ಸರ್ಕಾರಕ್ಕೆ ಸವಾಲ್ ಹಾಕಿದ ಕುಮಾರಸ್ವಾಮಿ, ಟಿಪ್ಪು ಜಯಂತಿ: ನಾಳೆ ಬಿಜೆಪಿಯಿಂದ ಪ್ರತಿಭಟನೆ- ರಾಜ್ಯಾದ್ಯಂತ ಬಿಗಿ ಭದ್ರತೆ, ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಹುಲ್ ಕೂರಿಸಲು ನಾಯಕರ ಒಮ್ಮತ, ರಣಜಿಯಲ್ಲಿ ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ

ಬ್ರಿಟೀಷ್ ಪ್ರಧಾನಿ ಥೆರೆಸ್ಸಾ ಮೇ ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಉಭಯ ನಾಯಕರು ಇಂಡಿಯಾ-ಯುಕೆ ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಸಭೆ ನಂತರ ಮಾತನಾಡಿದ ಪ್ರಧಾನಿ ಮೋದಿ ‘ಭಾರತ ಬ್ರಿಟನ್ ಬಾಂಧವ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಿವೆ. ಉದ್ಯಮಶೀಲತೆಯನ್ನು ವೃದ್ಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಮುಖ್ಯ’ ಎಂದರೆ, ‘ಬ್ರಿಟನ್ ಈ ಹಿಂದೆ ಭಾರತವನ್ನು ಲಘುವಾಗಿ ಪರಿಗಣಿಸಿತ್ತು. ಇನ್ನು ಮುಂದೆ ಭಾರತವನ್ನು ಲಘುವಾಗಿ ಕಾಣಲು ಸಾಧ್ಯವೇ ಇಲ್ಲ. ಈ ಎರಡು ದೇಶಗಳ ಸಂಬಂಧ ಮಹತ್ವದ್ದಾಗಿದೆ’ ಎಂದರು ಥೆರೆಸ್ಸಾ ಮೇ.

ಡಿಜಿಟಲ್ ಕನ್ನಡ ಟೀಮ್:

ಭೂಕಬಳಿಕೆ ಆರೋಪಕ್ಕೆ ಕುಮಾರಸ್ವಾಮಿ ಸವಾಲ್…

ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹಿರೇಮಠ್ ಅವರ ಆರೋಪಕ್ಕೆ ಆಕ್ರೇಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ‘ಒಂದೇ ಒಂದು ಇಂಚು ಭೂಮಿ ಕಬಳಿಕೆ ಮಾಡಿದ್ದರೆ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿ’ ಎಂದು ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ಡಿಕೆ ಹೇಳಿದಿಷ್ಟು…

‘ಖುದ್ದು ಹಿರೇಮಠ್ ಅವರೆ ಕೇತಗಾನಹಳ್ಳಿಗೆ ಬಂದು ಪರಿಶೀಲಿಸಲಿ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇದಕ್ಕೆ ಅವಕಾಶ ಕೊಡಲಿ. ನಾನು ಯಡಿಯೂರಪ್ಪನವರ ವಿರುದ್ಧ ₹ 2 ಕೋಟಿ ಸಾಗಣೆ ಕುರಿತು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಮತ್ತೆ ಭೂಕಬಳಿಕೆ ಆರೋಪ ಹೊರಿಸಲು ಕಾರಣ. ಇದರ ಹಿಂದೆ ಯಡಿಯೂರಪ್ಪ, ಇಂಧನ ಸಚಿವ ಡಿ.ಕೆ ಶಿವಕುಮಾರ್, ಐಎಎಸ್ ಅಧಿಕಾರಿಗಳಾದ ರಮಣರೆಡ್ಡಿ, ಜಯಂತಿ ಇದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಉಪ ವಿಭಾಗಾಧಿಕಾರಿ ಸಿದ್ದಪ್ಪ ಕೊಟ್ಟ ವರದಿ ಪ್ರಕಾರ ತಕ್ಷಣ ಕ್ರಮ ತೆಗೆದುಕೊಳ್ಳಲು ಮುಂದಾಗಲಿ. ಆ ವರದಿ ಪ್ರಕಾರ ನನಗೆ ಎರಡೂವರೆ ಎಕರೆ ಕಡಿಮೆ ಜಮೀನು ಇದೆ. ಅದನ್ನು ನನಗೆ ಕೊಡಿಸಲಿ. ನಾನು ಹಡಬೆ ದುಡ್ಡಿನಿಂದ ಖರೀದಿಸಲ್ಲ. ಕಷ್ಟಪಟ್ಟ ಹಣದಿಂದ ಖರೀದಿಸಿದ್ದೇನೆ. ತೀರಾ ಅಗತ್ಯವಾದರೆ ಆ ಜಮೀನನ್ನು ಅಂಗವಿಕಲರು, ಅನಾಥಾಶ್ರಮ ಕಟ್ಟಲು ಕೊಡುವೆ. ಇನ್ನು ಸುರೇಶ್ ಕುಮಾರ್ ಅವರು ನನ್ನ ಹೇಳಿಕೆಯನ್ನು ಹಿಟ್ ಅಂಡ್ ರನ್ ಕೇಸ್ ಅಂತ ಹೇಳುತ್ತಾರೆ. ನಾನು ಹಗರಣ ನಡೆದಾಗ ಅದರ ಎಲ್ಲ ದಾಖಲೆಗಳನ್ನು ಜನರ ಮುಂದಿಡಬಹುದೇ ಹೊರತು, ಅದನ್ನು ಹೊರತಾಗಿ ಮತ್ತೇನು ಮಾಡಬಹುದು? ಜನ ನನಗೆ ಅಧಿಕಾರ ಕೊಡಲಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ.’

ಇದೇ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪ್ರಶ್ನಿಸಿದ್ದು ಹೀಗೆ: ‘ಟಿಪ್ಪು ಜಯಂತಿ ಆಚರಿಸಿದರೆ ಆಗುವ ಲಾಭವೇನು? ಆಚರಿಸಿದರೆ ಆಗುವ ತೊಂದರೆ ಏನು? ರಾಜ್ಯದ ಜನರು ಈಗಾಗಲೇ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಟಿಪ್ಪು ಜಯಂತಿ ಬಗ್ಗೆ ವಾದ ವಿವಾದದಲ್ಲಿ ಮುಳುಗಿವೆ. ಈ ಎರಡು ರಾಷ್ಟ್ರೀಯ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿವೆ.’

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಿವಿಧ ರಾಜ್ಯಗಳ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅಪಾರ ವಿಭಾಗಗಳ ಪೊಲೀಸರು ಈ ಬಂಧಿತ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಹಿಂದು ಮುನ್ನಾನಿ ಸಂಘಟನೆ ಕಾರ್ಯಕರ್ತ ಶಶಿಕುಮಾರ್ ಹತ್ಯೆ ಸೇರಿದಂತೆ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಮೊಹಮದ್ ಮಜೀವುಲ್ಲಾ, ಮೊಹಮದ್ ಸಾಧಿಕ್, ವಾಸಿಂ ಅಹ್ಮದ್ ಮತ್ತು ಇರ್ಫಾನ್ ಪಾಷ ಅವರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಯ್ತು.
  • ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆ ನಿರ್ಧಾರವನ್ನು ಪ್ರತಿಭಟಿಸಿ ನಾಳೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ವಿರೋಧದ ಸಂದರ್ಭದಲ್ಲಿ ಜನ್ಮದಿನ ಆಚರಣೆ ಪರವಾಗಿರುವವರು ಶಾಂತಿ ಕದಡಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಕೆಲವರನ್ನು ಬಂಧಿಸಲಾಗಿದ್ದು, ಎಲ್ಲೆಡೆ ಬಿಗಿ ಭದ್ರತೆ ಮಾಡಲಾಗಿದೆ. ಇದಕ್ಕಾಗಿ ಸಿಸಿಟಿವಿ ಹಾಗೂ ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಬಳಸಲಾಗಿದೆ.
  • ಸೋಮವಾರ ನಡೆದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ಕೂರಿಸುವ ಬಗ್ಗೆ ಹಲವು ನಾಯಕರು ಆಸಕ್ತಿ ತೋರಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಎಲ್ಲ ನಾಯಕರು ರಾಹುಲ್ ಗಾಂಧಿ ಅವರನ್ನು ಈ ಸ್ಥಾನಕ್ಕೆ ಆರಿಸಲು ಒಮ್ಮತದ ಒಪ್ಪಿಗೆ ನೀಡಿದರು. ಅನಾರೋಗ್ಯದ ಕಾರಣ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಭೆಗೆ ಗೈರಾಗಿದ್ದು, ಇದೇ ಮೊದಲ ಬಾರಿಗೆ ಸೋನಿಯಾ ಅವರ ಅನುಪಸ್ಥಿತಿಯಲ್ಲಿ ಕಾರ್ಯಕಾರಿ ಸಭೆ ನಡೆದಿದೆ.
  • ಪ್ರತಿಷ್ಠಿತ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ತನ್ನ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ. ಬಿ ಗುಂಪಿನಲ್ಲಿ ನಡೆದ ವಿದರ್ಭ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 189 ರನ್ ಗಳಿಂದ ಜಯಿಸಿದೆ. ಅದರೊಂದಿಗೆ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಸತತ 3ನೇ ಜಯ ಸಾಧಿಸಿ 23 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕರ್ನಾಟಕ ತನ್ನ ಎರಡು ಇನಿಂಗ್ಸ್ ಗಳಲ್ಲಿ ಕ್ರಮವಾಗಿ 267 ಹಾಗೂ 209 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ವಿದರ್ಭ 176 ಮತ್ತು 111 ರನ್ ಗಳನಷ್ಟೇ ಗಳಿಸಲಷ್ಟೇ ಶಕ್ತವಾಯ್ತು. ಆಲ್ರೌಂಡ್ ಪ್ರದರ್ಶನ ನೀಡಿದ ನಾಯಕ ಆರ್.ವಿನಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply