ಹರಿ ಖೋಡೆ ಎಂದೊಡೆ ನೆನಪಾಗಬೇಕಿರುವುದು ಸಾರಾಯಿ ಮಾತ್ರವಲ್ಲ, ಸಿನಿಮಾ ಸಹ

ಶ್ರೀಹರಿ ಖೋಡೆ ಮತ್ತು ನಿರ್ದೇಶಕ ಟಿ.ಎಸ್ ನಾಗಾಭರಣ

author-ssreedhra-murthy‘ನಾನು ನಿರ್ಮಿಸುವ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯಬೇಕು, ನೂರು ದಿನಗಳ ‍ಪ್ರದರ್ಶನವನ್ನೂ ಕಾಣಬೇಕು’ ಹೀಗೆ ಮಾಸ್ ಮತ್ತು ಕ್ಲಾಸನ್ನು ಸೇರಿಸುವ ಚಿತ್ರರಂಗದ ಮಟ್ಟಿಗೆ ವಿಚಿತ್ರ ಎನ್ನಿಸಬಲ್ಲ ನಂಬಿಕೆಯನ್ನು ದೃಢವಾಗಿ ಹೇಳುತ್ತಾ ಬಂದಿದ್ದವರು ಶ್ರೀಹರಿ ಖೋಡೆ. ಅವರೇನು ಸಾಲು ಸಾಲಾಗಿ ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕರಲ್ಲ. ಚಿತ್ರ ನಿರ್ಮಾಣದ ಕುರಿತು ಆಸಕ್ತಿಯನ್ನೂ ಹೊಂದಿದವರಲ್ಲ. ಆದರೆ ಅವರು ನಿರ್ಮಿಸಿದ ಮೂರೇ ಚಿತ್ರಗಳನ್ನು ಇದನ್ನು ಸಾಧಿಸಿ ತೋರಿಸಿದ್ದವು. ಅಷ್ಟೇ ಅಲ್ಲ ಮೂರೂ ಚಿತ್ರಗಳ ವಸ್ತುಗಳು ಕೂಡ ಬೇರೆ ನಿರ್ಮಾಪಕರು ನಿರ್ಮಿಸುವುದಿರಲಿ ಯೋಚಿಸಲೂ ಹಿಂಜೆರೆಯುವಂತಹವು. ನಾಲ್ಕನೇ ಚಿತ್ರ ‘ಅಲ್ಲಮ’ ನಿರ್ಮಾಣದ ಅಂತಿಮ ಹಂತದಲ್ಲಿರುವಾಗಲೇ ಇಹ ಬಂಧನವನ್ನು ಕಳಚಿಕೊಂಡು ನಡೆದ ಖೋಡೆಯವರ ಸಾಂಸ್ಕೃತಿಕ ವ್ಯಕ್ತಿತ್ವ ನನಗೆ ಈ ಕಾರಣದಿಂದಲೇ ಮಹತ್ವದ್ದಾಗಿ ಕಾಣುತ್ತದೆ.

ಮೊದಲ ಪಬ್ ರೂಪಿಸಿದವರು ಎಂಬ ಹೆಗ್ಗಳಿಕೆಯ ಶ್ರೀಹರಿ ಖೋಡೆಯವರು ನಿರ್ಮಿಸಿದ ಬೃಹತ್ ಸಾಮ್ರಾಜ್ಯದ ಬಗ್ಗೆ, ಅವರ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಒಡನಾಟದ ಕುರಿತು ರಂಗು ರಂಗಿನ ಕಥೆಗಳಿವೆ. ನನಗೆ ಅವುಗಳಿಗಿಂತ ಮುಖ್ಯವಾದದ್ದು ಸದಾ ಅವಧೂತ ಪರಂಪರೆಯ ಒಡನಾಟ ಇಟ್ಟುಕೊಂಡ ವೈಭವದ ನಡುವೆಯೂ ಅವಧೂತರಂತೇ ಬಾಳಿದ ಅವರ ವ್ಯಕ್ತಿತ್ವ. ಸ್ವತಃ ಉತ್ತಮ ಬರಹಗಾರರಾಗಿದ್ದ ಖೋಡೆಯವರು ‘ಉಮರ್ ಖಯ್ಯಾಮ್‍’ ಅನ್ನು ತಮ್ಮದೇ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಅವರ ಅಧ್ಯಾತ್ಮಿಕ ರಚನೆಗಳನ್ನು  ನಿರಂತರವಾಗಿ ಮಾಡುತ್ತಾ ಬಂದಿದ್ದರು. ಅಷ್ಟದಶ ಪುರಾಣಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಯೊಂದರಲ್ಲಿ ಕೂಡ ಅವರು ತೊಡಗಿಕೊಂಡಿದ್ದರು. ಹಾಗೆ ನೋಡಿದರೆ ಚಿತ್ರರಂಗದ ಜೊತೆಗಿನ ಅವರ ಒಡನಾಟ ಆರಂಭವಾಗಿದ್ದೇ ಅವಧೂತ ಸಂತ ಶಿಶುನಾಳ ಶರೀಫರ ಕುರಿತ ಚಿತ್ರದಿಂದ. ಉತ್ತರ ಕರ್ನಾಟಕದಲ್ಲಿ ಅನುಭಾವಿಯಾಗಿ ಹೆಸರು ಪಡೆದಿದ್ದ ಶರೀಫರ ಪದಗಳನ್ನು ಕ್ಯಾಸೆಟ್ ಮೂಲಕ ನಾಡಿನೆಲ್ಲೆಡೆಗೆ ತಲುಪಿಸಿದ್ದ ಹೆಗ್ಗಳಿಕೆ ಸಿ.ಅಶ್ವತ್ಥ್ ಅವರದು. ಅಶ್ವತ್ಥ್ ಖೋಡೆಯವರ ಅಂತರಂಗ ವಲಯಕ್ಕೆ ಸೇರಿದ್ದವರು. ಇದನ್ನು ಚಿತ್ರವಾಗಿಸಿದರೆ ಚೆನ್ನಾಗಿರುತ್ತದೆ ಎಂದು ಅವರು ಮಾಡಿದ ಪ್ರಸ್ತಾಪಕ್ಕೆ ಕೊಂಚವೂ ಹಿಂಜರೆಯದೆ ಖೋಡೆಯವರು ಹಣ ಹೂಡಿದ್ದರು. ನೇರವಾಗಿ ತಾವೇ ನಿರ್ಮಾಪಕರಾಗದೆ ಮಹಿಮಾ ಪಟೇಲರ ಹೆಸರಿನಲ್ಲಿ ಹಣ ಹೂಡಿ ತಾವು ಮರೆಯಲ್ಲಿಯೇ ನಿಂತಿದ್ದರು. ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ಶ್ರೀಧರ್ ಅವರ ಅಭಿನಯದಲ್ಲಿ ಮೂಡಿ ಬಂದ ಚಿತ್ರ ಜನ ಮನ್ನಣೆಯನ್ನು ಪಡೆದಿದ್ದು ಮಾತ್ರವಲ್ಲದೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆಯಿತು.

ಆದರೆ ಸಿ.ಅಶ್ವತ್ಥ್ ಅವರಿಗೆ ಒಳಗೆ ಎಲ್ಲೋ ಕೊರಗು. ತಮ್ಮ ಒಂದು ಮಾತಿಗೆ ಹಣ ಹೂಡಿದ ಯಜಮಾನರ ಬದಲು ಇನ್ಯಾರೋ ರಾಷ್ಟ್ರಪ್ರಶಸ್ತಿಯನ್ನು ತೆಗೆದುಕೊಳ್ಳುವಂತಾಯಿತಲ್ಲ  ಎಂದು. ನಿಮ್ಮದೇ ಹೆಸರಿನಲ್ಲಿ ಇನ್ನೊಂದು ಚಿತ್ರ ನಿರ್ಮಿಸಿ ಎಂದು ಒತ್ತಾಯಿಸಲು ತೊಡಗಿದರು. ಆಗಲೂ ಶ್ರೀಹರಿ ಖೋಡೆಯವರದು ವಿಭಿನ್ನ ಆಯ್ಕೆ. ತಮಗೆ ಬಹಳ ಪ್ರಿಯವಾಗಿದ್ದ ಕೆ.ಎಸ್.ನರಸಿಂಹ ಸ್ವಾಮಿಯವರ ಕಾವ್ಯಲೋಕವನ್ನು ಕುರಿತ ಸಿನಿಮಾ ಮಾಡಿ ಎಂದು ಸೂಚಿಸಿದರು. ರಾಷ್ಟ್ರಮಟ್ಟದಲ್ಲಿಯೇ ಕವಿಯೊಬ್ಬರ ಪರಿಕಲ್ಪನೆಯನ್ನು ಇಟ್ಟುಕೊಂಡ ಚಿತ್ರ ಯಾವುದೂ ಮೂಡಿ ಬಂದಿರಲಿಲ್ಲ. ಕನ್ನಡ ಕಾವ್ಯ ಪ್ರಪಂಚದ ನಿತ್ಯ ನೂತನ ಲೋಕ ‘ಮೈಸೂರು ಮಲ್ಲಿಗೆ’ ಚಲನಚಿತ್ರದ ರೂಪವನ್ನು ಪಡೆದಿದ್ದು ಹೀಗೆ. ಕವಿತೆಗಳ ಹಿಂದಿನ ಮಧುರಲೋಕವನ್ನು ಸ್ವಾತಂತ್ರ್ಯ ಹೋರಾಟದ ಕಾಲಘಟ್ಟಕ್ಕೆ ಹೊಂದಿಸಿದಾಗ ವಿಭಿನ್ನವಾದ ಚಿತ್ರವೊಂದು ಮೂಡಿ ಬಂದಿತು. ರಾಯರು, ಶ್ಯಾನುಭೋಗರ ಮಗಳು, ಬಳೆಗಾರ ಚೆನ್ನಯ್ಯ ಎಲ್ಲರೂ ಕಾವ್ಯಲೋಕದಿಂದ ಸೆಲ್ಯೂಲಾಯ್ಡು ಪ್ರವೇಶಿಸಿ ಜನ ಮನ್ನಣೆಯನ್ನು ಪಡೆದರು. ಕೆ.ಎಸ್.ನರಸಿಂಹ ಸ್ವಾಮಿಯವರಿಗೆ ಗೀತರಚನೆಗೆ ರಾಷ್ಟ್ರಪ್ರಶಸ್ತಿ ಲಭಿಸಿತು. ಕನ್ನಡದಲ್ಲಿ ಈ ವಿಭಾಗದಲ್ಲಿ ದೊರೆತ ಮೊದಲ ರಾಷ್ಟ್ರಮಟ್ಟದ ಮನ್ನಣೆ ಇದಾಗಿತ್ತು. ಕವಿತೆಗಳು ಸಿನಿಮಾದಲ್ಲಿ ಫಿಲ್ಲರ್‍ಗಳಂತಿರಲಿಲ್ಲ ಕವಿತೆಗಳ ಮೂಲಕ ಚಿತ್ರ ನಿರೂಪಿತವಾಗಿತ್ತು. ಇಂತಹದೊಂದು ಹೊಸ ತಂತ್ರಗಾರಿಕೆಯ ಯಶಸ್ಸಿಗೆ ಪ್ರತಿಕ್ಷಣವೂ ಅದಕ್ಕಾಗಿ ಹಂಬಲಿಸಿದ ಖೋಡೆಯವರ ಕಾಳಜಿ ಕೂಡ ಕಾರಣವಾಗಿತ್ತು. ಎರಡೂ ಚಿತ್ರಗಳ ಯಶಸ್ಸಿನ ನಂತರ ಖೋಡೆಯವರಿಗೆ ನಾಗಾಭರಣ ಅವರ ಕುರಿತು ವಿಶ್ವಾಸ ಮೂಡಿತ್ತು. ಇನ್ನೊಂದು ಸದಭಿರುಚಿ ಚಿತ್ರವನ್ನು ನಿರ್ಮಿಸುವ ಪ್ರಸ್ತಾಪವನ್ನು ತಾವೇ ಮುಂದಿಟ್ಟರು. ಆಗ ಮೊದಲು ಆಯ್ಕೆಯಾಗಿದ್ದು ‘ಜೋಕುಮಾರಸ್ವಾಮಿ’ ಆದರೆ ಹಲವು ಕಾರಣಗಳಿಂದ ಶಂಕರ್‍ ನಾಗ್ ಅವರದೇ ಇನ್ನೊಂದು ಕನಸು ‘ನಾಗಮಂಡಲ’ ಆಯ್ಕೆಯಾಯಿತು. ತಾಂತ್ರಿಕ ಅಂಶಗಳಲ್ಲಿ ಕೂಡ ಚಿತ್ರ ಭಿನ್ನವಾಗಿ ಮೂಡಿ ಬರಬೇಕು ಎಂದು ಖೋಡೆಯವರು ನಿರ್ಧರಿಸಿದ್ದರು. ಮೂರನೇ ಚಿತ್ರ ಕೂಡ ಜನ ಮನ್ನಣೆ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರೂ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಖೋಡೆಯವರು ಮುಂದಾಗದಿದ್ದಕ್ಕೆ ಹಲವು ಕಾರಣಗಳಿದ್ದವು. ಮುಖ್ಯವಾಗಿ ಸೆಟಲೈಟ್ ರೈಟ್ಸ್ ಕುರಿತ ಕಹಿ ಅನುಭವ ಮುಖ್ಯ ಕಾರಣವಾಗಿತ್ತು. ಅವರನ್ನು ಮತ್ತೆ ಚಿತ್ರರಂಗದತ್ತ ಎಳೆದು ತಂದವರು ಸಿ.ಅಶ್ವತ್ಥ್ ಅವರೇ. ಖೋಡೆಯವರ ಅಂತರಂಗಕ್ಕೆ ಬಹಳ ಪ್ರಿಯವಾದ ಅಲ್ಲಮನ ಕುರಿತ ಚಿತ್ರದ ಪ್ರಸ್ತಾಪ ಬಂದಿತು. ಆದರೆ ಅಶ್ವತ್ಥ್ ಅವರ ಅಕಾಲಿಕ ಸಾವಿನ ಕಾರಣದಿಂದ ಅದು ಹಿನ್ನೆಲೆಗೆ ಬಂದಿತ್ತು. ಆದರೆ ಹರಿಪ್ರಸಾದ ಚೌರಾಸಿಯಾ ಅವರ ಶಿಷ್ಯ ಬಾಪು ಪದ್ಮನಾಭ ತಮ್ಮ ನಿರೀಕ್ಷೆಯ ಸಂಗೀತ ನೀಡಬಲ್ಲರು ಎನ್ನುವ ನಂಬಿಕೆ ಬಂದ ಮೇಲೆ ಅದಕ್ಕೆ ಚಾಲನೆ ದೊರೆತಿತ್ತು. ಕಳೆದ ನಾಲ್ಕು ವರ್ಷಗಳಿಂದ ಯಜಮಾನರ ಕಣ್ಗಾವಲಿನಲ್ಲಿ ಮೂಡಿ ಬಂದಿದ್ದ ‘ಅಲ್ಲಮ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ನಿರ್ಮಾಣದ ಪ್ರತಿಘಟ್ಟದಲ್ಲೂ ಅವರು ತೋರಿಸುತ್ತಿದ್ದ ಕಾಳಜಿ ಅವರ ಅಲ್ಲಮನ ಕುರಿತ ಅಪಾರ ಓದಿಗೆ ನಿದರ್ಶನ ಎನ್ನುವಂತಿತ್ತು. ಚಿತ್ರದ ಶೀರ್ಷಿಕೆಯ ರೂಪದಲ್ಲಿ ಖೋಡೆಯವರು ರಚಿಸಿ ಸಿ.ಅಶ್ವತ್ಥ್ ಅವರು ಸ್ವರ ಸಂಯೋಜಿಸಿ ಹಾಡಿದ್ದ ಶೂನ್ಯ ಎನ್ನುವ ರಚನೆಯನ್ನು ಬಳಸಿಕೊಳ್ಳಲಾಗಿತ್ತು. ಅದು ಈಗ ಇಬ್ಬರಿಗೂ ಶ್ರದ್ದಾಂಜಲಿಯಂತಾದದ್ದು ವಿಪರ್ಯಾಸವೇ ಸರಿ. ಖೋಡೆಯವರ ‘ಉಮರ್ ಕಯ್ಯಾಮ್‍’ ನ ಅನುವಾದದ ಈ ಸಾಲುಗಳು ಈಗ ಕಾಡುತ್ತಿವೆ

ನಾನು ಚಪಲದ ಗುಲಾಮ,

ನೇಮದಿಂದಲಿ ನಡೆದರೆ

ನೀ ಸ್ವರ್ಗವ ನೀಡುವೆಯಾದರೆ

ಅದು ವರ್ತಕನ ಮಾತಾಯಿತು!

Leave a Reply