ಮಾಜಿ ಸೈನಿಕ ರಾಮ್ ಕಿಶನ್ ಆತ್ಮಹತ್ಯೆಗೆ ಕಾರಣವಾಯ್ತಾ ಪಿಂಚಣಿ ಮೇಲಿನ ಸಾಲ?

New Delhi: **File** Identity card of 70-year-old ex-serviceman Ram Kishan Grewal who allegedly committed suicide over One Rank, One Pension scheme in New Delhi.PTI Photo(PTI11_2_2016_000288B)

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸೈನಿಕ ರಾಮ್ ಕಿಶನ್ ಗ್ರೆವಾಲ್ ಅವರ ಆತ್ಮಹತ್ಯೆ ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಿರುವ ಜತೆಗೆ, ಮಾನಸಿಕವಾಗಿ ಗಟ್ಟಿಗನಾಗಿದ್ದ ಆತ ಆತ್ಮಹತ್ಯೆಗೆ ಶರಣಾಗಲು ಕಾರಣ ಏನಿರಬಹುದು ಎಂಬ ಪ್ರಶ್ನೆ ದಟ್ಟವಾಗಿ ಮೂಡಿತ್ತು. ರಾಮ್ ಕಿಶನ್ ತಮ್ಮ ಪಿಂಚಣಿ ಆಧಾರದ ಮೇಲೆ ಬ್ಯಾಂಕಿನಲ್ಲಿ ₹ 3.5 ಲಕ್ಷ ಸಾಲ ಮಾಡಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಅದರೊಂದಿಗೆ ಈ ಸಾಲದಿಂದಲೇ ರಾಮ್ ಕಿಶನ್ ಆತ್ಮಹತ್ಯೆಗೆ ಶರಣಾದರೇ ಎಂಬ ಅನುಮಾನ ಬಲವಾಗುತ್ತಿದೆ.

ಭಿವಾನಿಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿರುವ ತಮ್ಮ ಖಾತೆಯಿಂದ ರಾಮ್ ಕಿಶನ್ ಕಳೆದ ಏಪ್ರಿಲ್ ತಿಂಗಳಲ್ಲಿ ತಮ್ಮ ಪಿಂಚಣಿ ಹಣವನ್ನು ಡ್ರಾ ಮಾಡಿಕೊಂಡಿದ್ದರು. ಜತೆಗೆ ಅದೇ ಬ್ಯಾಂಕಿನಲ್ಲಿ ಪಿಂಚಣಿಯ ಆಧಾರದ ಮೇಲೆ ₹ 3.5 ಲಕ್ಷ ಸಾಲ ಮಾಡಿದ್ದರು. ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ಅಂಶ ಏನಂದ್ರೆ, ರಾಮ್ ಕಿಶನ್ ಬ್ಯಾಂಕಿನಲ್ಲಿ ಸಾಲ ಮಾಡಿರುವ ಬಗ್ಗೆ ಸ್ವತಃ ರಾಮ್ ಕಿಶನ್ ಅವರ ಕುಟುಂಬ ಸದಸ್ಯರಿಗೂ ತಿಳಿದಿಲ್ಲ. ಈ ಬಗ್ಗೆ ‘ದ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಬೆಳಕು ಚೆಲ್ಲಿದೆ.

‘ಕಳೆದ ವರ್ಷ ಮೇ ತಿಂಗಳಲ್ಲಿ ಗ್ರೆವಾಲ್ ಅವರು ತಮ್ಮ ಪಿಂಚಣಿಯ ಆಧಾರದ ಮೇಲೆ ₹ 3.5 ಲಕ್ಷ ಸಾಲ ಪಡೆದಿದ್ದರು’ ಎಂದು ಬ್ಯಾಂಕಿನ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಆದರೆ ‘ನಮ್ಮ ತಂದೆ ಅವರು ಬ್ಯಾಂಕಿನಲ್ಲಿ ನಡೆಸುವ ವ್ಯವಹಾರದ ಬಗ್ಗೆ ನಾನಾಗಲಿ ನನ್ನ ಸಹೋದರನಾಗಲಿ ಯಾವುದೇ ಮಾಹಿತಿ ಇರಲಿಲ್ಲ’ ಎಂದು ಹೇಳಿದ್ದಾರೆ ರಾಮ್ ಕಿಶನ್ ಅವರ ಮಗ ಜಸ್ವಂತ್.

‘ಒಆರ್ ಒಪಿ ಯೋಜನೆ ಜಾರಿಯಾದ ಮೇಲೆ ಏಪ್ರಿಲ್ ತಿಂಗಳಿಗೂ ಮುನ್ನ ಅವರು ₹ 22,608 ಬ್ಯಾಂಕಿನಿಂದ ಡ್ರಾ ಮಾಡಿದ್ದರು. ಆಗ, ಒರ್ ಒಪಿ ಯೋಜನೆ ಸರಿಯಾಗಿ ಜಾರಿಯಾದರೆ ನನ್ನ ಪಿಂಚಣಿ ಹಣ 30 ಸಾವಿರಕ್ಕೆ ಹೆಚ್ಚಾಗಬೇಕು’ ಎಂದು ತಂದೆಯವರು ತಿಳಿಸಿದ್ದಾಗಿ ಜಸ್ವಂತ್ ಮಾಹಿತಿ ನೀಡಿದ್ದಾರೆ.

ರಾಮ್ ಕಿಶನ್ ಅವರಿಗೆ ಒಆರ್ ಒಪಿ ಯೋಜನೆಯಿಂದ ಬರಬೇಕಾದ ಹಣದ ಬಗ್ಗೆ ಬ್ಯಾಂಕಿನ ತಪ್ಪು ಲೆಕ್ಕದಿಂದ ಅವರಿಗೆ ಕಡಿಮೆ ಪಿಂಚಣಿ ಬರುತ್ತಿತ್ತು ಎಂಬ ಕಾರಣಗಳು ಕೇಳಿಬಂದಿತ್ತು. ಇದಕ್ಕೆ ಬ್ಯಾಂಕಿನ ಮ್ಯಾನೇಜರ್ ರಾಮ್ ಸಿಂಗ್ ನೀಡಿದ ಸ್ಪಷ್ಟನೆ ಹೀಗಿದೆ..

‘ಗ್ರೆವಾಲ್ ಅವರು ಕಳೆದ ಏಪ್ರಿಲ್ ನಿಂದ ₹ 22,608 ಬ್ಯಾಂಕಿಗೆ ಕಟ್ಟಿದ್ದು, ತಪ್ಪು ಲೆಕ್ಕದಿಂದ ರಾಮ್ ಕಿಶನ್ ಅವರಿಗೆ ಕಡಿಮೆ ಪಿಂಚಣಿ ಬಂದಿಲ್ಲ. ಈ ಪಿಂಚಣಿ ಕಡಿಮೆ ಬಂದಿರುವ ಬಗ್ಗೆ ಅಥವಾ ತಪ್ಪು ಲೆಕ್ಕಚಾರದ ಬಗ್ಗೆ ಗ್ರೆವಾಲ್ ಅವರು ಬ್ಯಾಂಕಿಗೆ ಮೌಖಿಕವಾಗಲಿ ಅಥವಾ ಲಿಖಿತ ರೂಪದಲ್ಲಾಗಲಿ ದೂರು ಕೊಟ್ಟಿಲ್ಲ. ಹೀಗಾಗಿ ಬ್ಯಾಂಕಿನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ. ಭಾರತೀಯ ಸ್ಟೇಟ್ ಬ್ಯಾಂಕಿನ ಕೇಂದ್ರಿಕೃತ ಪಿಂಚಣಿ ಪ್ರಕ್ರಿಯೆ ಸೆಲ್ ಗೆ ಈ ಹಿಂದಿನ ಬ್ಯಾಂಕು ಅಧಿಕಾರಿಗಳು ಪೆನ್ಷನ್ ಪೇಮೆಂಟ್ ಆರ್ಡರ್ (ಪಿಪಿಒ) ಅನ್ನು ರವಾನಿಸುತ್ತಾರೆ. ಅದರ ಆಧಾರದ ಮೇಲೆ ಪಿಂಚಣಿಯ ಲೆಕ್ಕಾಚಾರ ನಡೆಯುತ್ತದೆ. ಇದೇ ರೀತಿಯಲ್ಲಿ ನಾವು ರಾಮ್ ಕಿಶನ್ ಅವರ ಪಿಂಚಣಿಯನ್ನು ಪಿಪಿಒ ಪ್ರಕಾರವಾಗಿಯೇ ನೀಡಿದ್ದೇವೆ.’

Leave a Reply