ಮಿನಿಸ್ಟರ್ ಮೇಟಿ ಅವರೇ, ಕುಡೀಬೇಡಿ ಅಂತೇಳಿ ಬೀದಿಬೀದಿಲಿ ಅಂಗಡಿ ತೆಗೆದ್ರೆ ಜನಕ್ಕೆ ಎಣ್ಣೆವೊಳಗೇ ನೀವು ಕಾಣ್ತೀರಿ!

ಡಿಜಿಟಲ್ ಕನ್ನಡ ವಿಶೇಷ:

ಸತ್ಯದ ತಲೆ ಮೇಲೆ ಬಡಿದು ಮರ್ಡರ್ ಮಾಡೋದು ಅಂದ್ರೆ ಇದಲ್ವಾ..?

ದಯವಿಟ್ಟು ಮದ್ಯ ಕುಡಿಯಬೇಡಿ ಅಂತಾ ಕರ್ನಾಟಕದ ಜನರಲ್ಲಿ ಕೈಮುಗಿದು ಬೇಡಿಕೊಳ್ಳುವುದಾಗಿ ಅಬಕಾರಿ ಸಚಿವ ಎಚ್.ವೈ. ಮೇಟಿ ಅವರು ಸಿಕ್ಕಾಪಟ್ಟೆ ದಯನೀಯವಾಗಿ ಹೇಳಿರುವ ಸಂದರ್ಭದಲ್ಲೇ ಸರಕಾರ ತನ್ನ ಅಂಗಸಂಸ್ಥೆ ಎಂಎಸ್ಐಎಲ್ ಮೂಲಕ ರಾಜ್ಯದಲ್ಲಿ ಹೊಸದಾಗಿ 900 ಮದ್ಯ ಮಾರಾಟ ಮಳಿಗೆ ಆರಂಭಿಸಲು ತೀರ್ಮಾನಿಸಿದೆಯಂತೆ.

‘ಮಗು ಕುಂಡಿನೂ ಚಿವುಟಿ, ತೊಟ್ಟಲನ್ನೂ ತೂಗಿದಂತೆ’ ಅಂತಾ ಹಳ್ಳಿ ಕಡೆ ಗಾದೆ ಮಾತೊಂದಿದೆ. ಮೇಟಿ ಅವರ ಮಾತು, ಅವರೇ ಭಾಗವಾಗಿರುವ ಸರಕಾರದ ನಿಲುವು ಈ ಎರಡನ್ನೂ ನೋಡಿದಾಗ ಈ ಗಾದೆ ಮಾತು ಅಕ್ಷರಶಃ ನಿಜ ಎನಿಸುತ್ತದೆ. ಮೇಟಿ ಅವರು ಇಷ್ಟಕ್ಕೆ ನಿಂತಿಲ್ಲ. ಕುಡಿತದಿಂದ ಜನ ಮನೆ-ಮಠ ಕಳೆದುಕೊಂಡು, ಅವರ ಬದುಕು ಬರ್ಬಾದ್ ಆಗುವುದು ಬೇಡ. ಸರಕಾರಕ್ಕೆ ಆದಾಯಕ್ಕೆ ಬೇಕಿದ್ದರೆ ಬೇರೆ ಮೂಲ ಹುಡುಕಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳ್ತೇನೆ ಅಂತೆಲ್ಲ ಬಿಲ್ಡಪ್ ಕೊಟ್ಟಿದ್ದಾರೆ.

ಒಂದು ಕಡೆ ಜನರ ಬಗ್ಗೆ ಕಾಳಜಿ ತೋರುತ್ತಲೇ, ಕುಡೀಬೇಡ್ರಪ್ಪಾ ಅಂತಾ ಕೈಮುಗಿಯುತ್ತಲೇ ಇನ್ನೊಂದು ಕಡೆ ಹಾದಿಬೀದಿಗೆ ಹತ್ತಿಪ್ಪತ್ತು ಮದ್ಯದಂಗಡಿಗಳನ್ನು ತೆರೆಯುತ್ತಾ ಬಂದರೆ ಅವರು ಕುಡಿದು ತೂರಾಡಿ ಕಂಡಕಂಡವರಲ್ಲಿಯೇ ‘ಮಿನಿಸ್ಟ್ರು ಮೇಟಿ’ ಅವರನ್ನು ಕಾಣದೇ ಇನ್ನೇನು ಮಾಡುತ್ತಾರೆ ಹೇಳಿ!

ಮೇಟಿ ಅವರೇನಾದರೂ ‘ಜ್ಞಾನ ತಪ್ಪಿ’ ಈ ಮಾತನ್ನು ಹೇಳಿಬಿಟ್ಟರೋ ಅಥವಾ ಸರಕಾರವೇ ‘ಎಚ್ಚರ ತಪ್ಪಿ’ 900 ಎಂಎಸ್ಐಎಲ್ ಎಣ್ಣೆ ಅಂಗಡಿ ಆರಂಭಕ್ಕೆ ಅನುಮತಿ ಕೊಟ್ಟಿದೆಯೋ ಗೊತ್ತಿಲ್ಲ. ಯಾಕೆಂದ್ರೆ ಅಬಕಾರಿ ಸಚಿವರನ್ನು ಹೊರಗಿಟ್ಟು ಇಂಥದೊಂದು ತೀರ್ಮಾನ ಮಾಡೋದಿಕ್ಕೆ ಆಗುವುದಿಲ್ಲ. ಸಚಿವರಿಗೆ ಗೊತ್ತಿದ್ದೂ ಈ ಮಾತು ಹೇಳಿದ್ದಾರೆ ಅಂದರೆ ಅವರಿಗೆ ಪ್ರಜ್ಞೆ ಕೈಕೊಟ್ಟಿತ್ತು ಅಂತಲೇ ಅರ್ಥ. ಇಲ್ಲ ಅವರು ಸುಳ್ಳು ಹೇಳಿರಬಹುದು. ಒಂದೊಮ್ಮೆ ಏನಾದರೂ ಅವರನ್ನು ಹೊರಗಿಟ್ಟೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಅಂದರೆ ಪಾಪ ಸಚಿವರ ಪರಿಸ್ಥಿತಿ, ಇಲಾಖೆ ಮೇಲಿನ ಅವರ ಹಿಡಿತದ ಬಗ್ಗೆಯೇ ಕನಿಕರ ಮೂಡುತ್ತದೆ.

ಇರಲಿ, ಇದೆಲ್ಲದರ ಮಧ್ಯೆಯೂ ಅವರಾಡಿರುವ ಮಾತು ಶ್ಲಾಘನೀಯವೇ. ನಿಜಕ್ಕೂ ಅವರಿಗೆ ಅವರದೇ ಮಾತಿನ ಮೇಲೆ ಹಾಗೂ ಆ ಮಾತಿನ ಮೂಲ ನಾಡಿನ ಜನತೆ ಬಗ್ಗೆ ಮಮತೆ, ಗೌರವ, ಕಾಳಜಿ ಇದ್ದರೆ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲಿ. ಅಬಕಾರಿ ಖಾತೆ ನಿರಾಕರಿಸುವುದಷ್ಟೇ ಅಲ್ಲ ಅದನ್ನು ಬರ್ಕಾಸ್ತು ಮಾಡುವಂತೆ ಒತ್ತಡ ತರಲಿ. ಹೇಗಿದ್ದರೂ ಸಿದ್ದರಾಮಯ್ಯನವರ ಪ್ರತಿ ಕ್ಷಣದ ಮಾತು ಮತ್ತು ಹೃದಯ ಈ ನಾಡಿನ ಬಡವರು, ಹಿಂದುಳಿದವರು, ಶೋಷಿತರ ಪರವಾಗಿಯೇ ಮಿಡಿಯುತ್ತಿರುತ್ತದೆ. ಕುಡಿದು ಮನೆಮಠ ಹಾಳು ಮಾಡಿಕೊಳ್ಳುವವರ ಪ್ರಮಾಣ ಈ ವರ್ಗದವರಲ್ಲಿಯೇ ಹೆಚ್ಚು. ಹೀಗಾಗಿ ಕರ್ನಾಟಕದಲ್ಲಿ ಮದ್ಯ ಮಾರಾಟ ನಿಷೇಧ ಜಾರಿಗೆ ತಂದರೆ ಬಡವರ ಪರ ಅವರಿಗಿರುವ ಕಾಳಜಿಯೂ ಹೆಚ್ಚು, ಹೆಚ್ಚು ರುಜುವಾತಾಗುತ್ತದೆ. ಬಡವರ ಮನೆಮಠ, ಸಂಸಾರಗಳೂ ಉಳಿಯುತ್ತವೆ. ಅವರ ಬದುಕು ಹಸನಾಗುತ್ತದೆ. ಮೇಟಿ ಅವರ ಮಾತಿಗೂ ಒಂದು ತೂಕ ಬರುತ್ತದೆ.

ಇದೇನೂ ಅಂತಾ ಕಷ್ಟದ ವಿಚಾರವಲ್ಲ. ದೇಶದಲ್ಲಿ ಈಗಾಗಲೇ ಬಿಹಾರ, ಗುಜರಾತ್, ಕೇರಳ, ನಾಗಾಲ್ಯಾಂಡ್ ಹಾಗೂ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಮದ್ಯ ಮಾರಾಟ ನಿಷೇಧ ಜಾರಿಗೆ ತಂದಿವೆ. ಅದನ್ನೇ ಮಾದರಿ ಆಗಿಟ್ಟುಕೊಂಡು ಇಲ್ಲೂ ಅನ್ವಯ ಮಾಡಿದರೆ ಆಯಿತು. ನಾಡಿನ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಸೂರ್ಯ ಮುಳುಗಿದ ನಂತರ ಜಗಮಗಿಸುವ ದೀಪದ ಬೆಳಕು ಬಡವರ ಮನೆಯನ್ನೂ ಹೊಕ್ಕುತ್ತದೆ.

Leave a Reply