ಇರಾಕಿನಲ್ಲಿ ಐಎಸ್ಐಎಸ್ ಉಗ್ರರನ್ನು ಬೇಟೆಯಾಡುತ್ತಿರುವ ರೋಬಾಟ್, ಇದೇನಾ ಭವಿಷ್ಯದ ಯುದ್ಧತಂತ್ರ?

author-ananthramuಆದದ್ದಿಷ್ಟು, ಇರಾಕಿನ ತೀರ ಉತ್ತರಕ್ಕಿರುವ ಮೋಸುಲ್ ನಗರವನ್ನು 2014ರಲ್ಲಿ `ಇಸ್ಲಾಮಿಕ್ ಸ್ಟೇಟ್ ಪಡೆ’ ಆಕ್ರಮಣ ಮಾಡಿದಾಗ 30,000 ಇರಾಕಿ ಯೋಧರಿಗೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಇಪ್ಪತ್ತು ಲಕ್ಷ ಪ್ರಜೆಗಳಿರುವ ಈ ನಗರ ಒಂದರ್ಥದಲ್ಲಿ ದಿಗ್ಬಂಧನಕ್ಕೆ ಗುರಿಯಾಗಿದೆ. ಅಲ್ಲಿನ ಪ್ರಜೆಗಳಿಗೆ ತಾವಿದ್ದ ಜಾಗವೇ ನರಕವಾಗಿದೆ. ಮಹಿಳೆಯರ ಮಾನಭಂಗ ಜೊತೆಗೆ ಅಸಹನೆ ತೋರಿದರೆ ಅಂತಹವರು ಶವವಾಗುತ್ತಿದ್ದಾರೆ. ಊರು ಬಿಟ್ಟು ತೊರೆಯಲೇ ಬೇಕೆಂದರೆ ಇಸ್ಲಾಮಿಕ್ ಸ್ಟೇಟಿಗೆ ದೊಡ್ಡ ಮೊತ್ತದ ಟ್ಯಾಕ್ಸ್ ಕಟ್ಟಬೇಕು. ಇಸ್ಲಾಮಿಕ್ ಸ್ಟೇಟ್ ಪಡೆ ನಗರದ ಹೊರವಲಯದಲ್ಲಿ ಕಾರ್ ಬಾಂಬು ಸ್ಫೋಟಿಸಿದಾಗ ರಕ್ಷಣೆಗೆಂದು ಬಂದ ಇರಾಕಿ ಪಡೆಗಳು ಮೋಸುಲ್ ನಗರದಿಂದ ಎದ್ದುಬಿದ್ದು ಓಡಬೇಕಾಯಿತು. ಇದರ ನಂತರ ಇರಾಕ್ ಸೇಡು ತೀರಿಸಿಕೊಳ್ಳುವ ರಣತಂತ್ರ ಹೂಡುತ್ತಿದೆ. ಎರಡು ವರ್ಷಗಳ ಹಿಂದೆ ಇರಾಕಿ ಪಡೆಗಳಿಗೆ ಸರಿಯಾದ ಯುದ್ಧ ಕೌಶಲ ತರಪೇತಿ ಇರಲಿಲ್ಲ; ಜೊತೆಗೆ ಅವರಿಗೆ ಅಗತ್ಯವಾದ ಯುದ್ಧಾಸ್ತ್ರಗಳ ಸರಬರಾಜಿರಲಿಲ್ಲ. ಸರಬರಾಜು ಮಾಡಿದವು ಕಳಪೆಯಾಗಿದ್ದವು.

ಈಗ ಪರಿಸ್ಥಿತಿ ಬದಲಾಗಿದೆ. ಬಾಗ್ದಾದಿನ ಇಬ್ಬರು ತರುಣರು (ಇರಾಕ್ ಅವರ ಹೆಸರನ್ನು ಮತ್ತು ವಿವರವನ್ನು ಗುಪ್ತವಾಗಿಟ್ಟಿದೆ) ರೋಬಾಟ್ ಯೋಧನನ್ನು ಸೃಷ್ಟಿಸಿದ್ದಾರೆ. ಗಾಲ್ಫ್ ಗ್ರೌಂಡಿನಲ್ಲಿ ತಳ್ಳುವ ಗಾಡಿಯಷ್ಟು ಗಾತ್ರ. ಇದರಲ್ಲಿ ನಾಲ್ಕು ಅತ್ಯಾಧುನಿಕ ಕ್ಯಾಮೆರಾಗಳಿವೆ. ಆಟೋಮ್ಯಾಟಿಕ್ ಮೆಷಿನ್ ಗನ್‍ಗಳಿವೆ. ರಷ್ಯದ ರಾಕೆಟ್‍ಗಳನ್ನು ಹಾರಿಸಲು ಪುಟ್ಟ ವೇದಿಕೆಯೂ ಇದೆ. ರಾತ್ರಿಯ ವೇಳೆ ಅದು ಬೇಟೆಯಾಡುವ ರೋಬಾಟ್ ಆಗುತ್ತದೆ, ಏಕೆಂದರೆ ಅದರಲ್ಲಿರುವ ಕ್ಯಾಮೆರಾಗಳು ಉಷ್ಣತರಂಗಗಳನ್ನು ಗ್ರಹಿಸಬಲ್ಲವು, ಶತ್ರುಗಳ ಚಲನವಲನವನ್ನು ಗಮನಿಸಬಲ್ಲವು. ಬೆಳಗಿನ ಹೊತ್ತು ಟಾರ್ಗೆಟ್ ನಿಗದಿಪಡಿಸಿದ ಮೇಲೆ ರಾಕೆಟ್ ಉಡಾವಣೆ ಮಾಡಿ ಗುರಿಯನ್ನು ಧ್ವಂಸಮಾಡಬಲ್ಲವು. ಇದು ನೀಡುವ ಮಾಹಿತಿ ಕಮಾಂಡಿಗ್ ಕೇಂದ್ರಕ್ಕೆ ರವಾನೆಯಾಗುತ್ತದೆ. ಒಡನೆಯೇ ಎಫ್-16 ಯುದ್ಧ ವಿಮಾನಗಳು ಆಕ್ರಮಣಕ್ಕೆ ಇಳಿಯಬಲ್ಲವು.

ಸದ್ಯಕ್ಕೆ ಒಂದು ಕಿಲೋ ಮೀಟರ್ ದೂರದಿಂದ ಇವನ್ನು ಕಂಪ್ಯೂಟರ್ ನಿಯಂತ್ರಣದಿಂದ ಕಾರ್ಯಶೀಲ ಮಾಡಲಾಗುತ್ತಿದೆ. ಈ ಆಧುನಿಕ ರೋಬಾಟ್ ಯೋಧನನ್ನು `ಆಲ್ ರೋಬಾಟ್’ ಎಂದು ಇರಾಕ್ ಕರೆದಿದೆ. ಇದರ ಅರ್ಥ `ದಿ ರೋಬಾಟ್’ ಎಂದು. ಇರಾಕಿ ಯೋಧರಿಗೆ ಇದು ಮತ್ತಷ್ಟು ಹುಮ್ಮಸ್ಸನ್ನು ತುಂಬಿದೆ. ಏಕೆಂದರೆ ರೋಬಾಟ್, ಶತ್ರುವನ್ನು ಕಂಡರೆ ಹೆದರುವುದಿಲ್ಲ, ಕಾಲು ಕೀಳುವುದಿಲ್ಲ, ನಾವು ಕೊಟ್ಟ ಕಮಾಂಡನ್ನು ಚಾಚೂತಪ್ಪದೆ ಪಾಲಿಸುತ್ತವೆ. ಆದರೆ ಇಸ್ಲಾಮಿಕ್ ಸ್ಟೇಟ್ ಪುಂಡರು ಇದೇ ಅಕ್ಟೋಬರ್ ತಿಂಗಳಿನಲ್ಲಿ ಶಸ್ತ್ರಸಜ್ಜಿತ ಸ್ವನಾಶದ ಡ್ರೋನ್ ಬಳಸಿ ಕುರ್ದಿಶ್‍ಗಳನ್ನು ಬೇಟೆಯಾಡಿ ತಂಡತಂಡಗಳಲ್ಲಿ ಕೊಂದಿದ್ದರು. ಈಗಿನ ಸಮರವೆಂದರೆ ಇವೇ ಬ್ರಹ್ಮಾಸ್ತ್ರಗಳು.

ಆಲ್ ರೋಬಾಟ್ ಯುದ್ಧಕ್ಕಿಳಿದ ಮೊದಲ ರೋಬಾಟ್ ಅಲ್ಲ ಎನ್ನುತ್ತಿದ್ದಾರೆ ಮಿಲಿಟರಿ ವಿಶ್ಲೇಷಕರು. 2007ರಲ್ಲಿ ಅಮೆರಿಕದ ಸೇನಾಪಡೆ ಇದೇ ಇರಾಕ್‍ನಲ್ಲಿ ಶಸ್ತ್ರಸಜ್ಜಿತ ಮೂರು ರೋಬಾಟ್‍ಗಳನ್ನು ಯುದ್ಧದಲ್ಲಿ ಬಳಸಿತ್ತು, ಇದನ್ನು ರೋಬಾಟ್ ಎಂದು ಕರೆಯಲಿಲ್ಲ. Special Weapons Observations Reconnaissance Detector System ಎಂಬ ಉದ್ದ ಹೆಸರು ಕೊಟ್ಟಿದ್ದರು. ಆದರೆ ನಾಲಗೆ ಕೇಳಬೇಕಲ್ಲ. ಅದನ್ನೇ ಹ್ರಸ್ವವಾಗಿ SWORDS ಎಂದು ಕರೆದರು. ಇದು ಮೆಷಿನ್ ಗನ್ನಿನಿಂದ ಸಜ್ಜಾದ, ನೆಲದ ಮೇಲೆ ಸಂಚರಿಸುವ ರೋಬಾಟ್. ಒಂದೇ ಒಂದು ಸಲವೂ ಈ SWORDS ಶತ್ರುಗಳ ಬೆನ್ನಟ್ಟಲಿಲ್ಲ, ಮೆಷಿನ್ ಗನ್ ಹಿಡಿಯಲಿಲ್ಲ, ಅಷ್ಟೇಕೆ ಯಾವ ನಾಗರಿಕರಿಗೂ ಭಯ ಹುಟ್ಟಿಸಲಿಲ್ಲ. ಅಮೆರಿಕದ ರಕ್ಷಣಾಪಡೆಯ ತಜ್ಞರು ಪರಿಸ್ಥಿತಿ ಅರ್ಥಮಾಡಿಕೊಂಡು ಸದ್ದಿಲ್ಲದೆ ಅವುಗಳನ್ನು ಹಿಂಪಡೆದರು. ಕಾರಣವನ್ನು ತಕ್ಷಣ ಜಾಹೀರು ಮಾಡಲಿಲ್ಲ. ಪಿಟ್ಸ್’ಬರ್ಗ್‍ನಲ್ಲಿ ರೋಬೋ ಬಿಸಿನೆಸ್‍ಗಾಗಿ ಸೇರಿದ್ದ ವಿವಿಧ ದೇಶದ ರಕ್ಷಣಾತಜ್ಞರ ಮುಂದೆ ಅಮೆರಿಕದ ಸತ್ಯ ಹೇಳಲೇಬೇಕಾಯಿತು. ಕಮಾಂಡ್ ಕೊಡದಿದ್ದರೂ ಈ SWORDS ಇದ್ದಕ್ಕಿದ್ದಂತೆ ಮೆಷಿನ್ ಗನ್ ಚಲಾಯಿಸಲು ಪ್ರಾರಂಭಿಸಿತಂತೆ. ಅಂದರೆ ಅದನ್ನು ನಿಯಂತ್ರಣಕ್ಕೊಳಪಡಿಸಲು ಸಾಧ್ಯವಾಗದೇ ಹೋಯಿತು. ಮುಂದಿನ ಅವಘಡಗಳನ್ನು ಯಾರಾದರೂ ಊಹಿಸಬಹುದು. ಇಂಥ ತಪ್ಪು ನಿರ್ಧಾರದಿಂದ ಮಿಲಿಟರಿ ತಂತ್ರಜ್ಞಾನ ಸುಧಾರಿಸಿಕೊಳ್ಳಬೇಕಾದರೆ ಹತ್ತಿಪ್ಪತ್ತು ವರ್ಷಗಳೇ ಬೇಕು ಎನ್ನುತ್ತಿದೆ ಅಮೆರಿಕ.

robot1

ಸಿರಿಯದ ಅರಬ್ ಪಡೆ, ಇಸ್ಲಾಮಿಕ್ ಸ್ಟೇಟ್ ಪಡೆಗಳ ಮೇಲೆ ದಾಳಿಮಾಡಲು ರಷ್ಯದ ಕಾದಾಡುವ ರೋಬಾಟ್ ಬಳಸಿ 70 ಮಂದಿ ಉಗ್ರರನ್ನು ಸದೆಬಡೆಯಿತು ಎಂದು ರಷ್ಯದ `ಸ್ಪೂಟ್ನಿಕ್’ ಪತ್ರಿಕೆ ವರದಿಮಾಡಿ ಜಗತ್ತಿಗೆ ಅಚ್ಚರಿ ತಂದಿತ್ತು. ರಷ್ಯದ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಧಾರಾಳವಾಗಿ ಹರಿದಾಡಿತು. ಆದರೆ ರೋಬಾಟ್‍ಗಳನ್ನು ತರಪೇತಿಗೊಳಿಸುವಾಗ ತೆಗೆದ ಚಿತ್ರ ಇದೆಂದು ಅನೇಕ ದೇಶಗಳು ರಷ್ಯವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ.

ಹಿಂದೊಮ್ಮೆ ಅತ್ಯಂತ ಶಕ್ತವಾಗಿ ಗುಂಡು ತೂರಲು ಟೆಫ್ಲಾನ್ ಎಂಬ ಸಂಶ್ಲೇಷಿತ (ಸಿಂಥೆಟಿಕ್) ಪಾಲಿಮರನ್ನು ಬಳಸಲಾಗುತ್ತಿತ್ತು. ಈಗ ಅದೇ ಟೆಫ್ಲಾನನ್ನು ರೋಬಾಟಿನ ರಕ್ಷಣಾ ಕವಚವಾಗಿ ಬಳಸಿಕೊಂಡಿರುವುದಾಗಿ ಇರಾಕ್ ಹೇಳಿಕೊಂಡಿದೆ. ಮಿಲಿಟರಿ ವಿಶ್ಲೇಷಣಕಾರರು ಇದೊಂದು ತಪ್ಪು ನಿರ್ಧಾರ ಎನ್ನುತ್ತಿದ್ದಾರೆ. ಇದರ ಜೊತೆಗೆ ಇನ್ನೂ ಒಂದು ಅಪಾಯವನ್ನು ಹಲವು ರಾಷ್ಟ್ರಗಳೂ ವ್ಯಕ್ತಪಡಿಸುತ್ತಿವೆ. ರೋಬಾಟ್ ನಿಯಂತ್ರಿಸುವ ಭೂಪ ಒಂದೇ ಒಂದು ರಾಂಗ್ ಸಿಗ್ನಲ್ ಕೊಟ್ಟರೂ ಸಾಕು, ರೋಬಾಟ್‍ಗೆ ಯಾರು ಶತ್ರು, ಯಾರು ಮಿತ್ರ ಎಂಬ ವಿವೇಚನೆ ಇಲ್ಲದೆ ಮೆಷಿನ್ ಗನ್ ಎತ್ತಿ ಕ್ಷಣಮಾತ್ರದಲ್ಲಿ ತಲೆ ಉರುಳುವಂತೆ ಮಾಡುತ್ತದೆ.

ಇಂಥ ಅಪಸ್ವರಗಳ ನಡುವೆಯೂ `ಆಲ್ ರೋಬಾಟ್’ ದೊಡ್ಡ ಸುದ್ದಿಮಾಡಿದೆ. ಈ ತಾಂತ್ರಿಕ ಅಡಚಣೆಗಳನ್ನೆಲ್ಲ ನಿವಾರಿಸಿದರಾಯಿತು ಎನ್ನುತ್ತಿದೆ ಇರಾಕ್. ಅಂತೂ ಬಿಲ್ಲು, ಬಾಣಗಳಿಂದ ಆರಂಭವಾದ ಶಸ್ತ್ರಾಸ್ತ್ರ ನಿರ್ಮಾಣ ಈಗ ರೋಬಾಟ್‍ನ್ನು ರಣರಂಗಕ್ಕಿಳಿಸುವ ತಂತ್ರಜ್ಞಾನವನ್ನು ರೂಪಿಸುವಷ್ಟು ಮುಂದೆ ಸಾಗಿದೆ. ಯುದ್ಧೋನ್ಮಾದ ದೇಶಗಳು ತಮ್ಮ ತಮ್ಮ ಪರವಾಗಿ ರೋಬಾಟ್‍ಗಳನ್ನೇ ಮುನ್ನೆಲೆಯಲ್ಲಿ ಇರಿಸಿ ಕಾದಾಡಲು ತೊಡಗುತ್ತವೋ ಏನೋ!

Leave a Reply