ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ನಡೆದ ರಾಜ್ಯ ಸರ್ಕಾರದ ಟಿಪ್ಪೂ ಜಯಂತಿ ವಿರೋಧಿ ವಿಚಾರಗೋಷ್ಟಿಯಲ್ಲಿ ಹಿರಿಯ ಸಾಹಿತಿ ಚಿದಾನಂದಮೂರ್ತಿ, ರಾಜಕಾರಣಿ ಶ್ರೀನಿವಾಸ್, ವಿಮರ್ಶಕ ಜಿ. ಬಿ. ಹರೀಶ್, ಲೇಖಕ ಸಂದೀಪ್ ಬಾಲಕೃಷ್ಣ…
ಡಿಜಿಟಲ್ ಕನ್ನಡ ಟೀಮ್:
ಬರ: ಹೊರರಾಜ್ಯಗಳಿಗೆ ಮೇವು ಸಾಗಿಸುವುದಕ್ಕೆ ತಡೆ
ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆ ನಿಷೇಧ ಮಾಡಲು ಸರ್ಕಾರ ನಿರ್ಧರಿಸಿದೆ.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪ ಸಮಿತಿಯಲ್ಲಿ ಈ ಮಹತ್ವ ನಿರ್ಧಾರ ಕೈಗೊಳ್ಳಲಾಗಿದೆ. ಮೇವು ಬೆಳೆಯಲು ರೈತರಿಗೆ ಉಚಿತ ಇಲ್ಲವೆ ರಿಯಾಯಿತಿ ದರದಲ್ಲಿ ಕಿಟ್ಗಳನ್ನು ನೀಡಲು ಸಭೆ ತೀಮಾನಿಸಿದೆ. ಅತೀವೃಷ್ಟಿ ಮತ್ತು ಅನಾವೃಷ್ಠಿಗಾಗಿ ಜಿಲ್ಲಾಧಿಕಾರಿಗಳ ಬಳಿ ಇರುವ ಹಣವನ್ನು ಕುಡಿಯುವ ನೀರು, ಮೇವು ಖರೀದಿಗೆ ಆದ್ಯತೆ ಮೇಲೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
ಇದಕ್ಕು ಮುನ್ನ ಬರ ಪರಿಶೀಲನೆಗೆ ಬಂದಿದ್ದ ಕೇಂದ್ರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ರಾಜ್ಯ ಎದುರಿಸುತ್ತಿರುವ ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವಂತೆ ನಿಯೋಗಕ್ಕೆ ಹೇಳಿದ್ದೇವೆ ಎಂದರು.
ಬರ: ಬಿಜೆಪಿ ನಿಯೋಗದಿಂದ ಕೇಂದ್ರಕ್ಕೆ ಮನವಿ
ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವುದರ ಮೂಲಕ ಅನ್ನದಾತನ ನೆರವಿಗೆ ದಾವಿಸಬೇಕೆಂದು ಬಿಜೆಪಿ ನಿಯೋಗ ಕೇಂದ್ರ ಅಧ್ಯಯನ ತಂಡಕ್ಕೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿ ಇಂದು ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ನಿರಾಜ್ ಅದಿದಮ್ ಅವರ ನೇತೃತ್ವದ ಅಧಿಕಾರಿಗಳ ತಂಡವನ್ನು ಭೇಟಿ ಮಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಯೋಗ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ಗೆ ನೀಡುವಂತೆ ಒತ್ತಾಯಿಸಿದೆ.
‘ಬರಗಾಲದಿಂದ ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ಶೇ.60ಕ್ಕಿಂತಲೂ ನೀರು ಕಡಿಮೆಯಾಗಿದೆ. ಲಿಂಗನಮಕ್ಕಿ, ಸೂಪಾ ಸೇರಿದಂತೆ ಮತ್ತಿತರ ಕಡೆ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರು ಸಂಗ್ರಹವಾಗಿಲ್ಲ. 2016ರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31ರಷ್ಟು ಮಳೆಯ ಕೊರತೆ ಎದುರಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ 3557 ಸಣ್ಣ ಕೆರೆಗಳು ಖಾಲಿಯಾಗಿವೆ. ಕೇವಲ 284 ಕೆರೆಗಳು ಮಾತ್ರ ಭರ್ತಿಯಾಗಿದ್ದು, ಶೇ.901ರಷ್ಟು ಕೆರೆಗಳಲ್ಲಿ ನೀರು ಬರಿದಾಗಿದೆ. ಇದರ ಪರಿಣಾಮ ಜಾನುವಾರುಗಳು ಸಹ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದ್ದೇವೆ’ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸರ್ಕಾರಿ-ಖಾಸಗಿಗಳಲ್ಲಿ ಏಕರೂಪ ಪಠ್ಯಕ್ಕೆ ಶಿಫಾರಸು
ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಏಕರೂಪದ ಪಠ್ಯಕ್ರಮವನ್ನು ಜಾರಿಗೊಳಿಸುವಂತೆ ಜ್ಞಾನ ಆಯೋಗ ಇಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬ ಭಾವನೆ ಇದೆ. ಇದನ್ನು ನಿವಾರಿಸುವ ಸಂಬಂಧ ಏಕರೂಪದ ಪಠ್ಯ ಕ್ರಮವನ್ನು ಜಾರಿಗೆ ತರಬೇಕು ಎಂದು ಜ್ಞಾನ ಆಯೋಗದ ಅಧ್ಯಕ್ಷ ಕಸ್ತೂರಿ ರಂಗನ್ ಸಮಿತಿ ನೀಡಿದೆ.
ಒಂದರಿಂದ ನಾಲ್ಕನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ನಂತರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಆಯಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಆಯೋಗ ಹೇಳಿದೆ.
‘ಯಡಿಯೂರಪ್ಪ ಪ್ರಕರಣ- ಕೇಂದ್ರ ಮೇಲ್ಮನವಿ ಸಲ್ಲಿಸಲಿ‘
ಹಲವು ನಾಯಕರ ವಿರುದ್ಧದ ಪ್ರಕರಣಗಳನ್ನು ನ್ಯಾಯಾಲಯ ವಜಾ ಮಾಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಅದೇ ಕಾಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದೆ.
ಯಡಿಯೂರಪ್ಪ ಅವರ ವಿರುದ್ದದ ಮೊಕದ್ದಮೆಗಳನ್ನು ವಿಶೇಷ ನ್ಯಾಯಾಲಯ ವಜಾ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ತಾನೇ ಮುಂದಾಗಿ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸಬೇಕು,ತಾಂತ್ರಿಕ ಕಾರಣಕ್ಕಾಗಿಯೋ?ಅಥವಾ ಇನ್ಯಾವ ಕಾರಣಕ್ಕಾಗಿ ಅದು ವಜಾ ಆಗಿದೆ ಎಂಬುದನ್ನು ನೋಡಬೇಕು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಟಿಪ್ಪು ಜಯಂತಿಯನ್ನು ಆಚರಿಸುವುದು ಶತಃಸಿದ್ಧ ಅಂತಲೂ ಹೇಳಿದರು.
ಶೋಭಾ ಆಪಾದನೆಗೆ ಮುಮಂ ತಿರುಗೇಟು
ರುದ್ರೇಶ್ ಹತ್ಯೆ ವಿಚಾರದಲ್ಲಿ ಶೋಭಾ ಕರಂದ್ಲಾಜೆಯವರು ರೋಷನ್ ಬೇಗ್ ಹೆಸರನ್ನು ಎಳೆತಂದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ರೋಷನ್ ಬೇಗ್ ಅವರೇ ರುದ್ರೇಶ್ ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಏನು ಸಾಕ್ಷಿ ಇದೆ. ಇದೆಲ್ಲಾ ಬಿಜೆಪಿ ತನ್ನ ರಾಜಕೀಯ ಅಸ್ವಿತ್ವಕ್ಕಾಗಿ ಮಾಡುತ್ತಿದೆ. ಬಿಜೆಪಿ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು ಇಂಥವರ ಕೈಗೆ ಅಧಿಕಾರ ಸಿಕ್ಕರೆ ರಾಜ್ಯದ ಕಥೆ ಮುಗಿದೆಹೋಯಿತು ಎಂದು ವ್ಯಂಗ್ಯವಾಡಿದರು.
ದಲಿತ ವಿರೋಧಿ ಬಿಜೆಪಿ ಇದೀಗ ಅಂಬೇಡ್ಕರ್ ಅವರ ಹೆಸರನ್ನು ಹೇಳುತ್ತಿದೆ. ಎಸ್ಸಿ, ಎಸ್ಟಿ ಯುವ ಮೋರ್ಚಾ ಸಭೆಗಳನ್ನು ಮಾಡುತ್ತಿದ್ದಾರೆ ಇದೆಲ್ಲಾ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಮಾಡುತ್ತಿದೆ ಎಂದರು.
ಬೆಳ್ಳಿ ಹಬ್ಬದಲ್ಲೂ ಸಮಾಜವಾದಿಗಳ ಕುದಿಮಾತು
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಶನಿವಾರ ಬೆಳ್ಳಿಹಬ್ಬ ಆಚರಿಸಿಕೊಂಡಿತು. ಮಾಜಿ ಪ್ರಧಾನಿ ದೇವೇಗೌಡ, ಜೆಡಿಯುದ ಶರದ್ ಯಾದವ್ ಸೇರಿದಂತೆ ಘಟಾನುಘಟಿಗಳೆಲ್ಲ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು. ಆದರೆ ಹಬ್ಬದ ಸಂದರ್ಭದಲ್ಲೂ ಎಸ್ಪಿಯ ಯಾದವರ ಕುಟುಂಬ ಕಲಹದ ಚುಚ್ಚು ಮಾತು- ವ್ಯಂಗ್ಯಗಳೇ ಧ್ವನಿಸಿದವು.
‘ನನ್ನನ್ನು ಅವಮಾನಿಸಿದ್ದು ಒಂದೆರಡು ಬಾರಿಯಲ್ಲ. ಎಷ್ಟೆಂದು ತಡೆದುಕೊಳ್ಳುವುದು? ನನಗೇನೂ ಮುಖ್ಯಮಂತ್ರಿ ಆಗುವ ಆಸೆ ಇಲ್ಲ’ ಅಂತ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಚಿಕ್ಕಪ್ಪ ಶಿವಪಾಲ ಯಾದವ್ ವೇದಿಕೆಯಲ್ಲೇ ವ್ಯಂಗ್ಯ ಮೊಳಗಿಸಿದರೆ, ಪ್ರಾರಂಭದಲ್ಲಿ ಚಿಕ್ಕಪ್ಪನ ಕಾಲುಮುಟ್ಟಿ ನಮಸ್ಕರಿಸಿ ಖಡ್ಗ ಪಡೆದ ಅಖಿಲೇಶ್, ‘ಖಡ್ಗವನ್ನೇನೋ ಉಡುಗೊರೆ ಕೊಟ್ಟಿರಿ. ಆದರೆ ಉಪಯೋಗಿಸುವುದಕ್ಕೆ ಬಿಡುತ್ತಿಲ್ಲ’ ಅಂತ ತಿವಿದರು.
ಅಖಿಲೇಶ್ ಹಾಗೂ ಶಿವಪಾಲ ಬಣಗಳ ನಡುವಿನ ಒಳಸಮರ ಮುಗಿದಿಲ್ಲವೆಂಬುದನ್ನು ಸಮಾವೇಶ ಸಾರಿಹೇಳುತ್ತಿತ್ತು. 2017ರಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಈ ಸ್ಥಿತಿ ಕುತೂಹಲಕ್ಕೆ ಕಾರಣವಾಗಿದೆ.