು ಗೆಲ್ಲಲು 32 ಬಾರಿ ದಂಡೆತ್ತಿ ಬಂದಿದ್ದ. ಅದು ಸಾಧ್ಯವಾಗದಿದ್ದಾಗ, ಶಾಂತಿ ಮಾತುಕತೆ ಹೆಸರಿನಲ್ಲಿ ಆಗಮಿಸಿ 80 ಸಾವಿರ ಕೊಡವರನ್ನು ಕೊಂದು ಹಾಕಿದ್ದಾನೆ. ಇಂತಹ ಕ್ರೂರಿಯ ಜಯಂತಿಯನ್ನು ಆಚರಿಸುವುದು ಬೇಡ.’

‘ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ಮಾಡಿದಾಗ ಸಾಹೀಲ್ ಹಾಗೂ ಕುಟ್ಟಪ್ಪ ತೀರಿಕೊಂಡರು. ಇಬ್ಬರ ಕುಟುಂಬದವರ ಬಗ್ಗೆ ನಮಗೆ ಸಹಾನುಭೂತಿ ಇದೆ. ಇಲ್ಲಿ ನೋವಿಗೀಡಾಗಿದ್ದು ಇವರ ಕುಟುಂಬದವರೇ ಹೊರತು ಟಿಪ್ಪು ಜಯಂತಿ ಆಚರಿಸಿದವರಲ್ಲ.’

ರುದ್ರೇಶ್ ಹತ್ಯೆ ಹಿಂದೆ ರೋಶನ್ ಬೇಗ್ ಕೈವಾಡ: ಶೋಭಾ ಆರೋಪ

ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಹಿಂದೆ ಸಚಿವ ರೋಶನ್ ಬೇಗ್ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಶುಕ್ರವಾರ ಆರೋಪಿಸಿದ್ದಾರೆ. ‘ರುದ್ರೇಶ್ ಅವರು ಮುಂದಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಶಿವಾಜಿನಗರದಲ್ಲಿ ಸ್ಪರ್ಧಿಸಲಿದ್ದರು. ಹೀಗಾಗಿ ರುದ್ರೇಶ್ ತಮಗೆ ಪ್ರತಿಸ್ಫರ್ಧೆಯನ್ನು ನೀಡುತ್ತಿದ್ದಾರೆ ಎಂದು ರೋಶನ್ ಬೇಗ್ ಅವರೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂದು ಶಿವಾಜಿನಗರದ ಜನರು, ನಮ್ಮ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ, ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಸಡಿಲಗೊಳಿಸುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖಾ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೋಶನ್ ಬೇಗ್, ‘ಇದೊಂದು ಕೀಳುಮಟ್ಟದ ರಾಜಕೀಯ ಪ್ರಚಾರಕ್ಕೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಶಿವಾಜಿನಗರದಲ್ಲಿ ಪ್ರತಿಯೊಂದು ಧರ್ಮದವರು ಸಹೋದರರಂತೆ ಜೀವಿಸುತ್ತಿದ್ದಾರೆ. ನನಗೆ ರುದ್ರೇಶ್ ಬಗ್ಗೆ ಯಾವುದೇ ದ್ವೇಷವಿಲ್ಲ. ಅವರ ಹತ್ಯೆಗೂ ನನಗೂ ಸಂಬಂಧ ಇಲ್ಲ. ಈ ಕುರಿತು ಯಾವುದೇ ತನಿಖೆ ನಡೆಸಿದರು ಅದನ್ನು ಎದುರಿಸಲು ನಾನು ಸಿದ್ಧ’ ಎಂದು ಸುದ್ದಿ ವಾಹಿನಿಗೆ ಸ್ಪಷ್ಟನೆ ನೀಡಿದ್ದಾರೆ.

ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಈಗಾಗಲೆ ಜಾರಿಗೊಳ್ಳುತ್ತಿದೆ: ಜೇಟ್ಲಿ

ಕೇಂದ್ರ ಸರ್ಕಾರ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿ ಮಾಡದೇ ನಿವೃತ್ತ ಯೋಧರಿಗೆ ಅನ್ಯಾಯ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ. ‘ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಈ ಯೋಜನೆ ಈಗಾಗಲೇ ಜಾರಿಯಾಗುತ್ತಿದ್ದು ಸಾಕಷ್ಟು ಹಿರಿಯ ಸೈನಿಕರು ಇದರ ಫಲಾನುಭವಿಗಳಾಗಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು ಜೇಟ್ಲಿ.

ಇದಕ್ಕೂ ಮುನ್ನ ಶುಕ್ರವಾರ ಯೋಜನೆಯಲ್ಲಿನ ಕೆಲವು ಗೊಂದಲಗಳ ಬಗ್ಗೆ ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕರ್ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮತ್ತೊಂದೆಡೆ ಕೆಲವು ಮಾಜಿ ಸೈನಿಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿಯೇ ಇಲ್ಲ. ಸೈನಿಕರು ತಮಗೆ ಬರಬೇಕಿದ್ದ ಪಿಂಚಣ ಹಣವನ್ನು ಮಾತ್ರ ಪಡೆಯುತ್ತಿದ್ದಾರೆ. ಒಂದು ವೇಳೆ ಈ ಯೋಜನೆ ಜಾರಿಯಾಗಿದ್ದರೆ, ಇಷ್ಟೊಂದು ಸಂಖ್ಯೆಯಲ್ಲಿ ಮಾಜಿ ಯೋಧರು ಏಕೆ ಪ್ರತಿಭಟನೆ ನಡೆಸುತ್ತಿದ್ದರು’ ಎಂದು ಪ್ರಶ್ನಿಸಿದರು.

ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ರಾಜ್ಯದ ಪೌರ ಕಾರ್ಮಿಕರಿಗೆ ಮತ್ತು ಹಿರಿಯ ನಾಗರೀಕರಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಆರಂಭಿಕ ಹಂತವಾಗಿ ನವೆಂಬರ್ 8 ರಿಂದ ರಾಜಧಾನಿ ಬೆಂಗಳೂರಿನಲ್ಲಿ ಈ ಯೋಜನೆ ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ ಮೇಯರ್ ಜಿ.ಪದ್ಮಾವತಿ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಮೇಯರ್, ‘ಬೆಂಗಳೂರು ನಗರದ ಪ್ರತಿ ವಾರ್ಡಿನ 50 ಹಿರಿಯ ನಾಗರೀಕರಿಗೆ ಮಧ್ಯಾಹ್ನ ಊಟ ನೀಡಲಿದ್ದು, ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ’ ಎಂದರು.
  • ಸಾಕಷ್ಟು ನಿರೀಕ್ಷೆ ಮೂಡಿಸಿರುವ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ನಡೆಯುವುದೇ ಎಂಬ ಅನುಮಾನ ಹುಟ್ಟುಕೊಂಡಿದೆ. ಲೋಧ ಸಮಿತಿ ಮತ್ತು ಬಿಸಿಸಿಐ ನಡುವಣ ಹಗ್ಗಜಗ್ಗಾಟ ಈ ಸರಣಿಗೆ ಮಾರಕವಾಗುವುದೇ ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ಶಿಫಾರಸ್ಸನ್ನು ಜಾರಿಗೊಳಿಸದ ಹೊರತಾಗಿ ಯಾವುದೇ ಕಾರಣಕ್ಕೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಡಿಗಾಸನ್ನು ಕೊಡುವುದಿಲ್ಲ ಎಂದು ಲೋಧಾ ಸಮಿತಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅಲ್ಲದೆ ಬಿಸಿಸಿಐನ ಆರ್ಥಿಕ ವ್ಯವಹಾರಗಳ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಸಿಸಿಐ ಬಾಸ್ ಗಳು ಇಸಿಬಿಗೆ ಪ್ರತ್ರ ಬರೆದಿದ್ದು, ‘ಇಂಗ್ಲೆಂಡ್ ಆಟಗಾರ ಸಂಪೂರ್ಣ ಖರ್ಚನ್ನು ನೀವೇ ನಿಭಾಯಿಸಬೇಕು’ ಎಂದು ಮನವಿ ಮಾಡಿದೆ.
  • ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ತಮ್ಮ ಹೈ ಕಮಿಷನರ್ ಕಚೇರಿಯ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ವಾಪಸ್ ಕರೆಸಿಕೊಳ್ಳಲು ಚಿಂತನೆ ನಡೆಸಿವೆ ಎಂಬ ವರದಿಗಳು ಬಂದಿವೆ. ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ಸಿಬ್ಬಂದಿ ಗೂಢಚಾರಿಕೆ ಮಾಡಿ ಭಾರತದ ರಕ್ಷಣಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಹಿನ್ನೆಲೆಯಲ್ಲಿ ಭಾರತ ಆತನನ್ನು ವಿಚಾರಣೆಗೆ ಒಳಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ಹೈ ಕಮಿಷನ್ ಸಿಬ್ಬಂದಿಗಳ ಮೇಲೆ ಇದೇ ಆರೋಪ ಮಾಡಿತ್ತು. ಹೀಗಾಗಿ ಉಭಯ ದೇಶಗಳು ತಾತ್ಕಾಲಿಕವಾಗಿ ತಮ್ಮ ಸಿಬ್ಬಂದಿ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿವೆ.
  • 2012ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀರು ರಹಿತ ವಾರೆಂಟ್ ನೀಡಲಾಗಿದೆ. ಇದರೊಂದಿಗೆ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮಲ್ಯ ವಿರುದ್ಧ ಎರಡನೇ ಬಾರಿಗೆ ಜಾಮೀನು ರಹಿತ ಬಂಧನ ವಾರೆಂಟ್ ನೀಡಲಾಗಿದೆ. ನವದೆಹಲಿಯ ಜಿಲ್ಲಾ ನ್ಯಾಯಾಲಯ ಶುಕ್ರವಾರ ಈ ವಾರೆಂಟ್ ನೀಡಿದ್ದು, ಈ ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷ ಫೆಬ್ರವರಿ 4ಕ್ಕೆ ಮುಂದೂಡಿದೆ.

Leave a Reply