ಎದೆ ಭಾರದ ಭಾನುವಾರ, ಗಡಿಯಾಚೆಯಿಂದ ಪಾಕಿಸ್ತಾನದ ಶೆಲ್ ದಾಳಿಗೆ ಭಾರತೀಯ ಯೋಧ ಹುತಾತ್ಮ

 

ಡಿಜಿಟಲ್ ಕನ್ನಡ ಟೀಮ್:

ನಾವು ಭಾನುವಾರದ ವಿರಾಮ ಗಳಿಗೆಗಳನ್ನು ಯೋಜಿಸಿಕೊಳ್ಳುತ್ತಿರುವಾಗಲೇ, ಅತ್ತ ಜಮ್ಮುವಿನಲ್ಲಿ ಬೆಳಗಿನ 8.30ಕ್ಕೆಲ್ಲ ಪಾಕಿಸ್ತಾನದ ಕಡೆಯಿಂದ ಭಾರತದ ನಾಗರಿಕರು ಹಾಗೂ ಸೇನೆಯನ್ನು ಗುರಿಯಾಗಿಸಿಕೊಂಡು ಫಿರಂಗಿಗಳು ಸಿಡಿದವು. ಇದಕ್ಕೆ ಭಾರತದ ಒಬ್ಬ ಯೋಧ ಹುತಾತ್ಮರಾಗಿದ್ದಾರೆ.

22 ಸಿಖ್ ರೆಜಿಮೆಂಟಿನ ಗುರು ಸೇವಕ ಸಿಂಗ್ ಅವರೇ ಹುತಾತ್ಮರಾದ ಯೋಧ.

ಕನಿಷ್ಠ ನಾಲ್ಕು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಕಡೆಯಿಂದ ಶೆಲ್ ದಾಳಿ ನಡೆದಿದೆ. ಇದಕ್ಕೆ ಸರಿಸಮನಾದ ಶಸ್ತ್ರಗಳನ್ನು ಉಪಯೋಗಿಸಿ ಭಾರತೀಯ ಸೇನೆಯೂ ಪ್ರತ್ಯುತ್ತರವನ್ನು ನೀಡಿದೆ. ಹೀಗೆ ದಾಳಿಯಲ್ಲಿ ಸೇನಾ ಗಮನವನ್ನು ಸೆಳೆದು ಗಡಿಯೊಳಕ್ಕೆ ಉಗ್ರರನ್ನು ನುಸುಳಿಸುವುದು ಪಾಕಿಸ್ತಾನದ ಪ್ರಯತ್ನವಾಗಿತ್ತು. ಆದರೆ ಪೂಂಚ್ ನಲ್ಲಿ ಅಂಥ ಎರಡು ಒಳನುಸುಳುವಿಕೆ ಯತ್ನಗಳನ್ನು ಹಿಮ್ಮೆಟ್ಟಿಸಲಾಗಿದೆ.

ಉರಿ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಗುರಿ ನಿರ್ದಿಷ್ಟ ದಾಳಿ ನಡೆಸಿದಾಗಲಿಂದಲೂ ಪಾಕಿಸ್ತಾನವು ಆಕ್ರಮಕ ಉತ್ತರ ದಾಖಲಿಸುವ ಹತಾಶ ಪ್ರಯತ್ನವನ್ನು ತೋರುತ್ತಲೇ ಇದೆ. ಎರಡು ದಿನಗಳಿಂದ ಗಡಿಯಲ್ಲಿ ಚಕಮಕಿ ಇಲ್ಲವಾಗಿತ್ತು. ಅದು ಕುದಿಮೌನ ಮಾತ್ರವಾಗಿತ್ತೆಂಬುದು ಭಾನುವಾರದ ವಿದ್ಯಮಾನದಿಂದ ದೃಢವಾಗಿದೆ.

ಗುರು ಸೇವಕ ಸಿಂಗ್ ಹುತಾತ್ಮರಾಗುವುದರೊಂದಿಗೆ ಈವರೆಗಿನ ವಿದ್ಯಮಾನದಲ್ಲಿ 4 ಯೋಧರನ್ನು ಭಾರತ ಕಳೆದುಕೊಂಡಂತಾಗಿದೆ. ಅತ್ತ ಕಡೆ ಕನಿಷ್ಠ 15 ಯೋಧರನ್ನು ಸಂಹರಿಸಿರುವುದಾಗಿ ವಾರಗಳ ಹಿಂದೆಯೇ ಭಾರತದ ಸೇನೆ ಹೇಳಿತ್ತು.

Leave a Reply