ಮೈಸೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆ, ಕೇಸರಿ ಪಾಳೆಯ ಸೇರದಂತೆ ಭಯ ನಿರ್ಮಿತಿಯ ಕೊಲೆ ಸರಣಿ ಕರ್ನಾಟಕದಲ್ಲಿ ರೂಪುಗೊಳ್ಳುತ್ತಿದೆಯೇ?

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನಲ್ಲಿ ರುದ್ರೇಶ್ ಹತ್ಯೆಯ ಕರಾಳತೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೊಬ್ಬ ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತನ ಹತ್ಯೆ ಆಗಿದೆ. ಮಳಗಿ ರವಿ (33) ಹತ್ಯೆಯಾದ ವ್ಯಕ್ತಿ.

ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದವರು ಯಾರು, ಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಿದೆ. ಆದರೆ ಸಿದ್ಧಾಂತ ಬೆರೆತ ರಾಜಕೀಯ ಹತ್ಯೆಯೇ ಇದಾಗಿರಬಹುದೇ ಎಂಬ ಸಂಶಯ ಕಾಡುತ್ತಿರುವುದಕ್ಕೆ ಕಾರಣಗಳಿವೆ.

ಟಿವಿ ವಾಹಿನಿಗಳೊಂದಿಗೆ ಮಾತನಾಡಿರುವ ಅವರ ಪರಿಚಯಸ್ಥರ ಮಾತುಗಳ ಪ್ರಕಾರ ರವಿ ಹತ್ತು ವರ್ಷಗಳಿಂದ ಬಿಜೆಪಿಯಲ್ಲಿ ತೊಡಗಿಸಿಕೊಂಡಿದ್ದರು. ಜಿಲ್ಲೆಯ ಬಿಜೆಪಿ ಸಂಘಟನೆಯ ಉಪಾಧ್ಯಕ್ಷ ಸ್ಥಾನವೂ ಇತ್ತು. ಬಹಳ ಮುಖ್ಯವಾಗಿ ಕರ್ನಾಟಕ ಸರ್ಕಾರವು ಟಿಪ್ಪು ಜಯಂತಿ ಆಚರಿಸುತ್ತಿರುವುದರ ವಿರುದ್ಧ ಬಿಜೆಪಿ ಸ್ಥಳೀಯವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದರು. ಇದೇ ಸಂಬಂಧವಾಗಿಯೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆಯನ್ನು ಕರೆಯಲಾಗಿತ್ತು. ಅಲ್ಲಿ ಟಿಪ್ಪು ಜಯಂತಿಯ ಪರ-ವಿರೋಧವಿರುವ ಪ್ರಮುಖರನ್ನೆಲ್ಲ ಮಾತುಕತೆಗೆ ಕರೆಯಲಾಗಿತ್ತು. ಟಿಪ್ಪು ಜಯಂತಿ ದಿನ ಶಾಂತಿಭಂಗದ ಘಟನೆಗಳಾಗದಂತೆ ಮುನ್ನೆಚ್ಚರಿಕಾ ಸಭೆ ಇದಾಗಿತ್ತು. ಸಹ ಕಾರ್ಯಕರ್ತರ ಪ್ರಕಾರ, ಆ ಸಭೆಯಲ್ಲಿ ಬಿಜೆಪಿ ಪರವಾಗಿ ತಾವು ಟಿಪ್ಪು ಜಯಂತಿ ವಿರೋಧಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿಯೂ ರವಿ ತಿಳಿಸಿದ್ದರು. ಆ ಸಭೆ ಮುಗಿಸಿ ಹಿಂತಿರುಗುತ್ತಿದ್ದಾಗಲೇ ರಾತ್ರಿ ಇವರ ಹತ್ಯೆ ಆಗಿರುವುದು ಸೈದ್ಧಾಂತಿಕ-ರಾಜಕೀಯ ಪ್ರೇರಿತ ವ್ಯೂಹವೊಂದರ ಬಗ್ಗೆ ಅನುಮಾನ ಬಲಗೊಳ್ಳುವಂತೆ ಮಾಡಿದೆ.

ರುದ್ರೇಶ್ ಹತ್ಯೆಯಾದಾಗಲೂ ಇದಕ್ಕೆ ರಾಜಕೀಯ ಬಣ್ಣ ಬೇಡ, ವೈಯಕ್ತಿಕ ಕಾರಣಗಳೂ ಇರಬಹುದು ಎಂಬ ವಾದ ಕೇಳಿ ಬಂದಿತ್ತು. ಆದರೆ ಈಗ ಆರೋಪಿಗಳಾಗಿ ಬಂದಿತರಾಗಿರುವ ಪಿಎಫ್ಐ ಕಾರ್ಯಕರ್ತರಿಂದ ಅಲ್ಲಿರುವ ಕೋಮುದ್ವೇಷದ ಲೆಕ್ಕಾಚಾರ ಸ್ಪಷ್ಟವಾಗಿದೆ. ಶಿವಾಜಿನಗರದ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ರುದ್ರೇಶ್ ಪಕ್ಷ ಬಲಪಡಿಸುತ್ತಿದ್ದದ್ದೇ ಈ ಕೋಮು ಆಧರಿತ ಹತ್ಯೆಗೆ ಕಾರಣವೆಂಬುದು ಸ್ಪಷ್ಟವಾಗಿದೆ.

ಇದೀಗ ಟಿಪ್ಪು ಜಯಂತಿಗೆ ಸಂಬಂಧಿಸಿದ ಸಭೆಯಿಂದ ಹಿಂತಿರುಗುತ್ತಿದ್ದ ಕಾರ್ಯಕರ್ತನ ಕೊಲೆಯ ಹಿಂದೆಯೂ ವ್ಯವಸ್ಥಿತ ಸಂಚು ಕೆಲಸ ಮಾಡಿದೆ ಎಂಬ ಪ್ರತಿಪಾದನೆ ಸಹಜವಾಗಿಯೇ ಸ್ಥಳೀಯ ಬಿಜೆಪಿಗರಿಂದ ವ್ಯಕ್ತವಾಗಿದೆ.

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ, ಕಳೆದ ಎರಡು ವರ್ಷಗಳಲ್ಲೇ 7 ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರುಗಳ ಹತ್ಯೆ ಆಗಿದೆ. ಕೇರಳದ ಕಮ್ಯುನಿಸ್ಟ್ ಆಡಳಿತದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳೇ ಇಲ್ಲಿ ಕಾಲಿರಿಸಿವೆ’ ಎಂಬ ಆತಂಕವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೋಡಿಕೊಳ್ಳುತ್ತಿದ್ದಾರೆ ಬಿಜೆಪಿ ಬೆಂಬಲಿಗರು.

ಜತೆಯಲ್ಲೇ, ರಾಜ್ಯ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರುತ್ತಿಲ್ಲ. ರಾಜ್ಯದಲ್ಲಾಗುತ್ತಿರುವ ಹತ್ಯೆಗಳ ಸರಣಿಯನ್ನು ನಾಲ್ವರು ಕೇಂದ್ರ ಸಚಿವರು ರಾಷ್ಟ್ರಮಟ್ಟದಲ್ಲಿ ಸೂಕ್ತವಾಗಿ ಬಿಂಬಿಸುತ್ತಿಲ್ಲ. ಆರೆಸ್ಸೆಸ್- ಬಿಜೆಪಿಗೆ ಕಾರ್ಯಕರ್ತರಾಗಿ ದುಡಿಯುವವರನ್ನು ಹೆದರಿಸಿ ಹಿಮ್ಮೆಟ್ಟಿಸಲೆಂದೇ ಇಂಥ ಹತ್ಯೆಗಳು ನಡೆಯುತ್ತಿವೆ. ಹೀಗಿರುವಾಗ ರಾಜ್ಯ ಬಿಜೆಪಿ ಪ್ರಖರ ಒತ್ತಡವೊಂದನ್ನು ರೂಪಿಸಬೇಕಾದ ಅಗತ್ಯವಿದೆ ಎಂಬ ಅಭಿಮತವೂ ವ್ಯಕ್ತವಾಗುತ್ತಿದೆ.

ಇದೇ ವೇಳೆ, ಬೆಂಗಳೂರಿನ ಪೊಲೀಸ್ ಆಯುಕ್ತರು, ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ವಾಹಿನಿಗಳಿಗೆ ಎಚ್ಚರಿಕೆ ವಹಿಸುವಂತೆ ಸುತ್ತೋಲೆಯೊಂದನ್ನು ನೀಡಿದ್ದಾರೆ. ಟಿಪ್ಪು ಜಯಂತಿ ಕುರಿತು ಮಾತ್ರವಲ್ಲದೇ ರುದ್ರೇಶ್ ಹತ್ಯೆಯನ್ನು ವರದಿ ಮಾಡುವಾಗಲೂ ‘ಸಂಯಮ ಮತ್ತು ಸಂವೇದನೆ’ ಮೆರೆಯಬೇಕು ಎಂದು ಸೂಚಿಸಲಾಗಿದೆ. ಕೆಲವು ಟಿವಿ ವಾಹಿನಿಗಳು ಜನರ ನಡುವೆ ಕೋಮು ಪ್ರಚೋದನೆ ನೀಡುವ ರೀತಿಯಲ್ಲಿ ಪ್ರಸಾರ ಮಾಡುತ್ತಿವೆ ಎಂದೂ ಎಚ್ಚರಿಕೆ ನೀಡಲಾಗಿದೆ.

Leave a Reply