ಎನ್ಡಿಟಿವಿ ಇಂಡಿಯಾಕ್ಕೆ ಒಂದು ದಿನದ ನಿರ್ಬಂಧ, ತುರ್ತು ಪರಿಸ್ಥಿತಿ ನಂತರ ಇಂಥ ನಿರ್ಬಂಧಗಳೇ ಆಗಿರಲಿಲ್ಲ ಎಂಬ ವಾದದಲ್ಲಿ ಸತ್ಯವೆಷ್ಟು?

ಡಿಜಿಟಲ್ ಕನ್ನಡ ವಿಶೇಷ:

ಪಠಾನ್ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿಯಾದಾಗ ಹಿಂದಿ ಸುದ್ದಿವಾಹಿನಿ ಎನ್ಡಿಟಿವಿ ಇಂಡಿಯಾವು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ವರದಿ ಮಾಡಿತೆಂಬ ಆರೋಪದ ಮೇಲೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ ಅದರ ಮೇಲೆ ಒಂದು ದಿನದ ನಿರ್ಬಂಧ ಹೇರಿದೆ. ಇದೇ 9 ಮತ್ತು 10ರ ದಿನಾಂಕದ ನಡುವೆ 24 ಗಂಟೆಗಳ ಕಾಲ ಅದು ಕೇವಲ ಕಪ್ಪು ಪರದೆಯನ್ನಷ್ಟೇ ತೋರಿಸಬೇಕೆಂಬುದು ನಿರ್ದೇಶನ.

ಸರ್ಕಾರದ ಈ ನಿರ್ಧಾರದ ವಿರುದ್ಧ ಎನ್ಡಿಟಿವಿ ಪ್ರತಿಭಟಿಸಿದೆ. ಇದನ್ನು ಸಚಿವಾಲಯವು ಹಿಂದಕ್ಕೆ ತೆಗೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನೂ ಸುದ್ದಿವಾಹಿನಿ ಪರಿಶೀಲಿಸುತ್ತದೆ ಎಂದು ಅದು ಪ್ರಕಟಣೆ ನೀಡುತ್ತಿದೆ. ಎಡಿಟರ್ಸ್ ಗಿಲ್ಡ್, ಬ್ರಾಡ್ಕಾಸ್ಟರ್ ಗಳ ಒಕ್ಕೂಟಗಳೆಲ್ಲ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ತಿಕ್ಕುವಿಕೆ ಹಾಗೂ ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿಸುವ ಕ್ರಮ ಎಂದು ಖಂಡಿಸಿದ್ದಾರೆ. ‘ಕೇಂದ್ರ ಸರ್ಕಾರದ ಸಚಿವರು ಹಾಗೂ ಖುದ್ದು ಪ್ರಧಾನಿ ತುರ್ತು ಪರಿಸ್ಥಿತಿ ವಿರುದ್ಧ ಮಾತನಾಡುತ್ತ ಬಂದಿದ್ದಾರೆ. ಹಾಗಿರುವಾಗ ತಮ್ಮ ಮೇಲೆ ಇಂಥ ಕ್ರಮ ಏಕೆ’ ಎಂದು ಎನ್ಡಿಟಿವಿ ಪ್ರಶ್ನಿಸಿದೆ.

ಸುದ್ದಿವಾಹಿನಿಯ ಒಂದು ದಿನದ ನಿರ್ಬಂಧದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿರುವುದು ನಿಜ. ಆದರೆ ತುರ್ತು ಪರಿಸ್ಥಿತಿಯ ಬೊಬ್ಬೆ ಏನು ಸೂಚಿಸಲಿಕ್ಕೆ ಹೊರಟಿದೆ? ಇಂದಿರಾ ಗಾಂಧಿ ಕಾಲದ ನಂತರ ಈ ಬಗೆಯ ನಿರ್ಬಂಧ ಮತ್ಯಾವ ಸರ್ಕಾರಗಳಿಂದಲೂ ಆಗಿರಲೇ ಇಲ್ಲ, ಇದು ಸರ್ವಾಧಿಕಾರಿ ಧೋರಣೆ ಎಂದಲ್ಲವೇ?

ಈ ಪ್ರತಿಪಾದನೆಗೆ ಖಂಡಿತ ತಥ್ಯಗಳು ಅಡ್ಡಬರುತ್ತವೆ! ಏಕೆಂದರೆ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ 2005 ಮತ್ತು 2013ರ ನಡುವೆ 20 ಬಾರಿ ಇಂಥ ನಿರ್ಬಂಧಗಳನ್ನು ಹೇರಲಾಗಿತ್ತು. ಇವುಗಳಲ್ಲಿ ಹೆಚ್ಚಿನವೆಲ್ಲ ನಗ್ನತೆ ಮತ್ತು ವಯಸ್ಕ ದೃಶ್ಯಗಳನ್ನು ಪ್ರಸಾರ ಮಾಡಿದ ಕಾರಣಕ್ಕಾಗಿತ್ತು. ಎಫ್ ಟಿವಿ, ಎಎಕ್ಸ್ಎನ್ ವಾಹಿನಿಗಳು ಯುಪಿಎ ಆಡಳಿತದಲ್ಲಿ ಪದೇ ಪದೆ ನಿರ್ಬಂಧಕ್ಕೊಳಗಾಗಿದ್ದವು.

ಹಾಗಾದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಪ್ರಸಾರವು ವಯಸ್ಕ ದೃಶ್ಯಾವಳಿ ಭಿತ್ತರಕ್ಕಿಂತ ಕಡಿಮೆ ಅಪರಾಧವಾಗುತ್ತದೆಯೇ? ಆಗೇಕೆ ತುರ್ತು ಪರಿಸ್ಥಿತಿಯ ಬೊಬ್ಬೆ ಮೊಳಗಲಿಲ್ಲ?

ಈ ಸರ್ಕಾರದ ಅವಧಿಯಲ್ಲಿ 2015ರಲ್ಲಿ ಅಲ್ ಜಜೀರಾ ಎಂಬ ಅಂತಾರಾಷ್ಟ್ರೀಯ ವಾಹಿನಿಯನ್ನು ಐದು ದಿನಗಳ ಕಾಲ ನಿರ್ಬಂಧಿಸಲಾಯಿತು. ಕಾರಣವೇನೆಂದರೆ ಅದು ಭಾರತದ ನಕಾಶೆಯನ್ನು ತಪ್ಪಾಗಿ ಪ್ರಕಟಿಸಿದ್ದು. ಇದು ಏಕೆ ಮುಖ್ಯ ಎಂದರೆ, ಜಾಗತಿಕ ಮಾಧ್ಯಮಗಳು ಭಾರತದ ಭಾಗಗಳನ್ನು ಪಾಕಿಸ್ತಾನ ಹಾಗೂ ಚೀನಾಗಳಲ್ಲಿಟ್ಟು ಚಿತ್ರಿಸುವುದನ್ನು ಉಡಾಫೆಯ ಅಭ್ಯಾಸವಾಗಿಸಿಕೊಂಡಿವೆ. ಇದೂ ರಾಷ್ಟ್ರೀಯ ಭದ್ರತೆಯ ವಿಷಯವೇ.

ಪಠಾನ್ಕೋಟ್ ವಾಯುನೆಲೆಯಲ್ಲಿ ಕಾರ್ಯಾಚರಣೆ ಆಗುತ್ತಿರುವಾಗಲೇ ಎನ್ಡಿಟಿವಿಯ ವರದಿಗಾರ ಸುತ್ತಮುತ್ತಲಿನ ಪರಿಸರವನ್ನು ಕಟ್ಟಿಕೊಡುತ್ತಿದ್ದ. ಹತ್ತಿರದಲ್ಲಿರುವ ಶಾಲೆ, ನಾಗರಿಕರ ಆವಾಸ ಸ್ಥಾನಗಳು ಹಾಗೂ ವಾಯುನೆಲೆಯ ಬೇರೆ ಬೇರೆ ಪ್ರದೇಶಗಳು ಇವೆಲ್ಲದರ ಬಗ್ಗೆ ನೇರಪ್ರಸಾರದಲ್ಲಿ ಮಾತು-ಮಾಹಿತಿಗಳು ಪುಂಖಾನುಪುಂಖ ಬಿದ್ದವು. ಇದರಿಂದ ಉಗ್ರರನ್ನು ಬೇರೆಡೆಯಿಂದ ನಿಯಂತ್ರಿಸುತ್ತಿರುವ ವೈರಿಗಳಿಗೆ ಮಾಹಿತಿಗೆ ತಕ್ಕಂತೆ ಕಾರ್ಯತಂತ್ರ ರೂಪಿಸುವುದು ಸುಲಭವಾಗುತ್ತದೆ. ಇದು ಭದ್ರತಾ ಪಡೆ ಹಾಗೂ ಭಾರತದ ಹಿತಾಸಕ್ತಿಗೆ ಮಾರಕ ಎಂಬುದು ಸರ್ಕಾರದ ವಾದ.

1994ರ ಕೇಬಲ್ ಟಿವಿ ನಿಯಮದ ಪ್ರಕಾರ, ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಮಾಧ್ಯಮಗಳ ವರದಿಗಾರಿಕೆ ಎಂಬುದು ಸೇನೆಯ ಕಡೆಯಿಂದ ಕಾರ್ಯಾಚರಣೆ ಮುಖ್ಯಸ್ಥರು ಆಗಾಗ ನೀಡುವ ಪ್ರಕಟಣೆಗೆ ಮಾತ್ರವೇ ಸೀಮಿತವಾಗಿರಬೇಕು. ಕಾರ್ಯಾಚರಣೆ ಮುಗಿದ ನಂತರ ಬೇಕಾದರೆ ಅದರ ಸೀಳುನೋಟ- ವಿಶ್ಲೇಷಣೆಗಳಾಗಲಿ ಎಂಬುದನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಇಟ್ಟುಕೊಳ್ಳಲಾಗಿದೆ.

ಈ ನಿಯಮವಿಲ್ಲ ಎಂದೇನೂ ಎನ್ಡಿಟಿವಿ ವಾದಿಸುವಂತಿಲ್ಲ. ಹೀಗಾಗಿ ಅದು ಬೇರೆಯದೇ ವಾದ ಹೂಡಿದೆ. ‘ಸರ್ಕಾರವು ಕೇವಲ ಎನ್ಡಿಟಿವಿ ಇಂಡಿಯಾ ವಾಹಿನಿಯನ್ನಷ್ಟೇ ಗುರಿಯಾಗಿಸಿದೆ. ಬೇರೆ ವಾಹಿನಿಗಳೂ ಈ ಬಗ್ಗೆ ವರದಿ ಮಾಡಿವೆ. ಅದರಲ್ಲೂ ಇಂಡಿಯನ್ ಎಕ್ಸ್ ಪ್ರೆಸ್, ಹಿಂದುಸ್ತಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳೂ ಇದೇ ಮಾಹಿತಿಗಳನ್ನು ಪ್ರಕಟಿಸಿವೆ’ ಅನ್ನೋದು.

ವಾಸ್ತವದಲ್ಲಿ ಈ ಎಲ್ಲ ಅಂಶಗಳೂ ಚರ್ಚೆಯಾದ ನಂತರವೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಂತರಿಕ ಸಚಿವರ ಸಮಿತಿಯು ನಿರ್ಧಾರಕ್ಕೆ ಬಂದಿದ್ದು. ವಿಚಾರಣೆ ವೇಳೆ ಎನ್ಡಿಟಿವಿ ಪರವಾಗಿ ಪ್ರತಿನಿಧಿಗಳು ಇದೇ ಸಮರ್ಥನೆಯನ್ನೇ ನೀಡಿದ್ದರು. ಪತ್ರಿಕಾ ವರದಿಗೂ ಘಟನೆ ಆಗುತ್ತಿರುವ ಸಂದರ್ಭದಲ್ಲೇ ವೈರಿಗಳಿಗೆ ಬಳಸಿಕೊಳ್ಳಲಾಗುವಂತೆ ಮಾಹಿತಿ ಬಿತ್ತರಿಸುವುದಕ್ಕೂ ವ್ಯತ್ಯಾಸವಿದೆ ಎಂಬುದು ಸಮಿತಿಯ ಪ್ರತಿವಾದವಾಗಿತ್ತು. 2015ರಲ್ಲಿ ಪರಿಷ್ಕೃತವಾದ ಪ್ರಸಾರ ನಿಯಮಗಳ ಪ್ರಕಾರ ಒಂದು ತಿಂಗಳ ಕಾಲ ಸುದ್ದಿವಾಹಿನಿ ಕೇವಲ ಕಪ್ಪು ಪರದೆ ತೋರಿಸಬೇಕೆಂಬ ಕ್ರಮವನ್ನು ಸಚಿವರ ಸಮಿತಿ ಸೂಚಿಸಿತ್ತು. ಆದರೆ ವಾರ್ತಾ ಮತ್ತು ಪ್ರಸಾರ ಸಚಿವಾಲಯವು, ಹೊಸ ನಿಯಮಗಳ ಬಗ್ಗೆ ವಾಹಿನಗಳಲ್ಲಿ ಇನ್ನೂ ಅರಿವು ಮೂಡಬೇಕಾಗಿದೆಯಾದ್ದರಿಂದ ಒಂದು ದಿನದ ಸಾಂಕೇತಿಕ ಶಿಕ್ಷೆ ಮಾತ್ರವೇ ಸಾಕು ಎಂದು ನಿರ್ದೇಶಿಸಿತು.

ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಗಳ ಸ್ವಾತಂತ್ರ್ಯ ಉನ್ನತವಾದದ್ದು. ಆದರೆ ರಾಷ್ಟ್ರೀಯ ಭದ್ರತೆಗಿಂತ ಅದು ಹೆಚ್ಚಿನದಲ್ಲ ಎಂಬುದು ಸರ್ಕಾರದ ನಿಲುವು. ಈ ಅಂಶಗಳನ್ನು ಪರಿಗಣಿಸಿ ನಿರ್ಧಾರಕ್ಕೆ ಬರುವುದು ಓದುಗರಿಗೆ ಬಿಟ್ಟಿದ್ದು.

Leave a Reply