ಅರ್ನಾಬ್ ಗೋಸ್ವಾಮಿಯ ಮುಂದಿನ ಆಟ ಬೆಂಗಳೂರಿನಿಂದಲಾ? ಇಂಡಿಯಾ ಐಡಿಯಾಸ್ ಸಮಾವೇಶದಲ್ಲಿ ಬಿಟ್ಟುಕೊಟ್ಟ ಸುಳಿವುಗಳೇನು?

ಡಿಜಿಟಲ್ ಕನ್ನಡ ಟೀಮ್:

ನಿಜ. ಒಬ್ಬ ವ್ಯಕ್ತಿಯನ್ನೇ ಕೇಂದ್ರೀಕರಿಸಿಕೊಂಡು ಪದೇ ಪದೆ ಬರೆಯಬೇಕಿಲ್ಲ. ಆದರೆ ಆ ವ್ಯಕ್ತಿಯೊಂದಿಗೆ ಮಾಧ್ಯಮದ ಮುಂದಿನ ದಾರಿಯ ಪ್ರಯತ್ನಗಳು ತೆರೆದುಕೊಳ್ಳಬೇಕಾದ ಬಗೆಯೂ ತಳುಕು ಹಾಕಿಕೊಂಡಿದ್ದಾಗ ಕುತೂಹಲ ತಪ್ಪಲ್ಲ.

ಹಾಗೆಂದೇ, ಬಿಜೆಪಿಯ ರಾಮ್ ಮಾಧವ್ ಅವರ ಮುಂದಾಳತ್ವದಲ್ಲಿ ರಚನೆಯಾಗಿರುವ ‘ಇಂಡಿಯಾ ಫೌಂಡೇಶನ್’ ಎಂಬ ದೇಶದ ಚಿಂತನಕೂಟವು ಗೋವಾದಲ್ಲಿ ಆಯೋಜಿಸಿದ್ದ ಈ ಬಾರಿಯ ‘ಇಂಡಿಯಾ ಐಡಿಯಾಸ್’ ಸಮಾವೇಶದಲ್ಲಿ ಅರ್ನಾಬ್ ಗೋಸ್ವಾಮಿ ಪಾಲ್ಗೊಳ್ಳುವಿಕೆ ಹಾಗೂ ಮಾತುಗಳೆರಡೂ ಮಹತ್ವ ಪಡೆದಿವೆ.

ಜಾಗತಿಕ, ಡಿಜಿಟಲ್ ಹಾಗೂ ದೆಹಲಿಯಿಂದ ಹೊರಗೆ… ಈ ಮೂರು ಸೂತ್ರಗಳನ್ನು ಹೊದ್ದಿತ್ತು ಅರ್ನಾಬ್ ಗೋಸ್ವಾಮಿಯ ಒಟ್ಟಾರೆ ಮಾತುಗಾರಿಕೆ.

ಎಡಪಂಥೀಯ ಉದಾರವಾದಿಗಳು ಮಾಧ್ಯಮ ಕೋಟೆಯ ಯಥಾಸ್ಥಿತಿಯನ್ನು ಬೇಧಿಸಿದ ಶ್ರೇಯಸ್ಸನ್ನು ತಮಗೆ ಕೊಟ್ಟುಕೊಂಡು ಗೋಸ್ವಾಮಿ. ಹಾಗೆಂದು ತಾವು ಬಲಪಂಥವೆಂದೇನೂ ಗುರುತಿಸಬೇಕಿಲ್ಲವೆಂದು ಹೇಳುತ್ತ ಲವ್ ಜಿಹಾದ್ ನಂಥ ವಿಷಯಗಳಲ್ಲಿ ಬಲಪಂಥೀಯರನ್ನು ಪ್ರಶ್ನಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.

‘ಪ್ರಜಾಪ್ರಭುತ್ವ, ಅಭಿವೃದ್ಧಿ ಮತ್ತು ಬಂಡಾಯ’ ಎಂಬುದು ಮೂರು ದಿನಗಳ ಈ ಬಾರಿಯ ಸಮಾವೇಶದ ಥೀಮ್. ಅದಕ್ಕೂ ತಮ್ಮನ್ನು ಜೋಡಿಸಿಕೊಂಡ ಅರ್ನಾಬ್, ‘ಮುಂದಿನ ಎರಡು-ಮೂರು ವರ್ಷಗಳ ಪ್ರಯತ್ನದಲ್ಲಿ ನಾನು ದೆಹಲಿ ಕೇಂದ್ರಿತ ಪತ್ರಿಕೋದ್ಯಮದ ವಿರುದ್ಧದ ಬಂಡಾಯದ ಧ್ವನಿಯಾಗುತ್ತೇನೆ. ಈ ಪಾರಮ್ಯ ಕೊನೆಗೊಳಿಸುವುದಕ್ಕೆ ಸುದ್ದಿಕೇಂದ್ರವನ್ನು ದೆಹಲಿಯಿಂದ ಹೊರಗೆ ತೆಗೆದುಕೊಂಡುಹೋಗುವುದು ಮೊದಲ ಹೆಜ್ಜೆ. ಅದು ಬೆಂಗಳೂರಾಗಿರಬಹುದು, ಪುಣೆಯಾಗಿರಬಹುದು ಆದರೆ ಲುಟಿನ್ಸ್ ದೆಹಲಿಯಿಂದ ದೂರಾಗಬೇಕು’ ಎಂದಿದ್ದಾರೆ.

ಟೈಮ್ಸ್ ನೌ ತೊರೆದ ನಂತರದ ತಮ್ಮ ಮುಂದಿನ ಯೋಜನೆಯ ನಿಖರ ಮಾಹಿತಿಗಳನ್ನೇನೂ ಬಿಟ್ಟುಕೊಡದ ಅರ್ನಾಬ್ ಗೋಸ್ವಾಮಿ, ‘ಭಾರತದ 462 ಮಿಲಿಯನ್ ಸ್ಮಾರ್ಟ್ ಫೋನ್ ಇಂಟರ್ನೆಟ್ ಬಳಕೆದಾರರೇ ಮಾಧ್ಯಮದ ಬಂಡಾಯ ಮಾರ್ಗಕ್ಕೆ ಕಾರಣರಾಗಲಿದ್ದಾರೆ. ಹಣಬಲದ ಏಕಸ್ವಾಮ್ಯ ಸಹ ಮುರಿಯುವ ದಿನಗಳು ಮಾಧ್ಯಮದಲ್ಲಿ ಬಂದಿದೆ. ಮೂಲಸೌಕರ್ಯ ಒದಗಿಸುವ ಮಟ್ಟಕ್ಕೆ ಹಣ ಬೇಕಾಗುತ್ತದೆಯೇ ಹೊರತು ಅದರಿಂದ ಸುದ್ದಿ ಪ್ರೇರಣೆಯನ್ನು ಸೃಷ್ಟಿಸಲಾಗುವುದಿಲ್ಲ’ ಎಂದಿದ್ದಾರೆ.

ಮಾಧ್ಯಮದ ಮುಂದಿನ ಮಹಾಕಂಪನ ಕೇವಲ ಭಾರತಕ್ಕೆ ಸೀಮಿತವಾಗುವುದಿಲ್ಲ. ಇದು ಜಗತ್ತನ್ನು ಇಲ್ಲಿಂದಲೇ ವ್ಯಾಪಿಸಲಿದೆ ಎಂದೂ ಹೇಳುವ ಮೂಲಕ ಜಾಗತಿಕ ಮಟ್ಟದ ಭಾರತ ಕೇಂದ್ರಿತ ಮಾಧ್ಯಮದ ಊಹಾಪೋಹವನ್ನು ಜೀವಂತವಾಗಿಟ್ಟಿದ್ದಾರೆ.

ಲುಟಿನ್ಸ್ ದೆಹಲಿಯ ಮಾಧ್ಯಮಗಳಿಗೆ ತನ್ನ ಪ್ರತಿರೋಧವಿದೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ ಅರ್ನಾಬ್ ಸಾಬೀತುಪಡಿಸಿದರು. ಜನವರಿ 2011ರಲ್ಲಿ ಹಲವು ಹಗರಣಗಳ ನಂತರ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಪತ್ರಕರ್ತರೆದುರು ಮಾತಾಡಲು ಒಪ್ಪಿದರು. ಆದರೆ ಅಲ್ಲಿಗೆ ಬಂದ ಸಂಪಾದಕರ್ಯಾರೂ ಹಗರಣಗಳ ಬಗ್ಗೆ ಪ್ರಶ್ನೆಯನ್ನೇ ಎತ್ತಲಿಲ್ಲ. ತಾವು ಪ್ರಶ್ನಿಸಿದಾಗ, ಪ್ರಧಾನಿಯ ಮಾಧ್ಯಮ ಸಲಹೆಗಾರ ಹರೀಶ್ ಖರೆ ಅವರು ಅಡ್ಡಬಂದು ಇದು ವಿಚಾರಣೆ ಸಮಯವಲ್ಲ ಎಂದಿದ್ದನ್ನು ಅರ್ನಾಬ್ ಉದಾಹರಿಸಿದರು.

ಹೈದರಾಬಾದಿನಲ್ಲಿ ತಸ್ಲಿಮಾ ನಸ್ರಿನ್ ಮೇಲೆ ಹಲ್ಲೆಯಾಗಿ ದೇಶ ತೊರೆಯುವ ಸ್ಥಿತಿ ಬಂದಾಗ ಮಾಧ್ಯಮದ ಇತರ ಸಹೋದ್ಯೋಗಿಗಳು ಏನು ಮಾಡುತ್ತಿದ್ದರು ಎಂದು ಅರ್ನಾಬ್ ಪ್ರಶ್ನಿಸಿದರು.

Leave a Reply