ಬೈಕಲ್ ಎಂಬ ರಷ್ಯದ ಮೇರೆಯೇ ಇಲ್ಲದಂತಿರುವ ಮಹಾ ಬೆರಗಿನ ಸರೋವರ ತೀರದಲ್ಲಿ ಅನುಭವಗಳ ಹನಿಗೆ ಬೊಗಸೆ ಒಡ್ಡುತ್ತ…

OLYMPUS DIGITAL CAMERA

bhavana damleಮೋಹಿನಿ ದಾಮ್ಲೆ (ಭಾವನಾ)

ವಿಜ್ಞಾನ ಕಾನ್ಫರೆನ್ಸ್ ಗಾಗಿ ಹೊರಟಿದ್ದ ನನ್ನವರ ಜೊತೇಲಿ ನಂದೂ ಒಂದು ವಾರದ ಪುಟ್ಟ ಪ್ರವಾಸ. ಡೇಟ್ಲೈನ್ ಆಗಸ್ಟ್ ಕೊನೆ ಹಾಗೂ ಸೆಪ್ಟೆಂಬರ್ ಪ್ರಾರಂಭದ ದಿನಗಳು.
ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿರುವ ರಷ್ಯಾದ ಸೈಬೀರಿಯಾ ಪ್ರಾಂತಕ್ಕೆ ಹೋಗಲು ನಾವು ಪ್ರಯಾಣ ಆರಂಭಿಸಿದ್ದು ದಕ್ಷಿಣ ದಿಕ್ಕಿನತ್ತ. ಅಂದರೆ ಕೊಲಂಬೋಗೆ. ಅಲ್ಲಿಂದ ಬ್ಯಾಂಕಾಕ್ ಹಾಗೂ ನಂತರ ಇರ್ಕುಟ್ಸ್.

ಇರ್ಕುಟ್ಸ್ ನಿಂದ ಸೆಮಿನಾರು ನಡೆಯುವ ಜಾಗಕ್ಕೆ 70 ಕಿ.ಮೀ ಅಂತರವಿತ್ತು. ಟ್ಯಾಕ್ಸಿಯಲ್ಲಿ ನಾವಿಬ್ಬರು ಹಾಗೂ ಭಾರತೀಯ ವಿಜ್ಞಾನಕೇಂದ್ರದಿಂದ ಬಂದಿದ್ದ ಇನ್ನೊಬ್ಬ ಹಿರಿಯ ಪ್ರೊಫೆಸರ್. ತಡರಾತ್ರಿಯ ನೀರವ ಪ್ರಯಾಣದಲ್ಲಿ ಕೊನೆಗೂ ಬಲಬದಿಗೆ ಒಂದು ದೊಡ್ಡ ಸರೋವರ ಅಸ್ಪಷ್ಟವಾಗಿ ಕಾಣತೊಡಗಿತು. ಅಲ್ಲಿಗೆ ಗಮ್ಯ ತಲುಪಿದೆವು.

ನಂತರದ ಒಂದು ವಾರ ರಷ್ಯಾ ನಮ್ಮೆದುರು ತೆರೆದುಕೊಂಡಿದ್ದನ್ನು ಹೀಗೆ ಬಿಡಿಸಿಡಬಹುದು…

ಬೈಕಲ್ ಸರೋವರ ಎಂಬ ಮಹಾಬೆರಗು

ಬೈಕಲ್ ಎಂಬ ಈ ಸಿಹಿನೀರಿನ ಸರೋವರವು ಒಂದು ಅದ್ಭುತವೇ ಸರಿ. ಕಣ್ಣು ಹಾಯಿಸಿದಷ್ಟು ದೂರ ಮೈಚಾಚಿಕೊಂಡಿರುವ ಜಲರಾಶಿ. ಸಮುದ್ರದಂತೆಯೇ ದಡವನ್ನು ಚುಂಬಿಸುವ ಅಲೆಗಳು. ಸಾಲಾಗಿ ನಿಲ್ಲಿಸಿರುವ ಪ್ರವಾಸಿ ಹಾಗೂ ಮೀನುಗಾರಿಕಾ ಬೋಟ್ ಗಳು.
ವಿಶ್ವದಲ್ಲೇ ಅತ್ಯಂತ ಆಳವಾದ ಈ  ಸರೋವರದ ಬಯೊಡಾಟ ನೋಡಿದರೆ ನಿಬ್ಬೆರಗಾಗುತ್ತದೆ. 1637 ಮೀಟರ್ ಆಳ ಹಾಗೂ 27-80 ಕಿಲೋಮೀಟರ್  ಅಗಲ. 636 ಕಿ.ಮೀ. ಉದ್ದ. ಇದರಲ್ಲಿರುವ ಜಲರಾಶಿ 23,000 ಕ್ಯುಬಿಕ್ ಕಿ.ಮೀ. ಅಂದರೆ ಪ್ರಪಂಚದಲ್ಲಿರುವ ಒಟ್ಟು ಸಿಹಿನೀರಿನ 20% ಈ ಸರೋವರದಲ್ಲೇ ಇದೆ. ಅಂಗಾರ ನದಿ ಒಂದು ಕಡೆ ಈ ಸರೋವರದೊಳಗೆ ಬಂದು ಸೇರುತ್ತದೆ. ಇನ್ನೊಂದೆಡೆ ಸರೋವರದಿಂದ ಹೊರಹರಿಯುತ್ತದೆ. ಒಂದು ವೇಳೆ ಒಳ ಹರಿವನ್ನು ನಿಲ್ಲಿಸಿದ್ದೇ ಆದರೆ ಸರೋವರದ ಎಲ್ಲ ನೀರು ಖಾಲಿಯಾಗಲು ಸುಮಾರು 450 ವರ್ಷಗಳೇ ಬೇಕಾಗಬಹುದೆಂದು ಅಂದಾಜಿಸಲಾಗಿದೆ ಅಂತಂದ್ರೆ ಇದರ ವ್ಯಾಪ್ತಿ ಎಂಥದ್ದಾಗಿರಬಹುದೆಂಬುದನ್ನು ನೀವೇ ಊಹಿಸಿ!
ಬೈಕಲ್ ನ ಒಡಲೊಳಗೆ ಸುಮಾರು 3500ಕ್ಕೂ ಹೆಚ್ಚು ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿವೆ. ಬೈಕಲ್ ಮ್ಯೂಸಿಯಂನಲ್ಲಿ ಈ ಎಲ್ಲ ವಿವರಗಳ ದೃಶ್ಯಶ್ರವಣ ಪ್ರಾತ್ಯಕ್ಷಿಕೆ ಇದೆ. ಸೀಲ್ ಮೊದಲ್ಗೊಂಡು  ಸರೋವರದಲ್ಲಿರುವ ಅನೇಕ ಜಲಚರಗಳ ಹಾಗೂ ಜಲಸಸ್ಯಗಳ ಬೃಹತ್ ಅಕ್ವೇರಿಯಂಗಳು ಇಲ್ಲಿವೆ. ಬೈಕಲ್ ಲೇಕ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಯಾವಾಗಲೂ ಸಣ್ಣ ಪ್ರಮಾಣದ ಭೂಕಂಪನ ಆಗುತ್ತಲೇ ಇರುವುದೆಂದು ಮ್ಯೂಸಿಯಂನ ಗೈಡ್ ಹೇಳಿದರು. ನಾವು ಸಂದರ್ಶಿಸಿದ ಹಿಂದಿನ ದಿನವೂ ರಿಕ್ಟರ್ ಮಾಪಕದಲ್ಲಿ ೪ ಪ್ರಾಬಲ್ಯದ ಭೂಕಂಪವಾಗಿತ್ತೆಂದರು.
ಇಲ್ಲಿ ಸರೋವರದಲ್ಲಿರುವ ಅತ್ಯಂತ ಸೂಕ್ಷ್ಮ ಜೀವಿಗಳನ್ನು ವೀಕ್ಷಿಸಲು ಸಾಲಾಗಿ ಸೂಕ್ಷದರ್ಶಕಗಳನ್ನು ಜೋಡಿಸಿರುವ ಪ್ರಯೋಗಶಾಲೆಯಿದೆ.
ಕೃತಕ ಸಬ್ ಮರಿನ್ ನಲ್ಲಿ ಕುಳಿತು ನೀರೊಳಗೆ ನಡೆಯುವ ವಿದ್ಯಮಾನಗಳನ್ನು ವೀಕ್ಷಿಸುವ ವ್ಯವಸ್ಥೆಯೂ ಇದೆ. ಸಬ್ ಮರಿನ್ ನ ಗವಾಕ್ಷಿಗಳ ಮೂಲಕ ಕಾಣುವ ಸರೋವರದಾಳದ ದೃಶ್ಯಗಳು ನೈಜ ಅನುಭವವನ್ನೇ ಕೊಡುತ್ತವೆ. ಮ್ಯೂಸಿಯಂನ ಬಳಿಯಿರುವ ಕಾಡುಗುಡ್ಡವನ್ನು ಮರದ ಹಲಗೆಗಳಿಂದ ನಿರ್ಮಿಸಿರುವ ಕಾಲುದಾರಿಯಲ್ಲಿ ಕ್ರಮಿಸುವುದೇ ವಿಶಿಷ್ಟ ಅನುಭವ. ಎತ್ತರದಲ್ಲಿರುವ view point ನಿಂದ ಸರೋವರದ ರಮ್ಯ ದೃಶ್ಯ ಕಾಣಲು ಲಭ್ಯ.

ಅಭಾವವಿದ್ದದ್ದು ಸಸ್ಯಾಹಾರ ಮತ್ತು ಇಂಗ್ಲಿಷಿಗೆ!

ರಷ್ಯನ್ನರಿಗೆ ಇಂಗ್ಲಿಷ್ ಬರೋದೆ ಅಲ್ಪ. ಇನ್ನು ವೈಟರ್ ಗಳಿಗೆ ವೆಜಿಟೇರಿಯನ್ ಫುಡ್ ಅಂದರೆ ತಿಳಿಯಲೇ ಇಲ್ಲ. ಕೊನೆಗೆ ವೇಗನ್ ಅಂದಾಗ ಒಬ್ಬನಿಗೆ ಅರ್ಥವಾಯ್ತು. ಮಾಂಸಾಹಾರಿಗಳಿಗೆ ಭರಪೂರ ಆಯ್ಕೆಗಳಿವೆ. ಸಸ್ಯಾಹಾರಿ ಆಗಿದ್ದರೆ ಮೂರೂ ಹೊತ್ತು ಬೇಯಿಸಿದ ತರಕಾರಿಯೇ ಎದುರಾಗುತ್ತದೆ. ಬ್ರೆಡ್ ಇರುತ್ತದೆ. ಒದು ಬಾರಿ ಮಾತ್ರ ಓಟ್ಸ್ ಪೊರಿಜ್, ಹಾಗೂ ಒಂದು ತರಹದ ತರಕಾರಿ-ಕಾಳು ಮಿಶ್ರಣದ ಅನ್ನವೂ ಸಿಕ್ಕಿ ಬಹಳ ಸಮಾಧಾನವಾಯಿತು. ನಾವು ತಿಂದುದಕ್ಕಿಂತ ನೋಡಿನೇ ಹೊಟ್ಟೆ ತುಂಬಿಸಿಕೊಂಡೆವು. ಇಲ್ಲಿಂದ ಕೊಂಡು ಹೋಗಿದ್ದ ರೆಡಿ ಟು ಈಟ್ ಉಪ್ಮಾವೇ ನಮ್ಮ ಪಾಲಿನ ಮೃಷ್ಟಾನ್ನವಾಯಿತು. ವೆಜಿಟೇರಿಯನ್ ಟೇಬಲ್ ಗೆ ಗಿರಾಕಿಗಳು ಐದೇ ಮಂದಿ. ನಾವು ಮೂವರು ಬೆಂಗಳೂರಿಗರು ಹಾಗೂ ಇಸ್ರೇಲ್ ನಿಂದ ಬಂದಿದ್ದ ತಾಲಿ ಮತ್ತು ಅವರ ಗಂಡ.

ಹಿರಿಯ ವಿಜ್ಞಾನಿ ಪ್ರೊ. ರುಡೊವಿಚ್. ಅವರು ಕಾನ್ಫರೆನ್ಸ್ ಆಯೋಜಿಸಿದ್ದ ಸೈನ್ಸ್ ಸೊಸೈಟಿಯ ಸ್ಥಾಪಕ ಸದಸ್ಯರು. ಅವರ ಪತ್ನಿ ಎಲಿಜಬೆತ್ ಅಥವಾ ಎಲಾ ರುಡೊವಿಚ್. ಪೋಲಂಡ್ ನ ಸ್ನೇಹಮಯಿ ದಂಪತಿಗಳಿವರು. ಅಲ್ಲಿ ಪರಿಚಯವಾದ ಇನ್ನೊಬ್ಬಾಕೆ ಸಿ಼ಕ್ಕಿ …ಅವರು ಜರ್ಮನ್. 60 ದಾಟಿದ ಈ ಮಹಿಳೆಯರಿಬ್ಬರೂ ಬಹಳ ಚುರುಕಿನವರು. ಇಂಗ್ಲಿಷ್ ಅಷ್ಟಕ್ಕಷ್ಟೇ ಆಗಿರುವ ದೇಶದಲ್ಲಿ ರಷ್ಯನ್ ಮಾತುಗಳನ್ನೆಲ್ಲ ಅನುವಾದಿಸುವಲ್ಲಿ, ಸಂವಹನ ಸೇತುವಾಗುವಲ್ಲಿ ನೆರವಾಗಿದ್ದು ಇವರೇ. ಸಮಸ್ಯೆಯೆಂದರೆ ಎಲ್ಲ ಬೋರ್ಡ್ ಗಳು ರಷ್ಯನ್ ಭಾಷೆಯಲ್ಲಿ. ಕೆಲವು ಇಂಗ್ಲಿಷ್ ಅಕ್ಷರಗಳಂತೆ ಕಂಡರೂ ಅವುಗಳ ಉಚ್ಚಾರ ಬೇರೇನೇ.

ತ್ಸಾಲಿ…. ಎಂಬ ಮರಮನೆಗಳೂರು
ವಸ್ತು ಸಂಗ್ರಹಕ್ಕೆ, ಪುರಾತತ್ವಕ್ಕೆ ರಷ್ಯನ್ನರು ಮಹತ್ವ ಕೊಡುತ್ತಾರೆ ಎಂದು ಆ ದೇಶದ ಸೇಂಟ್ ಪೀಟರ್ಸ್ ಬರ್ಗ್ ನಂಥ ನಗರಗಳನ್ನು ಉದಾಹರಿಸುವುದಿದೆ. ನಾವು ಭೇಟಿ ನೀಡಿದ್ದ ನಗರದಾಚೆಗಿನ ಪ್ರದೇಶದಲ್ಲೂ ಆ ಕುರುಹು ಸ್ಪಷ್ಟವಾಗಿ ಕಂಡಿತು.

ತ್ಸಾಲಿ ಇದೊಂದು ಮರಗಳಿಂದಲೇ ನಿರ್ಮಿತವಾದ ಹಳ್ಳಿ. ಇಲ್ಲಿ ಮನೆಗಳ ಛಾವಣಿ, ಗೋಡೆ, ಕಾಪೌಂಡ್, ಬೇಲಿ….ಎಲ್ಲವೂ ಮರಮಯ. ಮರದ ದಿಮ್ಮಿಗಳನ್ನು ಅಡ್ಡ ಉದ್ದ ಕೊಯ್ದು ಕತ್ತರಿಸಿ ಒಂದರೊಳಗೊಂದು ಜೋಡಿಸಿದ ಅದ್ಭುತ ನಿರ್ಮಾಣಗಳು.  ಅದೊಂದು ಹೆರಿಟೇಜ್ ವಿಲೇಜ್, ಪ್ರವಾಸಿ ಸ್ಥಳ. ಅಲ್ಲಿ ಯಾರೂ ವಾಸವಿಲ್ಲ. ಅಂಗಾರ ನದಿಗೆ ಅಣೆಕಟ್ಟು ಕಟ್ಟುವಾಗ ಮುಳುಗಡೆಯಾದ ಊರಿನ ಅವಶೇಷಗಳನ್ನು ತಂದು ಪುನರ್ನಿರ್ಮಿಸಿದ ಗ್ರಾಮವಿದು. ಸುಮಾರು 2 ಶತಮಾನಗಳ ಹಿಂದಿನ ಜೀವನಕ್ರಮದ ಅನಾವರಣ ಈ ಪ್ರವಾಸದಲ್ಲಿ ಕಂಡೆವು. ಪ್ರಾರ್ಥನಾ ಸ್ಥಳ, ಶಾಲೆ,  ಮನೆ, ಕೊಟ್ಟಿಗೆ, ಪುರಾತನ ಶೈಲಿಯ ಸವಾನಾ ಬಾತ್, ಸ್ಟೀಮ್,  ಸೇತುವೆ, ಜೋಕಾಲಿ….ಹೀಗೆ ಪಟ್ಟಿ ಬಹಳ ಉದ್ದ….

OLYMPUS DIGITAL CAMERA

ರಷ್ಯನ್ ಭಾಷೆಯಲ್ಲಿ ಗೈಡ್ ವಿವರಿಸಿದ್ದನ್ನು ಒಬ್ಬರು ಇಂಗ್ಲಿಷ್ ಗೆ ಅನುವಾದಿಸಿ ಹೇಳುತ್ತಿದ್ದರು.  ಅನತಿದೂರದಲ್ಲೇ ಹರಿಯುವ ವಿಶಾಲ ಪಾತ್ರದ ಅಂಗಾರ ನದಿ. ಹಸುರಿನ ನಡುವೆ ಮರದ ಮನೆಗಳ ಸಮೂಹ. ಯಾವುದೋ ಲೋಕದಲ್ಲಿ ಇರುವಂತೆ ಭಾಸವಾಗುತ್ತಿತ್ತು. ಸಹಪ್ರವಾಸಿಗರಿಲ್ಲದೆ ನಾವಿಬ್ಬರೇ ದಾರಿ ತಪ್ಪಿ ಆ ಹಳ್ಳಿ ಹೊಕ್ಕಿದ್ದರೆ ಹೇಗನಿಸುತ್ತಿತ್ತು ಎಂದು ನಾನು ಊಹಿಸಿಕೊಳ್ಳುತ್ತಿದ್ದೆ.

ಲಿಸ್ವಿಯಾಂಕ- ಗ್ರಾಮ ಪ್ರವಾಸ

ಲಿಸ್ವಿಯಾಂಕ ಒಂದು ಪುಟ್ಟ ಊರು. ಬೈಕಲ್ ಸರೋವರದ ತೀರದಲ್ಲಿ ಮೈಚಾಚಿರುವ ಸುಮಾರು 2500 ಜನಸಂಖ್ಯೆಯಿರುವ ಊರು. ಮುಖ್ಯರಸ್ತೆಯ ಒಂದು ಬದಿಗೆ ಸರೋವರ ಇನ್ನೊಂದು ಬದಿಗೆ ಅಂಗಡಿಗಳು, ಹೋಟೆಲ್ ಗಳು, ಮಾರ್ಕೆಟ್….ಇತ್ಯಾದಿ. ಇವುಗಳ ಹಿಂದೆ ಗುಡ್ಡಗಳ ತಪ್ಪಲಿನಲ್ಲಿ ಹರಡಿರುವ ವಸತಿ ಪ್ರದೇಶ.
ಸರೋವರದುದ್ದಕ್ಕೂ ಸುಮಾರು ಒಂದು ಕಿಮೀ. ನಡೆದ ನಂತರ ನಾವು ಒಂದು ಅಡ್ಡರಸ್ತೆಯಲ್ಲಿ ಹೊಕ್ಕು ಊರನ್ನು ಪ್ರವೇಶಿಸಿದೆವು. ಎಡಗಡೆ ಜುಳಜುಳನೆ ಹರಿಯುತ್ತಿದ್ದ ನೀರಿನ ತೋಡು, ವಿವಿಧ ಹೂ ಗಿಡಗಳು, ಹಕ್ಕಿಗಳಿಗಾಗೇ ಬೆಳೆಸಿದ ಹಣ್ಣಿನ ಗಿಡಗಳು, ಮರದ ಮನೆಗಳು, ವಿವಿಧ ವಿನ್ಯಾಸದ ಬೇಲಿಗಳು, ಮರದಿಂದಲೇ ನಿರ್ಮಿತ ಬಾವಿಕಟ್ಟೆಗಳು…ಹಸುರು ಹೊದ್ದು ಮಲಗಿದ್ದ ಊರಲ್ಲಿ ನಡೆವಾಗ ಎದುರಾದ ಜನರು ಕೇವಲ ಬೆರಳೆಣಿಕೆಯಷ್ಟು. ಬೋರ್ಡ್ ಗಳೆಲ್ಲ ರಷ್ಯನ್ ನಲ್ಲಿದ್ದರೂ ಸಂಖ್ಯೆಗಳಿಗೆ ಇಂಗ್ಲಿಷ್ ಲಿಪಿಯೇ ಇದೆ.  ಮ್ಯೂಸಿಕ್ ಶೋ ನಡೆಯುವ ಸ್ಥಳ ತಲುಪಿದಾಗ ಅದು ಕೆಲದಿನಗಳಿಂದ ನಿಂತುಹೋಗಿದೆಯೆಂದು ತಿಳಿದು ವಾಪಸ್ ಹೊರಟೆವು.
ಮತ್ತೊಂದು ಸುತ್ತಿನ ಪ್ರಯಾಣದಲ್ಲಿ ಲಿಸ್ವಿಯಾಂಕದಲ್ಲಿ ಮುದ ಕೊಟ್ಟಿದ್ದು ಡಾಲ್ ಮ್ಯೂಸಿಯಂ. ಅಬ್ಬಾ …ಅದೆಷ್ಟು ಬಣ್ಣಬಣ್ಣದ ಗೊಂಬೆಗಳ ಸಂಗ್ರಹ!  ಗಾಜಿನ ಕಪಾಟುಗಳಲ್ಲಿ ಸಾಲುಸಾಲಾಗಿ ಜೋಡಿಸಿದ್ದ ವಿವಿಧ ರೂಪ ವೇಷಗಳ ಗೊಂಬೆಗಳು. ಅನೇಕ ಮಕ್ಕಳ ಕತೆ, ಕಾರ್ಟೂನ್ ಆಧಾರಿತವಾದವೂ ಇದ್ದವು. ಕೈ ಹಿಡಿದರೆ ನಡೆಯುವ ಗೊಂಬೆ, ಹಲ್ಲುಜ್ಜಿಸಹೋದರೆ ಬೇಡ ಎಂದು ತಲೆಯಾಡಿಸುವ, ಹಾಲಿನ ಬಾಟಲ್ ಕೊಟ್ಟರೆ ಬಾಯಲ್ಲೇ ಇಟ್ಟುಕೊಳ್ಳುವ ಗೊಂಬೆ…ಒಂದಕ್ಕಿಂತ ಒಂದು ಚಂದ.  ಅನಂತರ ಹೋಗಿದ್ದು Art Gallery ಗೆ. ಒಂದು ಬಾರಿ ಬೆಂಕಿಯಲ್ಲಿ ಸುಟ್ಟುಹೋಗಿದ್ದರೂ ಈ ಗ್ಯಾಲರಿಯನ್ನು ಮತ್ತೆ ಮರಗಳಿಂದಲೇ ಕಟ್ಟಿದ್ದಾರೆ. ಅನೇಕ, ಅದ್ಭುತ ವರ್ಣಚಿತ್ರಗಳ ಸಂಗ್ರಹ. ಹೆಚ್ಚಿನವುಗಳ theme ಬೈಕಲ್ ಸರೋವರವೇ.
ಇಲ್ಲಿರುವ ಮ್ಯೂಸಿಯಂ ಅಥವಾ ಗ್ಯಾಲರಿಗಳು ನಿರ್ವಾಹಕರ ಸ್ವಂತ ಪರಿಶ್ರಮದ ಪ್ರತೀಕಗಳು. ಅವರು ಆಸಕ್ತಿಯಿಂದ ಸಂಗ್ರಹಿಸಿದ ವಸ್ತುಗಳ ಪ್ರದರ್ಶನಾಗಾರಗಳು. ರಷ್ಯನ್ ಭಾಷೆಯಲ್ಲಿ ಅವರು ಹೇಳುತ್ತಿದ್ದ ವಿವರಗಳನ್ನು ಸ್ವಲ್ಪ ರಷ್ಯನ್ ಬಲ್ಲ ಎಲಾ ನಮಗೆ ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳುತ್ತಿದ್ದರು. ಕಣ್ಣಿಗಂತೂ ಹಬ್ಬವಾಯ್ತು.

OLYMPUS DIGITAL CAMERA

ಕಲ್ಲುಗಳ ಮ್ಯೂಸಿಯಂ

ಸ್ಟೋನ್ ಮ್ಯೂಸಿಯಂ ನೋಡಲು ಹೊರಟೆವು. ಇದರಲ್ಲಿ ಮುಖ್ಯವಾಗಿದ್ದುದು ಹಲವು ಅಮೂಲ್ಯ ಹರಳುಗಳು, ಖನಿಜಗಳನ್ನೊಳಗೊಂಡ ಕಲ್ಲುಗಳ ಕಚ್ಚಾರೂಪ ಮತ್ತು ಅವನ್ನು ಸಂಸ್ಕರಿಸಿ ಪಾಲಿಷ್ ಮಾಡಿದ ನಂತರ ಕಾಣುವ ರೂಪ. ಅಷ್ಟೇ ಅಲ್ಲದೆ ಬಹಳ ಅಪರೂಪದ ವಿವಿಧ ವಸ್ತುಗಳ ಸಂಗ್ರಹವೂ ಇತ್ತು  ಟಿವಿ, ಗ್ರಾಮಾಫೋನ್, ರೇಡಿಯೋ,  ಚಹಾ ಫಿಲ್ಟರ್, ಮುಂತಾದ ಅನೇಕ ವಸ್ತುಗಳ ಪ್ರಾರಂಭಿಕ ಆವೃತ್ತಿಗಳು. ವಿವಿಧ ಲ್ಯಾಂಪ್ ಗಳು, ಪುರಾತನ ಗೃಹಬಳಕೆ ವಸ್ತುಗಳು, ಅಲಂಕಾರಿಕ ಸಾಮಾನುಗಳು….ಇತ್ಯಾದಿ. ಈ ಮ್ಯೂಸಿಯಂ ಓರ್ವರ ಖಾಸಗಿ ಸ್ವತ್ತಾಗಿದ್ದು ಅವರು ತಮ್ಮ ತಾತ ಮುತ್ತಾತಂದಿರ ಕಾಲದ ವಸ್ತುಗಳನ್ನೂ ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. 72 ದೇಶಗಳನ್ನು ಸಂಚರಿಸಿ ಅನೇಕ  ಅಮೂಲ್ಯ ವಸ್ತುಗಳನ್ನೂ ಸಂಗ್ರಹಿಸಿದ್ದಾರೆ. ಇಲ್ಲೂ ಎಲಾ ಭಾಷಾಂತರಕಾರರಾದರು.
ವಿಶೇಷವೆಂದರೆ ಇಲ್ಲಿ ಯಾವುದೇ ಮ್ಯೂಸಿಯಂಗಳಲ್ಲಿ ಫೊಟೋ ತೆಗೆಯಲು ನಿರ್ಬಂಧವಿಲ್ಲ. ಶುಲ್ಕವನ್ನೂ ಕೊಡಬೇಕಿಲ್ಲ.
ಅನಂತರ ನಮ್ಮ ಭೇಟಿ ಸೈಂಟ್ ನಿಕೊಲಸ್ ಚರ್ಚ್ ಗೆ.  ಈ ಸಾಂಪ್ರದಾಯಿಕ ಚರ್ಚ್ ನ ಒಳಾಂಗಣ ಅತ್ಯಂತ ಸುಂದರ. ಗೋಪುರದ ಬದಿಯಲ್ಲಿದ್ದ ಮರದ ಕೊಂಬೆಗಳ ನಡುವೆ ನುಸುಳಿದ ಸೂರ್ಯಕಿರಣಗಳು ಫಳಫಳನೆ ಹೊಳೆಯುತ್ತ ಫೊಟೋ ಕ್ಲಿಕ್ಕಿಸಲು ಆಹ್ವಾನಿಸಿದವು. ಪಕ್ಕದಲ್ಲೇ ಒಂದು ರೆಟ್ರೊ ಪಾರ್ಕ್. ಹಳೆಯ ಕಾರು, ಮೋಟರು, ಯಂತ್ರೋಪಕರಣಗಳನ್ನೆಲ್ಲ  ಒಂದೆಡೆ ಜೋಡಿಸಿಟ್ಟಿದ್ದಾರೆ. ನಾವು ಗೇಟಿಂದಲೇ ಇಣುಕಿ ನೋಡಿ ವಾಪಸ್ ಬಂದೆವು.

ಬೈಕಲ್ ಸರೋವರದ ಅಗಾಧತೆಯೊಂದಿಗೆ ಅಲ್ಲಿನ ಸ್ವಚ್ಛತೆಯೂ ಗಮನಾರ್ಹ

ಮ್ಯೂಸಿಯಂ, ಊರೂ ಹೀಗೆ ಆರುದಿನಗಳ ಅಲ್ಲಿನ ತಿರುಗಾಟವೆಲ್ಲ ಇದ್ದದ್ದು ಬೈಕಲ್ ಸರೋವರಕ್ಕೆ ಹೊಂದಿಕೊಂಡ ಜಾಗಗಳಲ್ಲೇ. ಸರೋವರದಲ್ಲಿ 5 ಗಂಟೆಗಳ ಕಾಲ ಬೋಟಿಂಗ್ ಮಾಡಿ ಸರೋವರದ ಇನ್ನೊಂದು ಭಾಗಕ್ಕೆ ಪ್ರಯಾಣಿಸಿದ ಅನುಭವದಲ್ಲಿ ಹೇಳುವುದಾದರೆ… ಸ್ವಚ್ಛವಾದ ನೀರು, ಕಸಕಡ್ಡಿಗಳಿಲ್ಲ, ದೃಷ್ಟಿಬೊಟ್ಟೆಂಬಂತೆ ಒಂದೇ ಒಂದು ತೇಲುತ್ತಿರುವ ಪ್ಲಾಸ್ಟಿಕ್ ಬಾಟಲ್ ಕಾಣಿಸಿತು, ಅಷ್ಟೇ. ಬಿಗಿಯಾದ ನಿರ್ವಹಣಾ ಕ್ರಮವನ್ನು ಮೆಚ್ಚಲೇಬೇಕು. ತೀರದಿಂದ ದೂರ ಸರಿದಂತೆ ಸಮುದ್ರದಲ್ಲಿ ಪಯಣಿಸುತ್ತಿರುವಂತೆ ಭಾಸವಾಗುತ್ತಿತ್ತು. ಹೀಗೆ ಹೋಗಿ ಒಂದು ತೀರ ಸೇರಿ ಕೆಳಗಿಳಿದವು. ಇಲ್ಲಿ ಗುಡ್ಡದ ಮೇಲೆ ಒಂದು ಚಿಕ್ಕ ಚಾರಣ. ಒಂದು ಶತಮಾನದ ಹಿಂದಿನ ಸುರಂಗ ರೈಲುಮಾರ್ಗದ ದರ್ಶನ. ಆ ತೀರದಲ್ಲಿರುವ ಕೆಲವು ಹಳ್ಳಿಗಳಿಗೆ ರಸ್ತೆಗಳಿಲ್ಲದ ಕಾರಣ ಈ ರೈಲೇ ಸಂಪರ್ಕಸಾಧನ. ಕತ್ತಲು ತುಂಬಿದ ಸುರಂಗದಲ್ಲಿ ಟಾರ್ಚ್ ಇಲ್ಲದೆ ನಡೆದು ಇನ್ನೊಂದು ತುದಿಗೆ ತಲುಪುಗಾಗ ಅಂಧರ ಬಾಳು ಹೇಗಿರಬಹುದೆಂಬ ಪ್ರತ್ಯಕ್ಷ ಅನುಭವವಾಗಿ ಮನಸ್ಸು ಮ್ಲಾನವಾಯಿತು.  ರೈಲುಹಾದಿಯ ಇಬ್ಬದಿಗಳಲ್ಲಿ ಎತ್ತರದ ಗುಡ್ಡಗಳು. ಹುಲ್ಲುಹಾಸಿನ ನಡುವೆ ಅರಳಿದ್ದ ವಿವಿಧ ಹೂವುಗಳು. ಎತ್ತರದಿಂದ ಕಾಣುವ ಸರೋವರದ ನೋಟ ನಯನಮನೋಹರ.
ಹಿಂತಿರುಗುವ ದಾರಿಯಲ್ಲಿ ಕಾಣಿಸಿತು ಅಂಗಾರ ನದಿ ಬೈಕಲ್ ಸರೋವರದಿಂದ ಹೊರಹರಿಯುವ ಸ್ಥಳ. ಎಂಥ ವಿಶಾಲ ಪಾತ್ರ! ನೋಡಿದಷ್ಟು ಕಣ್ಣು ತಣಿಯದು. ಹಾದಿಯುದ್ದಕ್ಕೂ ಕಾಣಿಸುತ್ತಿದ್ದ ಸರೋವರ ತೀರ, ಗುಡ್ಡಗಳು ಹಾಗೂ ಅವುಗಳ ತಪ್ಪಲಲ್ಲಿರುವ ಊರು ಮನೆಗಳು ಇಳಿಸಂಜೆಯ ಬಂಗಾರದ ಬೆಳಕಲ್ಲಿ ಹೊಳೆಯುತ್ತಿದ್ದವು. ಗುಡ್ಡಗಳ ನಡುವೆ ಸೂರ್ಯ ಕಣ್ಣುಮುಚ್ಚಾಲೆಯಾಡುತ್ತಿದ್ದ . ದಡದ ಹತ್ತಿರ ಸ್ಫಟಿಕ ಶುದ್ಧವಾಗಿ ಪಾರದರ್ಶಕದಂತೆ ತನ್ನೊಡಲಿನಲ್ಲಿರುವ ಕಲ್ಲು ಹರಳುಗಳನ್ನೆಲ್ಲ ಅನಾವರಣಗೊಳಿಸುತ್ತಿದ್ದ ಜಲರಾಶಿ ಸರೋವರದ ನಡುವೆ ಹೋದಂತೆ ಹಸುರಾಗಿ, ನಿಗೂಢವಾಗಿ ಕಾಣುತ್ತಿತ್ತು. ಅಂದಹಾಗೆ ಇಲ್ಲಿ ಸೂರ್ಯಾಸ್ತವಾಗುತ್ತಿದ್ದದ್ದು ರಾತ್ರಿ ಎಂಟಕ್ಕೆ.

ಹರಕೆ- ನಂಬಿಕೆಗಳಿಗೆ ಗಡಿಯೆಲ್ಲಿದೆ?

ನಮ್ಮ ಗಂಡಂದಿನ ಜತೆ ಸ್ಥಳ ವೀಕ್ಷಣೆಗೆ ಸನಿಹದಲ್ಲೇ ಇದ್ದ ಒಂದು ಬೆಟ್ಟದ ಬುಡಕ್ಕೆ ಟ್ಯಾಕ್ಸಿನಲ್ಲಿ ತಲುಪಿದೆವು. ಅಲ್ಲಿಂದ ಕೇಬಲ್ ಕಾರ್ ನಲ್ಲಿ ಮೇಲೇರಿದೆವು. ಇದು ಬಹಳ ಕಡಿದಾದ ದಾರಿ ಅಲ್ಲದುದರಿಂದ ಭಯವೆನಿಸಲಿಲ್ಲ. ಹಿತವಾದ ಬಿಸಿಲಲ್ಲಿ ನಿಸರ್ಗದ ಸೊಬಗು ಸವಿದೆವು. ಗುಡ್ಡದ ಮೇಲಿಂದ ಕಾಣುವ ಸರೋವರದ ದೃಶ್ಯ ಸುಂದರವಾಗಿತ್ತು. ಅಲ್ಲೊಂದುವೀಕ್ಷಣಾ ಸ್ಥಳದಲ್ಲಿ ಕಟಾಂಜನದ ತುಂಬಾ ಬಣ್ಣಬಣ್ಣದ ಕರವಸ್ತ್ರದಂಥ ಬಟ್ಟೆಗಳನ್ನು ಕಟ್ಟಿರುವುದೇಕೆಂದು ಕೇಳಿದಾಗ ಅದು ಹರಕೆ ಅಥವಾ wish ಹೇಳಿಕೊಳ್ಳಲು ಎಂದು ತಿಳಿಯಿತು. ಯಾವ ದೇಶಕ್ಕೆ ಹೋದರೂ ಇಂಥ ನಂಬಿಕೆಗಳು ಇದ್ದೇ ಇರುತ್ತವೆ.  ಅಲ್ವಾ?

ಮೀನುಪೇಟೆಯಲ್ಲಿ ತೇಲಿಬಂದ ಹಿಂದಿಹಾಡು!

ಹೀಗೆ ಪ್ರತಿದಿನದ ತಿರುಗಾಟ ಸರಣಿ ಜಾರಿಯಲ್ಲಿದ್ದಾಗ, ಸೆಪ್ಟೆಂಬರ್ 2ರ ದಿನ ಹವಾಮಾನದಲ್ಲಿ ಭಾರೀ ಬದಲಾವಣೆ. ಹಿಂದಿನ ದಿನ ಸಂಜೆಯವರೆಗೆ ಬಿಸಿಲಿನಿಂದ ಕೂಡಿದ್ದ ಹವಾಮಾನ ಬೆಳಗ್ಗೆ ಏಳುತ್ತಿದ್ದಂತೆ ರಾತ್ರೋರಾತ್ರಿ ಬದಲಾಗಿಬಿಟ್ಟಿತ್ತು.
ಸರೋವರದ ಮೇಲಿಂದ ಕುಳಿರ್ಗಾಳಿ ಬೀಸತೊಡಗಿತ್ತು. ಮೋಡ ಕವಿದು ತುಂತುರುಮಳೆ ಶುರುವಾಗಿತ್ತು. ತಾಪಮಾನ ದಿಢೀರನೆ ೧೦° ಯಷ್ಟು ಇಳಿದಿತ್ತು. ಶಾಂತವಾಗಿದ್ದ ಸರೋವರದಲೆಗಳು ಜೋರಾಗಿ ಮೊರೆಯತೊಡಗಿದ್ದವು. ತಿಳಿನೀಲಿಯಾಗಿದ್ದ ನೀರು ಬೂದುಬಣ್ಣದಂತೆ ಕಾಣತೊಡಗಿತ್ತು.
ಆದರೆ…ರೂಂನಲ್ಲಿ ಕುಳಿತೇನು ಮಾಡುವುದು? ನಾವು ಮೂವರು ಬೆಚ್ಚನೆಯ ಉಡುಪು ತೊಟ್ಟು ಛತ್ರಿ ಹಿಡಿದುಕೊಂಡು ಹೋಟೆಲ್ ಪಕ್ಕದಲ್ಲೇ ಇದ್ದ  pottery workshop (ಕುಂಬಾರಿಕೆ ಶಿಬಿರ?) ಗೆ ಹೋದೆವು. ತರಾವರಿಯ ಮಣ್ಣಿನ ಗೊಂಬೆಗಳು, ಪ್ರಾಣಿ ಪಕ್ಷಿಗಳ ಆಕೃತಿಗಳು, ಕೀ ಬಂಚ್ ಗಳು, ಕ್ರಿಸ್ಮಸ್ ಗೆ ತೂಗು ಹಾಕಲು ಗಂಟೆಗಳು, ಊದಿದರೆ ಧ್ವನಿ ಹೊರಡಿಸುವ ಸೀಲ್ ಗೊಂಬೆಗಳು…ಹೀಗೆ ಸುಂದರ ಕಲಾಕೃತಿಗಳ ರಾಶಿಯೇ ತುಂಬಿತ್ತು.
ಅಲ್ಲಿಂದ ಊರಿನ ಇನ್ನೊಂದು ಪಾರ್ಶ್ವದತ್ತ ನಡೆಯುತ್ತ ಹೋದೆವು. ಗುಡ್ಡದ ಪಕ್ಕದಲ್ಲೇ ಸಾಗುವ ರಸ್ತೆ. ರಸ್ತೆಬದಿಯಲ್ಲಿ ಉದ್ದಕ್ಕೂ ಹಬೆಯಾಡುವ ಪೆಟ್ಟಿಗೆಗಳಲ್ಲಿ ಮೀನು ಬೇಯಿಸುತ್ತಿರುವ ವ್ಯಾಪಾರಿಗಳು. ಬೈಕಲ್ ಸರೋವರದಲ್ಲಿ ಸಿಗುವ ಆಮೊರ್ ಎಂಬ ಜಾತಿಯ ವಿಶೇಷ ಮೀನು ಭಾರೀ ರುಚಿಯಂತೆ. ಹಾಗಂತ ಎಲಾ ಮತ್ತು ಸಿ಼ಕ್ಕಿ ಮಾತಾಡಿಕೊಳ್ಳುತ್ತಿದ್ದರು.
ಹವಾ ಬದಲಾಗಿದ್ದರಿಂದ ಶಾಪಿಂಗ್ ಹಾಗೂ ಸೈಟ್ ಸೀಯಿಂಗ್ ಗೆಇರ್ಕುಟ್ಸ್ ಗೆ ಹೋಗುವ ಪ್ರೋಗ್ರಾಂ ರದ್ದಾಗಿದ್ದರಿಂದ ಲಿಸ್ವಿಯಾಂಕದ ಮಾರ್ಕೆಟ್ ನಲ್ಲೆ ಇನ್ನೊಂದು ಸುತ್ತು ಹೊಡೆದೆವು. ಮಾರ್ಕೆಟ್ ನ ಪ್ರವೇಶದ್ವಾರದಲ್ಲೇ ಇರುವ ಹಣ್ಣು ತರಕಾರಿ ಅಂಗಡಿಯವನು ನಮಸ್ತೆ ಎಂದು  ವಿಷ್ ಮಾಡಿ ತನಗೆ ಹಿಂದಿಹಾಡು ಬರುತ್ತೆ ಅಂತಂದ. ಜಿಮ್ಮಿ ಜಿಮ್ಮಿ ಆಜಾ ಆಜಾ….ಅಂತ ಹಾಡಿ ತೋರಿಸಿದ. ಇಂಗ್ಲಿಷೇ  ಅಪರೂಪವಾಗಿರುವ ರಷ್ಯಾದಲ್ಲಿ ಹಿಂದಿ ಹಾಡು ಕೇಳಿ ನಮಗೂ ಖುಷಿಯಾಯ್ತು.

Lake_Baikal

(ಚಿತ್ರಕೃಪೆ- ಅಂತರ್ಜಾಲ)

ಮಾರ್ಕೆಟ್ ಒಳಗೆ  ಸಾಲುಸಾಲಾಗಿ ಮೀನಿನ ಸ್ಟಾಲ್ ಗಳು. ಟೇಬಲ್ಗಳ ಮೇಲೆ ಜೋಡಿಸಿರುವ, ತೂಗುಹಾಕಿರುವ, ಹಬೆಯಲ್ಲಿ ಬೇಯುತ್ತಿರುವ ಮೀನುಗಳದ್ದೇ ದೃಶ್ಯ. ಇನ್ನೂ ಸ್ವಲ್ಪ ಹಿಂದಿನ ಸ್ಟಾಲ್ ಗಳಲ್ಲಿ ವಿವಿಧ ಮಣಿ, ಹರಳುಗಳ ಆಭರಣಗಳು. ಬೈಕಲ್ ಲೇಕ್ ಸ್ಟೋನ್ ಮೇಡ್ ಅಂತ ಹೇಳಿ ಅತ್ಯಂತ ಸಿಂಪಲ್ ಕಿವಿಯೋಲೆಗೂ 2000 ರೂಬೆಲ್ ಬೆಲೆ ಹೇಳಿದರು. ನಿಜವೋ ಕೃತಕವೋ ತಿಳಿಯದೆ ನಾನು ಕೊಳ್ಳುವ ಯೋಚನೆ ಬಿಟ್ಟುಬಿಟ್ಟೆ. ಒಂದರೊಳಗೊಂದು ಗೊಂಬೆಗಳಿರುವ matroyshka dolls ಇಲ್ಲಿ ಫೇಮಸ್. ಅವನ್ನು ನೆನಪಿಗಾಗಿ ಕೊಂಡೆವು. ಇನ್ನು ಅಲ್ಲಿದ್ದ ಉಣ್ಣೆಯ ಸ್ವೆಟರ್ ಟೋಪಿಗಳಂತೂ ತುಂಬಾನೇ ದಪ್ಪ. ಅವು ಅಲ್ಲಿನ ಛಳಿಗಷ್ಟೇ ಸೂಕ್ತ. ಹಾಗಾಗಿ ಪಕ್ಕದ ಒಂದು ಅಂಗಡಿಯಿಂದ ಚಾಕಲೇಟ್ ಖರೀದಿಸಿ ಶಾಪಿಂಗ್ ಮುಕ್ತಾಯಗೊಳಿಸಿದೆವು.

ಅನುಭವ ಬುತ್ತಿ ಎದೆಯಲಿ ಹೊತ್ತು ಮರುಪ್ರಯಾಣ… ಅನ್ನ-ಸಾರಿಗೆ ಕಾತರಿಸಿದ ಮನ!

ಸೆಪ್ಟೆಂಬರ್ 3ರ ಬೆಳಿಗ್ಗೆ ಉಪಾಹಾರ ಮುಗಿಸಿ 8 ಗಂಟೆಗೆ ಟ್ಯಾಕ್ಸಿಯಲ್ಲಿ ಲಿಸ್ವಿಯಾಂಕ ಬಿಟ್ಟೆವು. ಬೈಕಲ್ ಸರೋವರವನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳುತ್ತ ಇರ್ಕುಟ್ಸ ತಲುಪಿದೆವು. ಅಂದು ರಾತ್ರಿ ಕತ್ತಲಲ್ಲಿ ಕಾಣದಿದ್ದ ದಾರಿಯ ಇಕ್ಕೆಲಗಳನ್ನು ನೋಡಿದೆವು. ೧೧ ಗಂಟೆಗೆ ರಷ್ಯಾದ ನೆಲದಿಂದ ಸೈಬೀರಿಯನ್ ಏರ್ ಲೈನ್ಸ್ ವಿಮಾನ ಮೇಲೇರಿತು. ಮಂಗೋಲಿಯನ್ ಮರುಭೂಮಿ, ಅಲ್ಲಲ್ಲಿ ಓಯಸಿಸ್ ಗಳು ಎಲ್ಲವುಗಳನ್ನು  ಪಕ್ಷಿನೋಟದಲ್ಲಿ ವೀಕ್ಷಿಸುತ್ತ ಸಂಜೆಗೆ ಬ್ಯಾಂಕಾಕ್ ತಲುಪಿದೆವು.  ಅಲ್ಲಿ ಒಬ್ಬೊಬ್ಬರಾಗಿ ನಮ್ಮ ಬಣ್ಣದವರು ಕಾಣತೊಡಗಿದರು.  ಶ್ರೀಲಂಕನ್ ಏರಲೈನ್ಸ ವಿಮಾನದಲ್ಲಿ ಎಂಥ ದಿವ್ಯವಾದ ಊಟ ಕೊಟ್ಟರು ಅಂದ್ರೆ…ಅನ್ನ ಸೊಪ್ಪು- ಬೇಳೆ ಪಲ್ಯ… ತವರಿಗೆ ಮರಳುತ್ತಿರುವ ಹಿತಾನುಭವ ಆಗತೊಡಗಿತು! ಕೊಲಂಬೊದಲ್ಲಿಳಿದು ಅಲ್ಲಿ ಇನ್ನೊಂದು ವಿಮಾನ ಹತ್ತಿ ಬೆಂಗಳೂರು ಸೇರಿದೆವು. ನಮ್ಮ ಜೊತೆಯಲ್ಲಿದ್ದ ಪ್ರೊಫೆಸರ್ ಗೆ ವಿದಾಯ ಹೇಳಿ ಹಲವು ನೆನಪುಗಳ, ಅನುಭವಗಳ ಮೂಟೆಯೊಂದಿಗೆ ಮನೆ ತಲುಪಿದೆವು.
ಭಾಷೆ ಬರದಿರುವ ಊರಲ್ಲಿ ನನ್ನ ಗಂಡ ಕಾನ್ಫ಼ರೆನ್ಸ್ ಲ್ಲಿರುವಾಗ ಹೇಗೆ ಟೈಂಪಾಸ್ ಮಾಡಲಿ ಎಂದು ಚಿಂತಿಸುತ್ತಿದ್ದ ನನಗೆ ಸಮಯ ಕಳೆದುದೇ ಗೊತ್ತಾಗಲಿಲ್ಲ. ರಷ್ಯಾಪ್ರವಾಸವನ್ನು ಫೊಟೊಗಳನ್ನು ನೋಡುತ್ತ ಮೆಲುಕು ಹಾಕುವಾಗ ಬಹಳ ಸಂತಸವಾಗುತ್ತಿದೆ.

map baikal

Leave a Reply