ಜಗತ್ತಿನ ಎಲ್ಲಾ ದೇಶಗಳು ಏಕೇ ಒಂದೇ ಕರೆನ್ಸಿ ಬಳಸುವುದಿಲ್ಲ? ಅದೇಕೆ ಎಲ್ಲ ವಹಿವಾಟುಗಳನ್ನೂ ಡಾಲರುಗಳಲ್ಲಿ ಅಳೆಯುವ ಪರಿಪಾಠ?

hana class


authors-rangaswamyಜಗತ್ತಿನ ಬಹುತೇಕ ದೇಶಗಳ ವ್ಯಾಪಾರ ವಹಿವಾಟು ಅಮೇರಿಕಾದ ಡಾಲರ್  ನಲ್ಲಿ ಅಳೆಯಲ್ಪಡುತ್ತದೆ. ಅಮೇರಿಕಾ ದೇಶದೊಂದಿಗೆ ನೇರವಾಗಿ ವಾಣಿಜ್ಯ ಸಂಬಂಧ ಇದ್ದಾಗ ಇದು ಒಪ್ಪಬಹುದು. ಆದರೆ ಅಮೇರಿಕಾ ಕೊಡು ಕೊಳ್ಳುವಿಕೆಯಲ್ಲಿ ಭಾಗಿ ಆಗಿಲ್ಲದಿದ್ದರೂ ಡಾಲರ್ ಅನ್ನು ವಿನಿಮಯ ಮಾಧ್ಯಮವನ್ನಾಗಿ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಉದಾಹರಣೆಗೆ ಬಾಂಗ್ಲಾದೇಶ, ಪಾಕಿಸ್ತಾನ, ಭಾರತ ಕೊಲ್ಲಿ ದೇಶಗಳಿಂದ ತೈಲ ಆಮದು ಮಾಡಿಕೊಂಡರೆ ಕೊಲ್ಲಿ ದೇಶ ಇಷ್ಟು ಡಾಲರ್ ಕೊಡಿ ಎನ್ನುತ್ತದೆ. ಭಾರತವೂ ಅಷ್ಟು ಮೊತ್ತದ ಡಾಲರ್ ಅನ್ನು ಕೊಲ್ಲಿ ದೇಶಕ್ಕೆ ಕೊಡುತ್ತದೆ. ಇಲ್ಲಿ ಅಮೆರಿಕಾದ ಡಾಲರ್ ವಿನಿಮಯ ಮಾಧ್ಯಮವಾಗಿ ಬಳಸಲ್ಪಟ್ಟಿದೆ. ಹಾಗಾದರೆ ಡಾಲರ್ ಅನ್ನು ಜಗತ್ತಿನ ಕರೆನ್ಸಿ ಎಂದೂ ಅಥವಾ ಯಾವೆಲ್ಲಾ ದೇಶಗಳು ಡಾಲರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿನಿಮಯ ಮಾಧ್ಯಮವಾಗಿ ಬಳಸುತ್ತದೋ ಅವೆಲ್ಲಾ ದೇಶಗಳ ಕರೆನ್ಸಿ ಎಂದು ಘೋಷಿಸಲು ಆಗದು ? ವಿನಿಮಯದಿಂದ ಉಂಟಾಗುವ ಲಾಸು, ತ್ರಾಸು ಎಲ್ಲವೂ ತಪ್ಪುತ್ತದೆ ಎನ್ನುವ ಸಾಮಾನ್ಯ ಪ್ರಶ್ನೆ ಎಲ್ಲರಲ್ಲೂ ಹುಟ್ಟುತ್ತದೆ.

ಉತ್ತರಕ್ಕೆ ನಮ್ಮ ಬದುಕಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಒಂದು ಮನೆಯಲ್ಲಿ ಮೂವರು ಸಹೋದರರು ಇದ್ದಾರೆ. ಮೂವರು ದುಡಿಯುತ್ತಾರೆ. ಅವರಲ್ಲಿ ಹಿರಿಯವ ಹೆಚ್ಚು ಖರ್ಚು ಮಾಡುತ್ತಾನೆ. ಮಧ್ಯದವ ಖರ್ಚು ಉಳಿಕೆಯ ಮಧ್ಯ ಸಮತೋಲನ ಹೊಂದಿದ್ದಾನೆ. ಕಿರಿಯವನು ಉಳಿತಾಯದ ನಂತರ ಮಿಕ್ಕದ್ದ ಖರ್ಚು ಮಾಡುವ ಪೈಕಿ . ಮೂವರನ್ನ  ತಾಯಿ ಒಂದೇ ರೀತಿ ಬದುಕಲು ಹೇಳಿದರೆ ? ಅವರಲ್ಲಿ ಇರುವ ಸಾಮರಸ್ಯ ಕೆಡುತ್ತದೆ ಅಲ್ಲವೇ ? ಹಿರಿಯವ ಅಮೇರಿಕಾ, ಮಧ್ಯದವ ಭಾರತ, ಕಿರಿಯವ ಜಪಾನ್

ಮತ್ತು ಇವರ ತಾಯಿ ಮೂವರಿಗೂ ಸೇರಿ ಒಂದು ಸೆಂಟ್ರಲ್ ಬ್ಯಾಂಕ್ ಎಂದುಕೊಳ್ಳಿ. ಫೆಡರಲ್ ಇಂಟರೆಸ್ಟ್ ರೇಟ್ ನಿಗದಿ ಮಾಡುವುದು ಹೇಗೆ ? ಇಂತಹ ಬ್ಯಾಂಕಿಂಗ್ ವ್ಯವಸ್ಥೆ ದಿನಒಪ್ಪೊತ್ತಿನಲ್ಲಿ ಕುಸಿದು ಬೀಳುತ್ತದೆ. ಪ್ರತಿ ದೇಶ ತನ್ನದೇ ಆದ ಉಳಿತಾಯ -ಖರ್ಚು ಮಾಡುವ ಪದ್ಧತಿ ಹೊಂದಿದೆ. ದೇಶದ ಜನರ ಖರ್ಚು ಮಾಡುವ ರೀತಿ, ಉಳಿಕೆಯ ಪದ್ಧತಿ ಮೇಲೆ ಆ ದೇಶದ ಆರ್ಥಿಕತೆ, ಬಡ್ಡಿದರ ನಿರ್ಧರಿಸಲಾಗುತ್ತದೆ. ಎಲ್ಲರೂ ಒಂದೇ ಎನ್ನುವ ಸಮಾಜವಾದ ಇಲ್ಲಿ ಕಾರ್ಯ ಮಾಡುವುದಿಲ್ಲ.

ಇದಕ್ಕೆ ಉತ್ತಮ ಉದಾಹರಣೆ ಯೂರೋಪಿಯನ್ ಒಕ್ಕೂಟ. ಗ್ರೀಸ್ ದೇಶದ ಜನ ಉಡಾಳರು, ಉಳಿಕೆಯ ಅರ್ಥ ತಿಳಿಯದವರು. ಕೆಲಸದಲ್ಲೂ ಅಷ್ಟೇ ಮೈ ಬಗ್ಗಿಸಿ ದುಡಿಯುವ ಅಭ್ಯಾಸ ಇಲ್ಲದವರು. ಜರ್ಮನರು ಇದಕ್ಕೆ ತದ್ವಿರುದ್ಧ. ಗಳಿಸಬೇಕು, ಉಳಿಸಬೇಕು ಜೊತೆ ಜೊತೆಗೆ ಖರ್ಚು ಮಾಡಬೇಕು ಎನ್ನುವ ಗುಣದವರು. ಒಕ್ಕೂಟದಲ್ಲಿ ಇರುವ 27 ದೇಶಗಳು ಭಿನ್ನ ಸಂಪ್ರದಾಯದಿಂದ ಬಂದಿವೆ. ಎಲ್ಲರಿಗೂ ಒಂದೇ ಕರೆನ್ಸಿ ಯುರೋ. ಅದು ಅನುಭವಿಸುತ್ತಿರುವ ನೋವು ಸವಾಲೀನ ಬಗ್ಗೆ ಬರೆಯಲು ಇದು ಜಾಗವಲ್ಲ.

ಜಗತ್ತಿಗೆಲ್ಲಾ ಒಂದೇ ಕರೆನ್ಸಿ ಎನ್ನುವುದು ಒಂದು ಸುಂದರ ಕನಸು. ನಿಜ ಜೀವನದಲ್ಲಿ ಅದನ್ನು ಅಳವಡಿಸುವುದು ಸಾಧ್ಯವೂ ಇಲ್ಲ ಸಾಧುವೂ ಅಲ್ಲ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply