ಶ್ಯಾಮ್ ಬೆನಗಲ್ ಸಮಿತಿ ಶಿಫಾರಸ್ಸು ಒಪ್ಪಿದ ಸೆನ್ಸಾರ್ ಮಂಡಳಿ, ಹಾಗಾದ್ರೆ ಇನ್ಮುಂದೆ ಚಿತ್ರಗಳಿಗೆ ಕತ್ತರಿ ಬೀಳಲ್ವಾ?

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಸಿನಿಮಾ ತಯಾರಕರು ಮತ್ತು ಸೆನ್ಸಾರ್ ಮಂಡಳಿ ನಡುವೆ ನಡೆಯುತ್ತಿದ್ದ ಗುದ್ದಾಟ ಇನ್ಮುಂದೆ ಇರುವುದಿಲ್ಲ..!

ಇಂತಹದೊಂದು ನಿರೀಕ್ಷೆ ಹುಟ್ಟಿರೋದಕ್ಕೆ ಕಾರಣವಾಗಿದೆ ‘ದ ಸೆಂಟ್ರಲ್ ಬೋರ್ಡ್ ಫಾರ್ ಫಿಲ್ಮ್ ಸರ್ಟಿಫಿಕೇಶನ್’ (ಸಿಬಿಎಫ್ ಸಿ) ಕೇಂದ್ರ ಸರ್ಕಾರ ನೇಮಿತ ಶ್ಯಾಮ್ ಬೆನಗಲ್ ಸಮಿತಿ ಶಿಫಾರಸ್ಸಿಗೆ ಒಪ್ಪಿಗೆ ನೀಡಿರುವುದು. ಈ ಶಿಫಾರಸ್ಸುಗಳು ಒಪ್ಪಿಗೆ ಆದ್ರೆ, ಸೆನ್ಸಾರ್ ಮಂಡಳಿ ಕೆಲಸ ಏನಿದ್ರು ಕೇವಲ ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುವುದಕ್ಕೆ ಮಾತ್ರ ಸೀಮಿತವಾಗಲಿದ್ದು, ಕತ್ತರಿ ಹಾಕುವುದಕ್ಕೆ ಅವಕಾಶವಿರುವುದಿಲ್ಲ.

ಪ್ರಸ್ತುತ ಜಾರಿಯಲ್ಲಿರುವ ಸಿನಿಮಾಟೋಗ್ರಫಿ ಕಾಯ್ದೆ/ ನಿಯಮವನ್ನು ತಿದ್ದುಪಡಿ ಮಾಡಲು ಹಾಗೂ ಅದಕ್ಕೆ ಹೊಸ ಸ್ವರೂಪ ನೀಡುವ ಸಲುವಾಗಿ ಸರ್ಕಾರ ಶ್ಯಾಮ್ ಬೆನಗಲ್ ಅವರ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿತ್ತು. ಆ ಸಮಿತಿ ಈಗ ತನ್ನ ಶಿಫಾರಸ್ಸುಗಳನ್ನು ನೀಡಿದೆ. ಆ ಪೈಕಿ ಸಿನಿಮಾಗಳಿಗೆ ಈಗ ನೀಡುವ ಪ್ರಮಾಣ ಪತ್ರದ ವಿಭಾಗಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಈ ಮಾರ್ಪಾಡು ಮಾಡಿದ ನಂತರ ಯಾವುದೇ ದೃಶ್ಯಗಳಿಗೆ ಕತ್ತರಿ ಬೀಳುವುದಿಲ್ಲ ಹಾಗೂ ಸಂಭಾಷಣೆ ವೇಳೆ ಬೀಪ್ ಸಹ ಬಳಸಲಾಗುವುದಿಲ್ಲ. ಸೋಮವಾರ ಮುಂಬೈನಲ್ಲಿ ನಡೆದ ಸಿಬಿಎಫ್ಸಿ ಸಭೆಯಲ್ಲಿ ಈ ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಲಾಗಿದ್ದು, ಸಿನಿಮಾಟೋಗ್ರಫಿ ಕಾಯ್ದೆ ಹೊಸ ರೂಪ ಪಡೆದ ನಂತರ ಈ ಸಮಿತಿ ಶಿಫಾರಸ್ಸುಗಳು ಜಾರಿಯಾಗಲಿವೆ. ಈ ಸಮಿತಿಯ ಪ್ರಮುಖ ಶಿಫಾರಸ್ಸುಗಳು ಹಾಗೂ ಅವುಗಳ ಬಗೆಗಿನ ಮಾಹಿತಿ ಹೀಗಿವೆ…

ಸದ್ಯದ ಪರಿಸ್ಥಿತಿಯಲ್ಲಿ ಅತಿಯಾದ ಹಿಂಸೆ, ಅಶ್ಲೀಲ ದೃಶ್ಯಗಳ ಚಿತ್ರಕ್ಕೆ ‘ಎ’ (Adult) ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಉಳಿದಂತೆ ‘ಯು/ಎ’ (unrestricted public viewing with parental discretion required for children below 12) ಹಾಗೂ ‘ಯು’ (Unrestricted Public Exhibition) ಎಂಬ ಸರ್ಟಿಫಿಕೇಟ್ ಗಳನ್ನು ನೀಡಲಾಗುತ್ತಿದೆ.

ಶ್ಯಾಮ್ ಬೆನಗಲ್ ಅವರ ಶಿಫಾರಸ್ಸಿನಲ್ಲಿ ‘ಎ’ ವಿಭಾಗವನ್ನು ಎರಡು ರೀತಿಯಲ್ಲಿ ವಿಭಾಗಿಸಲಾಗಿದೆ. ಅದೇನಂದ್ರೆ, ಹಿಂಸೆ ಹಾಗೂ ರಕ್ತದಂತಹ ಚಿತ್ರಗಳಿಗೆ ‘ಎ’ ಸರ್ಟಿಫಿಕೇಟ್ ನೀಡುವುದು ಹಾಗೂ ಲೈಂಗಿಕ, ಅಶ್ಲೀಲತೆಯ ದೃಷ್ಯಗಳಿರುವ ಚಿತ್ರಗಳಿಗೆ ‘ಎ/ಸಿ’ (Adult with caution) ಪ್ರಮಾಣಪತ್ರ ನೀಡಲಾಗುವುದು. ಅದೇ ರೀತಿ ‘ಯು/ಎ’ ಸರ್ಟಿಫಿಕೇಟ್ ಚಿತ್ರಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ‘ಯು/ಎ 12+’ (12 ವರ್ಷದ ಮೇಲಿನವರಿಗೆ) ಹಾಗೂ ‘ಯು/ಎ 15+’ (15 ವರ್ಷದ ಮೇಲಿನವರಿಗೆ) ಎಂದು ಮಾಡಲಾಗಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ, ನೀಲಿ ಚಿತ್ರಗಳು ಈ ‘ಎ’ ಅಥವಾ ‘ಎ/ಸಿ’ ವಿಭಾಗಕ್ಕೆ ಬರುವುದಿಲ್ಲ. ಇನ್ನು ಚಿತ್ರ ಬಿಡುಗಡೆ ಸಂದರ್ಭದಲ್ಲಿ ಎ ಅಥವಾ ಎ/ಸಿ ಪ್ರಮಾಣಪತ್ರ ಪಡೆದ ಚಿತ್ರಗಳು ಟಿ.ವಿಯಲ್ಲಿ ಪ್ರಸಾರ ಹೇಗೆ ಎಂಬುದರ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರವಿಲ್ಲ. ದೂರದರ್ಶನದಲ್ಲಿ ಕೆವಲ ಯು ಸರ್ಟಿಫಿಕೇಟ್ ಮಾತ್ರ ಪ್ರಸಾರ ಮಾಡಲಾಗುವುದು. ಇನ್ನು ಖಾಸಗಿವಾಹಿನಿಗಳು ಕೇವಲ ಯು ಮತ್ತು ಯು/ಎ ಪ್ರಮಾಣಪತ್ರದ ಚಿತ್ರಗಳನ್ನು ಮಾತ್ರ ಪ್ರಸಾರ ಮಾಡಬೇಕಿದೆ.

‘ಚಿತ್ರಗಳಲ್ಲಿ ಕತ್ತರಿ ಪ್ರಯೋಗ ಮಾಡಬಾರದು ಎಂದು ತಿಳಿಸಿದ ಮೇಲೆ ಟಿ.ವಿ ವಾಹಿನಿಗಳಲ್ಲಿನ ಪ್ರಸಾರ ಹೇಗೆ ಎಂಬ ಪ್ರಶ್ನೆ ಇದೆ. ಈ ವಿಚಾರವಾಗಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದು ಸೆನ್ಸಾರ್ ಮಂಡಳಿ ಮೂಲಗಳು ತಿಳಿಸಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ಸುದ್ದಿಜಾಲ ವರದಿ ಮಾಡಿದೆ.

ಉಳಿದಂತೆ ಈ ಸಮಿತಿಯು ಚಿತ್ರಗಳನ್ನು ಆನ್ ಲೈನ್ ಸರ್ಟಿಫಿಕೇಷನ್ ಮಾಡಬೇಕು ಎಂದು ತಿಳಿಸಿತ್ತು. ಇದಕ್ಕೂ ಸಿಬಿಎಫ್ ಸಿ ಒಪ್ಪಿಗೆ ನೀಡಿದೆ. ಒಂದು ವೇಳೆ ಚಿತ್ರವನ್ನು ಆನ್ ಲೈನ್ ಸರ್ಟಿಫಿಕೇಷನ್ ಮಾಡಿಸಬೇಕಾದರೆ ಸಾಮಾನ್ಯವಾಗಿ ನೀಡುವ ಶುಲ್ಕಕ್ಕಿಂತ 5 ಪಟ್ಟು ಹೆಚ್ಚಿನ ಶುಲ್ಕ ತೆರಬೇಕು.

ಈ ಎಲ್ಲಾ ಶಿಫಾರಸ್ಸುಗಳಿಗೆ ಆರಂಭದಲ್ಲಿ ಸಿಬಿಎಫ್ ಸಿ ಮುಖ್ಯಸ್ಥ ಪಹ್ಲಜ್ ನಿಹಾಲಿ ವಿರೋಧ ವ್ಯಕ್ತಪಡಿಸಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಪತ್ರ ಬರೆದಿದ್ರು. ಅಲ್ಲದೆ 1952ರ ಸಿನಿಮಾಟೋಗ್ರಫಿ ಕಾಯ್ದೆಯಲ್ಲಿ ಸಿಬಿಎಫ್ ಸಿಗೆ ನೀಡಲಾಗಿದ್ದ ಅಧಿಕಾರವನ್ನು ಗಮನಕ್ಕೆ ತಂದಿದ್ದರು. ಆದರೆ ಸೋಮವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಈ ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಿದೆ. ಜತೆಗೆ ಹೊಸದಾಗಿ ಸೇರ್ಪಡೆ ಮಾಡಲಾಗುವ ಎ/ಸಿ ವಿಭಾಗದ ವ್ಯಾಖ್ಯಾನ ಹೇಗೆ ಎಂದು ಪ್ರಶ್ನಿಸಲಾಗಿದೆ.

ಒಟ್ಟಿನಲ್ಲಿ ಚಲನಚಿತ್ರಗಳ ಪ್ರಮಾಣಪತ್ರದಲ್ಲಿ ಹೆಚ್ಚಿನ ವಿಭಾಗಗಳಿಗೆ ಅವಕಾಶ ಕಲ್ಪಿಸಿದ್ದು ಮತ್ತು ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡತಂತೆ ನಿರ್ಬಂಧ ಹೇರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ತಯಾರಕರು ಹಾಗೂ ಸೆನ್ಸಾರ್ ಮಂಡಳಿ ನಡುವಣ ತಿಕ್ಕಾಟ ಕಡಿಮೆಯಾಗುವ ನಿರೀಕ್ಷೆ ಇದೆ.

Leave a Reply